September 23, 2020

ಉಳ್ಳಾಲ

ಮಾಗಣ್ತಡಿ ಕಿಶೋರ್ ಕುಮಾರ್ ಶೆಟ್ಟಿ ತೇವುನಾಡು ಗುತ್ತು ನಿಧನ

ಉಳ್ಳಾಲ(ಸೆ12/2020):ತೇವುನಾಡುಗುತ್ತು ದಿ. ಪಟೇಲ್ ಕಿಂಞಣ್ಣ ಶೆಟ್ಟಿ ಅವರ ಪುತ್ರ ಮಾಗಣ್ತಡಿ ಕಿಶೋರ್ ಕುಮಾರ್ ಶೆಟ್ಟಿ ತೇವುನಾಡು ಗುತ್ತು (63) ಸೆ. 12ರಂದು ಶನಿವಾರ ನಿಧನ ಹೊಂದಿದರು.
ಮೃತರು ಪತ್ನಿ ಮಂಗಳೂರು ವಿಶ್ವವಿದ್ಯಾನಿಲಯದ ಸ್ಪೆಷಲ್ ಆಫಿಸರ್ ಪ್ರೊ| ಅನೂಸೂಯ ಶೆಟ್ಟಿ ಮತ್ತು ಪುತ್ರನನ್ನು ಅಗಲಿದ್ದಾರೆ.
ಉದ್ಯಮಿಯಾಗಿದ್ದ ಅವರು ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಮೂಲಕ ಕೊಡುಗೈದಾನಿಯಾಗಿದ್ದರು. ಲಯನ್ಸ್ ಕ್ಲಬ್ ಮಂಗಳಗಂಗೋತ್ರಿ ಇದರ ಅಧ್ಯಕ್ಷರಾಗಿ, ಮಂಜನಾಡಿ ಶ್ರೀ ವಿಷ್ಣುಮೂರ್ತಿ ಜನಾರ್ಧನ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ, ಶ್ರೀ ಮಲರಾಯ ದೈವಸ್ಥಾನ ಮಂಜನಾಡಿ ಇದರ ಆಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದರು. ವಿದ್ಯಾರ್ಥಿ ದೆಸೆಯಿಂದಲೇ ನಾಯಕತ್ವ ಗುಣ ಬೆಳೆಸಿಕೊಂಡಿದ್ದ ಅವರು ಸರಕಾರಿ ಕಾಲೇಜು ಮಂಗಳೂರು (ಈಗಿನ ವಿಶ್ವವಿದ್ಯಾನಿಲಯ ಕಾಲೇಜು) ಇದರ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದರು. ಬಂಟರ ಸಂಘ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದರು.

“ವಿಶ್ವ ಸಾಕ್ಷರತಾ ದಿನಾಚರಣೆ” ಪ್ರಯುಕ್ತ “ಸಂವಾದ-ಸಂಕಲ್ಪ”

