July 11, 2020

ಉಡುಪಿ

ಬೈಂದೂರಿನ ವ್ಯಕ್ತಿ ಕರೋನಗೆ ಬಲಿ

ಉಡುಪಿ(ಜೂ30/2020): ಬೈಂದೂರು ತಾಲೂಕು ಮೂಲದ ಮಹಾರಾಷ್ಟ್ರದಿಂದ ಆಗಮಿಸಿದ ವ್ಯಕ್ತಿಯೊಬ್ಬರು ಭಾನುವಾರ ಮೃತರಾಗಿದ್ದು ಅವರಿಗೆ ಕೊರೊನಾ ಸೊಂಕು ದೃಡವಾಗಿದೆ.
ಮಹಾರಾಷ್ಟ್ರದ ನಿವಾಸಿ 48 ಪ್ರಾಯದ ವ್ಯಕ್ತಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದು ಅಲ್ಲಿ ಚಿಕಿತ್ಸೆ ಪಡೆದಿದ್ದರು. ಅವರನ್ನು ಶನಿವಾರ ಬೈಂದೂರಿಗೆ ಕರೆ ತರಲಾಗಿತ್ತು. ಭಾನುವಾರ ಇವರು ಮೃತ ಪಟ್ಟಿದ್ದರು.
ಭಾನುವಾರ ಆ ವ್ಯಕ್ತಿ ಸಾವನ್ನಪ್ಪುತ್ತಲೇ ಈ ವಿಚಾರವನ್ನು ಇಲಾಖೆಯ ಗಮನಕ್ಕೆ ತರಲಾಗಿತ್ತು. ಮೃತ ವ್ಯಕ್ತಿಯ ಗಂಟಲು ದ್ರವವನ್ನು ಸಂಗ್ರಹಿಸಲಾಗಿತ್ತು ಮತ್ತು ಕೊರೊನಾ ಶಿಷ್ಟಾಚಾರದ ಪ್ರಕಾರ ಅಂತ್ಯಕ್ರಿಯೆ ನಡೆಸಲಾಗಿತ್ತು.
ಗಂಟಲು ದ್ರವದ ವರದಿ ಇಂದು ಕೈ ಸೇರಿದ್ದು ಮೃತ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಇರುವುದು ದೃಢ ಪಟ್ಟಿದೆ. ಮೃತರ ಸಂಪರ್ಕದಲ್ಲಿದ್ದವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

ನೂರನೇ ದಿನದ ಸೇವೆ: ಗುರೂಜಿ ಸಾಯಿಈಶ್ವರ್ ಆಶಿರ್ವಾದ ಪಡೆದ ಬಿವಂಡಿ ಸಾಯಿ ಫೌಂಡೇಷನ್ ಅಧ್ಯಕ್ಷ ಪ್ರದೀಪ್ ವಾಸು ಶೆಟ್ಟಿ

