July 11, 2020

ಅಬ್ಬಕ್ಕ ವಿಶೇಷ

ಪ್ರೊ.ಕೆ.ಎಸ್.ನಿಸಾರ್ ಅಹಮದ್ ನಿಧನ

ಬೆಂಗಳೂರು(3ಮೇ/2020):ಕನ್ನಡ ಹಿರಿಯ ಸಾಹಿತಿ ನಿತ್ಯೋತ್ಸವ ಕವಿ ಎಂದೇ ಖ್ಯಾತಿ ಗಳಿಸಿದ್ದ ಕೆ.ಎಸ್ ನಿಸಾರ್ ಅಹಮದ್(84) ಇಂದು ಬೆಂಗಳೂರಿನ ಸದಾಶಿವ ನಗರದ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ಪ್ರೊ.ಕೆ.ಎಸ್.ನಿಸಾರ್ ಅಹಮದ್ ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ಶ್ರೀ ಅಹಮದ್ ರವರ ಪೂರ್ಣ ಹೆಸರು ‘ಕೊಕ್ಕರೆ ಹೊಸಳ್ಳಿ ಶೇಖಹೈದರ ನಿಸಾರ್ ಅಹಮದ್’.
ಜನನ 5 ಫೆಬ್ರುವರಿ 1936
ದೇವನಹಳ್ಳಿಯಲ್ಲಿ
ಇವರ ವೃತ್ತಿ ಸಾಹಿತಿ, ಪ್ರೊಫೆಸರ್
ಇವರಿಗೆ ಹೆಸರು ತಂದ ಬರಹಗಳು ನವ್ಯ ಕಾವ್ಯ
ಪ್ರಮುಖ ಕೆಲಸ(ಗಳು)
ಮನಸು ಗಾಂಧಿ ಬಜಾರು(1960)
ನಿತ್ಯೋತ್ಸವ
ಇವರನ್ನು ಗೌರವಿಸಿದ ಪ್ರಮುಖ ಪ್ರಶಸ್ತಿಗಳು
ಪದ್ಮಶ್ರೀ, ರಾಜ್ಯೋತ್ಸವ ಪ್ರಶಸ್ತಿ.
ಪ್ರೊ. ಕೆ.ಎಸ್.ನಿಸಾರ್ ಅಹಮದ್ ರವರು 1959ರಲ್ಲಿ ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು ನಂತರ ವಿವಿಧ ಸರಕಾರಿ ಕಾಲೇಜುಗಳಲ್ಲಿ ಅಧ್ಯಾಪಕ ಹಾಗು ಪ್ರಾಧ್ಯಾಪಕರಾಗಿ ಕೆಲಸ ಮಾಡಿ ನಿವೃತ್ತರಾದರು.
ನಿಸಾರ್ ಅಹಮದ್ ಅವರ ಸಾಹಿತ್ಯಾಸಕ್ತಿ 1೦ನೇ ವಯಸ್ಸಿನಲ್ಲೇ ಆರಂಭ.’ಜಲಪಾತ’ದ ಬಗ್ಗೆ ಬರೆದ ಕವನ ಕೈಬರಹದ ಪತ್ರಿಕೆಯಲ್ಲಿ ಅಚ್ಚಾಗಿತ್ತು. ಅವರು ಇಲ್ಲಿಯವರೆಗೆ 21ಕವನ ಸಂಕಲನಗಳು, 15 ವೈಚಾರಿಕೆ ಕೃತಿಗಳು, 6 ಮಕ್ಕಳ ಸಾಹಿತ್ಯ ಕೃತಿಗಳು, 5 ಅನುವಾದ ಕೃತಿಗಳು, 13 ಸಂಪಾದನಾ ಗ್ರಂಥಗಳನ್ನು ಹೊರತಂದಿದ್ದಾರೆ.

ಅವುಗಳಲ್ಲಿ ಮನಸು ಗಾಂಧಿಬಜಾರು ಹಾಗು ನಿತ್ಯೋತ್ಸವ ಇವು ಪ್ರಸಿದ್ಧ ಕವನ ಸಂಕಲನಗಳಾಗಿವೆ. ನಿಸಾರ್‍ ಅಹಮದ್ ಸಂವೇದನಾಶೀಲ ಹಾಗೂ ಜನಪ್ರಿಯ ಕವಿ.
1978ರಲ್ಲಿ ಇವರ ಮೊದಲ ಭಾವಗೀತೆಗಳ ಧ್ವನಿಮುದ್ರಿಕೆ ನಿತ್ಯೋತ್ಸವ ಹೊರಬಂದು, ಕನ್ನಡ ಲಘುಸಂಗೀತ (ಸುಗಮ ಸಂಗೀತ) ಕ್ಷೇತ್ರದಲ್ಲಿ ಭರ್ಜರಿ ಯಶಸ್ಸು ಪಡೆಯಿತು. ಇದುವರೆಗೂ 13 ಧ್ವನಿಸುರುಳಿಗಳ ಮೂಲಕ ಅವರು ರಚಿಸಿದ ಕವನಗಳು, ಗೀತೆಗಳು ಸಂಗೀತದೊಂದಿಗೆ ಪ್ರಚುರಗೊಂಡಿವೆ.
ಕುರಿಗಳು ಸಾರ್‍ ಕುರಿಗಳು, ರಾಜಕೀಯ ವಿಡಂಬನೆ ಕವನ
ಭಾರತವು ನಮ್ಮ ದೇಶ (ಸರ್‍ ಮೊಹಮದ್ ಇಕ್ಬಾಲ್ ಅವರ ಸಾರೆ ಜಹಾಂ ಸೆ ಅಚ್ಚಾ ಕವನದ ಕನ್ನಡ ಭಾಷಾಂತರ)
ಬೆಣ್ಣೆ ಕದ್ದ ನಮ್ಮ ಕೃಷ್ಣ ಕವನ ಕವಿಯ ಬಹುಮುಖ ಪ್ರತಿಭೆಗೆ ಸಾಕ್ಷಿಯಾಗಿವೆ.
ಪ್ರಶಸ್ತಿ ಪುರಸ್ಕಾರಗಳುಸಂಪಾದಿಸಿ
2006 ರ ಮಾಸ್ತಿ ಪ್ರಶಸ್ತಿ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಗೊರೂರು ಪ್ರಶಸ್ತಿ
ಅನಕೃ ಪ್ರಶಸ್ತಿ
ಕೆಂಪೇಗೌಡ ಪ್ರಶಸ್ತಿ
ಪಂಪ ಪ್ರಶಸ್ತಿ
ರಾಜ್ಯೋತ್ಸವ ಪ್ರಶಸ್ತಿ
ನಾಡೋಜ ಪ್ರಶಸ್ತಿ
ಅರಸು ಪ್ರಶಸ್ತಿ
ಶಿವಮೊಗ್ಗದಲ್ಲಿ ನಡೆದ 73ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ’ರಾಗಿ ಆಯ್ಕೆಯಾಗಿದ್ದರು.