ಉಳ್ಳಾಲ(8ಸೆ/2020): ಮಂಗಳೂರು ವಿಶ್ವವಿದ್ಯಾಲಯ ಈಗಾಗಲೇ ಐದು ಗ್ರಾಮಗಳನ್ನು ದತ್ತು ಸ್ವೀಕರಿಸಿದ್ದು, ವಿದ್ಯಾರ್ಥಿಗಳ ನಡೆ ಹಳ್ಳಿಗಳ ಕಡೆ ಎನ್ನುವ ಯೋಜನೆ ಹಮ್ಮಿಕೊಂಡಿದೆ, ಅಲ್ಲದೆ ಹತ್ತು ಸರ್ಕಾರಿ ಶಾಲೆಗಳನ್ನು ದತ್ತು ಸ್ವೀಕರಿಸುವ ಯೋಜನೆ ರೂಪಿಸಿ ವಿವಿಯಲ್ಲಿರುವ ಕಂಪ್ಯೂಟರ್ ಹಾಗೂ ಇತರ ಶೈಕ್ಷಣಿಕ ಪರಿಕರಗಳನ್ನು ನೀಡುವ ಯೋಚನೆ ಇದೆ ಎಂದು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅಭಿಪ್ರಾಯಪಟ್ಟರು. ‌
ಮಾದರಿ ಗ್ರಾಮ ಅಭಿಯಾನ ಪ್ರಯುಕ್ತ ಜನಶಿಕ್ಷಣ ಟ್ರಸ್ಟ್, ಬಾಳೆಪುಣಿ ಗ್ರಾಮ ಪಂಚಾಯಿತಿ, ಸೆಲ್ಕೋ ಫೌಂಡೇಶನ್, ಅಪ್ನಾದೇಶ್, ಪ್ರಜ್ಞಾ ವೃತ್ತಿಪರ ತರಬೇತಿ ಕೇಂದ್ರ, ಗ್ರಾಮ ವಿಕಾಸ ಕೇಂದ್ರ, ಚಿತ್ತಾರ ಬಳಗ, ಸುಗ್ರಾಮ ವೇದಿಕೆಯ ಸಹಯೋಗದಲ್ಲಿ ‘ವಿಶ್ವ ಸಾಕ್ಷರತಾ ದಿನಾಚರಣೆ’ ಪ್ರಯುಕ್ತ ಮುಡಿಪು ಜನಶಿಕ್ಷಣ ಕೇಂದ್ರದಲ್ಲಿ ನಡೆದ ‘ಸಂವಾದ-ಸಂಕಲ್ಪ’ಕ್ಕೆ ಚಾಲನೆ ನೀಡಿ ಮಾತನಾಡಿದರು.
ಸುಸ್ಥಿರ ಅಭಿವೃದ್ಧಿಗೆ ಶಿಕ್ಷಣ ಮಖ್ಯವಾದರೂ ಬದುಕುವ ಶಿಕ್ಷಣ ಅಗತ್ಯ. ಅಭಿವೃದ್ಧಿ ಎನ್ನುವುದು ಸರ್ಕಾರ, ಇಂತಹ ವ್ಯಕ್ತಿಗಳಿಂದಲೇ ಆಗಬೇಕು ಎಂದು ಬಯಸದೆ, ನಿರೀಕ್ಷಿಸದೆ ಸರ್ಕಾರೇತರ ಸಂಸ್ಥೆಗಳೂ ಗ್ರಾಮದ ಅಭಿವೃದ್ಧಿಗೆ ಕೈಜೋಡಿಸಬೇಕಿದೆ. ನಾನು ಎನ್ನುವ ಸ್ವಾರ್ಥವನ್ನು ಬಿಟ್ಟು ನಮ್ಮದು ಎನ್ನುವ ಭಾವನೆ ಹೊಂದಿದಾಗ ಅಭಿವೃದ್ಧಿ ಸಾಧ್ಯ. ಕರೊನಾ ಸಂಪೂರ್ಣ ನಿರ್ಮೂಲನೆ ಆದ ಬಳಿಕ ಶಿಕ್ಷಕರನ್ನೂ ಹಳ್ಳಿಗಳಿಗೆ ಕರೆದೊಯ್ದು ಜನರೊಂದಿಗೆ ಬೆರೆತು ಸಮಸ್ಯೆಗಳನ್ನು ತಿಳಿಯಲಾಗುವುದು ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಮಾತನಾಡಿ, ಓರ್ವ ವ್ಯಕ್ತಿ ಅಕ್ಷರ‌ ಕಲಿತ ಕೂಡಲೇ ವಿದ್ಯಾವಂತ ಆಗಲ್ಲ, ನಾವು ಕಲಿತ ಅಕ್ಷರವನ್ನು ಸಮಾಜಕ್ಕೆ ಹೇಗೆ ಹಂಚುತ್ತೇವೆ ಎನ್ನುವುದು ಮುಖ್ಯ ಆಗಿರುವುದರಿಂದ ಅಕ್ಷರದೊಂದಿಗೆ ಜ್ಞಾನಾರ್ಜನೆ‌ ಪಡೆಯುವುದು ಮುಖ್ಯ ಎಂದು ಹೇಳಿದರು.
ಉದ್ಯಮಿ ರಮೇಶ್ ಶೇಣವ, ಬಾಳೆಪುಣಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುನಿಲ್, ಮಾಜಿ ಸದಸ್ಯರಾದ ಜನಾರ್ದನ ಕುಲಾಲ್, ಯಶೋಧಾ, ಸೆಲ್ಕೋ ಪ್ರತಿನಿಧಿಗಳಾದ ಚೇತನ್, ರವೀಣಾ ಬಿ.ಕುಲಾಲ್‌ ಬೋಳಿಯಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಪ್ರತಿನಿಧಿ ಸೋನಿಯಾ, ಮಣಿಪಾಲ್ ಸಮುದಾಯ ರೇಡಿಯೋ ಮುಖ್ಯಸ್ಥ ಶ್ಯಾಮ್‌ ಭಟ್ ಇನ್ನಿತರರು ಉಪಸ್ಥಿತರಿದ್ದರು.
ಜಿಲ್ಲಾ ಸ್ವಚ್ಚತಾ ರಾಯಭಾರಿ ಶೀನ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ ಕಾರ್ಯಕ್ರಮ ನಿರೂಪಿಸಿದರು.

ಕೊಣಾಜೆ: ಬೈಕ್ ಅಪಘಾತ ಆಗಿ ಬಾಲಕ ಮೃತ್ಯು

ಉಳ್ಳಾಲ(31ಆಗಷ್ಟ್/2020): ಬೈಕ್ ಅಪಘಾತ ಆಗಿ ಬಾಲಕ ಮೃತ್ಯು. ಕೊಣಾಜೆ ಠಾಣಾ ವ್ಯಾಪ್ತಿಯ ಪಜೀರು ಬಳಿ ಬೈಕ್ ಅಪಘಾತದಲ್ಲಿ ಬಾಲಕನೊರ್ವ ಮೃತಪಟ್ಟ ಘಟನೆ ಭಾನುವಾರ ಸಂಭವಿಸಿದೆ.
ಮೃತನನ್ನು ಪಜೀರು ಪೆರ್ನಂಪ್ಪಾಡಿಯ ಬಶೀರ್ ಅವರ ಪುತ್ರ ಶಾಲಿಕ್ (15) ಎಂದು ಗುರುತಿಸಲಾಗಿದೆ. ಶಾಲಿಕ್ ತನ್ನ ತಂದೆಯೊಂದಿಗೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಬೈಕ್ ಸ್ಕಿಡ್ ಆಗಿ ಮಗುಚಿ ಬಿದ್ದಿದೆ. ಈ ಸಂದರ್ಭದಲ್ಲಿ ತಲೆಗೆ ಗಂಭೀರ ಗಾಯವಾಗಿ ಬಾಲಕ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಈ ಬಗ್ಗೆ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ: ಚಾಲಕ್ ಸಾಥ್’ ಯೋಜನೆಯಿಂದ ಆರ್ಥಿಕ ನೆರವು

