July 11, 2020

ಇತರೆ

ಕರೋನಾ ಸೋಂಕಿತರು 138: ಉಡುಪಿ 3 ದ.ಕ 1

ಬೆಂಗಳೂರು(22ಮೇ/2020): ಹಾಸನ, ಮಂಡ್ಯ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಹಾರಾಷ್ಟ್ರದಿಂದ ವಾಪಸಾದವರಿಂದ ಕೊರೊನಾ ಸ್ಫೋಟಗೊಂಡಿದೆ. ಪರಿಣಾಮ ರಾಜ್ಯದಲ್ಲಿ ಇಂದು ಒಂದೇ ದಿನ 138 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 1,743ಕ್ಕೆ ಏರಿಕೆಯಾಗಿದೆ.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಜೆ ಬಿಡುಗಡೆ ಮಾಡಿದ ಬುಲೆಟಿನ್ ಪ್ರಕಾರ, ಕಳೆದ 24 ಗಂಟೆಯಲ್ಲಿ ಚಿಕ್ಕಬಳ್ಳಾಪುರ 47, ಹಾಸನ 14, ತುಮಕೂರು 8, ಬೀದರ್ 9, ರಾಯಚೂರು 10, ಶಿವಮೊಗ್ಗ 2, ಬೆಂಗಳೂರು, ಚಿಕ್ಕಮಗಳೂರು ಜಿಲ್ಲೆಯಲ್ಲಿ ತಲಾ 5, ವಿಜಯಪುರ 6, ಬೆಂಗಳೂರು ಗ್ರಾಮಾಂತರ 4, ಮಂಡ್ಯ 8, ದಾವಣಗೆರೆ, ಹಾವೇರಿ, ಉಡುಪಿ ಜಿಲ್ಲೆಯಲ್ಲಿ ತಲಾ 3, ಧಾರವಾಡ 2, ಬಾಗಲಕೋಟೆ, ಚಿತ್ರದುರ್ಗ, ದಕ್ಷಿನ ಕನ್ನಡ, ಉತ್ತರ ಕನ್ನಡ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.