ಮುಂಬಯಿ: ಹಸಿದವರ ಹಸಿವು ನೀಗಿಸುತ್ತಿರುವ ಎರ್ಮಾಳು ಹರೀಶ್ ಶೆಟ್ಟಿ

ಮುಂಬೈ(2ಮೇ/2020): ಕರೋನಾ ಲಾಕ್ ಡೌನ್ ಸಂತ್ರಸ್ತರಿಗೆ ಮುಂಬಯಿ ಮಹಾನಗರದಲ್ಲಿ ನಿತ್ಯ 40ಸಾವಿರ ಜನರಿಗೆ ಅನ್ನದಾನ ಮಾಡುವ ಎರ್ಮಾಳು ಹರೀಶ್ ಶೆಟ್ಟಿ ಮತ್ತು ಮಿತ್ರರು.
ಹೋಟೆಲ್ ಉದ್ಯಮಿಗಳಾದ ಎರ್ಮಾಳು ಹರೀಶ್ ಶೆಟ್ಟಿಯವರು ಲಾಕ್ ಡೌನ್ ಘೋಷಣೆ ಆದಾಗ ಊರಿಗೆ ಬರಲಾಗದೆ ತಮ್ಮ ಕಾರ್ಯ ಕ್ಷೇತ್ರದಲ್ಲಿಯೇ ನಿಲ್ಲುವಂತಾಯಿತು. ದಿಢೀರ್ ಆದ ಬೆಳವಣಿಗೆಯಿಂದ ಅನೇಕರು ಮುಂಬಯಿ ಮಹಾನಗರದಲ್ಲಿ ಊಟವಿಲ್ಲದೆ ಪರದಾಡುವುದನ್ನು ಕಂಡು ತಮ್ಮ ಹೊಟೇಲ್ ಕೆಲಸಗಾರ ಮೂಲಕ ಮಾರ್ಚ್ 27ರಂದು 1000 ಊಟದೊಂದಿಗೆ ಪ್ರಾರಂಭಿಸಿದ ಎರ್ಮಾಳು ಹರೀಶ್ ಶೆಟ್ಟಿ ನಂತರ ತಮ್ಮ ಸ್ನೇಹಿತರನ್ನು ಜೊತೆಗೂಡಿ ಮುಂಬೈಯ ಆರು ಬೇರೆ ಬೇರೆ ಪ್ರದೇಶಗಳಲ್ಲಿ “ಸೆಂಟ್ರಲ್ ಕಿಚನ್” ಎಂಬ ಹೆಸರಿನಿಂದ ಪ್ರಾರಂಬಿಸಿದರು.
ಮಾರ್ಚ್ 27ಕ್ಕೆ 1000 ಊಟದೊಂದಿಗೆ ಶುರುವಾದ ಅನ್ನದಾನ ಎಪ್ರಿಲ್ 14ಕ್ಕೆ 9000 ಮುಟ್ಟಿತು.
ಎರ್ಮಾಳು ಹರೀಶ್ ಶೆಟ್ಟಿಯವರ ತಂಡದ ಸೇವಾ ಕಾರ್ಯದ ಬಗ್ಗೆ ಮಾಹಿತಿ ಪಡೆದ ರಾಜ್ಯ ಸರ್ಕಾರ ಎಪ್ರಿಲ್ 14ರಂದು 5000 ಊಟದ ಹೆಚುವರಿ ಬೇಡಿಕೆಯನ್ನು ಪೂರೈಸಲು ತಿಳಿಸಿತು,ನಂತರದ ದಿನಗಳಲ್ಲಿ ಆಹಾರದ ಬೇಡಿಕೆ 16000ದಿಂದ 18000ಕ್ಕೆ ಮುಟ್ಟಿತು.
ಇದರ ಜೊತೆಗೆ ಸಂತಕ್ರೂಸ್ ಬೈಂದರ್ ಪ್ರದೇಶದ ತುಳುವರ 200 ಕುಟುಂಬಕ್ಕೆ ರೇಶನ್ ಹಂಚಲಾಯಿತು.
B.E.S.T ಬಸ್ ನಲ್ಲಿ ನಿತ್ಯ ಊಟದ ಸಾಗಾಟ ನಡೆಯುತ್ತದೆ, ನಿತ್ಯ 35 ಜನರು ತಮ್ಮ ಸ್ವಂತ ಊರಿಗೆ ಹೋಗಲಾಗದ ಕೆಲಸಗಾರರು ಅಡುಗೆ ಮಾಡುತ್ತಿದ್ದು,ಇಂದಿಗೆ ಲಕ್ಷಂತರ ಊಟ ಸಿದ್ದವಾಗಿ ಹಸಿದವರಿಗೆ ತಲುಪಿರುತ್ತದೆ. ಊಟ ಅಂದರೆ ಬರೆ ಅನ್ನ ಸಾರು ಅಲ್ಲ ದಿನಾ ದಿನ ಬಗೆ ಬಗೆಯ ತಿನಸು ಸಿದ್ಧವಾಗುತ್ತದೆ, ದಾದರ್ ಚೆಂಬೂರು ಸುತ್ತಲಿನ ಜನರ ಹೊಟ್ಟೆ ತಣಿಸುವ ಎಲ್ಲಾ ಆರು “ಸೆಂಟ್ರಲ್ ಕಿಚನ್ನಲ್ಲಿ” ಚೋಲೆ ಮಸಾಲ, ವಡಾ ಪಾವ್, ಪಲಾವ್ ಹೀಗೆ ದಿನದ ಒಂದು ಬಗೆಯಲ್ಲಿ ಆಹಾರ ಸಿದ್ಧವಾಗುತ್ತದೆ,
B.M.C ನೀಡಿದ ಬೇಡಿಕೆಯಂತೆ ಸುಮಾರು ಮೂವತ್ತೆಂಟು ಸಾವಿರದಿಂದ ನಲ್ವತ್ತು ಸಾವಿರ ಊಟದ ಕಟ್ಟು ಸಾಗಾಟ ಎರ್ಮಾಳು ಹರೀಶ್ ಶೆಟ್ಟಿಯವ ನೇತೃತ್ವದಲ್ಲಿ ಆಗುತ್ತದೆ.
ಹರೀಶ್ ಶೆಟ್ಟಿಯವ ಹೇಳುವಂತೆ “ನಾವು ಉಡುಪಿಯವರು, ನಮ್ಮ ಕೆಲಸವೇ ಹಸಿದವರಿಗೆ ಅನ್ನ ನೀಡುವುದು”
ಎರ್ಮಾಳು ಹರೀಶ್ ಶೆಟ್ಟಿ ಪ್ರಚಾರ ಪ್ರೀಯರಲ್ಲ ಅವರ ಜೊತೆಗೆ ಇರುವ ಸ್ನೇಹಿತ ತಂಡವೂ ಪ್ರಚಾರದಿಂದ ದೂರ ಇರುವವರು ಲೋಕಸಭಾ ಸದಸ್ಯರಾದ ಗೋಪಾಲ್ ಶೆಟ್ಟಿ, ಮುಂಡಪ್ಪ ಪೈಯಡೆ, ರವಿಂದ್ರ ಶೆಟ್ಟಿ, ಡಾ.ಸತೀಶ್ ಶೆಟ್ಟಿ, ಪ್ರಕಾಶ್ ಶೆಟ್ಟಿ lic, ಮಂಜುನಾಥ ಬನ್ನುರು, ಸತೀಶ್ ಶೆಟ್ಟಿ ಗೋರೆಗಾವ್, ನಿಲೇಶ್ ಶೆಟ್ಟಿ, ಮಾಜಿ ಕಾರ್ಪೊರೇಟರ್ ಶಿವಾನಂದ ಶೆಟ್ಟಿ, ಕಾರ್ತಿಕ್ ಹರೀಶ್ ಶೆಟ್ಟಿ, ಗಂಗಾಧರ ಪೂಜಾರಿ, ಭಾಸ್ಕರ ಸಾಲ್ಯಾನ್, ವಿಜಯ್ ಭಂಡಾರಿ, ರತ್ನಾಕರ ಮುನ್ಕೂರು,ಮಹೇಶ್ ಶೆಟ್ಟಿ ಪೈಸಾರ್, ಅಜಿತ್ ಶೆಟ್ಟಿ ಮುಂತಾದವರು ಈ ಸೇವಾ ಕಾರ್ಯದಲ್ಲಿ ಕೈಜೋಡಿಸಿದ ಮಹನೀಯರು.
ಮುಂಬಯಿ ಮಹಾನಗರದಲ್ಲಿ ಹಸಿದವರ ಕಷ್ಟ ನೀಗಿಸಿದ ಈ ಕರಾವಳಿ ಮೂಲದ ಹೋಟೆಲ್ ಉದ್ಯಮಿಗಳಿಗೆ ಮುಂಬಯಿ ನಿವಾಸಿಗರು ಎಷ್ಟು ಧನ್ಯವಾದ ಹೇಳಿದರೂ ಕಡಿಮೆಯೇ.

ಕಾರಗೆಜ್ಜೆ ಬೆಡಗಿ ವೀಕ್ಷಾಪ್ರಕಾಶ್ ಗಟ್ಟಿ

ಮಂಗಳೂರು(27/2020ಏ): ಮಂಗಳೂರಿನಲ್ಲಿ ಅದೆಷ್ಟೋ ಬಾಲ ನಟ ನಟಿಯರು ಸಾಧನೆಯನ್ನ ಮಾಡಿದ್ದಾರೆ.ನಟನೆಯಲ್ಲಿ ಎಲ್ಲರ ಮನಸನ್ನೂ ಗೆಲ್ಲುತ್ತಾರೆ ಅಂತಹ ಪ್ರತಿಭೆಯಲ್ಲಿ ಈ ಬಾಲ ನಟಿಯು ಒಬ್ಬಳು.
ವೀಕ್ಷಾಪ್ರಕಾಶ್ ಗಟ್ಟಿ ಪಾಣೆಮಂಗಳೂರಿನ ನಂದಾವರದ ಆಶಾಪ್ರಕಾಶ್ ಗಟ್ಟಿ ದಂಪತಿಯ ಪುತ್ರಿ.ಎಸ್.ಎಲ್‌.ಎಂ.ಪಿ ವಿದ್ಯಾಲಯ ಪಾಣೆಮಂಗಳೂರಿನಲ್ಲಿ ನಾಲ್ಕನೇ ತರಗತಿಯಲ್ಲಿ ವಿದ್ಯಾಭ್ಯಾಸವನ್ನ ನಡೆಸುತ್ತಿದ್ದು,ಓದಿನ ಜೊತೆ ಜೊತೆಗೆ ಭರನಾಟ್ಯ ತರಗತಿಯನ್ನ ಪಡೆದುಕೊಂಡರು.ತನ್ನ ನಗುಮುಖದಲ್ಲೆ‌ ಎಲ್ಲರ ಮನಸನ್ನ ಗೆಲ್ಲುವ ಇವಳು ನಟನೆಯ ಕಡೆಗೆ ಹೆಜ್ಜೆ ಇಟ್ಟಳು.ಹರ್ಶಿತ್ ಸೋಮೇಶ್ವರ ಇವರ ನಿರ್ದೇಶನ ದಲ್ಲಿ ಮೋನಿಶ್ ಕುಮಾರ್ ಪಾವೂರು ಇವರ ಸಾಹಿತ್ಯದಲ್ಲಿ ತುಳುನಾಡ ಖ್ಯಾತ ಗಾಯಕ ಸಂತೋಷ್ ಬೇಂಕ್ಯ ಇವರ ಸ್ವರದಲ್ಲಿ ಮೂಡಿ ಬಂದ ಕಾರಗೆಜ್ಜೆ ಎಂಬ ತುಳು ಆಲ್ಬಮ್ ಸಾಂಗ್ ಗೆ ಬಾಲ ನಟ ಅಭಿಶೇಕ್ ಶೆಟ್ಟಿ ಯ ಜೊತೆ ನಾಯಕಿಯ ಪಾತ್ರವನ್ನ ಮಾಡಿ ಇಡೀ ಮಂಗಳೂರಿನಲ್ಲೇ ಮೆಚ್ಚುಗೆಯನ್ನ ಪಡೆದರು.ನಂತರ ಈ ಪುಟ್ಟ ಬಾಲಕಿಯ ನಟನೆಗೆ ಎಲ್ಲರೂ ಮನಸೋತು ಹಲವಾರು ಆಲ್ಬಮ್ ಸಾಂಗ್ ಗಳು ಇವರ ಕಡೆಗೆ ಬಂದವು.ರಚಿನ್ ಶೆಟ್ಟಿ ಹಾಗೂ ಅಭಿಶೇಕ್ ರಾವ್ ಇವರ ನಿರ್ದೇಶನದಲ್ಲಿ., ರಕ್ಷಣ್ ಮಾಡೂರು ಅವರ ಸಾಹಿತ್ಯದಲ್ಲಿ ,ಸಂತೋಷ್ ಬೇಂಕ್ಯ ಇವರ ಸ್ವರದಲ್ಲಿ ಮೂಡಿ ಬರಲಿರುವ ಪುಟ್ಟಕ್ಕ ಎಂಬ ಅದ್ಬುತ ಕಥೆಯುಳ್ಳ ಆಲ್ಬಮ್ ಸಾಂಗ್ ಗೆ ನಟನೆಯನ್ನ ಮಾಡಿದ್ದಾರೆ.
ಇದೇ ತಿಂಗಳ ಎಪ್ರಿಲ್ 27ಕ್ಕೆ ರಿಲೀಸ್ ಆಗಲಿದೆ.ನಿರ್ದೇಶಕ ಹರ್ಶಿತ್ ಸೋಮೇಶ್ವರ‌ ಇವರು ಕಾರಗೆಜ್ಜೆ-೨ ಮಾಡಲು ತಯಾರಿಯನ್ನ ನಡೆಸುತ್ತಿದ್ದಾರೆ.ಮುಂಬರುವ ತುಳು ಚಿತ್ರಗಳಲ್ಲಿ ಈ ಬಾಲ ನಟಿ ಬರಲಿದ್ದಾಳೆ ಎಂದು ಮಾತುಗಳೂ ಕೇಳಿ ಬರುತ್ತಿದೆ.
ಈ ಪುಟ್ಟ ವಯಸ್ಸಿನಲ್ಲಿಯೆ
ಅಭಿಮಾನಿಗಳನ್ನ ಸಂಪಾದಿಸುತ್ತಿದ್ದು‌ ಎಲ್ಲರ ಮನಸನ್ನ ಗೆದ್ದಿದ್ದಾಳೆ.

ಯುಗಾದಿ – ಇಗಾದಿ ವಿಷು – ಬಿಸು, ಲೇಖನ- ಕೆ.ಎಲ್. ಕುಂಡಂತಾಯ

ಯುಗಾದಿ – ಇಗಾದಿ , ವಿಷು – ಬಿಸು
ಲೇಖನ- ಕೆ.ಎಲ್. ಕುಂಡಂತಾಯ
ಹಿರಿಯ ಜಾನಪದ ವಿದ್ವಾಂಸರು.
ಇಗಾದಿ , ಯುಗಾದಿ , ವಿಷು ,ಬಿಸು ಹೀಗೆ ಆಚರಿಸಲ್ಪಡುವ ಹಬ್ಬ , ತುಳುವರ ಮೊತ್ತಮೊದಲ ಹಬ್ಬ “ಸೌರಯುಗಾದಿ” .
ನಾವು ಕೃಷಿ ಸಂಸ್ಕೃತಿಯಲ್ಲಿ ಬದುಕು ಕಟ್ಟಿದವರು .ಕೃಷಿಯ ಉತ್ಪನ್ನಗಳಲ್ಲಿ ಸಮೃದ್ಧಿಯನ್ನು ಕಂಡವರು .‌ನಾವು ಬೆಳೆಯುವ ಧಾನ್ಯವೇ ‘ಧಾನ್ಯಲಕ್ಷ್ಮೀ’ ಎಂದು ಪರಿಗ್ರಹಿಸಿದವರು .ಇದಕ್ಕೆ ಕಾರಣ ಕೃಷಿ – ಬೇಸಾಯವೇ ನಮಗೆ ಜೀವನಾಧಾರವಾಗಿತ್ತು .ಬೆನ್ನಿದ ಬದ್ಕ್ . ಮುಂದೆ ಬದಲಾಗುತ್ತಾ ಸಾಗಿಬಂತು .ಪ್ರಸ್ತುತ ಕೃಷಿ ಸಂಪೂರ್ಣ ಅವಗಣಿಸಲ್ಪಟ್ಟು ತುಳುನಾಡಿನಾದ್ಯಂತ “ಪಡೀಲ್ – ಹಡೀಲು” ಗದ್ದೆಗಳನ್ನು ಅಥವಾ ಮಣ್ಣು ತುಂಬಿಸಿದ ಫಲವತ್ತಾದ ಪರಿವರ್ತಿತ – ರೂಪಾಂತರಗೊಂಡ ,ವಿರೂಪಗೊಂಡ ಕೃಷಿಭೂಮಿಯನ್ನು ಕಾಣುತ್ತಿದ್ದೇವೆ .

ಪಗ್ಗುದ ತಿಂಗೊಡೆ

“ಪಗ್ಗು ತಿಂಗಳ ತಿಂಗೊಡೆ” ಅಂದರೆ “ಪಗ್ಗುಡು ಒಂಜಿ ಪೋನಗ್” ಅಥವಾ ಮೇಷಮಾಸದ ಮೊದಲ ದಿನ ನಮಗೆ ಯುಗಾದಿ . “ಸುಗ್ಗಿ” (ಮೀನ ಮಾಸ)ತುಳು ತಿಂಗಳ ಯಾದಿಯಲ್ಲಿ ಕೊನೆಯ ತಿಂಗಳು .
ವಾರ್ಷಿಕ ಚಕ್ರ ಆರಂಭವಾಗುವುದು ‌ಪಗ್ಗು ತಿಂಗಳಿನಿಂದ .‌
ಕೃಷಿಯೇ ಪ್ರಧಾನವಾಗಿರುವುದರಿಂದ ,
ನಾವು ಮಳೆಯನ್ನು ಆದರಿಸಿ ಬೆಳೆಯ ವಿಧಾನವನ್ನು ಅಂದರೆ ‘ಕೃಷಿ ಸಂವಿಧಾನವನ್ನು ರೂಪಿಸಿಕೊಂಡವರು .‌ಸುದೀರ್ಘ ಅವಧಿಯ ಮಾನವ – ಪ್ರಕೃತಿಯ ಸಂಬಂಧ , ಋತುಗಳು ,ಮಳೆ – ಚಳಿ – ಬೇಸಗೆ ಇಂತಹ ಸಹಜ ಬದಲಾವಣೆಗಳನ್ನು ಶತಮಾನ , ಶತಮಾನಗಳಷ್ಟು ಕಾಲ ಅನುಭವಿಸುತ್ತಾ ನಮ್ಮ ಜೀವನಾಧಾರವಾದ ‘ಬೆನ್ನಿ – ಕೃಷಿ – ಬೇಸಾಯ’ದ ಕ್ರಮವನ್ನು‌ ಸಿದ್ಧಗೊಳಿಸಿದ ನಮ್ಮ ಪೂರ್ವಸೂರಿಗಳು ಕೃಷಿಯೇ ಸರ್ವೋತ್ಕೃಷ್ಟವಾದುದು , “ಕೃಷಿ ಇದ್ದಲ್ಲಿ ದುರ್ಭಿಕ್ಷೆ ಇಲ್ಲ” ಎಂಬುದನ್ನು ಮನಗಂಡರು .ಆದರೆ ಶತಮಾನ ದಾಟಿ ಸಹಸ್ರಮಾನ – ಸಹಸ್ರಮಾನಕಾಲ ಸಾಗಿ ಬಂದ ಕೃಷಿಯಲ್ಲಿ ಒಂದು ‘ಸತ್ಯವನ್ನು – ದೇವರನ್ನು’ ನಮ್ಮ ಹಿರಿಯರು ಕಂಡಿದ್ದರು ಆದರೆ ನಾವು‌ ಅವಗಣಿಸುತ್ತಿದ್ದೇವೆ .ಅದರ ಪರಿಣಾಮದ ಫಲವನ್ನು ನೇರವಾಗಿ – ಪರೋಕ್ಷವಾಗಿ ಅನುಭವಿಸುತ್ತಿದ್ದೇವೆ . ಇದು ನಮ್ಮ ವಿಕೃತಿ . ಪ್ರಕೃತಿಯ ಮೇಲೆ ನಡೆಸಿದ ಅಭಿಯೋಗದ ಪರಿಣಾಮ .
“ಯುಗಾದಿಯ ಶುಭನುಡಿ”ಯನ್ನು ಹೇಳದೆ ಬೇರೆ ಏನನ್ನೋ ಬರೆಯುತ್ತಿದ್ದಾನಲ್ಲ‌, ಏಕೆ ಪ್ರಾರಂಭ ಮರೆತು ಹೋಯಿತೆ ….? ಖಂಡಿತ ಇಲ್ಲ .ಕೃಷಿ ಎಂದು ಬಂದಾಗ ‘ಕೃಷಿ ಸಂಸ್ಕೃತಿ’ಯ ಅವಗಣನೆಯನ್ನು ಹೇಳುತ್ತಲೇ ಇರುವುದು ನನ್ನ ಜಾಯಮಾನ .ಆದರೆ ಅದು ಸತ್ಯವೂ ಹಾದು ತಾನೆ ?
ತುಳುವರು ‘ಇಗಾದಿ – ಯುಗಾದಿ – ವಿಷು – ಬಿಸು’ ದಿನದಂದು ವಾರ್ಷಿಕ ಕೃಷಿಗೆ ಆರಂಭಿಸುವ ಪವಿತ್ರದಿನ . “ನಾಲೆರು ಮಾದಾವೊಡು , ಪುಂಡಿಬಿತ್ತ್ ಪಾಡೊಡು” ಇದು ಯುಗಾದಿಯ ಆಚರಣೆ . ಪಗ್ಗು ತಿಂಗಳ ಮೊದಲ ದಿನ ಹೀಗೆ ಕೃಷಿಯನ್ನು ಸಾಂಕೇತಿಕವಾಗಿ ಆರಂಭಿಸುತ್ತಾ ಮುಂದೆ ‘ಪಗ್ಗುಡು ಪದಿನೆಡ್ಮ ಪೋನಗ’ ಪೂರ್ಣ ಪ್ರಮಾಣದ ಬೇಸಾಯಕ್ಕೆ ಬೇಕಾದ ‘ಬಿದೆ’ ಅಂದರೆ ತಳಿಯನ್ನು ನಿರ್ಧರಿಸಿ ನೇಜಿ ಹಾಕುವ ಸಂಪ್ರದಾಯ .ಈ ನಡುವೆ ಉರಿನ ದೇವಾಲಯಗಳಲ್ಲಿ , ಮನೆಗಳಲ್ಲಿ ‘ಯುಗಾದಿ ಫಲ’ ಓದುವ ಶಿಷ್ಟಾಚಾರವಿತ್ತು . ಈಗಲೂ ಕೆಲ ದೇವಳಗಳಲ್ಲಿ ,ಕೆಲವು ಮನೆಗಳಲ್ಲಿ ಓದುವ ಕ್ರಮ ರೂಢಿಯಲ್ಲಿದೆ . ಸುದೀರ್ಘವಾದ ಯುಗಾದಿ ಫಲದ ಓದುವಿಕೆಯಲ್ಲಿ ರೈತನಿಗೆ ಬೇಕಾದ್ದು ‘ಈ ವರ್ಷ ಎಷ್ಟು ಕೊಳಗ ಮಳೆ ಬರುತ್ತದೆ ಮತ್ತು
“ಕಜೆ ಬಿದೆ ಆವ , ಮಡಿ ಬಿದೆ ಆವ ” ಎಂಬ ತೀರ್ಮಾನಕ್ಕೆ ಬರುವುದೇ ಆಗಿದೆ .
ಪ್ರಕೃತಿಯನ್ನು ಓದುತ್ತಾ ಮಳೆ ಇಷ್ಟು ಬರಬಹುದು ಎಂದು ಊಹಿಸುತ್ತಾ ,
ಕೆಲವೊಂದ ಸಂಜ್ಞೆಗಳನ್ನು ಆಧರಿಸಿ ತಳಿ ನಿರ್ಣಯಿಸುತ್ತಿದ್ದು ಮುಂದೆ ಯುಗಾದಿ ಫಲವನ್ನು ಅವಲಂಬಿಸಿದ್ದು ವಿಕಾಸದ ಹಂತ ಎಂದು ತಿಳಿಯಬಹುದು .
ಆದರೆ ಈಗ ಇದೆಲ್ಲ ಅಪ್ರಸ್ತುತ . ಗಮನಿಸಿ……ಹೇಗೆ ಹಂತ ಹಂತವಾಗಿ ಮಳೆ ಆರಂಭವಾಗುತ್ತಾ ,ಸುರಿಯುತ್ತಾ ತೀವ್ರವಾಗುವ ಮೊದಲು “ನೇಜಿ” (ಭತ್ತದ ಸಣ್ಣ ಗಿಡ) ಬೆಳೆಯುತ್ತದೆ , ಮತ್ತೆ ನೆಡುವ ಕಾರ್ಯ ಆರಂಭ ‘ಇದೆ ಬೆನ್ನಿ’ . ಇದಕ್ಕೆ ತೊಡಗುವ ಸುಮುಹೂರ್ತವೇ “ಯುಗಾದಿ – ಇಗಾದಿ ,ವಿಷು – ಬಿಸು” .

ಬಿಸು ಕಣಿ

“ವಿಷು – ಬಿಸು ಕಣಿ” ದರ್ಶನ : ಹಿಂದಿನ ರಾತ್ರಿ ಮನೆ ದೇವರ ಮುಂಭಾಗ ಮಂಗಲ ದ್ರವ್ಯಗಳನ್ನು ಅಂದರೆ ತೆಂಗಿನಕಾಯಿ , ಕನ್ನಡಿ , ಚಿನ್ನದ ಆಭರಣ , ಪುಸ್ತಕ , ತರಕಾರಿ , ಲಭ್ಯ ಫಲ ( ಗೇರು ಹಣ್ಣು , ಮಾವಿನ ಹಣ್ಣು ) ಮುಂತಾದುವವುಗಳನ್ನು ಇರಿಸಿ ದೀಪ ಹಚ್ಚಿಟ್ಟು ಇಗಾದಿಯಂದು ಬೆಳಗ್ಗೆ ಬೇಗ ಎದ್ದೊಡನೆ ಈ ಮಂಗಲ ದ್ರವ್ಯಗಳನ್ನು ನೋಡಿ ನಮಸ್ಕರಿಸುವುದು ಕ್ರಮ . ಈ ಶಿಷ್ಟಾಚಾರ ತುಳು ನಾಡಿನ ದಕ್ಷಿಣ ಭಾಗದಲ್ಲಿ ಸಂಭ್ರಮದಲ್ಲಿ ನಡೆಯುತ್ತಿರುತ್ತದೆ .
ಈ ಸಂದರ್ಭದಲ್ಲಿ ಉತ್ಸವ ಆರಂಭವಾಗುವ ದೇವಾಲಯಗಳಲ್ಲೂ ‘ಕಣೆ’ ಇಡುವ ಸಂಪ್ರದಾಯ , ಯುಗಾದಿ ಫಲ ಓದುವ ಕ್ರಮ ಇಂದಿಗೂ ರೂಢಿಯಲ್ಲಿದೆ .
ಹೆಸರು ಬೇಳೆ ಪಾಯಸ ,ಅದಕ್ಕೆ ಗೇರು ಬೀಜದ ಎಳಸು ಬೀಜದ ತಿರುಳನ್ನು ಹಾಕಬೇಕು . ಗೇರು ಬೆಳೆಯುವ ಕಾಲ ತಾನೆ ,ಹಾಗಾಗಿ ಅದು ಸುಲಭ ಲಭ್ಯ .
ಯುಗಾದಿಯಂದು ಮನೆಯ ದೈವ – ದೇವರಿಗೆ , ಗುರು – ಹಿರಿಯರಿಗೆ ನಮಸ್ಕರಿಸುವುದು , ಊರಿನ‌ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆಯುವುದು ನಡೆದು ಬಂದ ಪದ್ಧತಿ .ಇಗಾದಿ ಸಂಭ್ರಮಿಸುವ ಹಬ್ಬವಲ್ಲ , ಕೃಷಿಗೆ ತೊಡಗುವ ಹಬ್ಬ ಎನ್ನ ಬಹುದು .ಈಗ ಅದರ ಸ್ವರೂಪ ಬದಲಾಗಿದೆ , ಪ್ರಧಾನವಾದ “ಕೃಷಿ – ಬೆನ್ನಿ”
ಮರೆತು ಹೋಗಿದೆ …..!
ಕೃಷಿ ಸಮೃದ್ಧಿ ಮಾತ್ರ ಈ ವರ್ಷದ ಯುಗಾದಿ ಆಶಯಕ್ಕೆ ಸೀಮಿತವಾಗುವುದು ಬೇಡ . ರಾಜ್ಯ – ರಾಷ್ಟ – ವಿಶ್ವವನ್ನು ಕಂಗೆಡಿಸಿ ಮನುಕುಲ ಆತಂಕ ಪಡುವ ಹಾಗೆ ಮಾಡಿರುವ “ಕೊರೋನ” ವ್ಯಾದಿ ದೂರವಾಗಲಿ ಎಂದು ಈ ಮಣ್ಣಿನ‌ ಸತ್ಯವನ್ನು ಮತ್ತು ನಿಯಾಮ ಶಕ್ತಿಯನ್ನು ಪ್ರಾರ್ಥಿಸೋಣ .
‘ಇಗಾದಿ – ಬಿಸು’ ಶುಭಾಶಯಗಳು .

ಮೂಲಸ್ಥಾನ – ಮೂಲತಾನ. ಬೆರ್ಮಸ್ಥಾನ , ಆಲಡೆ, ಮೂಲ. ಡಕ್ಕೆಬಲಿ – ಬ್ರಹ್ಮಮಂಡಲ. ನಾಗಮಂಡಲ. ನಾಗ- ಬ್ರಹ್ಮಮಂಡಲ. ಇವುಗಳ ಕುರಿತು ಗೊಂದಲಗಳಿಗೆ ಪರಿಹಾರ- ಲೇಖನ ಕೆ.ಎಲ್ ಕುಂಡಂತಾಯ