ತೊಕ್ಕೊಟ್ಟು(22ಆ/2020): ಚಾಲಕ್ ಸಾಥ್ ಯೋಜನೆಯಡಿ ಆರ್ಥಿಕ ನೆರವು ವಿತರಣೆಗೆ ಚಾಲನೆ
ಸಮಾಜದಲ್ಲಿ ಚಾಲಕ ವರ್ಗ ಶ್ರಮ ಜೀವಿಗಳಾಗಿದ್ದು, ಸಾರ್ವಜನಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ, ಲಾಕ್ ಡೌನ್ ಸಂದರ್ಭದಲ್ಲಿ ಸರ್ಕಾರ ಕೇವಲ 28 ಸಾವಿರ ಚಾಲಕರಿಗೆ ಹೆಸರಿಗಾಗಿ ಹಣ ಜಮಾಯಿಸಿ ಇಬ್ಬಗೆ ನೀತಿ ತೋರಿದೆ ಎಂದು ಫೆಡರೇಶನ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿವಾಕರ್ ಅಭಿಪ್ರಾಯಪಟ್ಟರು.
ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ಮಂಗಳೂರು ಕ್ಷೇತ್ರ ಸಮಿತಿಯಿಂದ ‘ಚಾಲಕ್ ಸಾಥ್’ ಯೋಜನೆಯಡಿ ಅಟೋರಿಕ್ಷಾ ಚಾಲಕರಿಗೆ ಆರ್ಥಿಕ ನೆರವು ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಲಾಕ್ ಡೌನ್ ಸಂದರ್ಭದಲ್ಲಿ ಸರ್ಕಾರ ಮಾತ್ರವಲ್ಲದೆ ಯಾವುದೇ ಬ್ಯಾಂಕುಗಳಲ್ಲೂ ಚಾಲಕ ವರ್ಗಕ್ಕೆ ಸಾಲ ನೀಡಿಲ್ಲ, ಇಂತಹ ಸಂದರ್ಭದಲ್ಲಿ ವೆಲ್ಫೇರ್ ಪಕ್ಷ ಹಾಗೂ ಕೆಲವು ಸಂಘಟನೆಗಳು ನೆರವು ನೀಡಿರುವುದು ಶ್ಲಾಘನೀಯ ಎಂದರು.
ವೆಲ್ಫೇರ್ ಪಾರ್ಟಿ ಆಫ್ ಜಿಲ್ಲಾ ಕಾರ್ಯದರ್ಶಿ ಮುತ್ತಲಿಬ್ ಮಾತನಾಡಿ, ಚಾಲಕ್ ಸಾಥ್ ಯೋಜನೆಯಡಿ ಮಂಗಳೂರು ಕ್ಷೇತ್ರದಿಂದ 200 ಅರ್ಜಿಗಳ ನಿರೀಕ್ಷೆಯಿತ್ತಾದರೂ 600 ಅರ್ಜಿಗಳು ಬಂದಿವೆ. ರಾಜಕೀಯ ನಾಯಕರು ಗುತ್ತಿಗೆದಾರರಿಂದಲೋ ಅಥವಾ ಇನ್ನಿತರ ಮೂಲಗಳಿಂದ ಹಣ ಪಡೆದು ಸಹಾಯ ಮಾಡುತ್ತಿದೆಯೇ ಹೊರತು ವೈಯಕ್ತಿಕವಾಗಿ ಸಹಾಯ ಮಾಡುವುದಿಲ್ಲ‌‌‌. ಆದರೆ ವೆಲ್ಫೇರ್ ಪಕ್ಷದ ಮುಖಂಡರು ವೈಯಕ್ತಿಕ ಹಾಗೂ ಅಭಿಮಾನಿಗಳ ಸಹಕಾರದಿಂದ ಜನರಿಗೆ ಸಹಾಯ ಮಾಡುತ್ತಿದೆ ಎಂದು ತಿಳಿಸಿದರು. ‌
ವೆಲ್ಫೇರ್ ಪಕ್ಷದ ಮಂಗಳೂರು ಕ್ಷೇತ್ರಾಧ್ಯಕ್ಷ ಹನೀಫ್ ತಲಪಾಡಿ ಮಾತನಾಡಿ, ಇಂದು ರಾಜಕೀಯದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ, ಲಾಕ್ ಡೌನ್ ಸಂದರ್ಭ ಜನಪ್ರತಿನಿಧಿಗಳು ತಮಗೆ ಕಾಮಗಾರಿಗಳಲ್ಲಿ ಬಂದ ಕಮೀಷನ್ ಹಣ ಹಂಚುತ್ತಿದ್ದರೂ ಅಟೋ ಚಾಲಕರು ಹಾಗೂ ಜನಸಾಮಾನ್ಯರು ಸಂಕಷ್ಟ ಅನುಭವಿಸುತ್ತಿರಲಿಲ್ಲ ಎಂದರು.
ಫಾರೂಕ್ ಅಲೇಕಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಲೀಲ್ ಮುಕಚ್ಚೇರಿ ಕಾರ್ಯಕ್ರಮ ನಿರೂಪಿಸಿದರು. ‌

ಕಲ್ಲಾಪು ಡೆವಲಪ್ ಮೆಂಟ್ ಗ್ರೂಪ್ ವತಿಯಿಂದ ಆಯುಷ್ಮಾನ್ ನೋಂದಣಿ

ಉಳ್ಳಾಲ(21ಆ/2020): ಆಯುಷ್ಮಾನ್ ಕಾರ್ಡು ಆರೋಗ್ಯದ ಸೌಲಭ್ಯಗಳನ್ನು ಪಡೆಯಲು ಉಪಕಾರಿ. ಕಾರ್ಡು ಪಡೆದುಕೊಂಡವರು ಉಪಯೋಗವನ್ನು ಇತರರಿಗೆ ತಿಳಿಸುವ ಕಾರ್ಯವಾಗಲಿ‌ .ನಾಗರಿಕರಿಗೆ ಸಹಾಯಹಸ್ತವಾಗಿ ಮಾಡಿರುವ ಕಾರ್ಯ ಶ್ಲಾಘನೀಯ ಎಂದು ನಗರಸಭೆ ಪೌರಾಯುಕ್ತ ರಾಯಪ್ಪ ಅಭಿಪ್ರಾಯಪಟ್ಟರು.
ಕಲ್ಲಾಪು ಡೆವಲಪ್ ಮೆಂಟ್ ಗ್ರೂಪ್ ಇದರ ವತಿಯಿಂದ ಉಚಿತ ಆಯುಷ್ಮಾನ್ ಕಾಡ್ ೯ ನೋಂದಣಿ ಮತ್ತು ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ಸಂದರ್ಭ ನಗರಸಭೆ ಸದಸ್ಯ ಮುಷ್ತಾಕ್ ಪಟ್ಲ, ಶ್ರೀ ಕೊರಗ ತನಿಯ ಸೇವಾ ಟ್ರಸ್ಟ್ ಸೇವಂತಿಗುಡ್ಡೆ ಅಧ್ಯಕ್ಷ ಮೋಹನ್ ಸಾಲ್ಯಾನ್,
ಹಿರಿಯ ಅಭಿಯಂತರ ತುಳಸೀದಾಸ್ , ಉದ್ಯಮಿ ಶರೀಫ್ ಸೇಫ್ ವೇ, ಸಾಯಿ ಪರಿವಾರ್ ಸಂಚಾಲಕ ಪುರುಷೋತ್ತಮ್ ಕಲ್ಲಾಪು , ನವಾಝ್ ಉಪಸ್ಥಿತರಿದ್ದರು.

ಕೊಣಾಜೆಯಲ್ಲಿ ಮನೆ‌ ಕುಸಿದು ತೀವ್ರ ಹಾನಿ ಮಹಿಳೆಗೆ ಗಾಯ

ಕೊಣಾಜೆ(21ಆ/2020): ಕೊಣಾಜೆ ಗ್ರಾಮದ ನರೇಕಳ ಎಂಬಲ್ಲಿ ಮಳೆಗೆ ಮನೆ ಕುಸಿದು ತೀವ್ರ ಹಾನಿಯಾದ ಘಟನೆ ಗುರುವಾರ ಮುಂಜಾನೆ ನಡೆದಿದೆ.
ಗುರುವಾರ ಮುಂಜಾನೆ 6 ಗಂಟೆಯ ವೇಳೆಗೆ ತೀವ್ರವಾದ ಮಳೆ ಸುರಿಯಲಾರಂಭಿಸಿದ್ದು ಈ ಸಂದರ್ಭದಲ್ಲಿ ನರೇಕಳದ ಕೊರಗಪ್ಪ ಮೂಲ್ಯ ಎಂಬವರ ಮನೆಯ‌ ಮಾಡು ಏಕಾಏಕಿ ಕುಸಿದು‌ ಬಿದ್ದಿದೆ.
ಘಟನೆ ನಡೆದಾಗ ಮನೆಯಲಿ ಸುಮಾರು ಎಂಟು ಮಂದಿ ಇದ್ದು ಮನೆಯಿಂದ ಹೊರ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದೇ ಮನೆಯ ದೇವಕಿ ಎಂಬ ಮಹಿಳೆಗೆ ಕಾಲಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಮನೆಯ ಮಾಡು ಕುಸಿತದಿಂದ ಮನೆಯೊಳಗಿರುವ ವಸ್ತುಗಳಿಗೂ ಹಾನಿ ಸಂಭವಿಸಿದೆ. ಘಟನಾ ಸ್ಥಳಕ್ಕೆ ಗ್ರಾಮಕರಣಿಕ ಪ್ರಸಾದ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

ಕಾಂಗ್ರೆಸ್ ಶಾಸಕರು ಕಾಂಗ್ರೆಸ್ ಆಡಳಿತವಿರುವ ಪಂಚಾಯತುಗಳಿಗೆ ಮಾತ್ರ ಶಾಸಕರೇ:ಸತೀಶ್ ಕುಂಪಲ

ಉಳ್ಳಾಲ(2ಆಗೋಸ್ತ/2020): ಇತ್ತೀಚೆಗೆ ಉಳ್ಳಾಲ ಪರಿಸರದ ಸ್ಥಳೀಯ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ.ಖಾದರ್‌ರವರು ವೀಕ್ಷಕರು ಉಚ್ಚಿಲ ಸೋಮೇಶ್ವರ ಪರಿಸರದಲ್ಲಿರುವ ಅಕ್ರಮ ರೆಸಾರ್ಟ್ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಅಕ್ರಮ ರೆಸಾರ್ಟ್ ಬಗ್ಗೆ ತಮಗೆ ತಿಳಿದಿಲ್ಲ ಹಾಗೂ ರೆಸಾರ್ಟ್ ಪ್ರಾರಂಭವಾಗಲು ಸ್ಥಳೀಯ ಗ್ರಾಮ ಪಂಚಾಯತ್ ಆಡಳಿತ, ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್‌ಗಳ ಜನಪ್ರತಿನಿಧಿಗಳು ಕಾರಣ ಎಂಬಂತೆ ಉತ್ತರ ನೀಡಿರುವ ಹಾಗೂ ಕಡಲ್ಕೊರೆತದ ಬಗ್ಗೆ ಅಸಮರ್ಪಕವಾಗಿ ಉತ್ತರಿಸಿದ ಶಾಸಕರ ಮಾತುಗಳಿಗೆ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಬಿಜೆಪಿ ದ.ಕ. ಜಿಲ್ಲಾ ಸಮಿತಿ ಕಾರ್ಯದರ್ಶಿಯಾಗಿರುವ ಸತೀಶ್ ಕುಂಪಲ ಖಂಡನೆ ವ್ಯಕ್ತಪಡಿಸಿದ್ದಾರೆ.

ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಸತತ ನಾಲ್ಕು ಬಾರಿ ತಾವು ಶಾಸಕರಾಗಿದ್ದೀರಿ ಮೂರು ಬಾರಿ ಸಚಿವರೂ ಆಗಿದ್ದವರು. ಅದಕ್ಕಿಂತಲೂ ಮೊದಲು ತಮ್ಮ ತಂದೆಯವರು ನಾಲ್ಕು ಬಾರಿ ಸದಸ್ಯರಾಗಿದ್ದರು ಹಾಗಿದ್ದರೂ ನಿಮ್ಮ ಕ್ಷೇತ್ರದಲ್ಲಿ ನಡೆಯುವ ಅಕ್ರಮ ರೆಸಾರ್ಟ್ ಗಳ ಬಗ್ಗೆ ತಮಗೆ ಯಾವುದೇ ಜವಾಬ್ದಾರಿ ಇಲ್ಲವೆಂಬಂತೆ ಉತ್ತರಿಸುವುದು ಎಷ್ಟು ಸರಿ, ಅಧಿಕಾರದಲ್ಲಿರುವ ಸಂದರ್ಭ ಸ್ಥಳೀಯ ಗ್ರಾಮಪಂಚಾಯತ್ ಅಥವಾ ಜನಪ್ರತಿನಿಧಿಗಳನ್ನ ವಿಶ್ವಾಸಕ್ಕೆ ತೆಗೆದುಕೊಳ್ಳದೆ ತಮ್ಮಷ್ಟಕ್ಕೆ ತಾವು ಸ್ವಪಕ್ಷ ಪ್ರೇಮಿಯಾಗಿ ತಮ್ಮ ಪಕ್ಷಕ್ಕೆ ಮತ ಹಾಕುವ ಕ್ಷೇತ್ರಕ್ಕೆ ಮಾತ್ರ ಕೆಲಸ ಕಾರ್ಯಗಳನ್ನು ಮಂಜೂರು ಮಾಡಿಸುವ ಖಾದರ್‌ರವರು ಬಿಜೆಪಿ ಪಕ್ಷದ ಜನಪ್ರತಿನಿಧಿಗಳನ್ನು ಪ್ರಶ್ನಿಸುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಅಕ್ರಮ ರೆಸಾರ್ಟ್‌ಗಳ ವಿಷಯದಲ್ಲಿ ನೀವು ತಿಳಿಸಿರುವಂತೆ ಸ್ಥಳೀಯಾಡಳಿತಗಳಿಗಿಂತಲೂ ಹೆಚ್ಚಿನ ಜವಾಬ್ದಾರಿ ಶಾಸಕರಾಗಿ ತಮಗಿದೆ. ತಮಗೆ ಸಾಧ್ಯವಿದ್ದಲ್ಲಿ ಅಲ್ಲಿ ನಡೆಯುತ್ತಿದೆ ಎನ್ನಲಾದ ಅಕ್ರಮ ರೆಸಾರ್ಟ್‌ಗಳನ್ನು ನಿಲ್ಲಿಸುವಂತಹ ಕಾರ್ಯ ಮಾಡಿ ಇಂತಹ ಕಾರ್ಯ ನೀವು ಮಾಡಿದರೆ ಬಿಜೆಪಿ ಪಕ್ಷದ ಯಾವ ನಾಯಕರೂ ತಮ್ಮನ್ನು ತಡೆಯುವ ಕೆಲಸ ಮಾಡುವುದಿಲ್ಲ ಎಂದು ಅವರು ಶಾಸಕರಿಗೆ ತಿಳಿಸಿದರು.