ಮುಂಬಯಿ: ಹಸಿದವರ ಹಸಿವು ನೀಗಿಸುತ್ತಿರುವ ಎರ್ಮಾಳು ಹರೀಶ್ ಶೆಟ್ಟಿ

ಮುಂಬೈ(2ಮೇ/2020): ಕರೋನಾ ಲಾಕ್ ಡೌನ್ ಸಂತ್ರಸ್ತರಿಗೆ ಮುಂಬಯಿ ಮಹಾನಗರದಲ್ಲಿ ನಿತ್ಯ 40ಸಾವಿರ ಜನರಿಗೆ ಅನ್ನದಾನ ಮಾಡುವ ಎರ್ಮಾಳು ಹರೀಶ್ ಶೆಟ್ಟಿ ಮತ್ತು ಮಿತ್ರರು.
ಹೋಟೆಲ್ ಉದ್ಯಮಿಗಳಾದ ಎರ್ಮಾಳು ಹರೀಶ್ ಶೆಟ್ಟಿಯವರು ಲಾಕ್ ಡೌನ್ ಘೋಷಣೆ ಆದಾಗ ಊರಿಗೆ ಬರಲಾಗದೆ ತಮ್ಮ ಕಾರ್ಯ ಕ್ಷೇತ್ರದಲ್ಲಿಯೇ ನಿಲ್ಲುವಂತಾಯಿತು. ದಿಢೀರ್ ಆದ ಬೆಳವಣಿಗೆಯಿಂದ ಅನೇಕರು ಮುಂಬಯಿ ಮಹಾನಗರದಲ್ಲಿ ಊಟವಿಲ್ಲದೆ ಪರದಾಡುವುದನ್ನು ಕಂಡು ತಮ್ಮ ಹೊಟೇಲ್ ಕೆಲಸಗಾರ ಮೂಲಕ ಮಾರ್ಚ್ 27ರಂದು 1000 ಊಟದೊಂದಿಗೆ ಪ್ರಾರಂಭಿಸಿದ ಎರ್ಮಾಳು ಹರೀಶ್ ಶೆಟ್ಟಿ ನಂತರ ತಮ್ಮ ಸ್ನೇಹಿತರನ್ನು ಜೊತೆಗೂಡಿ ಮುಂಬೈಯ ಆರು ಬೇರೆ ಬೇರೆ ಪ್ರದೇಶಗಳಲ್ಲಿ “ಸೆಂಟ್ರಲ್ ಕಿಚನ್” ಎಂಬ ಹೆಸರಿನಿಂದ ಪ್ರಾರಂಬಿಸಿದರು.
ಮಾರ್ಚ್ 27ಕ್ಕೆ 1000 ಊಟದೊಂದಿಗೆ ಶುರುವಾದ ಅನ್ನದಾನ ಎಪ್ರಿಲ್ 14ಕ್ಕೆ 9000 ಮುಟ್ಟಿತು.
ಎರ್ಮಾಳು ಹರೀಶ್ ಶೆಟ್ಟಿಯವರ ತಂಡದ ಸೇವಾ ಕಾರ್ಯದ ಬಗ್ಗೆ ಮಾಹಿತಿ ಪಡೆದ ರಾಜ್ಯ ಸರ್ಕಾರ ಎಪ್ರಿಲ್ 14ರಂದು 5000 ಊಟದ ಹೆಚುವರಿ ಬೇಡಿಕೆಯನ್ನು ಪೂರೈಸಲು ತಿಳಿಸಿತು,ನಂತರದ ದಿನಗಳಲ್ಲಿ ಆಹಾರದ ಬೇಡಿಕೆ 16000ದಿಂದ 18000ಕ್ಕೆ ಮುಟ್ಟಿತು.
ಇದರ ಜೊತೆಗೆ ಸಂತಕ್ರೂಸ್ ಬೈಂದರ್ ಪ್ರದೇಶದ ತುಳುವರ 200 ಕುಟುಂಬಕ್ಕೆ ರೇಶನ್ ಹಂಚಲಾಯಿತು.
B.E.S.T ಬಸ್ ನಲ್ಲಿ ನಿತ್ಯ ಊಟದ ಸಾಗಾಟ ನಡೆಯುತ್ತದೆ, ನಿತ್ಯ 35 ಜನರು ತಮ್ಮ ಸ್ವಂತ ಊರಿಗೆ ಹೋಗಲಾಗದ ಕೆಲಸಗಾರರು ಅಡುಗೆ ಮಾಡುತ್ತಿದ್ದು,ಇಂದಿಗೆ ಲಕ್ಷಂತರ ಊಟ ಸಿದ್ದವಾಗಿ ಹಸಿದವರಿಗೆ ತಲುಪಿರುತ್ತದೆ. ಊಟ ಅಂದರೆ ಬರೆ ಅನ್ನ ಸಾರು ಅಲ್ಲ ದಿನಾ ದಿನ ಬಗೆ ಬಗೆಯ ತಿನಸು ಸಿದ್ಧವಾಗುತ್ತದೆ, ದಾದರ್ ಚೆಂಬೂರು ಸುತ್ತಲಿನ ಜನರ ಹೊಟ್ಟೆ ತಣಿಸುವ ಎಲ್ಲಾ ಆರು “ಸೆಂಟ್ರಲ್ ಕಿಚನ್ನಲ್ಲಿ” ಚೋಲೆ ಮಸಾಲ, ವಡಾ ಪಾವ್, ಪಲಾವ್ ಹೀಗೆ ದಿನದ ಒಂದು ಬಗೆಯಲ್ಲಿ ಆಹಾರ ಸಿದ್ಧವಾಗುತ್ತದೆ,
B.M.C ನೀಡಿದ ಬೇಡಿಕೆಯಂತೆ ಸುಮಾರು ಮೂವತ್ತೆಂಟು ಸಾವಿರದಿಂದ ನಲ್ವತ್ತು ಸಾವಿರ ಊಟದ ಕಟ್ಟು ಸಾಗಾಟ ಎರ್ಮಾಳು ಹರೀಶ್ ಶೆಟ್ಟಿಯವ ನೇತೃತ್ವದಲ್ಲಿ ಆಗುತ್ತದೆ.
ಹರೀಶ್ ಶೆಟ್ಟಿಯವ ಹೇಳುವಂತೆ “ನಾವು ಉಡುಪಿಯವರು, ನಮ್ಮ ಕೆಲಸವೇ ಹಸಿದವರಿಗೆ ಅನ್ನ ನೀಡುವುದು”
ಎರ್ಮಾಳು ಹರೀಶ್ ಶೆಟ್ಟಿ ಪ್ರಚಾರ ಪ್ರೀಯರಲ್ಲ ಅವರ ಜೊತೆಗೆ ಇರುವ ಸ್ನೇಹಿತ ತಂಡವೂ ಪ್ರಚಾರದಿಂದ ದೂರ ಇರುವವರು ಲೋಕಸಭಾ ಸದಸ್ಯರಾದ ಗೋಪಾಲ್ ಶೆಟ್ಟಿ, ಮುಂಡಪ್ಪ ಪೈಯಡೆ, ರವಿಂದ್ರ ಶೆಟ್ಟಿ, ಡಾ.ಸತೀಶ್ ಶೆಟ್ಟಿ, ಪ್ರಕಾಶ್ ಶೆಟ್ಟಿ lic, ಮಂಜುನಾಥ ಬನ್ನುರು, ಸತೀಶ್ ಶೆಟ್ಟಿ ಗೋರೆಗಾವ್, ನಿಲೇಶ್ ಶೆಟ್ಟಿ, ಮಾಜಿ ಕಾರ್ಪೊರೇಟರ್ ಶಿವಾನಂದ ಶೆಟ್ಟಿ, ಕಾರ್ತಿಕ್ ಹರೀಶ್ ಶೆಟ್ಟಿ, ಗಂಗಾಧರ ಪೂಜಾರಿ, ಭಾಸ್ಕರ ಸಾಲ್ಯಾನ್, ವಿಜಯ್ ಭಂಡಾರಿ, ರತ್ನಾಕರ ಮುನ್ಕೂರು,ಮಹೇಶ್ ಶೆಟ್ಟಿ ಪೈಸಾರ್, ಅಜಿತ್ ಶೆಟ್ಟಿ ಮುಂತಾದವರು ಈ ಸೇವಾ ಕಾರ್ಯದಲ್ಲಿ ಕೈಜೋಡಿಸಿದ ಮಹನೀಯರು.
ಮುಂಬಯಿ ಮಹಾನಗರದಲ್ಲಿ ಹಸಿದವರ ಕಷ್ಟ ನೀಗಿಸಿದ ಈ ಕರಾವಳಿ ಮೂಲದ ಹೋಟೆಲ್ ಉದ್ಯಮಿಗಳಿಗೆ ಮುಂಬಯಿ ನಿವಾಸಿಗರು ಎಷ್ಟು ಧನ್ಯವಾದ ಹೇಳಿದರೂ ಕಡಿಮೆಯೇ.

