October 30, 2020

“ಮಾತೃ ದೇವೋಭವ ಆಚಾರ್ಯ ದೇವೊಭವ” ಲೇಖನ- ಸುಪ್ರೀತಾಜಾನುವಾರುಕಟ್ಟೆ

ಲೇಖನ- ಸುಪ್ರೀತಾಜಾನುವಾರುಕಟ್ಟೆ

ಮೊದಲ ತೊದಲು ನುಡಿ ಕಲಿಸಿ, ಬಾಯಲ್ಲಿ ಅಕ್ಷರ ದೀಪ ಬೆಳಗಿಸಿ ನಗಿಸಿ ನಡೆಸಿ ಶಿಕ್ಷಿಸಿ ಬದುಕು ಕಲಿಸುವ ತಾಯಿಯೇ ಸರ್ವರಿಗೂ ಮೊದಲ ಮಹಾನ್ ಶಿಕ್ಷಕಿ. ಅವಳ ನಂತರದ ಸ್ಥಾನ ಮನುಕೋಟಿಯಲ್ಲಿ ಗುರುವರ್ಯರಿಗೆ ಆಚಾರ್ಯರಿಗೆ..!

ಆದರ್ಶ ಗುರು ಯಾವಾಗಲೂ ಶಿಷ್ಯರಿಗೆ ಏಕಕಾಲದಲ್ಲಿ ತಂದೆ ತಾಯಿ ಅಣ್ಣ ಅಕ್ಕ ಎಲ್ಲಾ ಆಗಬಲ್ಲ ! ಮಾನವೀಯತೆ ಸದ್ಗುಣ ಸಚ್ಛಾರಿತ್ರ್ಯ ಕಲಿಸಿ, ಈ ಜಗದ ಶೀಲಚಾರಿತ್ರ್ಯವ ಉಳಿಸಿ, ಮಾನವತೆಯ ಸಂಬಂಧ ಬೆಸೆಯುವ ಕೊಂಡಿಯಾಗಬಲ್ಲ ಸಾಮರ್ಥ್ಯವಿರುವುದು ಶಿಕ್ಷಕರಿಗೆ ಮಾತ್ರ.
ಈ ಜಗತ್ತಿನ ವೇಗದೋಟದ ಮಧ್ಯೆ ಸರ್ವ ಸವಾಲುಗಳ ನಡುವೆ, ವಿಕಾಸತೆಯ ಶಿಖರದಲ್ಲಿರುವ ಮಾನವ ಜನಾಂಗಕ್ಕೆ ಅರಿವಿನ ಅಗತ್ಯವಿದೆ. ಬದುಕಿನ ಪ್ರೀತಿ ಗೊತ್ತಾಗಬೇಕಿದೆ. ಅಖಂಡ ಆತ್ಮವಿಶ್ವಾಸ ಹೊತ್ತಿ ಉರಿಯಬೇಕಿದೆ. ಇದೆಲ್ಲ ಕೊಟ್ಟು ಬದುಕು ರೂಪಿಸಬಲ್ಲ ಶಿಕ್ಷಕನ ಅಗತ್ಯ ಹಳ್ಳಿ, ಪಟ್ಟಣದ ಗಲ್ಲಿಗಲ್ಲಿಗೂ ಇದೆ.

ಜಾಗತೀಕರಣ ಆಧುನಿಕರಣದ ಸೋಗಿನಲ್ಲಿ ಓಡುತ್ತಿರುವ ಶಿಕ್ಷಣ ವ್ಯವಸ್ಥೆಯ ನಡುವೆ ವಿದ್ಯಾರ್ಥಿಗಳಲ್ಲಿ ಎಲ್ಲಾ ಕ್ಷೇತ್ರದ ಅಭಿರುಚಿ ಹುಟ್ಟಿಸಿ, ಸಂಸ್ಕಾರ ಕಲಿಸಿ, ಮನುಷ್ಯ ಪ್ರೇಮ-ಸಂಬಂಧಗಳ ಅಗತ್ಯತೆ, ಸಾಮರಸ್ಯದ ನೀತಿ ಭೋಧಿಸುವ ,ಅವರೊಳಗಿನ ಅಂತರ್ ಕೌಶಲ್ಯಗಳನ್ನು ಹೊರತರಬಲ್ಲ ಪಾದರಸದಂತ ಕ್ರಿಯಾಶೀಲ “ಶಿಕ್ಷಕ” ಈ ಕಾಲಘಟ್ಟದ ಮೊದಲ ಅಗತ್ಯತೆ ಮತ್ತು ಅನಿವಾರ್ಯತೆ ಕೂಡ !

ಮನುಕುಲವನ್ನು ಕಾಡುತ್ತಿರುವ ಹೆಮ್ಮಾರಿ “ಕೊರೋನಾ” ಶಿಕ್ಷಕನ ಅಸ್ತಿತ್ವಕ್ಕೂ ಇಂದು ಕೊಡಲಿಯೇಟು ಕೊಟ್ಟಿದೆ. ಹಾಗೆ ಶಿಕ್ಷಕನ ಸೃಜನಶೀಲತೆ ಕಲಾತ್ಮಕತೆ ತನ್ನೆಲ್ಲಾ ಶೈಕ್ಷಣಿಕ ಅನುಭವವನ್ನು ಬಳಸಿ-ಬೆಳೆಸಿಕೊಳ್ಳಲೇ ಬೇಕಾದ ಸವಾಲಿನ ಜೊತೆ, ನಿಜವಾದ ಜ್ಞಾನವನ್ನು ಪ್ರಚುರ ಪಡಿಸುವ ಅಪೂರ್ವ ಅವಕಾಶವನ್ನು ಮುಂದಿಟ್ಟಿದೆ. ತರಗತಿ ಕೋಣೆಯೊಳಗೆ ಆಧ್ಯಾತ್ಮಿಕವಾಗಿ ಸಾಮಾಜಿಕವಾಗಿ ಭಾವನಾತ್ಮಕವಾಗಿ ಸಾಮರಸ್ಯದಿಂದ ಬೆಸೆದುಕೊಂಡಿರುವ ಶಿಕ್ಷಕ-ವಿದ್ಯಾರ್ಥಿಯ ಅವಿನಾಭಾವ ಸಂಬಂಧವನ್ನು ಬದ್ಧತೆಯಿಂದ ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಶಿಕ್ಷಕರೆಲ್ಲರ ಈ ಹೊತ್ತಿನ ತುರ್ತು ಅಗತ್ಯತೆ ಎನ್ನಬಹುದು.

ಹೌದು..! “ಕೊರೋನಾ” ದಿಂದ ಬದಲಾದ ಪ್ರತಿಕೂಲ ಪರಿಸ್ಥಿತಿಯಲ್ಲಿ ಶಿಕ್ಷಕ ಆನ್ಲೈನ್ ಬೋಧನಾಕ್ರಮಕ್ಕೆ ಒಗ್ಗಿಕೊಳ್ಳಲೇಬೇಕಿದೆ. ಆಧುನಿಕ ತಂತ್ರಜ್ಞಾನಗಳ ಬಳಕೆಗೆ ಮಕ್ಕಳನ್ನು ಪರಿಣಾಮಕಾರಿಯಾಗಿ ಅಣಿಗೊಳಿಸಲು ಶಿಕ್ಷಕನೂ ಪಳಗಬೇಕು. ಸನಾತನ ಪರಂಪರೆಯ ಶಿಕ್ಷಣ ವ್ಯವಸ್ಥೆಯ ಮೌಲ್ಯಗಳನ್ನು ಬಾಂಧವ್ಯವನ್ನು ಸಕಾರಾತ್ಮಕ ಚಿಂತನೆಗಳನ್ನು ಬೋಧನಕ್ರಮ ಮತ್ತು ಮಾಧ್ಯಮ ಯಾವುದೇ ಇರಲಿ ಮಕ್ಕಳಿಗೆ ತಲುಪಿಸಬೇಕಾದ ಹೊಣೆ ಎಂದಿಗೂ ಶಿಕ್ಷಕನದ್ದಾಗಿರುತ್ತದೆ.
ಎಲ್ಲರಿಗೂ ತಿಳಿದಿರುವಂತೆ ಆನ್ಲೈನ್ ಶಿಕ್ಷಣದಡಿ -ಶಿಕ್ಷಕರನ್ನೇ ನೋಡದೆ ಆನ್‌ಲೈನ್ ಶಿಕ್ಷಣ, ವರ್ಚುವಲ್ ಶಿಕ್ಷಣ ವ್ಯವಸ್ಥೆ ಇಂದಿನ ತಂದೆತಾಯಿಗಳ ಆಯ್ಕೆಯಾಗುತ್ತಿದೆ !!
ಶಿಕ್ಷಕ -ರಕ್ಷಕರು ಒಂದು ಅಂಶವನ್ನು ನೆನಪಿಡಲೇಬೇಕು.
‘ಸಂಸ್ಕಾರ ಕಲಿಸದ ಶಿಕ್ಷಣ ಶಿಕ್ಷಣವೇ ಅಲ್ಲ…!’ಇಂತಹ ಅನ್ಯೂಷವಲ್ ಶಿಕ್ಷಣ ಕ್ರಮದಲ್ಲಿ ಕಲಿತ ಹೆಚ್ಚಿನ ಮಕ್ಕಳ ಜ್ಞಾನ ಭಂಡಾರ ಹೊಸ ಹೊಸ ಸಂಶೋಧನೆಗಳ ಮೂಲಕ ಜಗತ್ತಿನ ಆಸ್ತಿಯಾಗದೆ, ರಚನಾತ್ಮಕ ಕೆಲಸಗಳಿಗೆ ಬಳಕೆಯಾಗದೆ ವಿಧ್ವಂಸಕ ಕೃತ್ಯಗಳಿಗೆ ಮುನ್ನುಡಿಯಾಗುತ್ತಿದೆ..!! ಇತ್ತೀಚೆಗಷ್ಟೇ ಕೆಲವು ನಿದರ್ಶನಗಳನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೀರಿ.
ಅದೆಷ್ಟೋ ಉಗ್ರರ, ನಕ್ಸಲೀಯರ ಭೃಷ್ಟ ರಾಜಕಾರಣಿಗಳೊಳಗೆ ಪ್ರಜ್ಞಾವಂತ ನಿಷ್ಠಾವಂತ ಮನಸ್ಸಿದೆ, ಯೋಗ್ಯ ಶಿಕ್ಷಣ ದೊರಕದೆ ಯೋಗ್ಯ ಗುರುವಿನ ಮಾರ್ಗದರ್ಶನವಿಲ್ಲದೆ ಹೀಗಾದ ಇವರುಗಳ ಸಂತತಿ ಸಾವಿರವಾಗುತ್ತಿದೆ..!

ಇನ್ನೂ ಹೇಳುವುದಾದರೆ ಇಂದಿನ ಶಿಕ್ಷಣ ವ್ಯವಸ್ಥೆ, ಆಡಳಿತ ಮಂಡಳಿ, ಸಮುದಾಯದ ಕಾರಣದಿಂದಲೇ “ಶಿಕ್ಷಕ ಮಕ್ಕಳಿಗೆ ಯೋಗ್ಯ ರೀತಿಯಲ್ಲಿ ತಲುಪುತ್ತಿಲ್ಲ..” ಶಿಕ್ಷಕನಿಂದು ಇಲಾಖೆ ಆಡಳಿತ ಮಂಡಳಿ , ಪೋಷಕರ ಚಕ್ರವ್ಯೂಹದೊಳಗೆ ಸಿಲುಕಿ ಒದ್ದಾಡುತ್ತಿದ್ದಾನೆ.
ಶಿಕ್ಷಕ ಬೋಧನೆಗಷ್ಟೇ ಸೀಮಿತವಾಗಿರಬೇಕು, ಅವನ ಪ್ರತಿ ಬಿಡುವಿನ ವೇಳೆಯೂ ವಿದ್ಯಾರ್ಥಿಗಳಿಗಷ್ಟೇ ಮೀಸಲಾಗಿರಬೇಕು, ಅನ್ಯ ಕಾರ್ಯಗಳು, ನೂರಾರು ಶಿಕ್ಷಕೇತರ ಜವಬ್ದಾರಿಗಳು..! ಬದುಕು ಸಾಗಿಸಲಾಗದ ವೇತನ ವ್ಯವಸ್ಥೆ..! ಮಕ್ಕಳ ಭವಿಷ್ಯ ಕಟ್ಟುವ ಗುರುತುರ ಹೊಣೆಗಾರಿಕೆಗೆ ಮೂಲ ತೊಡಕಾಗುತ್ತಿದೆ..! ಒತ್ತಡ ರಹಿತ ಶಿಕ್ಷಕ ೧೦೦% ಪ್ರತಿಶತ ಯಶಸ್ಸು ಕೊಡಬಲ್ಲನನ್ನೆವುದು ನನ್ನ ಅಭಿಮತ.
ಇಂದು ಶಿಕ್ಷಣ ತಜ್ಞರು ಆಡಳಿತ ಮಂಡಳಿ, ವ್ಯವಸ್ಥೆಯನ್ನಾಳುವವರು, ಪೋಷಕರು ಈ ಕುರಿತು ಯೋಚಿಸಿ ಶಿಕ್ಷಕನ ಹೊರೆಯನ್ನು ಕೆಳಗಿಳಿಸಿ, ಪರಿಮಿತಿಯೊಳಗಿನ ಅವರ ಗೌರವವನ್ನು ಹೆಚ್ಚಿಸಬೇಕು. ಐದಾರು ತಿಂಗಳಿಂದೀಚೆ ವೇತನವಿಲ್ಲದೆ, ಬದುಕಿನ ಮೂಲಭೂತ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ನಲುಗುತ್ತಿರುವ ಅದೆಷ್ಟೋ ಖಾಸಗಿ ಶಾಲಾ-ಕಾಲೇಜು ಶಿಕ್ಷಕರು, ಅರೆಕಾಲಿಕ ಉಪನ್ಯಾಸಕರುಗಳ ನೋವಿಗೆ ಸರ್ಕಾರದ ಪ್ರತಿನಿಧಿಗಳು ಸ್ಪಂದಿಸಬೇಕು. ಶಿಕ್ಷಕ ಬೇರೇ ದಾರಿ ಕಾಣದೆ ಆತ್ಮಹತ್ಯೆಗೆ ಶರಣಾಗುತ್ತನೆಂದರೆ ..? ಸಮಯೋಚಿತ ನಿರ್ಧಾರ ತೆಗೆದುಕೊಳ್ಳದ ನಮ್ಮನಾಳುವ ವ್ಯವಸ್ಥೆಯೇ ನೇರ ಹೊಣೆ.
ಇವೆಲ್ಲದರ ಜೊತೆಗೆ ಶಿಕ್ಷಣವನ್ನು ವ್ಯಾವಹಾರಿಕವಾಗಿ ನೋಡುವ ಮನಸ್ಥಿತಿಯನ್ನು ಪೋಷಕರು ಮೊದಲು ತೊಡೆದು ಹಾಕಿ, ಅದೊಂದು ಬದುಕಿಗೆ ಬೇಕಾದ ಮಹತ್ವದ ಸಂಸ್ಕಾರವೆಂದು ಗಮನದಲ್ಲಿಟ್ಟುಕೊಂಡು , ಕಲಿಸುವ ಗುರುಗಳಿಗೆ ಗೌರವಿಸುವ ಶಿಷ್ಟಾಚಾರ ಮನೆಯಿಂದಲೇ ಕಲಿಸಿಕೊಡಬೇಕು. ಆಗ ಮಾತ್ರ ಶಿಕ್ಷಕ ವೃತ್ತಿಯ ಪಾವಿತ್ರ್ಯತೆ ದ್ವಿಗುಣಗೊಂಡು ಸದೃಢ ಸಮಾಜದ ಸೃಷ್ಟಿಗೆ ನಾಂದಿಯಾಗುತ್ತದೆ.

ಶಿಕ್ಷಕ ವೃತ್ತಿಯ ಅತೀವ ಪ್ರೀತಿಸುವ ಮಹಾನ್ ಶಿಕ್ಷಕ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಹುಟ್ಟು ಹಬ್ಬವನ್ನು ಚಿರಸ್ಮರಿಸುತ್ತಾ, “ನನ್ನೆದೆಯೊಳಗೆ ಅಕ್ಷರ ದೀಪವ ಬೆಳಗಿಸಿ, ಸಂಸ್ಕಾರ ಕಲಿಸಿ ಬದುಕಿನ ಪ್ರೀತಿ ಮತ್ತು ಅನಿವಾರ್ಯತೆಯನ್ನು ಕಲಿಸಿಕೊಟ್ಟ, ನನ್ನೊಳಗೊಬ್ಬ ” ಶಿಕ್ಷಕಿ- ಬೋಧಕಿ”ಯನ್ನು ರೂಪಿಸಿದ ತಾಯಿಗೆ, ನ್ನನ್ನಜ್ಜಿಗೆ , ಗುರುವೃಂದದವರಿಗೆ, ವೃತ್ತಿ ನಿಭಾಯಿಸಲು ಸಹಕರಿಸಿದ ಸಹೋದ್ಯೋಗಿಗಳು, ಆಡಳಿತ ಮಂಡಳಿ ಮತ್ತು ಈ ಏಳು ವರ್ಷದ ವಿದ್ಯಾರ್ಥಿಸಮೂಹಕ್ಕೆ ನನ್ನ ಬದುಕಿನ ಪ್ರೀತಿಯನ್ನು ಅಂತರಾಳದ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ…

Leave a Reply

Your email address will not be published. Required fields are marked *

Related Post

%d bloggers like this: