December 5, 2020

ಶ್ರೀಚಕ್ರ ಶಿಖರ,ಅಂತರ್ಗತ ಶ್ರೀಚಕ್ರದೊಂದಿಗೆ ಇರುವ ಆದಿಶಕ್ತಿ ಕ್ಷೇತ್ರ ಮಂಗಳೂರಿನಲ್ಲಿದೆ,ನೀವು ಬೇಟಿ ನೀಡಿದ್ದೀರ?

ಮಂಗಳೂರು(3ಮಾ/2020): ನಗರದ ಕಂಕನಾಡಿಯ ಸೂಟರ್ ಪೇಟೆಯ ಕನಕಪುರ ಮಜಿಲ ಎಂಬಲ್ಲಿ ರಮಣೀಯವಾಗಿ ಕಂಗೊಳಿಸುತ್ತಿರುವ ಈ ಕ್ಷೇತ್ರದಲ್ಲಿ
ಶ್ರೀ ಪ್ರವೀಣ ರಾಜ ಮಚ್ಚೇಂದ್ರನಾಥ್ ಬಾಬಾ ಧರ್ಮದರ್ಶಿಗಳ ಆರಾಧನೆಯಲ್ಲಿ ಆದಿಶಕ್ತಿ ಭುವನೇಶ್ವರಿ ಆದಿನಾಥ ಸಿದ್ದ ಪೀಠ ಇದೆ. ಇಲ್ಲಿ
ನವದುರ್ಗ ಸ್ವರೂಪಿಣಿ, ತ್ರಿಗುಣಾತ್ಮಕ ಶಕ್ತಿ ದೇವತೆ, ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕಿ, ಶ್ರೀಚಕ್ರ ಸಂಚಾರಿಣಿ ಹಾಗೂ ಶ್ರೀಚಕ್ರ ಸುರಪೂಜಿತೆ ಯಾದ ಅಷ್ಟಾದಶಭುಜೆಯಾಗಿ ಜಗನ್ಮಾತೆ ಆದಿಶಕ್ತಿ ಭುವನೇಶ್ವರಿಯು ಶಿಲಾಮಯ ಗರ್ಭಗುಡಿಯಲ್ಲಿ ಮೇರು ಶ್ರೀಚಕ್ರ ಶಿಖರ ದೊಂದಿಗೆ ಗರ್ಭಗುಡಿಯ ಅಂತರ್ಗತ ಶ್ರೀಚಕ್ರ ದೊಂದಿಗೆ ಹಾಗೂ ಗರ್ಭಗುಡಿ ಮಧ್ಯದಲ್ಲಿ ಶ್ರೀಚಕ್ರ ಸುರಪೂಜಿತೆಯಾಗಿ ಮೈದಳೆದು ನಿಂತಿದ್ದಾಳೆ …
ಸ್ಥಳ ಐತಿಹ್ಯದ ಪ್ರಕಾರ ಈ ಕ್ಷೇತ್ರಕ್ಕೆ ಸುಮಾರು 5000 ವರ್ಷಗಳ ಇತಿಹಾಸವಿದ್ದು ಮೂಲದಲ್ಲಿ ಯೋಗಿಗಳು ಬಂದು ಕ್ಷೇತ್ರದ ಈಗ ಇರುವ ಕಟ್ಟೆಯ ಬಳಿ ಇಲ್ಲಿ ಆರಾಧಿಸಲ್ಪಡುವ ತಾಯಿಯನ್ನು ಜಪದಲ್ಲಿ ಒಲಿಸಿಕೊಂಡು ಆರಾಧಿಸುತ್ತಿದ್ದರು .ತದನಂತರದಲ್ಲಿ ಕ್ಷೇತ್ರದ ಧರ್ಮದರ್ಶಿ ಹಾಗೂ ಮಜಿಲ ಪಟ್ಟಂಬರ ಬೂಡಿನ ಧರ್ಮದರ್ಶಿಗಳಾದ ಪೂಜ್ಯ ಯೋಗಿ ಪ್ರವೀಣ್ ರಾಜ್ ಮಚ್ಚೇಂದ್ರನಾಥ ಬಾಬಾ ಇವರ ಪೂರ್ವಜರಿಗೆ ಹಾಗೂ ಇವರಿಗೆ ಆದ ದೈವ ಪ್ರೇರಣೆಯಂತೆ ಇಲ್ಲಿ ತಾಯಿಗೆ ಒಂದು ಆಲಯವನ್ನು ನಿರ್ಮಿಸಬೇಕು ಯೋಗಿ ಪದ್ಧತಿಯನ್ನು ಅನುಷ್ಠಾನಗೊಳಿಸಬೇಕು ಈ ಕ್ಷೇತ್ರದಲ್ಲಿ ಬಂದ ಭಕ್ತಾದಿಗಳನ್ನು ಹರಸಿ ಆಶೀರ್ವದಿಸುವೆ ಎಂಬ ಸ್ವಪ್ನ ವಾಣಿ ಕೇಳಿಸಲಾಗಿ ದೈವಜ್ಞ ರಿಂದ ಅಷ್ಟಮಂಗಳ ಚಿಂತನೆಯನ್ನು ನಡೆಸಿ ಹಿಮಾಲಯದ ಯೋಗಿ ಗುರುಗಳ ಆಶೀರ್ವಾದದಂತೆ ವಿಧಿವತ್ತಾಗಿ ಕ್ಷೇತ್ರದ ಬ್ರಹ್ಮಕಲಶ ಪ್ರತಿಷ್ಠಾಪನೆಯನ್ನು ನೆರವೇರಿಸಿ ಈ ಕ್ಷೇತ್ರವು ತಾಯಿಯ ಹಾಗೂ ಗುರುಗಳ ಆಶೀರ್ವಾದದಂತೆ ಈ ಮಟ್ಟಕ್ಕೆ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾ ಬಂದಿದೆ…
ಇದಲ್ಲದೆ ಕ್ಷೇತ್ರದಲ್ಲಿ ಮಹಾಗಣಪತಿ, ಸುಬ್ರಮಣ್ಯ ಧರ್ಮಶಾಸ್ತ, ಕಾಲಭೈರವ, ಲಕ್ಷ್ಮೀಸಹಿತ ಪಂಚಮುಖಿ ಭೂವರಾಹ ,ಪಂಚಮುಖಿ ಹನುಮಂತ ,ನವಗ್ರಹಗಳು, ನಾಗಬ್ರಹ್ಮರು, ನಾಗರಾಜ ,ನಾಗಕನ್ನಿಕೆ, ರಕ್ತೇಶ್ವರಿ, ನಂದಿಗೋಣ,ರ ಪಂಚ ದೈವಸಾನಿಧ್ಯ, ಮಂತ್ರ ದೊಡತಿ ಮಂತ್ರದೇವತೆ ,ಕಲ್ಲುರ್ಟಿ, ಕೊರಗಜ್ಜ ಹಾಗೂ  ಕ್ಷೇತ್ರದ ಅಧೀನಕ್ಕೊಳಪಟ್ಟ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ಸಾನಿಧ್ಯ, ಅಘೋರ ರುದ್ರ ಕಾಳಿ ಶಕ್ತಿಗಳು ಪರಿವಾರ ಶಕ್ತಿಗಳಾಗಿ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಮಹಾಯೋಗಿ ಗುರುಗಳ ಜೀವಂತ ಸಮಾಧಿ ಇದ್ದು ಈ ಸಮಾಧಿಯ ಬಳಿ ಕಷ್ಟಗಳನ್ನು ಹಾಗೂ ಮನಸ್ಸಿನ ಇಷ್ಟಾರ್ಥಗಳನ್ನು ಹೇಳಿಕೊಂಡಾಗ ಪವಾಡ ಸದೃಶ್ಯವಾಗಿ ಪರಿಹಾರ ದೊರಕಿದ್ದಕ್ಕೆ ಸಾಕ್ಷಾಧಾರಗಳು ಸಿಗುತ್ತದೆ.
ಕ್ಷೇತ್ರದಲ್ಲಿ ಗುರುಗಳ ಜೀವಂತ ಸಮಾಧಿ ಇದ್ದು ಈಗಲೂ ಅದೇ ಕಟ್ಟೆಯಲ್ಲಿ 2 ಔದುಂಬರ ಮರಗಳು (ಅತ್ತಿ) ಹಚ್ಚ ಹಸುರಿನಿಂದ ಕಂಗೊಳಿಸುತ್ತಿದೆ. ಈ ಮರದ ಬುಡದಲ್ಲಿ ಗುರುಗಳ ಪಾದವಿದ್ದು ಗುರುಪಾದಕ್ಕೆ ದಿನಂಪ್ರತಿ ಪೂಜೆ ಹಾಗೂ ಗುರುವಾರ ದಿವಸ ವಿಶೇಷ ಪೂಜೆ ನಡೆಯುತ್ತದೆ.