ಮುಂಬಾಯಿ/ಉಡುಪಿ(30ಜೂ/2020): 24 ಮಾರ್ಚ್ 2020ರಿಂದ ಕೋವಿಡ್ 19ರ ಕಾರಣ ಭಾರತದಾದ್ಯಂತ ಲಾಕ್‌ಡೌನ್ ಆದ ನಂತರ ಮುಂಬೈಯ ಬಿವಂಡಿಯ
ಸಾಯಿ ಫೌಂಡೇಶನ್ ಮಹಾರಾಷ್ಟ್ರದಾದ್ಯಂತದ ಬಡ ಮತ್ತು ನಿರ್ಗತಿಕ ಜನರಿಗೆ ಈ ಕೆಳಗಿನ ಸೇವೆಗಳನ್ನು ಒದಗಿಸುತ್ತಿದೆ ಇಂದಿಗೆ ಸೇವೆಯ ನೂರನೇ ದಿನ.
ಬಿವಂಡಿಯ ಸಾಯಿ ಫೌಂಡೇಶನ್ ಇದರ ಅಧ್ಯಕ್ಷ ಪ್ರದೀಪ್ ವಾಸು ಶೆಟ್ಟಿ ಇಂದು ಗುರೂಜಿ ಸಾಯಿಈಶ್ವರ್ ಇವರನ್ನು ಉಡುಪಿ ಬಳಿಯ ಶಂಕರಪುರದ ಶ್ರೀ ಸಾಯಿ ಬಾಬಾ ಮಂದಿರದಲ್ಲಿ ಬೇಟಿಯಾಗಿ ಆಶಿರ್ವಾದ ಪಡೆದರು.
ಬಿವಂಡಿಯ ಸಾಯಿ ಫೌಂಡೇಶನ್ 24ಮಾರ್ಚ್ ನಿಂದ ಇಂದಿನ ವರೆಗೆ ನೀಡಿರುವ ಸೇವೆಗಳು ಹೇಗಿವೆ.
32,000 ಕುಟುಂಬಗಳಿಗೆ ಅಗತ್ಯವಾದ ಅಗತ್ಯ ದಿನಸಿ ಸಾಮಗ್ರಿಗಳನ್ನು ಒದಗಿಸಲಾಗಿದೆ ಇದರಿಂದ ಸುಮಾರು 1,22,000 ಜನರಿಗೆ ಸಹಾಯವಾಯಿತು.
ಭಿವಾಂಡಿ, ಥಾಣೆ, ಮುಂಬೈ ಮತ್ತು ಇತರ ನಗರಗಳಿಂದ ತಮ್ಮ ಸ್ವಂತ ರಾಜ್ಯಗಳಾದ ಯುಪಿ, ಬಿಹಾರ, ಒರಿಸ್ಸಾ ಮತ್ತು ಕೋಲ್ಕತಾ ಇತ್ಯಾದಿಗಳಿಗೆ ನಾಸಿಕ್ ಹೆದ್ದಾರಿಯ ಮೂಲಕ ಹೋಗುತ್ತಿರುವ ಸುಮಾರು 2,00,000 ವಲಸಿಗರಿಗೆ ಉಚಿತ ಸೇವೆಗಳನ್ನು ಎಸ್‌ಎಐ ಧಾಬಾನಲ್ಲಿ ಒದಗಿಸಲಾಗಿದೆ
ಇಲ್ಲಿ ಮದ್ಯಹ್ನದ ಹಾಗು ರಾತ್ರಿಯ ಊಟ, ಸ್ನಾನಗೃಹಗಳು, ವಿಶ್ರಾಂತಿಗಾಗಿ ಸೌಲಭ್ಯಗಳು, ಚಹಾ ಮತ್ತು ತಿಂಡಿಗಳು, ಬೇಬಿ ಫೀಡಿಂಗ್ ಸೌಲಭ್ಯಗಳು, ಮುಸ್ಲಿಮರರ ಪ್ರಾರ್ಥನೆಗಾಗಿ ಪ್ರತ್ಯೇಕ ಪ್ರದೇಶವನ್ನು ಏರ್ಪಡಿಸಲಾಗಿದೆ. ಪವಿತ್ರ ರಂಜಾನ್ ತಿಂಗಳಲ್ಲಿ ಮುಸ್ಲಿಮರಿಗಾಗಿ ಇಫ್ತಾರ್ ವಸ್ತುಗಳನ್ನು ವ್ಯವಸ್ಥೆ ಮಾಡಲಾಗಿತ್ತು.ಪ್ರಥಮ ಚಿಕಿತ್ಸಾ ವ್ಯವಸ್ಥೆ, 1000 ವಲಸಿಗರಿಗೆ ತಮ್ಮ ಸ್ವಗ್ರಾಮಗಳಿಗೆ ತೆರಳಲು ಸಾಯಿ ಫೌಂಡೇಶನ್ ಎಲ್ಲಾ ವೆಚ್ಚಗಳು ಬಸ್ ಮತ್ತು ಟ್ರಕ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ.
ಅನೇಕ ಸ್ವಂತ ವಾಹನವನ್ನು ತುರ್ತು ಆಂಬ್ಯುಲೆನ್ಸ್ ಆಗಿ ಪರಿವರ್ತಿಸಿ ಹತ್ತಿರದ ಆಸ್ಪತ್ರೆಗೆ ಅಗತ್ಯ ಇರುವವರನ್ನು ಕರೆದೊಯ್ಯಲಾಗಿದೆ ಮತ್ತು ಅವರಿಗೆ ಉಚಿತ ಚಿಕಿತ್ಸೆ ನೀಡಲಾಗಿದೆ.
ಕೆಲವು ಬಡ ಮತ್ತು ನಿರ್ಗತಿಕ ವೃದ್ಧರನ್ನು ದತ್ತು ತೆಗೆದುಕೊಂಡು ಅವರಿಗೆ ಜೀವಿತಾವಧಿಯ ಖರ್ಚನ್ನು ಭರಿಸುವ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡರು.16,000 ಜನರಿಗೆ ಸುಮಾರು 722 ಬಸ್ ಅನ್ನು ಉಚಿತವಾಗಿ ಒದಗಿಸಲಾಗಿದೆ.
1,50,000 ಜನರಿಗೆ ಸುಮಾರು 122 ರೈಲುಗಳ ಪ್ರಯಾಣಿಕರಿಗೆ ಉಚಿತ ಸಿದ್ಧ ಊಟ, ಹಣ್ಣುಗಳು, ಬಿಸ್ಕತ್ತುಗಳು ಮತ್ತು ಇತರ ವಸ್ತುಗಳನ್ನು ಒದಗಿಸಲಾಗಿದೆ.
ಗುರೂಜಿ ಸಾಯಿಈಶ್ವರ್ ಆಶಿರ್ವಾದಿಸಿ ಜನರ ಸೇವೆ ಹೀಗೆ ಮುಂದುವರಿಸಿ ಎಂದರು.

ಕಾಪು: ಎಸ್.ಎಸ್.ಎಲ್.ಸಿ ವಿಧ್ಯಾರ್ಥಿಗೆ ಸೋಂಕು ಧೃಡ

ಕಾಪು(ಜೂ 28/2020): ಕಾಪು ತಾಲೂಕಿನ ಎಸ್‌.ಎಸ್‌‌.ಎಲ್‌‌.ಸಿ ವಿದ್ಯಾರ್ಥಿನಿಗೆ ಕೊರೊನಾ ಸೋಂಕು ದೃಢಪಟ್ಟಿರುವುದಾಗಿ ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಕೊರೊನಾ ಪರೀಕ್ಷಾ ವರದಿ ಜೂ 28ರಂದು ಬಂದಿದ್ದು, ವರದಿಯಲ್ಲಿ ಪಾಸಿಟಿವ್‌ ಎಂದು ಖಚಿತವಾಗಿತ್ತು. ಈ ಕಾರಣದಿಂದ ವಿದ್ಯಾರ್ಥಿನಿ ಜೂ29ರಂದು ನಡೆಯಲಿರುವ ಪರೀಕ್ಷೆಯ ಅವಕಾಶದಿಂದ ವಂಚಿತರಾಗಿದ್ದಾರೆ.ವಿದ್ಯಾರ್ಥಿನಿ ಜು.25ರ ಎಸ್‌.ಎಸ್‌.ಎಲ್‌.ಸಿಯ ಕನ್ನಡ ಹಾಗೂ ಜು.27ರಂದು ನಡೆದ ಗಣಿತ ಪರೀಕ್ಷೆ ಬರೆದಿದ್ದರು. ಜೂನ್‌‌ 27ರಂದು ಈಕೆಯ ತಂದೆಯ ಗಂಟಲು ದ್ರವದ ಮಾದರಿ ಪರೀಕ್ಷೆ ಬಂದ ಹಿನ್ನೆಲೆ ಈಕೆಯನ್ನು ಕೂಡಾ ಅದೇ ದಿನ ಕೊರೊನಾ ಪರೀಕ್ಷೆಗೊಳಪಡಿಸಲಾಗಿತ್ತು.ಈಕೆ ಪರೀಕ್ಷೆ ಬರೆದ ಕೇಂದ್ರದಲ್ಲಿ ಸ್ಯಾನಿಟೈಸ್‌‌‌‌‌‌‌ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದರಿಂದ ಉಳಿದ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸುವ ಅವಶ್ಯಕತೆ ಇಲ್ಲ ಎಂಬುದಾಗಿ ಆರೋಗ್ಯ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಚೀನಾ ವಸ್ತುಗಳ ಬಳಕೆ,ಖರೀದಿ ಮಾಡಬೇಡಿ: ಗುರೂಜಿ ಸಾಯಿ ಈಶ್ವರ್

ಉಡುಪಿ(18ಜೂ/2020): ಭಾರತ ಚೀನಾ ಗಡಿಯ ಗಾಲ್ವಾನ್ ಪ್ರದೇಶದಲ್ಲಿ ಚೀನಾ ಸೈನಿಕರ ದಾಳಿಗೆ ತುತ್ತಾಗಿ ವೀರ ಮರಣವಪ್ಪಿದ ಭಾರತೀಯ ಸೇನೆಯ ಇಪ್ಪತ್ತು ಸೈನಿಕರ ಗೌರವಾರ್ಥವಾಗಿ ಗುರೂಜಿ ಸಾಯಿಈಶ್ವರ್ ಇಂದು ಉಡುಪಿಯ ಹುತಾತ್ಮ ಸೈನಿಕರ ಯುದ್ಧ ಸ್ಮಾರಕಕ್ಕೆ ಬೇಟಿ ನೀಡಿ ಗೌರವ
ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗುರೂಜಿ ಸಾಯಿ ಈಶ್ವರ್ “ಗಡಿಯಲ್ಲಿ ವೀರ ಮರಣವನ್ನಪ್ಪಿದ ನಮ್ಮ ಸೈನಿಕರ ಸಾವು ವ್ಯರ್ಥವಾಗ ಬಾರದು.ನಮ್ಮಿಂದ ಯುದ್ದದಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಆದರೆ ಇನ್ನು ಮುಂದೆ ಚೀನಾ ವಸ್ತುಗಳನ್ನು ಖರೀದಿಸುವುದನ್ನು ನಿಲ್ಲಿಸುವ, ಚೀನಾ ದೇಶಕ್ಕೆ ಆರ್ಥಿಕ ಹಿನ್ನಡೆ ತಂದು ಪರೋಕ್ಷವಾಗಿ ಆರ್ಥಿಕ ಯುದ್ಧ ಮಾಡಲು ಸಿದ್ದರಾಗಿ” ಎಂದು ಯುವ ಜನತೆಗೆ ಕರೆ ನೀಡಿದರು.
ಶಂಕರಪುರದ ದ್ವಾರಕಾಮಾಹಿ ಶ್ರೀ ಸಾಯಿ ಬಾಬಾ ಮಂದಿರದಲ್ಲಿ ಪ್ರತಿವರ್ಷ ಉಡುಪಿಯ ಹಾಲಿ ಹಾಗು ಮಾಜಿ ಸೈನಿಕರನ್ನು ಗುರುತಿಸಿ ಸೈನಿಕ ದಂಪತಿಗಳನ್ನು ಮಂದಿರಕ್ಕೆ ಕರೆಸಿ ಧುನಿ ಯಾಗ ಮಾಡುತ್ತಿದ್ದು ಈ ವರ್ಷ ಕರೋನಾ ಲಾಕ್ ಡೌನ್ ಕಾರಣ ಧುನಿ ಯಾಗ ಆಯೋಜನೆ ಮಾಡಿರುವುದಿಲ್ಲ.
ಉಡುಪಿ ಹಿಂದೂ ಸಂಘಟಕ ರಾಧಾಕೃಷ್ಣ ಮೆಂಡನ್ ಮಾತನಾಡಿ “ನಮ್ಮ ಸೈನಿಕರನ್ನು ಮೋಸದಿಂದ ಕೊಲ್ಲಲಾಯಿತು, ಆದರೆ ಪ್ರತ್ಯುತ್ತರವಾಗಿ ನಮ್ಮ ತಕ್ಕ ಉತ್ತರ ನೀಡಿದ್ದಾರೆ.ಮೃತ ಯೋಧರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ನೀಡಲಿ” ಎಂದು ನುಡಿದರು.
ಈ ಸಂದರ್ಭದಲ್ಲಿ ಪರ್ಕಳದ ಲಯನ್ಸ್ ಕ್ಲಬಿನ ಅಧ್ಯಕ್ಷರಾದ ಜಯರಾಮ್ ಜಿ, ಮ್ಯಾಕ್ಸ್ ಸೌಂಡ್ಸ್ ಇದರ ಮಾಲಕರಾದ ಗಣೇಶ್ ಪಾಲನ್, ದ್ವಾರಕಾಮಾಹಿ ಶ್ರೀ ಸಾಯಿ ಬಾಬಾ ಮಂದಿರದ ಮೇಲ್ವಿಚಾರಕ ಸತೀಶ್ ದೇವಾಡಿಗ,ಅಮಿತ್ ಬಜಪೆ ಉಪಸ್ಥಿತರಿದ್ದರು.