ಕಡಲ್ಕೊರೆತ ಪ್ರದೇಶದ ಬಗ್ಗೆ ಇತ್ತೀಚೆಗೆ ಬೆಂಗಳೂರಿನಲ್ಲಿ ಅಥವಾ ಸ್ಥಳೀಯವಾಗಿ ನಡೆದ ಸಭೆಗಳಿಗೆ ಆಹ್ವಾನವಿದ್ದರೂ ಭಾಗವಹಿಸದ ಶಾಸಕರು ಇಂದು ವಾಹಿನಿಯ ಮೂಲಕ ಉಸ್ತುವಾರಿ ಸಚಿವರು ಕರೆಯಲಿಲ್ಲ ಎಂಬಂತೆ ಆಪಾದಿಸುವುದು ಶಾಸಕರಾಗಿ ತಮಗೆ ಶೋಭೆ ತರುವಂತಹದ್ದಲ್ಲ. ಕಡಲ್ಕೊರೆತದ ಪರಿಹಾರ ಕಾರ್ಯಗಳಿಗೆ ಸಂಬಂಧಿಸಿದಂತೆ ಸನ್ಮಾನ್ಯ ಜಗದೀಶ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಎಡಿಬಿ ವತಿಯಿಂದ 204 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿರುವುದನ್ನು ತಾವು ಮರೆತಿರಬಹುದು ಹೊರತು ಜನರು ಮರೆಯಲ್ಲ. ಇಷ್ಟು ವರ್ಷಗಳ ಕಾಲ ಸ್ಥಳೀಯ ಶಾಸಕರಾಗಿ ಸಚಿವರಾಗಿ ಅದೂ ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಉಚ್ಚಿಲ ಸೋಮೇಶ್ವರ ಪ್ರದೇಶದಲ್ಲಿ ನಡೆಯುವ ಕಡಲ್ಕೊರೆತಕ್ಕೆ ವೈಜ್ಞಾನಿಕವಾಗಿ ಶಾಶ್ವತ ಪರಿಹಾರ ಮಾಡಲು ಸಾಧ್ಯವಾಗದ ತಾವುಗಳು ಇವಾಗ ಇನ್ನೊಬ್ಬರ ಮೇಲೆ ಗೂಬೆ ಕೂರಿಸುವಂತಹ ಕೆಲಸ ಮಾಡುತ್ತಿರುವುದು ತಮ್ಮ ಕೀಳು ಮಟ್ಟದ ರಾಜಕೀಯಕ್ಕೆ ಸಾಕ್ಷಿಯಾಗಿದೆ. ಉಚ್ಚಿಲ ಪರಿಸರದಲ್ಲಿ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸಂಸದ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ರವರು ಉಚ್ಚಿಲ ಪರಿಸರದಲ್ಲಿ ತಾತ್ಕಾಲಿಕವಾಗಿ ಪರಿಹಾರ ಕಾರ್ಯವನ್ನು ನಡೆಸಿರುವುದನ್ನು ನೀವು ಕಾಣಬಹುದು. ನೀವು ಸಮುದ್ರಕೊರೆತ ಇರುವಂತಹ ಉಲ್ಲಾಳ ಕೋಡಿ, ಕೋಟೆಪುರಕ್ಕೆ ಮಾತ್ರ ಶಾಸಕರಾಗಿರುವಂತೆ ವರ್ತಿಸುವುದನ್ನು ಬಿಟ್ಟು ಉಚ್ವಿಲ ಸೋಮೇಶ್ವರ ಕೂಡ ತಮ್ಮ ವಿಧಾನಸಭಾ ವ್ಯಾಪ್ತಿಯಲ್ಲಿಯೇ ಇರುವುದು ಎಂಬುದನ್ನು ನೆನಪಿಸಿಕೊಳ್ಳಬೇಕು ಇದನ್ನು ಬಿಟ್ಟು ಜನರು ಪ್ರಶ್ನೆ ಕೇಳುವಾಗ ಸಮರ್ಪಕವಾಗಿ ಉತ್ತರಿಸಲು ಸಾಧ್ಯವಾಗದೆ ಇನ್ನೊಬ್ಬರ ಮೇಲೆ ಅಪಾದನೆ ಮಾಡುವುದನ್ನು ಬಿಟ್ಟು ಪಕ್ಷಾತೀತವಾಗಿ ಕೆಲಸ ಕಾರ್ಯಗಳನ್ನು ಕ್ಷೇತ್ರದಲ್ಲಿ ನಡೆಸಿ ತಮ್ಮ ಕಾರ್ಯಗಳ ಮೂಲಕ ಜನರಿಗೆ ಉತ್ತರ ನೀಡಲಿ ಎಂದು ಶಾಸಕ ಯು.ಟಿ.ಖಾದರ್‌ರವರ ಆರೋಪಕ್ಕೆ ಸತೀಶ್ ಕುಂಪಲರವರು ಉತ್ತರ ನೀಡಿದರು.

ಉಳ್ಳಾಲ ಬಂಡಿಕೊಟ್ಯದ ಯುವಕ ಅಪಘಾತದಲ್ಲಿ ಬಲಿ

ಉಳ್ಳಾಲ(11ಜು/2020): ನೇತ್ರಾವತಿ ಸೇತುವೆಯಲ್ಲಿ ನಡೆದ ಅಪಘಾತದಲ್ಲಿ ಯುವಕ ಬಲಿ.
ಸ್ಕೂಟರ್ ಗೆ ಕಾರು ಢಿಕ್ಕಿ ಹೊಡೆದು ಸಿಮೆಂಟ್ ಲಾರಿಯಡಿಗೆ ಸಿಲುಕಿ ಸ್ಕೂಟರ್ ಚಾಲಕ ಸಾವು ಸಂಭವಿಸಿದೆ.
ಹಿಟ್ & ರನ್ ಮಾಡಿದ ಕಾರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಳ್ಳಾಲ ಬಂಡಿಕೊಟ್ಯ ನಿವಾಸಿ ಉಬೇದ್(28) ದುರ್ಮರಣ.
ಜುಲೈ 23 ರಂದು ಉಬೇದ್ ಗೆ ಮದುವೆ ನಿಶ್ಚಯವಾಗಿತ್ತು.ಸಹಸವಾರ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ..ಹಿಟ್ & ರನ್ ಮಾಡಿದ ಸೋಮೇಶ್ವರ ಪುರಸಭಾ ವ್ಯವಸ್ಥಾಪಕ ಕೃಷ್ಣ ಸೇರಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಂಗಳೂರು ದಕ್ಷಿಣ ಸಂಚಾರಿ ಠಾಣೆಯಲ್ಲಿ ಪ್ರಕರಣ.

ಸರ್ವಸ್ವವನ್ನೂ ಯಕ್ಷಗಾನ ಕಲೆಗೆ ಅರ್ಪಿಸಿದ ಮಹಾನ್ ಪುರುಷ ಹೊಸ್ತೋಟ: ಡಾ.ಎಂ.ಪ್ರಭಾಕರ ಜೋಶಿ

ಕೊಣಾಜೆ(11ಜು/2020): ಹೊಸ್ತೋಟ ಮಂಜುನಾಥ ಭಾಗವತರು ಯಕ್ಷಗಾನದ ಪ್ರಾತಿನಿಧಿಕ, ಅಭಯ ಚೈತನ್ಯ,ಅಸಾಧಾರಣ ಚೇತನರಾಗಿದ್ದಾರೆ ಮಾತ್ರವಲ್ಲದೆ ಸರ್ವಸ್ವವನ್ನೂ ಯಕ್ಷಗಾನ ಕಲೆಗೆ ಅರ್ಪಿಸಿದ ಮಹಾನ್ ಪುರುಷರಾಗಿದ್ದಾರೆ ಎಂದು ವಿದ್ವಾಂಸ ಪ್ರಭಾಕರ ಜೋಶಿಯವರು ಹೇಳಿದರು.
ಅವರು ಮಂಗಳೂರು‌ ವಿಶ್ವವಿದ್ಯಾಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಇದರ ಆಶ್ರಯದಲ್ಲಿ ಶುಕ್ರವಾರ ಜಾಲತಾಣದಲ್ಲಿ‌ ನೇರಪ್ರಸಾರದ ಮೂಲಕ ನಡೆದ ಹೊಸ್ತೋಟ ಸ್ಮೃತಿ ಸಂಜೆ ಹಾಗೂ ತಾಳಮದ್ದಳೆ ಕಾರ್ಯಕ್ರಮದಲ್ಲಿ ಹೊಸ್ತೋಟ ಸ್ಮ್ರತಿ ಸ್ಮರಣೆಯನ್ನು ನೆರವೇರಿಸಿ ಮಾತನಾಡಿದರು.
ಹೊಸ್ತೋಟರು ಯಕ್ಷಗಾನದಲ್ಲಿ ಭಗವತ್ತ್ ತತ್ವ ತಿಳಿದವರಾಗಿದ್ದಾರೆ.ಎಲ್ಲ ವಿಭಾಗದ ಮೊದಲ ದರ್ಜೆಯ ಪಂಡಿತರಾಗಿ ಗುರುತಿಸಿಕೊಳ್ಳುವ ಅವರು ಸಮರ್ಪಿತ, ವ್ಯವಸ್ಥಿತ, ನಿರ್ಭೀತ, ವಿರಳ ವ್ಯಕ್ತಿಯಾಗಿದ್ದಾರೆ. ಅವರ ಕಲಾ ಚೈತನ್ಯ ಯಕ್ಷಗಾನದ ಕ್ಷೇತ್ರದಲ್ಲಿ‌ಇನ್ನಷ್ಟು ಉದ್ಭವಿಸಲಿ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದಂತಹ ಮಂಗಳೂರು ವಿವಿ ಕುಲಪತಿ ಪ್ರೊ. ಪಿ.ಎಸ್.ಯಡಪಡಿತ್ತಾಯ ಅವರು ಮಾತನಾಡಿ, ಹೊಸ್ತೋಟ ಮಂಜುನಾಥ ಭಾಗವತರುಯಕ್ಷಗಾನ ಕ್ಷೇತ್ರದಲ್ಲಿ ಮಾಡಿದ ಸಾಧನೆ ಅಪಾರ.ಯಕ್ಷಗಾನ ಸಂಪ್ರದಾಯವನ್ನು ಮುಂದಿನ ತಲೆಮಾರಿಗೆ ದಾಟಿಸುವ ಕೆಲಸವನ್ನು ಯಕ್ಷಗಾನ ಅಧ್ಯಯನ ಕೇಂದ್ರ ಮಾಡುತ್ತಾ ಇದೆ. ಕೇಂದ್ರವು ದಶಮಾನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಯೋಜನೆಯನ್ನು ರೂಪಿಸಿಕೊಂಡಿದ್ದು ವಿವಿಯಿಂದ ಎಲ್ಲಾ ರೀತಿಯ ಸಹಕಾರವನ್ನು ನೀಡುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಯಕ್ಷಗಾನ ಪೋಷಕರಾದ‌‌ ನಾರಾಯಣ ಭಟ್ ಕೊಡಕ್ಕಲ್ಲು ಅವರು ಅತಿಥಿಯಾಗಿ ಭಾಗವಹಿಸಿದ್ದರು.
ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕರಾದ ಪ್ರೊ.ಶ್ರೀಪತಿ ಕಲ್ಲೂರಾಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಯಕ್ಷಗಾನ ಅಧ್ಯಯನ ಕೇಂದ್ರದ ಸತೀಶ್ ಕೊಣಾಜೆ ವಂದಿಸಿದರು. ಯಕ್ಷಮಂಗಳ ವಿದ್ಯಾರ್ಥಿ ಪುರುಷೋತ್ತಮ ಅವರು ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಹೊಸ್ತೋಟ ಮಂಜುನಾಥ ಭಾಗವತರು ವಿರಚಿತ ಶ್ರೀರಾಮ ನಿರ್ಯಾಣ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭವ್ಯಶ್ರೀ ಕುಲ್ಕುಂದ, ಸವಿನಯ ನೆಲ್ಲಿತೀರ್ಥ, ಯಜ್ಞೇಶ್ ರೈ ಕಟೀಲು ಭಾಗವಹಿಸಿದ್ದರು.
ಅರ್ಥಧಾರಿಗಳಾಗಿ ಡಾ.ಎಂ.ಪ್ರಭಾಕರ ಜೋಶಿ, ಉಜಿರೆ ಅಶೋಕ್ ಭಟ್, ಭಾಸ್ಕರ ರೈ ಕುಕ್ಕುವಳ್ಳಿ, ಪ್ರೊ.ಶ್ರೀಪತಿ ಕಲ್ಲೂರಾಯ, ಮೇಘಶ್ರೀ ಕಜೆ ಅವರು ಭಾಗವಹಿಸಿದ್ದರು. ಅಬ್ಬಕ್ಕ ಯೂಟ್ಯೂಬ್ ಚಾನೆಲ್ ಮೂಲಕ ಕಾರ್ಯಕ್ರಮದ ನೇರಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಯಕ್ಷಗಾನ ಅಧ್ಯಯನ ಕೇಂದ್ರವು ಕಳೆದ ಹತ್ತು ವರ್ಷಗಳಿಂದ ಹತ್ತು ಹಲವಾರು ಯಕ್ಷಗಾನ ಚಟುವಟಿಕೆಗಳನ್ನು ನಡೆಸಿಕೊಂಡು ಯಶಸ್ವಿಯಾಗಿ ಮುನ್ನಡೆಯುತ್ತಿದ್ದು ಮುಂದೆ ನಡೆಯಲಿರುವ ದಶಮ ಸಂಭ್ರಮ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಡಾ.ದಯಾನಂದ ಪೈ ಅವರಲ್ಲಿ ಚರ್ಚಿಸಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಮಂಗಳೂರು ವಿವಿ ಕುಲಪತಿ
ಪ್ರೊ.ಪಿ.ಎಸ್.ಯಡಪಡಿತ್ತಾಯ ಹೇಳಿದರು.

ಖಾದರ್ ಗನ್ ಮ್ಯಾನ್ ಗೆ ಕರೋನ ದೃಡ

ಮಂಗಳೂರು(8ಜು/2020): ಶಾಸಕ ಯು.ಟಿ.ಖಾದರ್ ಗನ್ ಮ್ಯಾನ್ ಗೆ ಕೊರೋನಾ ಪಾಸಿಟಿವ್ ದೃಡವಾಗಿದೆ.ಮಂಗಳೂರಿನ ಡಿಎಆರ್ ಪೊಲೀಸ್ ಸಿಬ್ಬಂದಿಗೆ ಕೊರೋನಾ ಸೋಂಕು ತಗುಲಿದೆ.ಖಾದರ್ ಜೊತೆ ಎಸ್ಕಾರ್ಟ್ ವಾಹನದಲ್ಲಿದ್ದ ಪೊಲೀಸ್ ಸಿಬ್ಬಂದಿ ಜೊತೆಗೆ ಎಸ್ಕಾರ್ಟ್ ವಾಹನದಲ್ಲಿದ್ದ ಉಳಿದ ಮೂವರನ್ನು ಕ್ವಾರಂಟೈನ್ ಒಳಪಡಿಸಲಾಗಿದೆ.ಕಳೆದ ಹತ್ತು ದಿನದ ಹಿಂದೆ ಅನಾರೋಗ್ಯ ಎಂದು‌ ಮನೆಯಲ್ಲಿದ್ದ ಸಿಬ್ಬಂದಿಗೆ ಇಂದು ಬಂದ ವರದಿಯಲ್ಲಿ ಕೊರೋನಾ ಪಾಸಿಟಿವ್ ದೃಡವಾಗಿದೆ.

Related Post