ಜಗನ್ಮಾತೆ ಭುವನೇಶ್ವರಿಯು ಶಿಲಾಮಯ ಗರ್ಭಗುಡಿಯಲ್ಲಿ ಕೆಳಗೆ, ಮಧ್ಯದಲ್ಲಿ ,ಶಿಖರದಲ್ಲಿ ಶ್ರೀಚಕ್ರ ದೊಡನೆ ಪ್ರತಿಷ್ಠಾಪಿಸಲ್ಪಟ್ಟಿದ್ದು ಅಷ್ಟಾದಶ ಭುಜೆಯಾಗಿ ಹಾಗೂ ಸಿಂಹವಾಹಿನಿಯಾದ ಶಿಲಾಮಯ ಮೂರ್ತಿಗೆ ಈ ಶ್ರೀಚಕ್ರವು ಬ್ರಹ್ಮಾಂಡದಿಂದ ಧನಾತ್ಮಕ ಪ್ರಭೆಯನ್ನು ನೀಡುತ್ತಾ ಬರುತ್ತಿದೆ.
ದಿನಂಪ್ರತಿ ತ್ರಿಕಾಲ ಪೂಜೆಗಳು ನಡೆಯುತ್ತಿದ್ದು ಉಷಾಕಾಲ ಪೂಜೆ ಬೆಳಿಗ್ಗೆ 5:30 ಮಧ್ಯಾಹ್ನದ ಪೂಜೆ 12 ಮೂವತ್ತಕ್ಕೆ ಹಾಗೂ ಸಂಧ್ಯಾಕಾಲದ ಪೂಜೆ ಸಂಜೆ ಆರು ಮೂವತ್ತಕ್ಕೆ ಗುರುಗಳಾದ ಯೋಗಿ ಪ್ರವೀಣರಾಜ್ ಇವರ ಅಮೃತ ಹಸ್ತದಿಂದ ನೆರವೇರುತ್ತದೆ .
ಪ್ರತಿ ಭಾನುವಾರದಂದು ಬೆಳಿಗ್ಗೆ ಎಂಟು ಮೂವತ್ತಕ್ಕೆ ಸಾರ್ವಜನಿಕ ಮಹಾ ಮೃತ್ಯುಂಜಯ ಯಾಗ ಹಾಗೂ ಪ್ರತಿ ಶುಕ್ರವಾರದಂದು ನವೀನ್ ರಾಜ್ ಇವರ ಮುಂದಾಳತ್ವದಲ್ಲಿ ತಾಯಿಗೆ ಭಜನಾ ಸಂಕೀರ್ತನೆ ನಡೆದು ಮಹಾಮಂಗಳಾರತಿಯ ನಂತರ ಗುರು ಪೂಜೆ ನಡೆಯುತ್ತದೆ ಆದಿನ ಫಲಾಹಾರದ ವ್ಯವಸ್ಥೆ ಇರುತ್ತದೆ.
ಪ್ರತಿ ಮಂಗಳವಾರ ಬೆಳಿಗ್ಗೆ 10 ಗಂಟೆಯಿಂದ ಮಹಾಗಣಪತಿ ಹೋಮದ ನಂತರ ಅಘೋರ ರುದ್ರ ಪ್ರತ್ಯಂಗಿರಾ ಹೋಮ ನಡೆಸಲಾಗುತ್ತದೆ ಈ ಹೋಮದಲ್ಲಿ ಭಕ್ತಾದಿಗಳ ಸಕಲ ಅರಿಷ್ಠ ಭಾದಾ ದೋಷಗಳನ್ನು ನಿವಾರಿಸಲಾಗುತ್ತದೆ ಆ ಬಳಿಕ ಮಹಾಪೂಜೆ ನಡೆದು ಅನ್ನಸಂತರ್ಪಣೆ ಇರುತ್ತದೆ.