ಉಡುಪಿ ಮಾಸ್ಕ್ ದಿನಾಚರಣೆಗೆ ಆರು ಅಡಿ ಉದ್ದದ ಮಾಸ್ಕ್

ಉಡುಪಿ(18ಜೂನ್/2020): ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಇವರಿಂದ, ಕೊರೊನಾ ನಿಯಂತ್ರಣ ಅಭಿಯಾನ, ಮಾಸ್ಕ್ ದಿನಾಚರಣೆ ಕಾರ್ಯಕ್ರಮವು ಮಾರುಥಿ ವಿಥೀಕಾದಲ್ಲಿ ಗುರುವಾರ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಿಸಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ಅವರು, ಕೊರೊನಾ ಸೋಂಕು ಸಮುದಾಯಕ್ಕೆ ಹರಡದಂತೆ ನಿಯಂತ್ರಿಸುವ ಮುನ್ನೆಚ್ಚರಿಕೆಯ ಅಗತ್ಯ ಕ್ರಮಗಳನ್ನು ಹೇಳಿದರು.

ಸಾಯಿರಾಂ ಬಟ್ಟೆ ಮಳಿಗೆಯವರು ಉಚಿತವಾಗಿ ಒದಗಿಸಿದ ಹತ್ತಿಬಟ್ಟೆ ಬಳಸಿಕೊಂಡು, ಕ್ಲಾಸಿಕ್ ಟಚ್ ಟೈಲರ್ಸ್ ತಂಡದವರು ತಯಾರಿಸಿದ, 6 ಅಡಿ ಉದ್ದ, 5 ಅಡಿ ಅಗಲದ ಬೃಹತ್ ಗಾತ್ರದ ಮಾಸ್ಕ್ ಪ್ರದರ್ಶನವು ನಡೆಯಿತು. ಬೃಹತ್ ಗಾತ್ರದ ಮಾಸ್ಕ್ ಗಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ಕೊರೊನಾ ನೊಡಲ್ ಅಧಿಕಾರಿ ಡಾ. ಪ್ರಶಾಂತ್ ಭಟ್, ನಗರ ಪೊಲೀಸ್ ಠಾಣೆಯ ಠಾಣಾಧಿಕಾರಿ ಸಕ್ತಿವೇಲು ಸಂಪನ್ಮೂಲ ಅತಿಥಿಗಳಾಗಿದ್ದರು. ಸಮಿತಿಯ ಪ್ರಧಾನ ಸಂಚಾಲಕ ನಿತ್ಯಾನಂದ ಒಳಕಾಡು ಅವರು ಪ್ರಾಸ್ತವಿಕ ನುಡಿಗಳಾಡಿದರು. ಸಹಸಂಚಾಲಕ ತಾರಾನಾಥ್ ಮೇಸ್ತ ಶಿರೂರು ವಂದಿಸಿದರು. ರಾಜೇಶ ಶೆಟ್ಟಿ, ರಾಘವೇಂದ್ರ ಕರ್ವಾಲು, ಸಮಿತಿಯ ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು.

ವಾರಸುದಾರರು ಇಲ್ಲದ ನಾಲ್ಕು ಶವಗಳ ಅಂತ್ಯಸಂಸ್ಕಾರ

ಉಡುಪಿ(ಜೂ13/2020): ಉಡುಪಿ ನಗರ ಪೊಲೀಸ್ ಠಾಣೆ ಹಾಗೂ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಇವರು, ವಾರಸುದಾರರು ಇಲ್ಲದ ನಾಲ್ಕು ಶವಗಳ ಅಂತ್ಯಸಂಸ್ಕಾರವನ್ನು ಬೀಡಿನಗುಡ್ಡೆ ಹಿಂದು ರುದ್ರಭೂಮಿಯಲ್ಲಿ ಅಂತಿಮ ಗೌರವಗಳೊಂದಿಗೆ ಗುರುವಾರ ದಫನ ಮೂಲಕ ನಡೆಸಿದರು.
ಮೃತಪಟ್ಟಿರುವ ನಾಲ್ವರು ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದವರು. ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು. ಮೃತರಲ್ಲಿ ಮೂವರು ಅಪರಿಚಿತ ರೋಗಿಗಳಾಗಿ ಸಾರ್ವಜನಿಕ ಸ್ಥಳದಲ್ಲಿ ಅಸಹಾಯಕರಾಗಿ ಕಂಡು ಬಂದಿದ್ದರು. ಸಮಾಜಸೇವಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ಮಾನವಿಯತೆ ನೆಲೆಯಲ್ಲಿ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಕೆಲವು ದಿನಗಳಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು. ಮೃತರ ಕಳೇಬರಗಳನ್ನು ವಾರಸುದಾರರ ಬರುವಿಕೆಯ ನಿರೀಕ್ಷೆಯಲ್ಲಿ ಜಿಲ್ಲಾಸ್ಪತ್ರೆಯ ಶೀತಲಿಕರಣ ಶವಗಾರದಲ್ಲಿ ರಕ್ಷಿಸಿ ಇಡಲಾಗಿತ್ತು. ವಾರಸುದಾರರ ಆಹ್ವಾನೆಗಾಗಿ ಮಾಧ್ಯಮ ಪ್ರಕಟಣೆ ನೀಡಲಾಗಿತ್ತು. ವಾರಸುದಾರರು ಕಾಯುವಿಕೆಯ ಕಾಲಮಿತಿ ಕಳೆದರೂ ಬಾರದೆ ಇರುವುದರಿಂದ ಕಾನೂನಿನಂತೆ ಪ್ರಕ್ರಿಯೆಗಳ ನಡೆಸಿದ ಬಳಿಕ ತನಿಖಾ ಸಹಾಯಕ ವಿಶ್ವನಾಥ್ ಶೆಟ್ಟಿ ಅಮಾಸೆಬೈಲು ಅವರ ಸಮಕ್ಷಮ ದಫನ ನಡೆಸಲಾಯಿತು.
ಅಂತ್ಯಸಂಸ್ಕಾರ ಕಾರ್ಯದಲ್ಲಿ ನಗರ ವಲಯ ಭಜನಾ ಮಂಡಳಿಗಳ ಅಧ್ಯಕ್ಷರಾದ ಕಿಶೋರ ಕರ್ನಾಪಾಡಿ, ರಮಾನಂದ ದೇವಾಡಿಗ, ಮಧ್ವರಾಜ್, ಸುಶೀಲ ರಾವ್, ಸಾಜಿ ಅಜ್ಜರಕಾಡು ಹಾಗೂ ಮತ್ತಿತರರು ಭಾಗಿಗಳಾಗಿ ಸಹಕರಿಸಿದರು.