“ಮೂಲಸ್ಥಾನ – ಮೂಲತಾನ. ಬೆರ್ಮಸ್ಥಾನ , ಆಲಡೆ, ಮೂಲ. ಡಕ್ಕೆಬಲಿ – ಬ್ರಹ್ಮಮಂಡಲ. ನಾಗಮಂಡಲ. ನಾಗ – ಬ್ರಹ್ಮಮಂಡಲ. ಇವುಗಳ ಕುರಿತು ತುಂಬಾ ಗೊಂದಲಗಳಿವೆ . ಲಕ್ಷಾಂತರ ರೂಪಾಯಿ ವ್ಯಯಿಸಿ ಜೀರ್ಣೋದ್ಧಾರ ಮಾಡಿಸಿ ,
“ನಾಗ – ಬ್ರಹ್ಮಮಂಡಲ” ಸೇವೆ ಸಮರ್ಪಿಸುವ ಭಕ್ತರಿಗೆ ಇರುವ ಗೊಂದಲ ಪರಿಹಾರ ಪ್ರಯತ್ನವಾಗಿ ಈ ಲೇಖನ, ಲೇಖಕರು ಕೆ.ಎಲ್ ಕುಂಡಂತಾಯರು,ಹಿರಿಯ ಜಾನಪದ ವಿದ್ವಾಂಸರು.
••••••••••••••••••
ಮೂಲಸ್ಥಾನ – ಬೆರ್ಮಸ್ಥಾನ – ಮೂಲ – ಬ್ರಹ್ಮಸ್ಥಾನ – ಪಂಚದೈವಸ್ಥಾನಗಳಲ್ಲಿ , ಸಪರಿವಾರ ಪಂಚದೈವಗಳ ಸಹಿತ ದೈವಗಳ ಸನ್ನಿಧಾನವಿರುವ “ಬೆರ್ಮೆರ್” ಪ್ರಧಾನವಾಗಿರುವಲ್ಲಿ ಅಥವಾ ಆಲಡೆಗಳಲ್ಲಿ ಸಾಮಾನ್ಯವಾಗಿ ನಡೆಯುವುದು “ಡಕ್ಕೆಬಲಿ”/ “ಪೊಡಿ ಮಂಡಲ”/ “ದೂಳು ಮಂಡಲ”. ಈ ಪ್ರಾಚೀನ ಆಚರಣೆಯನ್ನು ಅರ್ವಾಚೀನ ಅನುಸಂಧಾನದಲ್ಲಿ ‘ಬ್ರಹ್ಮಮಂಡಲ’ ಎಂದೂ ಹೇಳಲಾಗುತ್ತದೆ .
“ಡಕ್ಕೆಬಲಿ” ಎಂದರೆ “ಭೂತ ನಾಗರಿಗೆ ಮಂಡಲ ಬರೆದು ನಡೆಸುವ ಒಂದು ಬಗೆಯ ನೃತ್ಯರೂಪದ ಆರಾಧನೆ” ಎನ್ನುತ್ತದೆ ತುಳು ನಿಘಂಟು . ಆದುದರಿಂದ ಡಕ್ಕೆಬಲಿಯನ್ನು ಸಮೂಹ ಪೂಜಾ ನೆಲೆಗಳಲ್ಲಿ ಆಚರಿಸಲಾಗುವ ಸೇವೆ ಎನ್ನುತ್ತದೆ ತುಳು ನಿಘಂಟು .ದೂಳು ಮಂಡಲ , ಪೊಡಿ ಮಂಡಲ ಆಚರಣೆಗಳು ಪರ್ಯಾಯವಾಗಿ ನೆರವೇರುವ ಸರಳ ವಿಧಾನದ ಸೇವೆಗಳು .
ಆಲಡೆಗಳೆಂದರೆ ಪಂಚದೈವಸ್ಥಾನ –
ಬೆರ್ಮಸ್ಥಾನಗಳು . ಇವೇ ನಮ್ಮ ಪೂರ್ವಸೂರಿಗಳು ಶ್ರದ್ಧೆಯಿಂದ ನಡೆದುಕೊಂಡು ಬಂದ ‘ಮೂಲಸ್ಥಾನಗಳು’ . ಇಲ್ಲಿ ಕೇವಲ ಪಂಚ ದೈವ ಸನ್ನಿಧಾನಗಳಲ್ಲ .ಬದಲಿಗೆ
ಬ್ರಹ್ಮಸ್ಥಾನಕ್ಕೆ ಸಂಬಂಧಿಸಿದ
ಕುಟುಂಬದವರ ಮತ್ತು‌ ಆ ಸ್ಥಳಕ್ಕೆ ಹೊಂದಿಕೊಂಡಿರುವ ದೈವಗಳನ್ನು ಕಾಣಬಹುದು . ಅಂತೆಯೇ “ಸಿರಿ” ನಂಬಿಕೆ ಪ್ರಾರಂಭವಾದಾಗ ಈ ಆಲಡೆಗಳಲ್ಲೆ ಸಿರಿಗಳನ್ನು ನೆಲೆಗೊಳಿಸಿ ಆರಾಧಿಸಲಾಯಿತು . ಇತ್ತೀಚೆಗಿನ ವರ್ಷಗಳಲ್ಲಿ ಸಿರಿಗಳು ಇರುವ ಪೂಜಾಸ್ಥಾನವನ್ನು “ಆಲಡೆ”ಗಳೆಂದು ಒಪ್ಪಲಾಗುತ್ತಿದೆ . ಆದರೆ ಆಲಡೆಗಳು (ಮೂಲಸ್ಥಾನ ಅಥವಾ ಬೆರ್ಮಸ್ಥಾನಗಳನ್ನು ಆಲಡೆಗಳೆಂದೇ ಗುರುತಿಸಲಾಗುತ್ತಿತ್ತು) ಸಿರಿಯ ಜನನದ ಪೂರ್ವದಲ್ಲೆ ಇದ್ದುವು ಎಂಬುದಕ್ಕೆ ಜೀರ್ಣ ಸ್ಥಿತಿಯಲ್ಲಿದ್ದ ಆಲಡೆಯ‌ ( ಬೆರ್ಮಸ್ಥಾನದ) ಜೀರ್ಣೋದ್ಧಾರದ ಫಲವಾಗಿ ಸಿರಿ ಸತ್ಯನಾಪುರ
( ಸಚ್ಚನಾಪುರ)ದ ಬಿರ್ಮಾಳ್ವರಿಗೆ ( ಅಜ್ಜ) ಸತ್ಯದ ಸಿರಿಯಾಗಿ , ಅಪೌರುಷೇಯಳಾಗಿ ಹುಟ್ಟಿದಳು ಎನ್ನುತ್ತವೆ ಪಾರ್ದನಗಳು .
ಉಪಾಸನಾ ಅಥವಾ ನಂಬಿಕೆಯ ಪರಿಕಲ್ಪನೆಯು ಮಾನವ ಒಂದು ಕಡೆ ನೆಲೆಯೂರಿ ಬದುಕು ಕಟ್ಟಿಕೊಂಡು ಕೃಷಿಯನ್ನು ಅವಲಂಬಿಸಿ ಬದುಕಲಾರಂಭಿಸಿದ ಕಾಲದ “ಸಮೂಹ ಪೂಜೆ”ಯ ಉಳಿಕೆಯಾಗಿದೆ .ಭಯದಿಂದ ಅಥವಾ ಉಪಕೃತನಾದಾಗ ( ನಾಗ ,ಹಂದಿ , ಹುಲಿ ಹಾಗೂ ಕೋಣ , ಎತ್ತು ಮುಂತಾದುವುಗಳನ್ನು ಉದಾಹರಿಸಬಹುದು) ತನಗೆ ನಂಬಬೇಕೆಂದು , ಪೂಜಿಸಬೇಕೆಂದು ಬಯಸಿದ ಎಲ್ಲವನ್ನು‌ ಒಂದೇ ವ್ಯವಸ್ಥೆಯ ಅಡಿಯಲ್ಲಿ ಅಂದರೆ ವಾಸ್ತವ್ಯಕ್ಕೆ ಸ್ವಲ್ಪ ದೂರದಲ್ಲಿ ಮರದ ಬುಡದಲ್ಲೊ ಎತ್ತರದ ಗುರುತಿಸಲು ಸುಲಭವಾಗುವ ಸ್ಥಳಗಳಲ್ಲೊ ಪ್ರತೀಕಗಳ( ಲಭ್ಯ ಕಲ್ಲುಗಳ ತುಂಡುಗಳು) ಮೂಲಕ ನಂಬಿದ‌ . ಹಾಗಾಗಿಯೇ ನಮ್ಮ ಆಲಡೆಗಳಲ್ಲಿ ಒಂದಷ್ಡು ದೈವಗಳ ಸಂಕಲ್ಪವೂ ಇರುತ್ತವೆ . ಕೆಲವೆಡೆ ದೇವರುಗಳ ಸಂಕಲ್ಪವೂ ಇರುವುದಿದೆ .ಉದಾಹರಣೆಗೆ “ಬ್ರಹ್ಮ- ಬೆರ್ಮೆರ್” ಬ್ರಹ್ಮಲಿಂಗೇಶ್ವರನಾಗಿ ಅಥವಾ ಮಹಾಲಿಂಗೇಶ್ವರನಾಗಿ ಪ್ರಧಾನ ಸ್ಥಾನ ಪಡೆದಿರುವುದನ್ನು ಗಮನಿಸಬಹುದು .
ಇಂತಹ ಬ್ರಹ್ಮಸ್ಥಾನ( ಬೆರ್ಮಸ್ಥಾನ) ಅಥವಾ ಆಲಡೆಗಳು “ಬೆರ್ಮೆರ್” ಪ್ರಧಾನವಾಗಿಯೇ ಇರುತ್ತವೆ . ಉಳಿದಂತೆ ನಾಗ ಸಹಿತ ಎಲ್ಲಾ ಸನ್ನಿಧಾನಗಳು ಪೂರಕವಾಗಿಯೇ ಇರುವುದು .
ಆದುದರಿಂದ ಆಲಡೆ ಅಥವಾ ಬೆರ್ಮಸ್ಥಾನ ಗಳಲ್ಲಿ ಡಕ್ಕೆಬಲಿಯೇ ನಡೆಯುವುದು ವಾಡಿಕೆ . ಕಾರಣ ಬೆರ್ಮೆರ್ ಪ್ರಧಾನವಾಗಿಯೇ ನೆರವೇರುವ ಆಚರಣೆ ಡಕ್ಕೆಬಲಿ . ಇದಕ್ಕೆ ಪ್ರಸಿದ್ಧ ಸಿರಿಕ್ಷೇತ್ರಗಳು ಮತ್ತು ಬೆರ್ಮಸ್ಥಾನಗಳು ಉದಾಹರಣೆಯಾಗಿವೆ , ಸಿರಿಜಾತ್ರೆ – ಆಯನೋತ್ಸವದಂದು ಡಕ್ಕೆಬಲಿ / ಪೊಡಿಮಂಡಲ ನಡೆಯುವುದು ಸಂಪ್ರದಾಯವಾಗಿದೆ . ಈ ಡಕ್ಕೆಬಲಿಯನ್ನು “ಬ್ರಹ್ಮಮಂಡಲ” ಎಂದು ಹೇಳಲಾಯಿತು .ಹೊಸ ಹೆಸರು ನಮಗೂ ಆಪ್ಯಾಯವಾಯಿತು , ಒಪ್ಪಿದೆವು , ರೂಢಿಗೆ ಬಂತು .
ಡಕ್ಕೆಬಲಿಯನ್ನು ಆಧಾರವಾಗಿಟ್ಟುಕೊಂಡು “ನಾಗಮಂಡಲ” ವಿಧಾನವು ವೈದಿಕದ ಪ್ರಭಾವದಿಂದ ನೇರ್ಪುಗೊಂಡು ರೂಢಿಗೆ ಬಂತು . ಇದು ವೈದಿಕದ ಕಲ್ಪನೆಯಾದರೂ ಅದರ ಮೂಲದಲ್ಲಿದ್ದ ‘ದೇಸಿ’ ಅಂಶಗಳನ್ನು ವಿಂಗಡಿಸಲಾಗಲೇ ಇಲ್ಲ . ಹಾಗಾಗಿ ನಾಗಮಂಡಲವನ್ನು ಶಿಷ್ಟ ಮತ್ತು ಜಾನಪದದ ಸಂಕಲನ ಸ್ವರೂಪ ಎಂದು ಹೇಳುವುದು .

ನಾಗ – ಬ್ರಹ್ಮ ಮಂಡಲ

ಇತ್ತೀಚೆಗಿನ ದಿನಗಳಲ್ಲಿ “ನಾಗ – ಬ್ರಹ್ಮ ಮಂಡಲ” ಎಂಬ ಅನುಸಂಧಾನವು ಬಹು ಜನಪ್ರಿಯವಾಗುತ್ತಿದೆ . ಬ್ರಹ್ಮಮಂಡಲ – ನಾಗಮಂಡಲಗಳೆರಡನ್ನೂ ಸಂಯುಕ್ತವಾಗಿ ನೆರವೇರಿಸುವುದು ‘ನಾಗ – ಬ್ರಹ್ಮಮಂಡಲ’ .
ಈ ಆಚರಣೆಗೆ ಬ್ರಹ್ಮಮಂಡಲ(ಡಕ್ಕೆಬಲಿ)ದ ಮಂಡಲವನ್ನು ಬರೆಯುವುದು , ಅದರೊಂದಿಗೆ ಸಂಕಲ್ಪಿತ ಪವಿತ್ರ ಸಂಖ್ಯೆಯಲ್ಲಿ ನಾಗಮಂಡಲದ ಚಿತ್ತಾರವನ್ನು ಬಿಡಿಸುವುದು .ಇವೆರಡನ್ನು ಮಂಡಲ ನಿರ್ಮಾಣದಲ್ಲಿಸಂಯೋಜಿಸಿಕೊಳ್ಳುವುದು .ಅದರಂತೆ ನಿರ್ವಹಿಸುವುದು . ಈ ಅನುಸಂಧಾನ ವಿಧಾನ ಮಾತ್ರ ತಲೆದೂಗುವಂತಿದೆ .
ಬ್ರಹ್ಮಮಂಡಲ ಅಥವಾ ಡಕ್ಕೆಬಲಿಯಲ್ಲಿ ನಾಗ ಪ್ರಧಾನವಲ್ಲ ‌. ಬದಲಿಗೆ ನಾಗ ಒಂದು ಉಪ ಸನ್ನಿಧಾನವಾಗಿರುತ್ತದೆ . ಒಂದು ಹೆಡೆಯ ನಾಗನ ಸರಳವಾದ ಚಿತ್ರವನ್ನು ಮಾತ್ರ ಬಿಡಿಸುವುದು ಕ್ರಮ.ಇದೇ ಅಂಶವನ್ನು ಸ್ವೀಕರಿಸಿ ಡಕ್ಕೆಬಲಿ – ಬ್ರಹ್ಮಮಂಡಲದ ಮಂಡಲ ಬರೆದು , ನಾಗನನ್ನು ಪವಿತ್ರಗಂಟಿನ ರೂಪದಲ್ಲಿ ಒಂದು ,ನಾಲ್ಕು , ಎಂಟು , ಹದಿನಾರು ಪವಿತ್ರ ಗ್ರಂಥಿ(ಗಂಟು)ಗಳಿರುವಂತೆ ಮಂಡಲ ಬಿಡಿಸುವುದು . ಆಗ ಈ ಸಂಯುಕ್ತ ಮಂಡಲವು ‘ನಾಗ – ಬ್ರಹ್ಮಮಂಡಲ’
ವಾಗುತ್ತದೆ . ಇದು ಕಳೆದ ಶತಮಾನದಲ್ಲಿ ರೂಢಿಗೆ ಬಂದ ಆರಾಧನಾ ವಿಧಾನ .
ಆಲಡೆಗಳು ನಮ್ಮ ಮೂಲತಾನಗಳು .
ಬಹುತೇಕ ಅಲ್ಲೆ ನಮ್ಮ “ಮೂಲನಾಗ”
ಸನ್ನಿಧಿ ಇರುವುದು. ನಾಗನಿಂದಲೇ ನಮ್ಮ ಮೂಲದ ಸ್ವೀಕಾರ ಎಂಬುದು ವಿಶ್ವಾಸ . ನಾಗ ಶ್ರದ್ಧೆ , ಭಕ್ತಿ , ತನು – ತಂಬಿಲ , ಮೂಲತಾನಗಳಲ್ಲಿ ನಡೆದುಕೊಳ್ಳುವುದು ಹೆಚ್ಚಾದಾಗ ನಮ್ಮ ಮೂಲಸ್ಥಾನ – ಬ್ರಹ್ಮಸ್ಥಾನ ( ಬೆರ್ಮಸ್ಥಾನ) ಗಳಲ್ಲಿ ನಾಗ ಪ್ರಧಾನವಾಯಿತು . ಈ ನಡುವೆ “ಬೆರ್ಮರ್”
ಕುರಿತಾದ ಸ್ಪಷ್ಟತೆ ಇಲ್ಲವಾಯಿತು .ಏಕೆಂದರೆ ಪೂಜೆ ಮಾಡುವವರಿಗೆ ನಿಖರತೆ ಇಲ್ಲದೆ ಬೆರ್ಮೆರ್ ‘ಬ್ರಹ್ಮ’ ನಾಗಿ , ವೈದಿಕ ಆಧರಿತ ಪುರಾಣಕತೆಗಳ ಬ್ರಹ್ಮನಾಗಿ ಬದಲಾಯಿತು . ದೇಸಿ ಸ್ಪರ್ಶ ನೀಡಲು ” ……..ಚತುರಾನನಂ. ಢಕ್ಕಾಯುಧಂ ಭಜೆ” ಎಂದೂ ಧ್ಯಾನಿಸಲಾಯಿತು .ಈ ಬದಲಾವಣೆ ಎಷ್ಟು ಮಂದಿ ಮುಗ್ಧ ಭಕ್ತರಿಗೆ ತಿಳಿದಿದೆ ಗೊತ್ತಿಲ್ಲ .
ಹೆಚ್ಚಿನ ಸಿರಿ ಕ್ಷೇತ್ರಗಳಲ್ಲಿ ,
ಆಲಡೆಗಳಲ್ಲಿ , ಬೆರ್ಮಸ್ಥಾನಗಳಲ್ಲಿ ಇಂದಿಗೂ ವಾರ್ಷಿಕ ಉತ್ಸವ ಅಥವಾ ಆಯನೋತ್ಸವ ವೇಳೆ ನಡೆಯುವುದು ‘ಡಕ್ಕೆಬಲಿ’ ಅಥವಾ ಬ್ರಹ್ಮಮಂಡಲ . ಆದರೆಆಲಡೆಗಳಲ್ಲಿ
ವಿಶೇಷ ಸಂದರ್ಭಗಳಲ್ಲಿ “ನಾಗ – ಬ್ರಹ್ಮಮಂಡಲ” ನಡೆಯಲಾರಂಭವಾಗಿದೆ . ಸಾಮಾಜಿಕ‌ ಪ್ರತಿಷ್ಠೆಯಾಗಿ ನೆರವೇರುತ್ತಿವೆ.

ದುಬೈನಿಂದ ಬಂದ ಕಾಪುವಿನ ವ್ಯಕ್ತಿಗೆ ಸೋಂಕು ದೃಡ: ಬಸವರಾಜ ಬೊಮ್ಮಯಿ

ಉಡುಪಿ(29ಮಾ/2020): ಇಂದು ಇಬ್ಬರಿಗೆ ಕೊರೊನಾ ಸೋಂಕು ತಗಲಿರುವುದು ವೈದ್ಯಕೀಯ ವರದಿಯಲ್ಲಿ ದೃಢಪಟ್ಟಿದ್ದು, ಈ ಬಗ್ಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಉಡುಪಿಯಲ್ಲಿ ಸೋಂಕಿತರ ಸಂಖ್ಯೆ ಮೂರಕ್ಕೇರಿದೆ ಎಂದು ಡಿಎಚ್‍ಒ ಡಾ. ಸುಧೀರ್ ಚಂದ್ರ ಮಾಹಿತಿ ಕೊಟ್ಟಿದ್ದು, ಶಿವಮೊಗ್ಗ ಪ್ರಯೋಗಾಲಯದಿಂದ ಬಂದ ವೈದ್ಯಕೀಯ ವರದಿಯಲ್ಲಿ ಕೊರೊನಾ ದೃಢಪಟ್ಟಿತ್ತು.
ದುಬೈನಿಂದ ಬಂದಿದ್ದ ಕಾಪು ತಾಲೂಕಿನ 25 ವರ್ಷದ ಯುವಕ ಕೊರೊನಾ ಸೋಂಕಿಗೆ ತುತ್ತಾಗಿದ್ದಾನೆ. ಮಾರ್ಚ್ 17ಕ್ಕೆ ಆತ ತನ್ನ ಮನೆಗೆ ಬಂದಿದ್ದನು. ಮಾರ್ಚ್ 27ರಂದು ಆತನಲ್ಲಿ ಕೆಮ್ಮು, ಶೀತ, ನೆಗಡಿ ಲಕ್ಷಣ ಕಂಡುಬಂದಿತ್ತು. ರೋಗಿ ಜಿಲ್ಲಾಸ್ಪತ್ರೆಗೆ ಬಂದಿದ್ದಾಗ ಬೆಡ್ ಇಲ್ಲದ ಕಾರಣಕ್ಕೆ ಆತನನ್ನು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಆತ ಕುಟುಂಬಸ್ಥರು, ಗೆಳೆಯರು, ಸಂಬಂಧಿಕರ ಮಕ್ಕಳ ಜೊತೆ ಬೆರೆತಿದ್ದನು. ನಗರದಲ್ಲಿರುವ ಅಕ್ಕನ ಮನೆಗೆ ಓಡಾಡಿದ್ದನು ಎಂಬ ಮಾಹಿತಿಯಿದ್ದು, ಈ ವ್ಯಕ್ತಿಯ ಪ್ರಕರಣ ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. ವಿದೇಶದಿಂದ ಬಂದು 10 ದಿನದ ನಂತರ ಕೊರೊನಾ ಸೋಂಕು ಉಲ್ಬಣಿಸಿದೆ ಎನ್ನುವುದು ವರದಿಯಾಗಿದೆ.
ಕೇರಳಕ್ಕೆ ತೆರಳಿದ್ದ ಯುವಕನಿಗೆ ಕೊರೊನಾ
ವಿದೇಶ ಪ್ರಯಾಣ ಹಿನ್ನೆಲೆ ಇಲ್ಲದ, ವಿದೇಶ ಪ್ರಯಾಣ ಮಾಡಿದ ವ್ಯಕ್ತಿಗಳ ನೇರ ಸಂಪರ್ಕ ಇಲ್ಲದವನಿಗೆ ಕೊರೊನಾ ಸೋಂಕು ತಗುಲಿದೆ. ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಆಗಿರುವ ಉಡುಪಿಯ 29 ವಯಸ್ಸಿನ ಯುವಕ ಕೊರೊನಾ ಹಾವಳಿ ಶುರುವಾಗುವ ಮೊದಲೇ ಕೇರಳಕ್ಕೆ ಕೆಲಸಕ್ಕೆ ತೆರಳಿದ್ದನು. ತಿರುವನಂತಪುರಂನಲ್ಲಿ ಇಸ್ರೋ ಸಂಸ್ಥೆಗೆ ಸಂಬಂಧಿಸಿದ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದನು.
ಕೇರಳದಲ್ಲಿ ಕೊರೊನಾ ಅಟ್ಟಹಾಸ ಮೆರೆದಾಗ ತನ್ನ ಜೊತೆಗಿದ್ದ 30 ಯುವಕರ ಜೊತೆಗೆ ಬಸ್ಸಲ್ಲಿ ತಲಪಾಡಿ(ದಕ್ಷಿಣ ಕನ್ನಡ -ಕೇರಳ ಬಾರ್ಡರ್)ಗೆ ಬಂದಿದ್ದರು. ಅಲ್ಲಿಂದ ಇಡೀ ತಂಡವನ್ನು ಬಸ್ಸಲ್ಲಿ ಉಡುಪಿಗೆ ಸಾಗಿಸಿ ಆಯುಷ್ ಆಸ್ಪತ್ರೆಯ ಕೊಠಡಿಗಳಲ್ಲಿ ಇರಿಸಲಾಗಿದೆ. ಡಿಸಿ ಪೊಲೀಸ್ ಸಿಬ್ಬಂದಿಯನ್ನು ನೇಮಿಸಿ ಅವರ ಮೇಲೆ ನಿಗವಹಿಸಲು ಸೂಚಿಸಿದ್ದರು.
ಎಲೆಕ್ಟ್ರಿಕಲ್ ಕೆಲಸಕ್ಕೆ ಹೋಗಿದ್ದ ಯುವಕರ ತಂಡದಲ್ಲಿ 31 ಜನ ಇದ್ದರು. ಈ ಪೈಕಿ ಒಬ್ಬನಿಗೆ ಶೀತ, ತಲೆನೋವು ಶುರುವಾಗಿತ್ತು. ಮಾರ್ಚ್ 26ಕ್ಕೆ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೇರಳದಿಂದ ಬಂದ ನಂತರ ಎಲ್ಲಾ 31 ಜನರನ್ನು ಐಸೋಲೇಟೆಡ್ ಮಾಡಲಾಗಿದೆ

ಲಾಕ್ ಡೌನ್ ನಿರ್ಬಂದಗಳ ಪಾಲನೆ ಕಡ್ಡಾಯ, ತಪ್ಪಿದಲ್ಲಿ ಕಠಿಣ ಕಾನೂನು ಕ್ರಮ – ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ

ಉಡುಪಿ(ಮಾರ್ಚ್24/2020): ಕೊರೊನಾ ನಿಯಂತ್ರಣ ಕುರಿತಂತೆ, ರಾಜ್ಯ ಸರ್ಕಾರ ಸೂಚಿಸಿರುವ ನಿರ್ಬಂಧಗಳನ್ನು ಉಡುಪಿ ಜಿಲ್ಲೆಯ ನಾಗರೀಕರು ಕಡ್ಡಾಯವಾಗಿ ಪಾಲನೆ ಮಾಡುವಂತೆ ಹಾಗೂ ಈ ನಿರ್ಬಂಧಗಳನ್ನು ಉಲ್ಲಂಘಿಸುವವರ ವಿರುದ್ದ ಕಾನೂನು ರೀತಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದ್ದಾರೆ.
ಅವರು ಮಂಗಳವಾರ, ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಜಿಲ್ಲೆಗೆ ವಿದೇಶದಿಂದ ಬಂದಿರುವ 900 ಜನರನ್ನು ಗುರುತಿಸಲಾಗಿದ್ದು, ಈ ಎಲ್ಲರ ಮನೆಗಳಿಗೆ ನೋಟೀಸ್ ಅಂಟಿಸಲಾಗಿದ್ದು, ಕಡ್ಡಾಯವಾಗಿ ಹೋಂ ಕ್ವಾರಂಟೈನ್ ಪಾಲಿಸಲು ಸೂಚಿಸಲಾಗಿದ್ದು, ಪ್ರತಿದಿನ ದಿನಕ್ಕೆ 2 ಬಾರಿ ಗಸ್ತು ಪೊಲೀಸರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ತೆರಳಿ ಪರಿಶೀಲಿಸಲಿದ್ದಾರೆ ಅಲ್ಲದೇ ಈ ಮನೆಗಳ ಪಕ್ಕದವರಿಗೂ ಇವರ ಬಗ್ಗೆ ಮಾಹಿತಿ ನೀಡಿದ್ದು, ಮನೆಯಿಂದ ಹೊರಬಂದಲ್ಲಿ ಕೂಡಲೇ ಜಿಲ್ಲಾಡಳಿತದ ಉಚಿತ ಟೋಲ್ ಫ್ರೀ ನಂ.1077 ಹಾಗೂ ಪೊಲೀಸ್ ಕಂಟ್ರೋಲ್ ರೂ.100 ಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ, ಈ ನಿರ್ಬಂದ ಪಾಲಿಸದಿದ್ದಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದರು.
ಜಿಲ್ಲೆಯಲ್ಲಿ ದಿನನಿತ್ಯದ ದಿನಸಿ ವಸ್ತುಗಳು ದೊರೆಯಲಿದ್ದು, ಸಾರ್ವಜನಿಕರು ಅನಗತ್ಯವಾಗಿ ರಸ್ತೆಯಲ್ಲಿ ಸಂಚರಿಸುವುದನ್ನು ನಿರ್ಬಂದಿಸಿದೆ, ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಮನೆಯಿಂದ ಮನೆಯಿಂದ ಹೊರಬರಲು ಅವಕಾಶವಿದೆ, ತರತಕಾರಿ , ಹಣ್ಣು ಮುಂತಾದ ಅಗತ್ಯ ವಸ್ತುಗಳ ಕೃತಕ ಅಭಾವ ಸೃಷ್ಠಿಸಿ, ಹೆಚ್ಚಿನ ಬೆಲೆಗೆ ಮಾರುವವರ ವಿರುದ್ದ ಸಹ ಕಠಿಣ ಕ್ರಮ ಕೈಗೊಳ್ಳ ಲಾಗುವುದು ಎಂದ ಎಚ್ಚರಿಸಿದ ಜಿಲ್ಲಾಧಿಕಾರಿ, ಜಿಲ್ಲಗೆ ಹೊರ ಜಿಲ್ಲೆಯಿಂದ ಬರುವ ದಿನಸಿ ಮತ್ತು ತರಕಾರಿ ವಾಹನಗಳ ಚಾಲಕರ ಆರೋಗ್ಯವನ್ನು ಪರಿಶೀಲಿಸಿ ಜಿಲ್ಲೆಯೊಳಗೆ ಪ್ರವೇಶ ನೀಡಲಾಗುವುದು , ವ್ಯಾಪಾರಿಗಳು ಅಗತ್ಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ ಗ್ರಾಹಕರಿಂದ 6 ಅಡಿ ಅಂತರದಲ್ಲಿ ವ್ಯವಹಾರ ನಿರ್ವಹಿಸುವಂತೆ ಹಾಗೂ ಹೋಟೆಲ್ ಗಳಲ್ಲಿ ಪಾರ್ಸೆಲ್ ಗೆ ಮಾತ್ರ ಅನುಮತಿ ಇದ್ದು, ಗ್ರಾಹಕರು ಕುಳಿತು ತಿನ್ನುವುದಕ್ಕೆ ಅವಕಾಶವಿಲ್ಲ ಇದನ್ನು ಉಲ್ಲಂಘಿಸಿದಲ್ಲಿ ಗೃಆಹಕರು ಮತ್ತು ಸಂಬಂದಪಟ್ಟ ಹೊಟೆಲ್ ಮಾಲೀಕರ ವಿರುದ್ದ ಪ್ರಕರಣ ದಾಖಲಿಸಲಾಗುವುದು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಕೊರೋನ ಪಾಸಿಟಿವ್ ಪ್ರಕರಣ ಕಂಡುಬಂದಿಲ್ಲ, ಒಂದು ವೇಳ ಕಂಡುಬಂದಲ್ಲಿ ಜಿಲ್ಲಾಸ್ಪತ್ರೆಯನು ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಿ , ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡಲಾಗುವುದು ಅದರ ಹೊರತು ಬೇರೆ ಯಾವುದೇ ರೋಗಿಗಳಿಗೆ ಅಲ್ಲಿ ಚಿಕಿತ್ಸೆ ನೀಡುವುದಿಲ್ಲ, ಕರೋನಾ ರೋಗಿಗಳೊಂದಿಗೆ ನೇರ ಸಂಪರ್ಕ ಹೊಂದಿರುವ ಕೊರೋನಾ ಶಂಕಿತರನ್ನು ಐಸೋಲೇಶನ್ ನಲ್ಲಿಡಲು ಉದ್ಯಾವರದ ಎಸ್.ಡಿ.ಎಂ ಕಾಲೇಜಿನಲ್ಲಿ 150 ಬೆಡ್ ಗಳ ವ್ಯವಸ್ಥೆ ಮಾಡಿದ್ದು, ಇನ್ನೂ ಅಗತ್ಯ ಬಿದ್ದಲ್ಲಿ ಕೆಎಂಸಿ ಯಲ್ಲಿ 100 ಬೆಡ್ ಗಳ ವ್ಯವಸ್ಥೆ ಮತ್ತು ನಗರದ ನೂತನ ಗ್ರಂಥಾಲಯ ಕಟ್ಟಡದಲ್ಲಿ ಸಹ ಅಗತ್ಯ ವ್ಯವಸ್ಥೆ ನಿರ್ಮಾಣ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಮಾಹಿತಿ ನೀಡಿದರು.
ಈಗಾಗಲೇ ಕೆಲವೊಂದು ಅಂಗಡಿಗಳು, ವಾಣಿಜ್ಯ ಸಂಸ್ಥೆ, ಕೈಗಾರಿಕೆಗಳ ವ್ಯವಹಾರವನ್ನು ಸ್ಥಗಿತಗೊಳಿಸಿದ್ದು, ಅಂತಹ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ವೇತನಸಹಿತ ರಜೆ ನೀಡುವಂತೆ ಮತ್ತು ಅವರನ್ನು ಉದ್ಯೋಗದಿಂದ ವಜಾಗೊಳಿಸಂತೆ ಸಂಬಂಧಪಟ್ಟ ಸಂಸ್ಥೆಗಳ ಮುಖ್ಯಸ್ಥರಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳು ಮತ್ತು ಕ್ಲಿನಕ್ ಗಳ ತಮ್ಮ ಸೇವೆಯನ್ನು ಸ್ಥಗಿತಗೊಳಿಸದಂತೆ ತಿಳಿಸಿದ ಜಿಲ್ಲಾಧಿಕಾರಿಗಳು , ಅವಶ್ಯಕ ಸೇವೆ ಹೊರತುಪಡಿಸಿ ಇತರೆ ಇಲಾಖೆಗಳ ಅಧಿಕಾರಿ/ಸಿಬ್ಬಂದಿಗಳು ಕಚೇರಿಗೆ ಬರುವ ಅಗತ್ಯವಿಲ್ಲ ಆದರೆ ಕೇಂದ್ರಸ್ಥಾನದಲ್ಲಿ ಲಭ್ಯರಿದ್ದು ತುರ್ತು ಸಂದರ್ಭದಲ್ಲಿ ಹಾಜರಾಗುವಂತೆ ಸೂಚಿಸಿದರು.
ಮಲ್ಪೆ ಬಂದರಿನಲ್ಲಿ ಸಮುದ್ರಕ್ಕೆ ಹೋಗಿರುವ ಬೋಟುಗಳು ಮಾತ್ರ ವಾಪಸ್ ಬರುತ್ತಿದ್ದು, ಹೊಸ ಬೋಟುಗಳು ಸಮುದ್ರಕ್ಕೆ ತೆರಳಲು ಅವಕಾಶವಿಲ್ಲ ಈಗಾಗಲೇ ಬೋಟುಗಳಿಗೆ ನೀಡಲಾಗುವ ಇಂದನ ಸಬ್ಸಿಡಿಯನ್ನು ಸಸ್ಪೆಂಡ್ ಮಾಡಲಾಗಿದೆ, ಮಲ್ಪೆ ಬಂದರಿನ ಕಾರ್ಯ ಚಟುವಟಿಕೆಗಳಿಗೆ ಇಂದು ಕೊನೆಯ ದಿನವಾಗಿದ್ದು, ಸರಕಾರದ ಆದೇಶವನ್ನು ಪಾಲಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ ಮಾತನಾಡಿ, ಸಾರ್ವಜನಿಕರು ಈ ಅವಧಿಯಲ್ಲಿ ಪೊಲೀಸರೊಂದಿಗೆ ಅನವಶ್ಯಕ ವಾದ ಮಾಡಬೇಡಿ , ಸರಕಾರದ ನಿಬರ್ಂದಗಳನ್ನು ಪಾಲಿಸಿ, ನಿಮ್ಮ ಆರೋಗ್ಯದ ದೃಷ್ಠಿಯಿಂದ ಈ ನಿರ್ಬಂದಗಳನ್ನು ವಿಧಿಸಿದ್ದು, ಇದನ್ನು ಉಲ್ಲಂಘಿಸುವವರ ವಿರುದ್ದ ಕಾನೂನಿನಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರೀತಿ ಗೆಹಲೋತ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪವಿಭಾಗಾಧಿಕಾರಿ ರಾಜು, ಡಿಹೆಚ್ಓ ಡಾ. ಸುಧೀರ್ ಚಂದ್ರ ಸೂಡಾ, ಜಿಲ್ಲಾ ಸರ್ಜನ್ ಡಾ. ಮಧುಸೂಧನ್ ನಾಯಕ್ ಉಪಸ್ಥಿತರಿದ್ದರು.

ಮುಂದಿನ 21 ದಿನ ನೀವು ಹೊರಗೆ ಹೋಗುವುದನ್ನು ಮರೆತುಬಿಡಿ- ನರೇಂದ್ರ ಮೋದಿ

ಅಬ್ಬಕ್ಕ ವಿಶೇಷ
ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ.
ದೇಶ ಇಂದು ಮಹತ್ವಪೂರ್ಣ ನಿರ್ಣಯ ತೆಗೆದುಕೊಂಡಿದೆ. ಇಂದು ರಾತ್ರಿ 12 ಗಂಟೆಯಿಂದ ಪೂರ್ತಿ ದೇಶದಲ್ಲಿ ಲಾಕ್‌ಡೌನ್ ಘೋಷಿಸುತ್ತಿದ್ದೇನೆ. ಇದು ಕರ್ಫ್ಯೂ ಥರವೇ ಇರುತ್ತೆ. ಇದನ್ನು ಕಟ್ಟುನಿಟ್ಟಾಗಿ ಜಾರಿ ಮಾಡ್ತೀವಿ.
ದೇಶದಲ್ಲಿ ನೀವು ಎಲ್ಲಿಯೇ ಇದ್ದರೂ ಅಲ್ಲಿಯೇ ಇರಿ. ಈ ಲಾಕ್‌ಡೌನ್ 21 ದಿನ ಇರುತ್ತೆ. ನೀವು ಹೊರಗೆ ಹೋಗುವುದನ್ನು ಮರೆತುಬಿಡಿ.
ಮನೆ ಮುಂದೆ ಲಕ್ಷ್ಮಣ ರೇಖೆ ಹಾಕಿಕೊಳ್ಳಿ. ಅದನ್ನು ದಾಟಬೇಡಿ. ಕೊರೊನಾ ಸೋಂಕಿತ ವ್ಯಕ್ತಿ ಬೀದಿಗೆ ಬರಬಹುದು. ಆತ ಸೋಂಕಿತ ಎಂಬುದು ತಕ್ಷಣಕ್ಕೆ ತಿಳಿಯುವುದಿಲ್ಲ. ಹೀಗಾಗಿ ಮನೆಯಲ್ಲಿಯೇ ಕ್ಷೇಮವಾಗಿರಿ.
ಕೊರೊನಾ ತಡೆಗೆ ಒಂದೇ ಮಂತ್ರ. ಬ್ಯಾನರ್ ಪ್ರದರ್ಶಿಸಿದ ಮೋದಿ. ಕೊರೊನಾ ಎಂದರೆ ಯಾರೂ ರೋಡ್‌ ಮೇಲೆ ಬರುವಂತಿಲ್ಲ ಎಂದು ಅರ್ಥ. (ಕೊರೊನಾ: ಕೋಯಿ ರೋಡ್ ಪರ್ ನ ನಿಕ್ಲೆ)
ಜಗತ್ತಿನಲ್ಲಿ ಕೊರೊನಾವೈರಸ್ ಸೋಂಕಿತರ ಸಂಖ್ಯೆ 1 ಲಕ್ಷ ಮುಟ್ಟಲು 66 ದಿನ ಬೇಕಾಯಿತು. ಇದಾದ 11 ದಿನಗಳಲ್ಲಿ ಇನ್ನೂ 2 ಲಕ್ಷ ಜನರಿಗೆ ಸೋಂಕು ತಗುಲಿತು. 4 ದಿನಗಳಲ್ಲಿ 4 ಲಕ್ಷ ಜನರಿಗೆ ಸೋಂಕು ಹರಡಿತು.
21 ದಿನ ಇರುತ್ತೆ. ನೀವು ಹೊರಗೆ ಹೋಗುವುದನ್ನು ಮರೆತುಬಿಡಿ.

ಉಡುಪಿಯ ರಸ್ತೆಯಲ್ಲಿ ಊಟ ಸಿಗದೆ ಪರದಾಡುವವರು ಕಂಡರೆ ನನಗೆ ಕರೆ ಮಾಡಿ- ಗುರೂಜಿ ಸಾಯಿಈಶ್ವರ್

ಉಡುಪಿ(ಮಾರ್ಚ್23/2020): ಆಹಾರ ಇಲ್ಲದೆ ಸಂಕಷ್ಟದಲ್ಲಿ ಇರುವವರಿಗೆ ಸಹಾಯ ಹಸ್ತ, ಸಾಯಿಬಾಬಾರ ಅನ್ನ ಪ್ರಸಾದ “ಸಾಯಿ ತುತ್ತು”…
ದಿನಾಂಕ :23 /03/2020 ಸೋಮವಾರದಿಂದ 31/03 /2020 ಮಂಗಳವಾರದ ತನಕ ಕೊರೊನಾ ವೈರಸ್ ಅನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಲಾಕ್ ಡೌನ್ ಮಾಡಿದ್ದು ಅದ್ದರಿಂದ ಉಡುಪಿ ನಗರದ ಆಸುಪಾಸಿನ ವ್ಯಾಪ್ತಿಯಲ್ಲಿ ಅಶಕ್ತರು,
ನಿರ್ವಸತಿಗರು, ದೂರದ ಊರುಗಳಿಂದ ಬಂದು ಹಿಂತಿರುಗಿ ಹೋಗಲು ಅಸಾಧ್ಯವಾಗದೇ ಇರುವವರಿಗೆ ಉಪಾಹಾರದ ಅವಶ್ಯಕತೆಯಿದ್ದವರು ನಿಮಗೆ
ಎಲ್ಲಿಯಾದರೂ ಕಂಡು ಬಂದರೆ
ಈ ಮೊಬೈಲ್ ಸಂಖ್ಯೆಗೆ ಕರೆ ಮಾಡಿ +917026293111
ಅಥವಾ ಶಂಕರಪುರದ ಸಾಯಿ ಮಂದಿರದ “ಸಾಯಿ ತುತ್ತು” ವಾಹನ ಕಂಡು ಬಂದರೆ ಅದನ್ನು ತಡೆದು ಅನ್ನ ಪ್ರಸಾದವನ್ನು ಸ್ವೀಕರಿಸಿ ಎಂದು ಉಡುಪಿ ಶಂಕರಪುರದ
ದ್ವಾರಕಾಮಯಿ ಶ್ರೀ ಸಾಯಿಬಾಬಾ ಮಂದಿರದ ದರ್ಮದರ್ಶಿ ಗುರೂಜಿ ಸಾಯಿಈಶ್ವರ್ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.
ಗುರೂಜಿ ಸಾಯಿಈಶ್ವರ್ ಇವರು ಕಳೆದ ನಾಲ್ಕು ವರ್ಷಗಳಿಂದ ಈ ಸಾಯಿ ತುತ್ತು ಯೋಜನೆಯನ್ನು ನಡೆಸುತ್ತಿದ್ದು ಉಡುಪಿ ಆಸುಪಾಸಿನ ಅನೇಕ ವೃದ್ಧಾಶ್ರಮಗಳಿಗೆ, ಶಾಲೆಗಳಿಗೆ ಹಾಗು ನಿತ್ಯ ಸುಮಾರು 60 ಊಟವನ್ನು ಉಡುಪಿ ನಗರದ ಅಸಹಾಯಕರಿಗೆ,ಅಶಕ್ತರಿಗೆ ಹಂಚುತ್ತಿದ್ದಾರೆ.
ಇಂದಿಗೂ ಗುರೂಜಿಯವರು ಇಂದಿಗೂ ಯಾವುದೇ ಮಾದ್ಯಮ ಈ ಕೆಲಸಕ್ಕಾಗಿ ಗುರುತಿಸದೇ ಇರುವುದು ವಿಶೇಷ.