7 ವರ್ಷಗಳ ಜೈಲು:ಆರೋಗ್ಯ ಕಾರ್ಯಕರ್ತೆಯರ ರಕ್ಷಣೆಗೆ ಮುಂದಾದ ಕೇಂದ್ರ

ನವದೆಹಲಿ(21ಏ/2020): ಆರೋಗ್ಯ ಕಾರ್ಯಕರ್ತರು ಮತ್ತು ಕೊರೊನಾ ವೈರಸ್ ಸೋಂಕಿನ (ಕೋವಿಡ್–19) ವಿರುದ್ಧ ಹೋರಾಡುತ್ತಿರುವ ಸಿಬ್ಬಂದಿ ಮೇಲೆ ಹಲ್ಲೆ ನಡೆಸುವವರ ವಿರುದ್ಧ ಕಠಿಣ ಕ್ರಮಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ.
ಕೋವಿಡ್ ವಾರಿಯರ್ಸ್‌ ಮೇಲೆ ಹಲ್ಲೆ ನಡೆಸುವವರಿಗೆ 6 ತಿಂಗಳುಗಳಿಂದ 7 ವರ್ಷಗಳ ವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವುಳ್ಳ ಸುಗ್ರೀವಾಜ್ಞೆ ರೂಪಿಸಲಾಗಿದೆ. ರಾಷ್ಟ್ರಪತಿಗಳ ಅಂಕಿತ ದೊರೆತ ಕೂಡಲೇ ಇದು ಜಾರಿಗೆ ಬರಲಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

ವೆನ್ಲಾಕ್ ನಲ್ಲಿ ಇಂದಿನಿಂದ ಗಂಟೆಗಳಲ್ಲಿ ಕೋವಿಡ್ ಪರೀಕ್ಷೆ: ಕೋಟಾ

ಮಂಗಳೂರು(7ಎ/2020): ಮಂಗಳೂರು ವೆನ್ಲಾಕ್ ನಲ್ಲಿ ICMR, NIV ಒಪ್ಪಿಗೆ ಪಡೆದು, covid19 ಪರೀಕ್ಷಿಸಿ, ಕೆಲವೇ ಗಂಟೆಗಳಲ್ಲಿ ವರದಿ ನೀಡುವ Virology Research and Diagnostic Laboratory ಇಂದಿನಿಂದ ಕಾರ್ಯಾರಂಬಿಸಲಿದೆ.
ಇದರಿಂದ ಶಂಕಿತರ ಪರೀಕ್ಷೆಗೆ ಹೊರಜಿಲ್ಲೆಯ ಅವಲಂಬನೆ ನಿಲ್ಲಲಿದೆ. ತುರ್ತು ಸ್ಪಂದಿಸಿದ ಕೇಂದ್ರ, ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ.

ಮೂಳೂರು: ಜೀತೇಶ್ ದಂಪತಿಗಳಿಂದ 25 ಬಡಕುಟುಂಬಕ್ಕೆ ಜಿನಸು ಸಾಮಾಗ್ರಿಗಳ ವಿತರಣೆ

ಕಾಪು(5ಎ/2020): ಕರೋನಾ ಕರ್ಪ್ಯೂ ಸಂತ್ರಸ್ತರಾಗಿರುವ ಕಾಪು ವ್ಯಾಪ್ತಿಯ 25 ಕಡು ಬಡಕುಟುಂಬಗಳನ್ನು ಗುರುತಿಸಿ ಅವರಿಗೆ ಅಕ್ಕಿಯ ಜೊತೆಗೆ ಜಿನಸು ಸಾಮಾಗ್ರಿಗಳನ್ನು ವಿತರಿಸುವ ಕಾರ್ಯ ಇಂದು ನಡೆಯಿತು.

ಮೂಳೂರಿನವರಾದ ವಿಜಯ್ ಟೆಕ್ ವ್ಯವಸ್ಥಾಪಕರು ಜೀತೇಶ್ ಮೂಳೂರು ಮತ್ತು ಸುಜಾತಾ ದಂಪತಿಗಳು ಸ್ವಂತ ಖರ್ಚಿನಲ್ಲಿ ಜಿನಸು ಸಾಮಾಗ್ರಿಗಳನ್ನು ವಿತರಿಸಿದರು.
ಪ್ರತಿ ಮನೆಗೆ 10ಕೆಜಿ ಅಕ್ಕಿ, 1ಕೆಜಿ ಸಕ್ಕರೆ, ಚಹಾ ಹುಡಿ,ಉಪ್ಪಿನಕಾಯಿ ಮುಂತಾದ ಸಾಮಾಗ್ರಿಗಳನ್ನು ವಿತರಿಸಿದರು.
ಎಲ್ಲಾ 25 ಮನೆಗಳಿಗೆ ಜೀತೇಶ್ ದಂಪತಿಗಳು ಬೇಟಿ ನೀಡಿ ಮನೆಯವರ ಇತರ ಅಗತ್ಯತೆಗಳನ್ನು ವಿಚಾರಿಸಿದರು.