ಕ್ವಾರಂಟೈನ್ಗೆ ಬಳಸಿದ ಉಡುಪಿ ಬೋರ್ಡ್ ಹೈಸ್ಕೂಲ್ ಸಂಪೂರ್ಣ ಸ್ಯಾನಿಟೈಜೇಷನ್

ಉಡುಪಿ(ಜೂನ್ 11/2020): ಜೂನ್ 18 ರಂದು ನಡೆಯುವ ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆ ಪ್ರಯುಕ್ತ, ಪರೀಕ್ಷೆ ನಡೆಯುವ ಪರೀಕ್ಷಾ ಕೇಂದ್ರಗಳನ್ನು , ಕೋವಿಡ್-19 ಪ್ರಯುಕ್ತ ಕ್ವಾರಂಟೈನ್ ಗೆ ಬಳಸಿದ್ದಲ್ಲಿ, ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಠಿಯಿಂದ ಅಂತಹ ಕೇಂದ್ರಗಳನ್ನು ಸಂಪೂರ್ಣ ಸ್ವಾನಿಟೈಸ್ ಮಾಡುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಸೂಚಿಸಿದ್ದು, ಅದರಂತೆ ಗುರುವಾರ ಉಡುಪಿಯ ಬೋರ್ಡ್ ಹೈಸ್ಕೂಲ್ ನ್ನು , ಉಡುಪಿ ನಗರಸಭೆಯ ಪೌರಾಯುಕ್ತ ಆನಂದ್ ಕಲ್ಲೋಳಿಕರ್ ಅವರ ನೇತೃತ್ವದಲ್ಲಿ ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಯಿತು.

ಸ್ವಂತ ರಾಜ್ಯಕ್ಕೆ ತೆರಳುವ ವಲಸೆ ಕಾರ್ಮಿಕರು ಸಂಪರ್ಕಿಸಿ

ಉಡುಪಿ(ಜೂನ್11/2020): ಕೊರೋನಾ ವೈರಸ್ ಕಾಯಿಲೆ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹೊರಡಿಸಲಾಗಿರುವ ಲಾಕ್‌ಡೌನ್‌ನಿಂದಾಗಿ ಉಡುಪಿ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಉಳಿದಿರುವ ಹೊರ ರಾಜ್ಯಗಳ ವಲಸೆ ಕಾಮಿಕರನ್ನು ಈಗಾಗಲೇ ಅವರ ಸ್ವಂತ ಊರುಗಳಿಗೆ ಜಿಲ್ಲಾಡಳತದಿಂದ ಟ್ರೆನ್ /ಬಸ್ಸು ಮೂಲಕ ಈಗಾಗಲೇ ಕಳುಹಿಸಿಕೊಡಲಾಗಿದೆ.

ಇನ್ನೂ ಕೂಡ ಜಿಲ್ಲೆಯಲ್ಲಿ ಹೊರ ರಾಜ್ಯದ ವಲಸೆ ಕಾರ್ಮಿಕರು ಅವರ ಸ್ವಂತ ಊರಿಗೆ ಹೋಗಲು ಬಾಕಿಯಾಗಿದ್ದಲ್ಲಿ , ಅಂತಹ ವಲಸೆ ಕಾರ್ಮಿಕರು ಅವರ ಸ್ವಂತ ರಾಜ್ಯಕ್ಕೆ ಹೋಗಲು ಇಚ್ಛಿಸಿದ್ದಲ್ಲಿ , ದೂರವಾಣಿ ಸಂಖ್ಯೆ (0820-2571500) ಕರೆ ಮಾಡುವಂತೆ ಅಥವಾ ವ್ಯಾಟ್ಸಪ್ ನಂಬರ್ (98808 31516)ಗೆ ದಾಖಲೆಗಳನ್ನು ಕಳುಹಿಸಿ ನೊಂದಾವಣೆ ಮಾಡುವಂತೆ ಜಿಲ್ಲಾಧಿಕಾರಿ ಜಿ ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕುಂಜೂರಿನಲ್ಲಿ 13ನೇ ಶತಮಾನದ ತುಳು ಶಾಸನ