ಪ್ರತಿವರ್ಷ ಜನವರಿ 14ರ ಮಕರ ಸಂಕ್ರಮಣದಂದು ಸಾರ್ವಜನಿಕ  ಕಾಲಮಹಾ ಮೃತ್ಯುಂಜಯ ಹೋಮನಡೆಯುತ್ತದೆ .ಆಗಮಿಸಿದ ಭಕ್ತರೆಲ್ಲರೂ ಪೂರ್ಣಾಹುತಿ ಯನ್ನು ಸಲ್ಲಿಸುವುದು ಇಲ್ಲಿನ ವಿಶೇಷವಾಗಿದೆ .ತದನಂತರ ಹೋಮದ ಪ್ರಸನ್ನ ಮಂಗಳಾರತಿ ಹಾಗೂ ಆರಾಧ್ಯದೇವತೆ ಗೆ ಮಂಗಳಾರತಿ ನಡೆದು ಅನ್ನಸಂತರ್ಪಣೆ ಜರಗುತ್ತದೆ.
ಪ್ರತಿ ತಿಂಗಳ ಹುಣ್ಣಿಮೆಯಂದು ಸಾರ್ವಜನಿಕ ಸತ್ಯನಾರಾಯಣ ಪೂಜೆ ಶ್ರದ್ಧಾಭಕ್ತಿಯಿಂದ ನಡೆಯುತ್ತದೆ. ಈಗಾಗಲೇ 48 ಪೂಜೆಗಳು ಕಳೆದು ಉದ್ಯಾಪನೆ ಯು ಇತ್ತೀಚೆಗೆ ಸಂಪನ್ನಗೊಂಡಿದೆ .ಈ ದಿನವೂ ಭಕ್ತ  ಸಮೂಹಕ್ಕೆ ಅನ್ನ ಪ್ರಸಾದ ವ್ಯವಸ್ಥೆ ಇರುತ್ತದೆ.
ವಿಶೇಷವಾಗಿ ಒಂಬತ್ತು ದಿವಸಗಳ ಶರನ್ನವರಾತ್ರಿ ಉತ್ಸವ ದೇವಿಗೆ ನವವಿಧ ದಿನದ ಅವತಾರಿಕ ಅಲಂಕಾರದೊಂದಿಗೆ ಬಹಳ ಭಕ್ತಿಯಿಂದ ವಿಜೃಂಭಣೆಯಿಂದ ನಡೆಯುತ್ತದೆ. ಪ್ರತಿದಿನವೂ ಭಕ್ತಾದಿಗಳಿಂದ ಚಂಡಿಕಾಯಾಗ ನಡೆದು ಅಷ್ಟಮಿಯ ದಿವಸ ಸಾರ್ವಜನಿಕ ಚಂಡಿಕಾ ಯಾಗದಲ್ಲಿ ಪ್ರತಿಯೊಬ್ಬರಿಗೂ ಪೂರ್ಣಾಹುತಿ ಸಮರ್ಪಿಸುವ ಅವಕಾಶವಿದೆ. 9 ದಿವಸಗಳಲ್ಲಿ ಅನ್ನಸಂತರ್ಪಣೆ ಹಾಗೂ ರಾತ್ರಿ ಶ್ರೀಚಕ್ರ ಪೂಜೆಯು ತದನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತವೆ ಪ್ರತಿವರ್ಷ ಗುರುಪೂರ್ಣಿಮೆಯಂದು ಭಕ್ತ ವೃಂದ ಹಾಗೂ ಶಿಷ್ಯವೃಂದ ದಿಂದ ಗುರುಗಳಿಗೆ ಗುರು ಪೂಜೆ ಹಾಗೂ ಪೂಜ್ಯ ಬಾಬಾ ಅವರಿಗೆ ಗುರುವಂದನೆ ಜರುಗುತ್ತದೆ.
ಕ್ಷೇತ್ರದಲ್ಲಿ ಭಕ್ತರ ಕಾಮಿತಾರ್ಥಗಳನ್ನು ಈಡೇರಿಸಲು ಹಾಗೂ ಕಷ್ಟ ,ಭಾದಾ ದೋಷಗಳನ್ನು ನಿವಾರಿಸಲು ಅಂಜನ ಪ್ರಶ್ನೆ ಹಾಗೂ ಕವಡೆ ಪ್ರಶ್ನೆ ಮೂಲಕ ಆಘೋರ ಉಚ್ಚಾಟನೆ ಮಾಡಲಾಗುವುದು. ಇದರೊಂದಿಗೆ ಭಕ್ತಾದಿಗಳ ಅಭೀಷ್ಟ ಮೇರೆಗೆ ನವಗ್ರಹ ಸಹಿತ ಮೃತ್ಯುಂಜಯ ಶಾಂತಿ, ಗಣಪತಿ ಹವನ, ಸ್ವಯಂವರ ಪಾರ್ವತಿ ಪೂಜೆ ,ಸಂದಿಶಾಂತಿ ಹೋಮಗಳು, ಸರ್ಪ ಸಂಸ್ಕಾರ ,ಆಶ್ಲೇಷ ಪೂಜೆ, ದೈವ ದೇವರ ಪ್ರತಿಷ್ಠೆ ಮುಂತಾದವುಗಳನ್ನು ಯೋಗಿ ಅನುಷ್ಠಾನ ಪದ್ಧತಿಯಲ್ಲಿ ಮಾಡಲಾಗುವುದು.