ಈ ಹಿಂದೆಯೂ ಜೀತೇಶ್ ದಂಪತಿಗಳು ಶಂಕರಪುರ ದ್ವಾರಕಾಮಯಿ ಶ್ರೀ ಸಾಯಿಬಾಬಾ ಮಂದಿರದ ಗುರೂಜಿ ಸಾಯಿಈಶ್ವರ್ ಇವರು ಉಡುಪಿ ಕಟಪಾಡಿಯಲ್ಲಿ ಕರೋನಾ ಕರ್ಪ್ಯೂ ಸಂತ್ರಸ್ತರಿಗೆ ವಿತರಿಸುವ ಒಂದು ಹೊತ್ತಿನ ಊಟದ ಸೇವೆಗೆ ಒಂದು ಕ್ವಿಂಟಾಲ್ ಅಕ್ಕಿ ನೀಡಿ ಸಂತ್ರಸ್ತರ ಸೇವೆಯಲ್ಲಿ ಭಾಗವಹಿಸಿದ್ದಾರೆ.
ಜೀತೇಶ್ ದಂಪತಿಗಳ ಈ ಸೇವೆಯನ್ನು ಸಂತ್ರಸ್ತರಿಗೆ ವಿತರಿಸಲು ಸ್ಥಳೀಯ ಸ್ವಯಂಸೇವಕರು ಜೊತೆಯಾದರು.

ಕಟಪಾಡಿ:ಪಡಿತರ ಪಡೆಯಲು ಒಟಿಪಿ ಅಗತ್ಯ ಇಲ್ಲ-ಗೀತಾಂಜಲಿ ಸುವರ್ಣ

ಉಡುಪಿ:(2ಎ/2020): ಕಟಪಾಡಿ ಪಡಿತರ ಅಂಗಡಿಯಲ್ಲಿ ನಿಧಾನ ಗತಿಯ ಪಡಿತರ ಹಂಚುವಿಕೆಯ ಬಗ್ಗೆ ಜಿ.ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ ಗರಂ ಆದ ಘಟನೆ ಇಂದು ಜರಗಿತು.
ದೇಶಾದ್ಯಂತ ಕರೋನ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಘೋಷಿಸಿದ ಮೆಡಿಕಲ್ ಎಮರ್ಜೆನ್ಸಿಯ ಕಾರಣ , ಜನರಿಗೆ ತಿಂಗಳಿನ ಪಡಿತರ ವಿತರಣೆಯ ನಿಯಮಗಳಲ್ಲಿ ಸಡಿಲಿಕೆಯನ್ನು ಘನ ಸರ್ಕಾರವು ನೀಡಿದೆ.
ಅದರಂತೆ ಹಳ್ಳಿಗಳಲ್ಲಿ ಅಕ್ಕಿಯನ್ನು ವಿತರಿಸಲು ಒಟಿಪಿ ಸಮಸ್ಯೆ ಉಂಟಾಗುತ್ತಿತ್ತು. ಸರ್ಕಾರ ತುರ್ತು ಪರಿಸ್ಥಿತಿಯ ಸಲುವಾಗಿ ಈ ನಿಯಮಾವಳಿಯಲ್ಲಿ ಕೊಂಚ ಸಡಿಲಿಕೆಯನ್ನು ನೀಡಿದ್ದು , ಒಟಿಪಿಯ ಸಮಸ್ಯೆ ಇದ್ದಲ್ಲಿ ಒಟಿಪಿ ಇಲ್ಲದೆಯೂ ಪಡಿತರ ಅಕ್ಕಿ ವಿತರಿಸುವಂತೆ ಆದೇಶಿಸಿದೆ. ಆದರೆ ಕಟಪಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಒಟಿಪಿ ಸಮಸ್ಯೆಯಿಂದ ಅಕ್ಕಿ ವಿತರಣೆ ನಿಧಾನವಾಗಿ ಆಗುತ್ತಿದೆ ಎಂಬ ಸಾರ್ವಜನಿಕರ ದೂರಿನ ಮೇರೆಗೆ ಕೂಡಲೆ ಸ್ಥಳಕ್ಕೆ ಭೇಟಿ ನೀಡಿದ ಜಿ.ಪಂ ಸದಸ್ಯರು ಗೀತಾಂಜಲಿ ಸುವರ್ಣ ಸರ್ಕಾರದ ಆದೇಶ ಪ್ರತಿಯನ್ನು ಸಂಭಂದಿಸಿದ ಅಧಿಕಾರಿಗಳಿಗೆ ನೀಡಿ ಕೂಡಲೆ ಅಕ್ಕಿ ವಿತರಣೆ ಮಾಡಿ ಯಾವ ಫಲಾನುಭವಿಗಳನ್ನೂ ವಾಪಾಸು ಕಳುಹಿಸದಂತೆ ಸೂಚಸಲಾಯಿತು.
ಒ.ಟಿ.ಪಿ ನಿಯಮ ಸಡಿಲಿಕೆಯ ಬಗ್ಗೆ ತಹಶಿಲ್ದಾರರ ಕಚೇರಿಯಿಂದ ಯಾವುದೇ ಆದೇಶ ಪ್ರತಿ ಕಟಪಾಡಿ ಪಡಿತರ ಅಂಗಡಿಗೆ ತಲುಪದಿರುವುದೇ ಈ ಘಟನೆಗೆ ಕಾರಣವಾಯಿತು.
ಜಿ.ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ ನಿತ್ಯ ತನ್ನ ಮನೆಯಲ್ಲಿ ಕರೋನಾ ಕರ್ಪ್ಯೂ ಸಂತ್ರಸ್ತರಿಗೆ ಸುಮಾರು 400 ಜನರಿಗೆ ಆಗುವಷ್ಟು ಊಟ ತಯಾರಿಸಿ, ಶಂಕರಪುರ ಶ್ರೀ ಸಾಯಿಬಾಬಾ ಮಂದಿರದ ವಾಹನ “ಸಾಯಿ ತುತ್ತು” ಮುಖಾಂತರ ವಿತರಣೆ ಮಾಡುತ್ತಿದ್ದು ಇಂದು ತನ್ನ ಅಡುಗೆ ಕೆಲಸ ಮುಗಿಯುವ ಸಮಯಕ್ಕೆ ಸರಿಯಾಗಿ ಬಂದ ಪೋನ್ ಕರೆಯಂತೆ ಪಡಿತರ ಅಂಗಡಿಗೆ ಧಾವಿಸಿರು,
ಪಡಿತರ ಅಂಗಡಿ ಮುಚ್ಚವವರೆಗೆ ಅಲ್ಲಿಯೇ ಇದ್ದು ಪಡಿತರ ಪಡೆಯುಲು ಬಂದ ಪ್ರತಿಯೊಬ್ಬರಿಗೂ ಕರೋನಾ ವೈರಸ್ ಬಗ್ಗೆ ಮಾಹಿತಿ ನೀಡಿ ಜಾಗ್ರತಿ ಮೂಡಿಸಿದರು.

ಕರೋನಾ ನಿಯಂತ್ರಣ: ಶಾಸಕ ಉಮಾನಾಥ ಕೋಟ್ಯಾನ್ ವಿಶೇಷ ಸಭೆ

ಮೂಡಬಿದರೆ(26ಮಾರ್ಚ್/2019): ಮೂಲ್ಕಿ ಮೂಡಬಿದ್ರಿ ಶಾಸಕರಾದ ಉಮಾನಾಥ್ ಕೋಟ್ಯಾನ್ ರವರು ಇಂದು ಮೂಡಬಿದ್ರಿ ಪ್ರವಾಸಿ ಮಂದಿರದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಕೊರೊನಾ ನಿಯಂತ್ರಣದ ವಿಷಯದಲ್ಲಿ ಕೈಗೊಂಡಿರುವ ನಿರ್ಧಾರದ ಬಗ್ಗೆ ಮಾಹಿತಿ ಪಡೆದರು. ದೇಶದಲ್ಲಿ ಲಾಕ್ ಡೌನ್ ನಡೆಯುತ್ತಿರುವ ಈ ಸಂಧರ್ಭದಲ್ಲಿ ಕ್ಷೇತ್ರದ ಹಲವಾರು ದಿನಸಿ ಅಂಗಡಿಗಳಲ್ಲಿ ದಿನ ಬಳಕೆ ವಸ್ತುಗಳು ಕಾಲಿಯಾಗಿ ಜನರು ತೊಂದರೆ ಅನುಭವಿಸುತ್ತಿರುವದನ್ನು ಮನಗಂಡು , ಈಗಿಂದೀಗಲೇ ಬೇಕಾದ ಅಗತ್ಯ ಕ್ರಮಗಳನ್ನ ಕೈಗೊಂಡು ಜನತೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈವರಗೆ ಎಲ್ಲಾ ಇಲಾಖೆಯ ಅಧಿಕಾರಿಗಳೂ ಕೊರೊನಾ ವಿರುದ್ದದ ಹೋರಾಟದಲ್ಲಿ ಜನತೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ಉತ್ತಮವಾಗಿಯೇ ಕಾರ್ಯನಿರ್ವಹಿಸಿರುವಿರಿ , ಮುಂದೆಯೂ ಒಟ್ಟಾಗಿಯೇ ಎದುರಿಸೋಣ ಎಂದು ಹುರಿದುಂಬಿಸಿದರು
ತುರ್ತು ಸಂಧರ್ಭವಿದ್ದರೆ ಮಾತ್ರ ಮನೆಯಿಂದ ಹೊರ ಬನ್ನಿ , ಕೊರೊನಾ ವೈರಸ್ ವಿರುದ್ದದ ಹೋರಾಟದಲ್ಲಿ ತಾಲೂಕು ಆಡಳಿತದ ಜೊತೆ ದಯವಿಟ್ಟು ಸಹಕರಿಸಿ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

ಲಾಕ್ ಡೌನ್ ನಿರ್ಬಂದಗಳ ಪಾಲನೆ ಕಡ್ಡಾಯ, ತಪ್ಪಿದಲ್ಲಿ ಕಠಿಣ ಕಾನೂನು ಕ್ರಮ – ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ

ಉಡುಪಿ(ಮಾರ್ಚ್24/2020): ಕೊರೊನಾ ನಿಯಂತ್ರಣ ಕುರಿತಂತೆ, ರಾಜ್ಯ ಸರ್ಕಾರ ಸೂಚಿಸಿರುವ ನಿರ್ಬಂಧಗಳನ್ನು ಉಡುಪಿ ಜಿಲ್ಲೆಯ ನಾಗರೀಕರು ಕಡ್ಡಾಯವಾಗಿ ಪಾಲನೆ ಮಾಡುವಂತೆ ಹಾಗೂ ಈ ನಿರ್ಬಂಧಗಳನ್ನು ಉಲ್ಲಂಘಿಸುವವರ ವಿರುದ್ದ ಕಾನೂನು ರೀತಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದ್ದಾರೆ.
ಅವರು ಮಂಗಳವಾರ, ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಜಿಲ್ಲೆಗೆ ವಿದೇಶದಿಂದ ಬಂದಿರುವ 900 ಜನರನ್ನು ಗುರುತಿಸಲಾಗಿದ್ದು, ಈ ಎಲ್ಲರ ಮನೆಗಳಿಗೆ ನೋಟೀಸ್ ಅಂಟಿಸಲಾಗಿದ್ದು, ಕಡ್ಡಾಯವಾಗಿ ಹೋಂ ಕ್ವಾರಂಟೈನ್ ಪಾಲಿಸಲು ಸೂಚಿಸಲಾಗಿದ್ದು, ಪ್ರತಿದಿನ ದಿನಕ್ಕೆ 2 ಬಾರಿ ಗಸ್ತು ಪೊಲೀಸರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ತೆರಳಿ ಪರಿಶೀಲಿಸಲಿದ್ದಾರೆ ಅಲ್ಲದೇ ಈ ಮನೆಗಳ ಪಕ್ಕದವರಿಗೂ ಇವರ ಬಗ್ಗೆ ಮಾಹಿತಿ ನೀಡಿದ್ದು, ಮನೆಯಿಂದ ಹೊರಬಂದಲ್ಲಿ ಕೂಡಲೇ ಜಿಲ್ಲಾಡಳಿತದ ಉಚಿತ ಟೋಲ್ ಫ್ರೀ ನಂ.1077 ಹಾಗೂ ಪೊಲೀಸ್ ಕಂಟ್ರೋಲ್ ರೂ.100 ಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ, ಈ ನಿರ್ಬಂದ ಪಾಲಿಸದಿದ್ದಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದರು.
ಜಿಲ್ಲೆಯಲ್ಲಿ ದಿನನಿತ್ಯದ ದಿನಸಿ ವಸ್ತುಗಳು ದೊರೆಯಲಿದ್ದು, ಸಾರ್ವಜನಿಕರು ಅನಗತ್ಯವಾಗಿ ರಸ್ತೆಯಲ್ಲಿ ಸಂಚರಿಸುವುದನ್ನು ನಿರ್ಬಂದಿಸಿದೆ, ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಮನೆಯಿಂದ ಮನೆಯಿಂದ ಹೊರಬರಲು ಅವಕಾಶವಿದೆ, ತರತಕಾರಿ , ಹಣ್ಣು ಮುಂತಾದ ಅಗತ್ಯ ವಸ್ತುಗಳ ಕೃತಕ ಅಭಾವ ಸೃಷ್ಠಿಸಿ, ಹೆಚ್ಚಿನ ಬೆಲೆಗೆ ಮಾರುವವರ ವಿರುದ್ದ ಸಹ ಕಠಿಣ ಕ್ರಮ ಕೈಗೊಳ್ಳ ಲಾಗುವುದು ಎಂದ ಎಚ್ಚರಿಸಿದ ಜಿಲ್ಲಾಧಿಕಾರಿ, ಜಿಲ್ಲಗೆ ಹೊರ ಜಿಲ್ಲೆಯಿಂದ ಬರುವ ದಿನಸಿ ಮತ್ತು ತರಕಾರಿ ವಾಹನಗಳ ಚಾಲಕರ ಆರೋಗ್ಯವನ್ನು ಪರಿಶೀಲಿಸಿ ಜಿಲ್ಲೆಯೊಳಗೆ ಪ್ರವೇಶ ನೀಡಲಾಗುವುದು , ವ್ಯಾಪಾರಿಗಳು ಅಗತ್ಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ ಗ್ರಾಹಕರಿಂದ 6 ಅಡಿ ಅಂತರದಲ್ಲಿ ವ್ಯವಹಾರ ನಿರ್ವಹಿಸುವಂತೆ ಹಾಗೂ ಹೋಟೆಲ್ ಗಳಲ್ಲಿ ಪಾರ್ಸೆಲ್ ಗೆ ಮಾತ್ರ ಅನುಮತಿ ಇದ್ದು, ಗ್ರಾಹಕರು ಕುಳಿತು ತಿನ್ನುವುದಕ್ಕೆ ಅವಕಾಶವಿಲ್ಲ ಇದನ್ನು ಉಲ್ಲಂಘಿಸಿದಲ್ಲಿ ಗೃಆಹಕರು ಮತ್ತು ಸಂಬಂದಪಟ್ಟ ಹೊಟೆಲ್ ಮಾಲೀಕರ ವಿರುದ್ದ ಪ್ರಕರಣ ದಾಖಲಿಸಲಾಗುವುದು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಕೊರೋನ ಪಾಸಿಟಿವ್ ಪ್ರಕರಣ ಕಂಡುಬಂದಿಲ್ಲ, ಒಂದು ವೇಳ ಕಂಡುಬಂದಲ್ಲಿ ಜಿಲ್ಲಾಸ್ಪತ್ರೆಯನು ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಿ , ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡಲಾಗುವುದು ಅದರ ಹೊರತು ಬೇರೆ ಯಾವುದೇ ರೋಗಿಗಳಿಗೆ ಅಲ್ಲಿ ಚಿಕಿತ್ಸೆ ನೀಡುವುದಿಲ್ಲ, ಕರೋನಾ ರೋಗಿಗಳೊಂದಿಗೆ ನೇರ ಸಂಪರ್ಕ ಹೊಂದಿರುವ ಕೊರೋನಾ ಶಂಕಿತರನ್ನು ಐಸೋಲೇಶನ್ ನಲ್ಲಿಡಲು ಉದ್ಯಾವರದ ಎಸ್.ಡಿ.ಎಂ ಕಾಲೇಜಿನಲ್ಲಿ 150 ಬೆಡ್ ಗಳ ವ್ಯವಸ್ಥೆ ಮಾಡಿದ್ದು, ಇನ್ನೂ ಅಗತ್ಯ ಬಿದ್ದಲ್ಲಿ ಕೆಎಂಸಿ ಯಲ್ಲಿ 100 ಬೆಡ್ ಗಳ ವ್ಯವಸ್ಥೆ ಮತ್ತು ನಗರದ ನೂತನ ಗ್ರಂಥಾಲಯ ಕಟ್ಟಡದಲ್ಲಿ ಸಹ ಅಗತ್ಯ ವ್ಯವಸ್ಥೆ ನಿರ್ಮಾಣ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಮಾಹಿತಿ ನೀಡಿದರು.
ಈಗಾಗಲೇ ಕೆಲವೊಂದು ಅಂಗಡಿಗಳು, ವಾಣಿಜ್ಯ ಸಂಸ್ಥೆ, ಕೈಗಾರಿಕೆಗಳ ವ್ಯವಹಾರವನ್ನು ಸ್ಥಗಿತಗೊಳಿಸಿದ್ದು, ಅಂತಹ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ವೇತನಸಹಿತ ರಜೆ ನೀಡುವಂತೆ ಮತ್ತು ಅವರನ್ನು ಉದ್ಯೋಗದಿಂದ ವಜಾಗೊಳಿಸಂತೆ ಸಂಬಂಧಪಟ್ಟ ಸಂಸ್ಥೆಗಳ ಮುಖ್ಯಸ್ಥರಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳು ಮತ್ತು ಕ್ಲಿನಕ್ ಗಳ ತಮ್ಮ ಸೇವೆಯನ್ನು ಸ್ಥಗಿತಗೊಳಿಸದಂತೆ ತಿಳಿಸಿದ ಜಿಲ್ಲಾಧಿಕಾರಿಗಳು , ಅವಶ್ಯಕ ಸೇವೆ ಹೊರತುಪಡಿಸಿ ಇತರೆ ಇಲಾಖೆಗಳ ಅಧಿಕಾರಿ/ಸಿಬ್ಬಂದಿಗಳು ಕಚೇರಿಗೆ ಬರುವ ಅಗತ್ಯವಿಲ್ಲ ಆದರೆ ಕೇಂದ್ರಸ್ಥಾನದಲ್ಲಿ ಲಭ್ಯರಿದ್ದು ತುರ್ತು ಸಂದರ್ಭದಲ್ಲಿ ಹಾಜರಾಗುವಂತೆ ಸೂಚಿಸಿದರು.
ಮಲ್ಪೆ ಬಂದರಿನಲ್ಲಿ ಸಮುದ್ರಕ್ಕೆ ಹೋಗಿರುವ ಬೋಟುಗಳು ಮಾತ್ರ ವಾಪಸ್ ಬರುತ್ತಿದ್ದು, ಹೊಸ ಬೋಟುಗಳು ಸಮುದ್ರಕ್ಕೆ ತೆರಳಲು ಅವಕಾಶವಿಲ್ಲ ಈಗಾಗಲೇ ಬೋಟುಗಳಿಗೆ ನೀಡಲಾಗುವ ಇಂದನ ಸಬ್ಸಿಡಿಯನ್ನು ಸಸ್ಪೆಂಡ್ ಮಾಡಲಾಗಿದೆ, ಮಲ್ಪೆ ಬಂದರಿನ ಕಾರ್ಯ ಚಟುವಟಿಕೆಗಳಿಗೆ ಇಂದು ಕೊನೆಯ ದಿನವಾಗಿದ್ದು, ಸರಕಾರದ ಆದೇಶವನ್ನು ಪಾಲಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ ಮಾತನಾಡಿ, ಸಾರ್ವಜನಿಕರು ಈ ಅವಧಿಯಲ್ಲಿ ಪೊಲೀಸರೊಂದಿಗೆ ಅನವಶ್ಯಕ ವಾದ ಮಾಡಬೇಡಿ , ಸರಕಾರದ ನಿಬರ್ಂದಗಳನ್ನು ಪಾಲಿಸಿ, ನಿಮ್ಮ ಆರೋಗ್ಯದ ದೃಷ್ಠಿಯಿಂದ ಈ ನಿರ್ಬಂದಗಳನ್ನು ವಿಧಿಸಿದ್ದು, ಇದನ್ನು ಉಲ್ಲಂಘಿಸುವವರ ವಿರುದ್ದ ಕಾನೂನಿನಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರೀತಿ ಗೆಹಲೋತ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪವಿಭಾಗಾಧಿಕಾರಿ ರಾಜು, ಡಿಹೆಚ್ಓ ಡಾ. ಸುಧೀರ್ ಚಂದ್ರ ಸೂಡಾ, ಜಿಲ್ಲಾ ಸರ್ಜನ್ ಡಾ. ಮಧುಸೂಧನ್ ನಾಯಕ್ ಉಪಸ್ಥಿತರಿದ್ದರು.

ವಾಣಿಜ್ಯ ಮಳಿಗೆಗಳಲ್ಲಿ ಜನಸಂದಣಿ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಸೂಚನೆ

ಉಡುಪಿ(ಮಾರ್ಚ್21/2020): ಕೋವಿಡ್ -19 (ಕರೊನಾ ವೈರಾಣು ಕಾಯಿಲೆ 2019) ಕುರಿತಂತೆ ತಾತ್ಕಾಲಿಕ ನಿಯಮಾವಳಿಗಳನ್ನು ಹೊರಡಿಸಿ ಸಾರ್ವಜನಿಕರು ಕೆಲವು ವಿಶೇಷ ಕ್ರಮಗಳನ್ನು ಸದರಿ ಕಾಯಿಲೆಯ ಸ್ಪೋಟ ಮತ್ತು ಹರಡುವುದನ್ನು ತಡೆಗಟ್ಟಲು ಸಿನಿಮಾ ಮಂದಿರಗಳು, ಮಾಲ್ಗ್ಳು, ನಾಟಕಗಳು, ರಂಗಮಂದಿರಗಳು, ಪಬ್ಗವಳು, ಕ್ಲಬ್ಗರಳು ಹಾಗೂ ನೈಟ್ಕ್ಲೇಬ್ಗನಳನ್ನು ಸಂಪೂರ್ಣವಾಗಿ ಮುಚ್ಚುವಂತೆ ನಿರ್ದೇಶಿಸಲಾಗಿದ್ದು, ಮುಂದುವರೆದು ಇನ್ನೂ ಅನೇಕ ಜನಸಂದಣಿ ಇರುವ ಸ್ಥಳಗಳಲ್ಲಿ ಹೆಚ್ಚು ಗ್ರಾಹಕರು ಸೇರುವಂತಹ ವಾಣಿಜ್ಯ ಮಳಿಗೆಗಳಲ್ಲಿ ಜನ ಸಂದಣಿಯನ್ನು ನಿಯಂತ್ರಿಸುವ ಅತೀವ ಅವಶ್ಯಕತೆ ಕಂಡು ಬರುತ್ತಿದೆ.
ವೈರಾಣುಗಳು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ಕೆಲವೊಂದು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದು ಅತಿ ಅವಶ್ಯಕವಾಗಿರುವ ಹಿನ್ನಲೆಯಲ್ಲಿ ಈ ಕೆಳಕಂಡ ಸ್ಥಳಗಳಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಜಿಲ್ಲೆಯಾದ್ಯಂತ ಮಾರ್ಚ್ 20 ರಿಂದ ಮುಂದಿನ ಆದೇಶದವೆರೆಗೆ ಈ ಕೆಳಕಂಡ ಕ್ರಮಗಳನ್ನು ಪಾಲಿಸುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶ ಹೊರಡಿಸಿರುತ್ತಾರೆ.
ಕೆಲವೊಂದು ಬಟ್ಟೆ ಅಂಗಡಿಗಳು, ಚಿನ್ನಾಭರಣ ಮಳಿಗೆಗಳು ಮತ್ತು ಎಲೆಕ್ಟ್ರಾನಿಕ್ ಮಳಿಗೆಗಳು, ಮತ್ತಿತರ ಮಳಿಗೆಗಳು, ಬಹುಮಹಡಿ ಕೇಂದ್ರೀಕೃತ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅಂತಹ ವಾತಾವರಣವು ಕೊರೊನಾ ವೈರಸ್ ಹರಡುವಿಕೆಗೆ ಪೂರಕವಾಗುವ ಸಂಭವವಿದ್ದು, ಇಂತಹ ಮಳಿಗೆಗಳಲ್ಲಿ ಏಕಕಾಲದಲ್ಲಿ 25 ಸಿಬ್ಬಂದಿಗಳಿಗಿಂತ ಜಾಸ್ತಿ ಜನ ಕಾರ್ಯ ನಿರ್ವಹಿಸುವುದನ್ನು ಹಾಗೂ 50 ಜನಕ್ಕಿಂತ ಜಾಸ್ತಿ ಗ್ರಾಹಕರು ಸೇರುವುದನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ತಾತ್ಕಾಲಿಕವಾಗಿ ಮುಂದಿನ ಆದೇಶದವರೆಗೆ ನಿಷೇಧಿಸಲಾಗಿದೆ.
ಸದರಿ ಮಳಿಗೆಗಳಲ್ಲಿ ಸಿಬ್ಬಂದಿಗಳ ಸಂಖ್ಯೆಯನ್ನು 25 ಕ್ಕೆ ಸೀಮಿತಗೊಳಿಸಿದಾಗ, ಉಳಿದ ಕರ್ತವ್ಯ ರಹಿತ ಇತರೆ ಸಿಬ್ಬಂದಿಗಳ ವೇತನವನ್ನು ಸಂಬಂಧಿಸಿದ ಮಳಿಗೆಗಳ ಮಾಲಿಕರು ಪಾವತಿಸಬೇಕಾಗುತ್ತದೆ. ಸದರಿ ಮಳಿಗೆಗಳಿಗೆ ಆಗಮಿಸುವ ಗ್ರಾಹಕರಲ್ಲಿ ಶೀತ, ಕೆಮ್ಮು ಮತ್ತು ಜ್ವರದ ಲಕ್ಷಣ ಇರುವ ಗ್ರಾಹಕರಿಗೆ ಪ್ರವೇಶ ನಿಷೇಧಿಸಲಾಗಿದೆ. ಇದನ್ನು ಮಳಿಗೆಗಳ ಮಾಲೀಕರು ವ್ಯವಸ್ಥಾಪಕರು ಖಚಿತ ಪಡಿಸಿಕೊಳ್ಳಬೇಕು.
ಮಳಿಗೆಯನ್ನು ಪ್ರವೇಶಿಸುವ ಮುನ್ನಾ ಗ್ರಾಹಕರು ಸ್ಯಾನಿಟೈಸರ್ ಬಳಸಿ ಒಳ ಪ್ರವೇಶಿಸುವುದಕ್ಕೆ ಮಳಿಗೆ ಮಾಲಿಕರು ವ್ಯವಸ್ಥಾಪಕರು ಏರ್ಪಾಡು ಮಾಡಿಕೊಳ್ಳಬೇಕು ಹಾಗೂ ಅದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಮಳಿಗೆ ವಠಾರದಲ್ಲಿ ಸ್ವಚ್ಚತೆ ಕಾಪಾಡುವಂತೆ ಜಿಲ್ಲಾಧಿಕಾರಿಗಳ ಆದೇಶದಲ್ಲಿ ತಿಳಿಸಲಾಗಿದೆ.