ಕಾಪು(ಜೂ11/2020): ಕಾಪು ತಾಲೂಕು ಎಲ್ಲೂರು ಗ್ರಾಮದ ಕುಂಜೂರು ಶ್ರೀ ದುರ್ಗಾ ದೇವಸ್ಥಾನದ ಮುಂಭಾಗದಲ್ಲಿ ಗೋಪುರದ ಇಕ್ಕೆಲಗಳಲ್ಲಿ ಇದ್ದ ಎರಡು “ತುಳು ಲಿಪಿಯಲ್ಲಿ ಬರೆದ ತುಳುಭಾಷೆಯ” ಶಾಸನಗಳನ್ನು ಇತಿಹಾಸ ಸಂಶೋಧಕ ಬಂಟಕಲ್ಲಿನ‌ ಸುಭಾಸ್ ನಾಯಕ್ ಅವರು ಓದುವ ಪ್ರಯತ್ನ ಮಾಡಿದ್ದಾರೆ .
ಎರಡು ಶಾಸನಗಳಲ್ಲಿ ಒಂದು ಸಂಪೂರ್ಣ ತ್ರುಟಿತಗೊಂಡಿದೆ , ಕಾಮಗಾರಿ ವೇಳೆ ಸಿಮೆಂಟ್ ಬಿದ್ದು ಲಭ್ಯ ಅಕ್ಷರಗಳೂ ಅಸ್ಪಷ್ಟವಾಗಿದ್ದು ,ಓದಲಾಗದ ಸ್ಥಿತಿಯಲ್ಲಿದೆ . ಆದರೆ ಕಾಣುವ ಅಕ್ಷರಗಳನ್ನು ಗಮನಿಸಿದಾಗ ಅದು ತುಳು ಲಿಪಿಯ ಶಾಸನವೆಂದು ನಾಯಕ್ ಹೇಳುತ್ತಾರೆ .
ಇನ್ನೊಂದು ಶಾಸನವು (ದೇವಳದ
ಈಶಾನ್ಯದಲ್ಲಿರುವ) ಬಹುತೇಕ ಅಳಿಸಿಹೋಗಿದ್ದರೂ ಕೆಲವು ಅಕ್ಷರಗಳು ತ್ರುಟಿತಗೊಂಡಿದ್ದರೂ ಓದಲು ಸಾಧ್ಯವಾಗುತ್ತದೆ . ಈ ಕಲ್ಬರಹದ ಮೇಲೆ ಶಿವಲಿಂಗ ಮತ್ತು ಸೂರ್ಯ – ಚಂದ್ರರ ಉಬ್ಬುಶಿಲ್ಪವಿದೆ . ಸ್ವಸ್ತಿಶ್ರೀಃ ಎಂದು‌ ಪ್ರಾರಂಭವಾಗುವ ಬರೆಹವು ‘ಮೀನಸ್ಯ’ ಅಂದರೆ ಮೀನಮಾಸದಲ್ಲಿ . ಮುಂದೆ
‘ವಲ್ಲ ಮಹಾದೇವರ ಕಾಲನ್ಟ್ ‘ ಎಂದು‌‌ ಓದಬಹುದಾಗುತ್ತದೆ .ವಲ್ಲ ಮಹಾದೇವರ ಕಾಲನ್ಟ್ ಎಂದರೆ ವಲ್ಲ ಮಹಾದೇವರ ಕಾಲದಲ್ಲಿ .
‌‌‌‌ ಬಳಿಕ‌‌ ಕೆಳಗಿನ ಸಾಲಿನಲ್ಲಿ‌ ಇರುವ ಅಕ್ಷರಗಳು ಅಸ್ಪಷ್ಟವಾಗಿವೆ. ಪಳಂ ತುಳುವಾಗಿರುವುದರಿಂದ ಶಬ್ದ ಸಂಯೋಜನೆ ಕಷ್ಟಸಾಧ್ಯ . ಅನಂತರದ ಒಂದು ಸಾಲಿನಲ್ಲಿ‌
‘ತುನರ ಪುರತ್ ನಯೆ’ ಮುಂದುವರಿದರೆ ‘ಮುದೆಲಾಯ’ ಮುಂತಾದ ಶಬ್ದಗಳು ಸಿಗುತ್ತವೆ .ಇನ್ನುಳಿದಂತೆ ಅಕ್ಷರಗಳು‌ ಒಂದೋ ಸಿಮೆಂಟ್ ಬಿದ್ದು ಅಥವಾ ಸವೆದು ಹೋಗಿದೆ .
ಆದರೆ ಇದು ತುಳು ಭಾಷೆಯ ತುಳುಲಿಪಿಯಲ್ಲಿರುವ ಶಾಸನವಾದುದರಿಂದ ಮುಂದಿನ ಅಧ್ಯಯನ ಅಗತ್ಯವಿದೆ ಎನ್ನುತ್ತಾರೆ ನಾಯಕ್ .
ಈ ಶಾಸನದಲ್ಲಿ ಉಲ್ಲೇಖವಾಗಿರುವ
‘ವಲ್ಲ ಮಹಾದೇವ’ ನು ಆಳುಪರ ಅರಸ ವಲ್ಲಭ ದೇವನೇ ಆಗಿದ್ದರೆ ಈ ಶಾಸನದ ಕಾಲ ಕ್ರಿ.ಶ. 1230 – 1250.ಅಂದರೆ 13 ನೇ ಶತಮಾನ ಎಂದು ಸುಭಾಸ್ ನಾಯಕ್ ಹೇಳಿದ್ದಾರೆ . ಇವರು ತುಳು ಶಾಸನ ಓದುವ ಬೆರಳೆಣಿಕೆಷ್ಟು ವಿದ್ವಾಂಸರಲ್ಲಿ ಒಬ್ಬರು .ಕ್ಷೇತ್ರಕಾರ್ಯದಲ್ಲಿ ಗುರುಪ್ರಸಾದ ನಾಯಕ್ ಸಹಕರಿಸಿದ್ದರು .ದೇವಸ್ಥಾನದ ಮೆನೇಜರ್ ರಾಘವೇಂದ್ರ ಶೆಟ್ಟಿ ಉಪಸ್ಥಿತರಿದ್ದರು .
ಕುಂಜೂರಿಗೆ ಬಹಳಷ್ಟು ಧಾರ್ಮಿಕ , ಐತಿಹಾಸಿಕ , ಸಾಂಸ್ಕೃತಿಕ ಹಿನ್ನೆಲೆ ಇದೆ.ಈ ಶಾಸನದ ಅಧ್ಯಯನಕ್ಕೆ ಬೇಕಾದ ಲಭ್ಯ ಮಾಹಿತಿಗಳನ್ನು ಸ್ಥಳೀಯರು ಒದಗಿಸಲು ಅಣಿಯಾಗಿದ್ದಾರೆ .

ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿದರೆ ಎಫ್ ಐ ಆರ್: ಜಿಲ್ಲಾಧಿಕಾರಿ ಜಿ ಜಗದೀಶ್

ಉಡುಪಿ(ಜೂನ್10/2020): ಜಿಲ್ಲಾಧಿಕಾರಿಗಳು ಕ್ವಾರಂಟೈನ್ ವ್ಯವಸ್ಥೆಯಲ್ಲಿ, ಹೋಮ್ ಕ್ವಾರೆಂಟೈನ್ ನಿಂದ ಸಾಂಸ್ಥಿಕ ಕ್ವಾರಂಟೈನ್, ಸಾಂಸ್ಥಿಕ ಕ್ವಾರಂಟೈನ್ ನಿಂದ ಹೋಮ್ ಕ್ವಾರೆಂಟೈನ್‌ಗೆ ಬದಲಾವಣೆ ಮಾಡುವ ಅಧಿಕಾರವನ್ನು ಸರ್ಕಾರ ನೀಡಿದ್ದು, ಅದರಂತೆ , ಉಡುಪಿ ಜಿಲ್ಲೆಯಲ್ಲಿ ನೂತನ ಕ್ವಾರಂಟೈನ್ ನಿಯಮಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಗದೀಶ್ ಹೇಳಿದರು
ಅವರು ಬುಧವಾರ ಜಿಲ್ಲಾಪಂಚಾಯತ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ವಾರಂಟೈನ್ ನಿಯಮಗಳನ್ನು ಪಾಲಿಸಲು ಸಿದ್ದತೆ ನಡೆಸಿದ್ದು, ಉಡುಪಿ ಜಿಲ್ಲೆಗೆ ಬೇರೆ ರಾಜ್ಯದಿಂದ ಆಗಮಿಸುವ ಪ್ರಯಾಣಿಕರಿಗೆ 14 ದಿನಗಳ ಕ್ವಾರಂಟೈನ್ ಮಾಡಲಾಗುತ್ತಿದ್ದು, ಹೋಮ್ ಕ್ವಾರಂಟೈನ್ ನಲ್ಲಿರುವವರ ಮನೆಬಾಗಿಲಿಗೆ ಭಿತ್ತಿಪತ್ರವನ್ನು ಅಂಟಿಸಲಾಗುವುದು, ನೆರೆಹೊರೆಯ ಮನೆಗೆ ಮಾಹಿತಿಯನ್ನು ನೀಡಲಾಗುತ್ತದೆ, ಗ್ರಾಮೀಣ ಪ್ರದೇಶದಲ್ಲಿ . ಕ್ವಾರಂಟೈನ್‌ಗೆ ಬರುವವರ ಬಗ್ಗೆ ಗ್ರಾಮ ಪಂಚಾಯತಿ ನಿಗಾ ಇರಿಸಲು ಸೂಚಿಸಿದ್ದು, ಗ್ರಾಮ ಪಂಚಾಯತ್ ನಲ್ಲಿ ಆಯ್ಕೆ ಮಾಡಿರುವ ಸಿಬ್ಬಂದಿಗಳು ಕ್ವಾರಂಟೈನ್‌ನಲ್ಲಿರುವ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ಕ್ವಾರಂಟೈನ್ ವಾಚ್ ಆಪ್ ನಲ್ಲಿ ಬೇಟಿನೀಡಿದ ಮಾಹಿತಿಯನ್ನು ನೀಡಬೇಕು. ಪ್ರತೀ ಗ್ರಾಮದಲ್ಲಿ ಮೇಲ್ವಿಚಾರಣೆಗಾಗಿ 3 ಜನರ ತಂಡವನ್ನು ನೇಮಕ ಮಾಡಲಾಗಿದೆ.ಇವರು ಮನೆಗಳಿಗೆ ಬೇಟಿ ನೀಡಿ ಪ್ರತಿದಿನ ವರದಿಯನ್ನು ನೀಡಬೇಕು , ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿದರೆ ಪ್ಲೆಯಿಂಗ್ ಸ್ಕ್ವಡ್ ತಂಡದವರು ಎಫ್ ಐ ಆರ್ ದಾಖಲೆ ಮಾಡಿ, ಅವರನ್ನು ಸಾಂಸ್ಥಿಕ ಕ್ವಾರಂಟೈನ್ ಗೆ ಕಳುಹಿಸಲಾಗುತ್ತದೆ.
ಪ್ರತೀ ತಾಲೂಕಿನಲ್ಲಿ ತಲಾ ಎರಡು ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳನ್ನು ಮೀಸಲಿರಿಸಿದ್ದು, ಅಗತ್ಯವಿದ್ದವರಿಗೆ ಹೋಟೆಲ್ ಕ್ವಾರಂಟೈನ್ ಗೆ ಸಹ ಅವಕಾಶವಿದೆ ಎಂದು ಡಿಸಿ ಹೇಳಿದರು.
ಕ್ವಾರಂಟೈನ್ ವಾಚ್ ಮೂಲಕ ವ್ಯಕ್ತಿಗಳ ತಾಪಮಾನ ಆರೋಗ್ಯ ಇಲಾಖೆ ಸಿಬ್ಬಂದಿಗಳು ಪಲ್ಸ್ ಆಕ್ಸೂಮೀಟರ್ ರಿಡಿಂಗ್ ಮಾಡಲು ಸೂಚಿಸಲಾಗಿದೆ. ವಿಶೇಷ ವರ್ಗದಕ್ಕೆ ಸೇರಿದ 10 ವರ್ಷದೊಳಗಿನ ಮಕ್ಕಳು,ಗರ್ಭಿಣಿಯರು, 60 ವರ್ಷ ಮೇಲ್ಪಟ್ಟವರಲ್ಲಿ ಆಕ್ಸಿಜನ್ ಕೊರತೆ ಕಂಡುಬಂದಲ್ಲಿ ಆಸ್ಪತ್ರೆಗೆ ದಾಖಲಿಸಲಾಗುವುದು ಎಂದು ಡಿಸಿ ಹೇಳಿದರು.
ಟಾಸ್ಕ್ ಪೊರ್ಸ್ ಕಮಿಟಿಗಳಾಗಿ ಗ್ರಾಮೀಣ ಪ್ರದೇಶದಲ್ಲಿ ಮಾಡಲಾಗಿದೆ. ಹಾಗೆಯೇ ನಗರ ಪ್ರದೇಶಗಳಲ್ಲಿ ವಾರ್ಡ್ ವೈಸ್ ಗಳಾಗಿ ನೇಮಕ ಮಾಡಲಾಗಿದೆ.
ಸಿಲ್ ಡೌನ್ ಆದ ಪ್ರದೇಶದಲ್ಲಿ ಕಂದಾಯ,ಆರೋಗ್ಯ,ಪೋಲಿಸ್ ಅಧಿಕಾರಿಗಳು ಬೇಟಿ ನೀಡಿ ಮಾಹಿತಿಯನ್ನು ನೀಡುತ್ತಾರೆ.
ಹೋಮ್ ಕ್ವಾರಂಟೈನ್ ನಲ್ಲಿ ಸೀಲ್ ಹಾಕಿದವರು ಅನಗತ್ಯವಾಗಿ ತಿರುಗಾಡುವುದು ಕಂಡು ಬಂದಲ್ಲಿ, ಸಾರ್ವಜನಿಕರು 100 ದೂರವಾಣೆ ಸಂಖ್ಯೆಗೆ ಕರೆಮಾಡುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಸೇವಾಸಿಂಧು ಮೂಲಕ ಮಹಾರಾಷ್ಟದಿಂದ ಬರುವವರ ಪಾಸ್ ಗಳನ್ನು ಅನುಮೋದಿಸುವ ಅಧಿಕಾರ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದ್ದು, ಅವರು ನಿಗದಿತ ದಿನಾಂಕ ಆಯ್ಕೆಮಾಡಿ ಬರಬಹುದಾಗಿದೆ, ಜಿಲ್ಲೆಗೆ ಹೊರ ರಾಜ್ಯದಿಂದ ಬರುವವರು, ಜಿಲ್ಲೆಯಲ್ಲಿ ಆರಂಭಿಸಿರುವ 7 ಜಿಲ್ಲಾ ವರದಿ ಕೇಂದ್ರಗಳಲ್ಲಿ ತಮ್ಮ ಸಂಪೂರ್ಣ ವಿವರ ನೀಡುವಂತೆ ಸೂಚಿಸಿದರು.
ಕೆಲವೊಂದು ಕಡೆಗಳಲ್ಲಿ ಶಾಲಾ ಕ್ವಾರಂಟೈನ್ ಕೇಂದ್ರಗಳಾಗಿ ಮಾಡಲಾಗಿದ್ದು ವಿದ್ಯಾರ್ಥಿಗಳು ಆತಂಕ ಪಡುವ ಅಗತ್ಯವಿಲ್ಲ.ಶಾಲೆ ಕೊಠಡಿಗಳನ್ನು ರೋಗ ನಿರೋಧಿಕರಿಸಿ ಸ್ವಚ್ಚಗೊಳಿಸಲಾಗಿದೆ. ಪರೀಕ್ಷಗೆ 3 ದಿನಗಳ ಮುನ್ನ ಹಾಗೂ ಪ್ರತೀ ಪರೀಕ್ಷೆಯ ನಂತರ ಮತ್ತೊಂದು ಪರೀಕ್ಷೆಗೆ ಕೊಠಡಿಯನ್ನು ರೋಗ ನಿರೋಧಿಕರಿಸಿ ಸ್ವಚ್ಚಗೊಳಿಸಲಾಗುವುದು, ಪೋಷಕರು ಮತ್ತು ವಿದ್ಯಾರ್ಥಿಗಳು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಅವರ ಸುರಕ್ಷತೆಗೆ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಎಸ್‌ಪಿ ವಿಷ್ಣುವರ್ಧನ್ ಉಪಸ್ಥಿತರಿದ್ದರು.