ಕ್ಷೇತ್ರದಲ್ಲಿ ಈವರೆಗೆ 953 ದಿನಗಳಿಂದ ನಿರಂತರವಾಗಿ ಹಿಮಾಲಯದ ಯೋಗಿಗಳಿಂದ ಪ್ರಜ್ವಲಗೊಂಡ ಅಗ್ನಿಯು ಅಗ್ನಿಕುಂಡದಲ್ಲಿ ಈಗಲೂ ತನ್ನ ಕೆನ್ನಾಲಿಗೆಯನ್ನು ಸೂಸಿ ಭಕ್ತರ ಕಷ್ಟಕಾರ್ಪಣ್ಯಗಳನ್ನು ನಿವಾರಿಸುತ್ತಿದೆ.
ವರ್ಷಂಪ್ರತಿ ಕ್ಷೇತ್ರದ ಅಧೀನಕ್ಕೆ ಒಳಪಟ್ಟ ಬಬ್ಬುಸ್ವಾಮಿ ನೇಮೋತ್ಸವವುಬಹಳ ವಿಜ್ರಂಭಣೆಯಿಂದ ನಡೆಯುತ್ತದೆ. ಗುರುಗಳ ಮನೆಯಾದ ಧರ್ಮ ಚಾವಡಿಯಲ್ಲಿ ಬಬ್ಬುಸ್ವಾಮಿ ಹಾಲನ್ನು ಸ್ವೀಕರಿಸುವುದು ಅನೇಕ ಭಕ್ತ ವೃಂದಕ್ಕೆ ಧನ್ಯತಾ ಭಾವವನ್ನು ಉಂಟುಮಾಡುತ್ತದೆ.
ಕ್ಷೇತ್ರದಲ್ಲಿರುವ ಮಂತ್ರದೇವತೆ, ಕಲ್ಲುರ್ಟಿ, ಕೊರಗಜ್ಜ ಶಕ್ತಿಗಳಿಗೆ ವರ್ಷಂಪ್ರತಿ ಕ್ಷೇತ್ರದ ಪರವಾಗಿ ಹಾಗೂ ಭಕ್ತ ಸಮೂಹದಿಂದ ತಂಬಿಲ ಸೇವೆ ನಡೆಯುತ್ತದೆ.
ಪ್ರತಿವರ್ಷ ವರಮಹಾಲಕ್ಷ್ಮಿ ಪೂಜೆ, ಅನಂತಪದ್ಮನಾಭ ವ್ರತ , ನೂಲಹುಣ್ಣಿಮೆ,ತುಳುನಾಡಿನ ಆಚರಣೆಗಳಾದ ಆಟಿಡೊಂಜಿ ದಿನ, ದೀಪಾವಳಿ, ತುಳಸಿ ಪೂಜೆ ಮತ್ತಿತರ ಹಬ್ಬ-ಹರಿದಿನಗಳ ಆಚರಣೆಗಳನ್ನು ಮಾಡಲಾಗುತ್ತದೆ.
ಪ್ರತಿವರ್ಷ ಏಪ್ರಿಲ್ 21ನೇ ತಾರೀಕು ಕ್ಷೇತ್ರದಲ್ಲಿ ಪ್ರತಿಷ್ಠಾ ವರ್ಧಂತಿ ಯನ್ನು ಚಂಡಿಕಾಯಾಗ ಸಹಿತ ಅನ್ನಸಂತರ್ಪಣೆಯನ್ನು ನೆರವೇರಿಸುವುದರೊಂದಿಗೆ ಸಮಾಪ್ತಿ ಗೊಳಿಸಲಾಗುತ್ತದೆ.
ಆಗಾಗ್ಗೆ ಕ್ಷೇತ್ರಕ್ಕೆ ಹಿಮಾಲಯದ ಯೋಗಿಗಳು ಸಾಧು-ಸಂತರು ವಿವಿಧ ಮಠಗಳ ಸ್ವಾಮಿಗಳು ಗಣ್ಯಾತಿಗಣ್ಯರು ಜಾತಿ ಮತ ಭೇದ ದ ಪರಿವೇ ಇಲ್ಲದೆ ಕ್ಷೇತ್ರಕ್ಕೆ ಬಂದು ಭೇಟಿ ನೀಡಿ ಧನ್ಯತಾಭಾವವನ್ನು ವ್ಯಕ್ತಪಡಿಸಿರುತ್ತಾರೆ.
ಇತ್ತೀಚೆಗೆ ಮಂಡ್ಯದ ವಿದ್ಯಾ ಚೌಡೇಶ್ವರಿ ಮಠದ ಬಾಲ ಮಂಜುನಾಥ ಸ್ವಾಮಿಗಳು ತಾಯಿಯಾದ ಚೌಡೇಶ್ವರಿ ವಿಗ್ರಹದೊಂದಿಗೆ ದೇವಸ್ಥಾನಕ್ಕೆ ಆಗಮಿಸಿ ಭಕ್ತ ಸಮೂಹಕ್ಕೆ ಆಶೀರ್ವಚನವನ್ನು ನೀಡಿರುತ್ತಾರೆ.
ಒಟ್ಟಿನಲ್ಲಿ ಜಾತಿ-ಮತ-ಪಂಥ ಭೇದ ಇಲ್ಲದೆ ಯೋಗಿಗಳ ಪೂಜಾ ಪದ್ಧತಿಯನ್ನು ಅನುಷ್ಠಾನ ಮಾಡಿಕೊಂಡು ಮಡಿ ಮೈಲಿಗೆಗಳ ಗಾಳಿಯು ಸೋಕದೆ ಮನುಜಮತ ವಿಶ್ವಪಥ ಹಾಗೂ ಸರ್ವಂ ಸರ್ವೇಶ್ವರಿ ಅರ್ಪಣಂ ಎಂಬ ಉದ್ದೇಶದೊಂದಿಗೆ ಸನಾತನ ಹಿಂದೂ ಧರ್ಮವನ್ನು ಪ್ರಧಾನವಾಗಿಟ್ಟುಕೊಂಡು ಇತರ ಧರ್ಮದ ಭಾವನೆಗಳನ್ನು ಅಲ್ಲಗಳೆಯದೆ ಪರಸ್ಪರ ಅನುಕೂಲ ವಿಚಾರವಿನಿಮಯ ಗಳನ್ನು ಮಾಡಿಕೊಂಡು ಶ್ರೀ ಕ್ಷೇತ್ರವು ಭಕ್ತರ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಹಾಗೂ ಕಾಮಿತಾರ್ಥ ವನ್ನು ನೆರವೇರಿಸುವಲ್ಲಿ ತಾಯಿಯ ಶಕ್ತಿಯೊಂದಿಗೆ ಗುರುಗಳ ಆಶೀರ್ವಾದದೊಂದಿಗೆ ಮುನ್ನಡೆಯುತ್ತಿದೆ ನಿಷ್ಕಲ್ಮಶ ಹಾಗೂ ನಿಸ್ವಾರ್ಥ ಭಕ್ತಿಯನ್ನು ಹೊಂದಿರುವ ಭಕ್ತರು ಕೊಡುವ ತನು-ಮನ-ಧನ ಕಾಣಿಕೆಯನ್ನು ಸ್ವೀಕರಿಸಿ ಎಂದೆಂದಿಗೂ ಕೈಬೀಸಿ ಕರೆಯುತ್ತಿರುತ್ತದೆ.

ಕ್ಷೇತ್ರದಲ್ಲಿ ಆರಾಧನೆ ಆಗುತ್ತಿರುವ ಶ್ರೀ ಚಕ್ರ ಧಾರಿನಿ
ಗುರು ಶ್ರೀ ಪ್ರವೀಣ್ ಬಾಬಾ

2 thoughts on “ಶ್ರೀಚಕ್ರ ಶಿಖರ,ಅಂತರ್ಗತ ಶ್ರೀಚಕ್ರದೊಂದಿಗೆ ಇರುವ ಆದಿಶಕ್ತಿ ಕ್ಷೇತ್ರ ಮಂಗಳೂರಿನಲ್ಲಿದೆ,ನೀವು ಬೇಟಿ ನೀಡಿದ್ದೀರ?

Leave a Reply

Your email address will not be published. Required fields are marked *

Related Post

%d bloggers like this: