August 14, 2020

ಕಾಂಗ್ರೆಸ್ ಶಾಸಕರು ಕಾಂಗ್ರೆಸ್ ಆಡಳಿತವಿರುವ ಪಂಚಾಯತುಗಳಿಗೆ ಮಾತ್ರ ಶಾಸಕರೇ:ಸತೀಶ್ ಕುಂಪಲ

ಉಳ್ಳಾಲ(2ಆಗೋಸ್ತ/2020): ಇತ್ತೀಚೆಗೆ ಉಳ್ಳಾಲ ಪರಿಸರದ ಸ್ಥಳೀಯ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ.ಖಾದರ್‌ರವರು ವೀಕ್ಷಕರು ಉಚ್ಚಿಲ ಸೋಮೇಶ್ವರ ಪರಿಸರದಲ್ಲಿರುವ ಅಕ್ರಮ ರೆಸಾರ್ಟ್ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಅಕ್ರಮ ರೆಸಾರ್ಟ್ ಬಗ್ಗೆ ತಮಗೆ ತಿಳಿದಿಲ್ಲ ಹಾಗೂ ರೆಸಾರ್ಟ್ ಪ್ರಾರಂಭವಾಗಲು ಸ್ಥಳೀಯ ಗ್ರಾಮ ಪಂಚಾಯತ್ ಆಡಳಿತ, ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್‌ಗಳ ಜನಪ್ರತಿನಿಧಿಗಳು ಕಾರಣ ಎಂಬಂತೆ ಉತ್ತರ ನೀಡಿರುವ ಹಾಗೂ ಕಡಲ್ಕೊರೆತದ ಬಗ್ಗೆ ಅಸಮರ್ಪಕವಾಗಿ ಉತ್ತರಿಸಿದ ಶಾಸಕರ ಮಾತುಗಳಿಗೆ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಬಿಜೆಪಿ ದ.ಕ. ಜಿಲ್ಲಾ ಸಮಿತಿ ಕಾರ್ಯದರ್ಶಿಯಾಗಿರುವ ಸತೀಶ್ ಕುಂಪಲ ಖಂಡನೆ ವ್ಯಕ್ತಪಡಿಸಿದ್ದಾರೆ.

ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಸತತ ನಾಲ್ಕು ಬಾರಿ ತಾವು ಶಾಸಕರಾಗಿದ್ದೀರಿ ಮೂರು ಬಾರಿ ಸಚಿವರೂ ಆಗಿದ್ದವರು. ಅದಕ್ಕಿಂತಲೂ ಮೊದಲು ತಮ್ಮ ತಂದೆಯವರು ನಾಲ್ಕು ಬಾರಿ ಸದಸ್ಯರಾಗಿದ್ದರು ಹಾಗಿದ್ದರೂ ನಿಮ್ಮ ಕ್ಷೇತ್ರದಲ್ಲಿ ನಡೆಯುವ ಅಕ್ರಮ ರೆಸಾರ್ಟ್ ಗಳ ಬಗ್ಗೆ ತಮಗೆ ಯಾವುದೇ ಜವಾಬ್ದಾರಿ ಇಲ್ಲವೆಂಬಂತೆ ಉತ್ತರಿಸುವುದು ಎಷ್ಟು ಸರಿ, ಅಧಿಕಾರದಲ್ಲಿರುವ ಸಂದರ್ಭ ಸ್ಥಳೀಯ ಗ್ರಾಮಪಂಚಾಯತ್ ಅಥವಾ ಜನಪ್ರತಿನಿಧಿಗಳನ್ನ ವಿಶ್ವಾಸಕ್ಕೆ ತೆಗೆದುಕೊಳ್ಳದೆ ತಮ್ಮಷ್ಟಕ್ಕೆ ತಾವು ಸ್ವಪಕ್ಷ ಪ್ರೇಮಿಯಾಗಿ ತಮ್ಮ ಪಕ್ಷಕ್ಕೆ ಮತ ಹಾಕುವ ಕ್ಷೇತ್ರಕ್ಕೆ ಮಾತ್ರ ಕೆಲಸ ಕಾರ್ಯಗಳನ್ನು ಮಂಜೂರು ಮಾಡಿಸುವ ಖಾದರ್‌ರವರು ಬಿಜೆಪಿ ಪಕ್ಷದ ಜನಪ್ರತಿನಿಧಿಗಳನ್ನು ಪ್ರಶ್ನಿಸುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಅಕ್ರಮ ರೆಸಾರ್ಟ್‌ಗಳ ವಿಷಯದಲ್ಲಿ ನೀವು ತಿಳಿಸಿರುವಂತೆ ಸ್ಥಳೀಯಾಡಳಿತಗಳಿಗಿಂತಲೂ ಹೆಚ್ಚಿನ ಜವಾಬ್ದಾರಿ ಶಾಸಕರಾಗಿ ತಮಗಿದೆ. ತಮಗೆ ಸಾಧ್ಯವಿದ್ದಲ್ಲಿ ಅಲ್ಲಿ ನಡೆಯುತ್ತಿದೆ ಎನ್ನಲಾದ ಅಕ್ರಮ ರೆಸಾರ್ಟ್‌ಗಳನ್ನು ನಿಲ್ಲಿಸುವಂತಹ ಕಾರ್ಯ ಮಾಡಿ ಇಂತಹ ಕಾರ್ಯ ನೀವು ಮಾಡಿದರೆ ಬಿಜೆಪಿ ಪಕ್ಷದ ಯಾವ ನಾಯಕರೂ ತಮ್ಮನ್ನು ತಡೆಯುವ ಕೆಲಸ ಮಾಡುವುದಿಲ್ಲ ಎಂದು ಅವರು ಶಾಸಕರಿಗೆ ತಿಳಿಸಿದರು.

ಕಡಲ್ಕೊರೆತ ಪ್ರದೇಶದ ಬಗ್ಗೆ ಇತ್ತೀಚೆಗೆ ಬೆಂಗಳೂರಿನಲ್ಲಿ ಅಥವಾ ಸ್ಥಳೀಯವಾಗಿ ನಡೆದ ಸಭೆಗಳಿಗೆ ಆಹ್ವಾನವಿದ್ದರೂ ಭಾಗವಹಿಸದ ಶಾಸಕರು ಇಂದು ವಾಹಿನಿಯ ಮೂಲಕ ಉಸ್ತುವಾರಿ ಸಚಿವರು ಕರೆಯಲಿಲ್ಲ ಎಂಬಂತೆ ಆಪಾದಿಸುವುದು ಶಾಸಕರಾಗಿ ತಮಗೆ ಶೋಭೆ ತರುವಂತಹದ್ದಲ್ಲ. ಕಡಲ್ಕೊರೆತದ ಪರಿಹಾರ ಕಾರ್ಯಗಳಿಗೆ ಸಂಬಂಧಿಸಿದಂತೆ ಸನ್ಮಾನ್ಯ ಜಗದೀಶ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಎಡಿಬಿ ವತಿಯಿಂದ 204 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿರುವುದನ್ನು ತಾವು ಮರೆತಿರಬಹುದು ಹೊರತು ಜನರು ಮರೆಯಲ್ಲ. ಇಷ್ಟು ವರ್ಷಗಳ ಕಾಲ ಸ್ಥಳೀಯ ಶಾಸಕರಾಗಿ ಸಚಿವರಾಗಿ ಅದೂ ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಉಚ್ಚಿಲ ಸೋಮೇಶ್ವರ ಪ್ರದೇಶದಲ್ಲಿ ನಡೆಯುವ ಕಡಲ್ಕೊರೆತಕ್ಕೆ ವೈಜ್ಞಾನಿಕವಾಗಿ ಶಾಶ್ವತ ಪರಿಹಾರ ಮಾಡಲು ಸಾಧ್ಯವಾಗದ ತಾವುಗಳು ಇವಾಗ ಇನ್ನೊಬ್ಬರ ಮೇಲೆ ಗೂಬೆ ಕೂರಿಸುವಂತಹ ಕೆಲಸ ಮಾಡುತ್ತಿರುವುದು ತಮ್ಮ ಕೀಳು ಮಟ್ಟದ ರಾಜಕೀಯಕ್ಕೆ ಸಾಕ್ಷಿಯಾಗಿದೆ. ಉಚ್ಚಿಲ ಪರಿಸರದಲ್ಲಿ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸಂಸದ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ರವರು ಉಚ್ಚಿಲ ಪರಿಸರದಲ್ಲಿ ತಾತ್ಕಾಲಿಕವಾಗಿ ಪರಿಹಾರ ಕಾರ್ಯವನ್ನು ನಡೆಸಿರುವುದನ್ನು ನೀವು ಕಾಣಬಹುದು. ನೀವು ಸಮುದ್ರಕೊರೆತ ಇರುವಂತಹ ಉಲ್ಲಾಳ ಕೋಡಿ, ಕೋಟೆಪುರಕ್ಕೆ ಮಾತ್ರ ಶಾಸಕರಾಗಿರುವಂತೆ ವರ್ತಿಸುವುದನ್ನು ಬಿಟ್ಟು ಉಚ್ವಿಲ ಸೋಮೇಶ್ವರ ಕೂಡ ತಮ್ಮ ವಿಧಾನಸಭಾ ವ್ಯಾಪ್ತಿಯಲ್ಲಿಯೇ ಇರುವುದು ಎಂಬುದನ್ನು ನೆನಪಿಸಿಕೊಳ್ಳಬೇಕು ಇದನ್ನು ಬಿಟ್ಟು ಜನರು ಪ್ರಶ್ನೆ ಕೇಳುವಾಗ ಸಮರ್ಪಕವಾಗಿ ಉತ್ತರಿಸಲು ಸಾಧ್ಯವಾಗದೆ ಇನ್ನೊಬ್ಬರ ಮೇಲೆ ಅಪಾದನೆ ಮಾಡುವುದನ್ನು ಬಿಟ್ಟು ಪಕ್ಷಾತೀತವಾಗಿ ಕೆಲಸ ಕಾರ್ಯಗಳನ್ನು ಕ್ಷೇತ್ರದಲ್ಲಿ ನಡೆಸಿ ತಮ್ಮ ಕಾರ್ಯಗಳ ಮೂಲಕ ಜನರಿಗೆ ಉತ್ತರ ನೀಡಲಿ ಎಂದು ಶಾಸಕ ಯು.ಟಿ.ಖಾದರ್‌ರವರ ಆರೋಪಕ್ಕೆ ಸತೀಶ್ ಕುಂಪಲರವರು ಉತ್ತರ ನೀಡಿದರು.

Leave a Reply

Your email address will not be published. Required fields are marked *

Related Post

%d bloggers like this: