July 11, 2020

ರಾಜಕೀಯ

ಪ್ರತಾಪಸಿಂಹ ನಾಯಕ್ ವಿಧಾನಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಕೆ

ಬೆಂಗಳೂರು(19ಜೂ/2020): ವಿಧಾನಸಭೆಯಿಂದ ವಿಧಾನಪರಿಷತ್ ಗೆ ನಡೆಯುವ ಚುನಾವಣೆಗೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳಾಗಿ ಆಯ್ಕೆಯಾದ ಪ್ರತಾಪಸಿಂಹ ನಾಯಕ್ ನಾಮಪತ್ರ ಸಲ್ಲಿಸಿದರು.
ಪ್ರತಾಪಸಿಂಹ ನಾಯಕ್ ಜೊತೆಗೆ ಸುನಿಲ್ ವಲ್ಯಾಪುರೆ, ಎಂ. ಟಿ. ಬಿ.‌ ನಾಗರಾಜ್ ಹಾಗೂ ಆರ್. ಶಂಕರ್ ಅವರೂ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲು, ಉಪಮುಖ್ಯಮಂತ್ರಿಗಳಾದ ಅಶ್ವಥ್ ನಾರಾಯಣ, ಅರವಿಂದ ಲಿಂಬಾವಳಿ ಹಾಗೂ ಸಚಿವರು ಉಪಸ್ಥಿತರಿದ್ದರು.

ರಾಜ್ಯ ಕಾಂಗ್ರೆಸಿಗೆ ಜೂ14ರಂದು ಡಿ.ಕೆ.ಶಿವಕುಮಾರ್ ಪದಗ್ರಹಣ ಸಾಧ್ಯತೆ

ಬೆಂಗಳೂರು(7ಜೂ/2020): ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಅವರು ಜೂನ್ 14ರಂದು ಪದಗ್ರಹಣ ಮಾಡುವ ಸಾಧ್ಯತೆ ಇದೆ.
‘ಲಾಕ್‌ಡೌನ್ ಅವಧಿ ಜಾರಿಯಲ್ಲಿದ್ದರೂ ಅದರ ಎಲ್ಲ ನಿಯಮಗಳನ್ನು ಪಾಲಿಸಿ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ. ಪಕ್ಷದ 150 ಪ್ರಮುಖ ನಾಯಕರು ಮಾತ್ರ ಕಾರ್ಯಕ್ರಮದಲ್ಲಿ ನೇರ ಪಾಲ್ಗೊಳ್ಳಲಿದ್ದಾರೆ. ಜಿಲ್ಲಾ, ತಾಲ್ಲೂಕು ಹಾಗೂ ಪಂಚಾಯಿತಿ ಮಟ್ಟದ ಸ್ಥಳೀಯ ಕಾರ್ಯಕರ್ತರು ನೇರ ಪ್ರಸಾರದ ಮೂಲಕ ಸ್ವ ಸ್ಥಳದಿಂದಲೇ ಕಾರ್ಯಕ್ರಮ ವೀಕ್ಷಿಸಲಿದ್ದಾರೆ.
ಸರಳವಾಗಿ ನಡೆಯಲಿರುವ ಕಾರ್ಯಕ್ರಮಕ್ಕೆ ಅನುಮತಿ ನೀಡಬೇಕು’ ಎಂದು ಕೋರಿ ಶಿವಕುಮಾರ್ ಅವರು ಮುಖ್ಯಮಂತ್ರಿ ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.ಇದರ ಬಗ್ಗೆ ಇನ್ನೂ ರಾಜ್ಯ ಸರ್ಕಾರದಿಂದ ಅಧಿಕೃತ ಉತ್ತರ ಬಂದಿಲ್ಲ.

ಬಿ.ಎಸ್.ಯಡಿಯೂರಪ್ಪ ರಾಜಕೀಯ ಕಾರ್ಯದರ್ಶಿಯಾಗಿ ಎನ್.ಆರ್.ಸಂತೋಷ್

ಬೆಂಗಳೂರು(30ಮೇ/2020): ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿಯಾಗಿ ಎನ್.ಆರ್.ಸಂತೋಷ್ ಅವರನ್ನು ನೇಮಕ ಸಂಬಂಧವಾಗಿ ರಾಜ್ಯ ಸರ್ಕಾರದದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ.
ಎನ್.ಆರ್.ಸಂತೋಷ್ ಸಿಎಂ ಯಡಿಯೂರಪ್ಪ ಅವರ ಆಪ್ತರಾಗಿದ್ದಾರೆ. ಅದರಲ್ಲೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಬಿಳಿಸುವಲ್ಲಿ ಸಂತೋಷ್ ಪ್ರಮುಖ ಪಾತ್ರವಹಿಸಿದ್ದರು.
16 ಅತೃಪ್ತ ಕಾಂಗ್ರೆಸ್ ಜೆಡಿಎಸ್ ಶಾಸಕರನ್ನು ಸೆಳೆದು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸುವಲ್ಲಿ ಸಫಲರಾಗಿದ್ದ ಸಂತೋಷ್ ಬಳಿಕ ಅವರನ್ನು ಬಿಜೆಪಿ ಹೈಕಮಾಂಡ್ ಸಲಹೆಯಂತೆ ರಾಜ್ಯದಿಂದ ಹೊರಗೆ ಕರೆದುಕೊಂಡು ಹೋಗಿದ್ದರು.
ಆಗ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರು ಸಂತೋಷ್ ಅವರ ವಿರುದ್ಧ ಹರಿಹಾಯ್ದು ಹೇಳಿಕೆಯನ್ನೂ ಕೊಟ್ಟಿದ್ದರು.
ಯಡಿಯೂರಪ್ಪ ಅವರಿಗೆ 4ನೇ ರಾಜಕೀಯ ಕಾರ್ಯದರ್ಶಿಯಾಗಿ ಎನ್.ಆರ್.ಸಂತೋಷ್ ಅವರು ನೇಮಕರಾಗಿದ್ದಾರೆ

ರಾಜ್ಯದಲ್ಲಿ “ಶಾದಿ ಭಾಗ್ಯ” ಇಲ್ಲ

ಬೆಂಗಳೂರು(8ಮಾರ್ಚ್2020): ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದ ‘ಶಾದಿಭಾಗ್ಯ’ ಯೋಜನೆಯನ್ನು ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರದ್ದುಪಡಿಸಿದೆ.
ಶನಿವಾರ ಸುತ್ತೋಲೆ ಹೊರಡಿಸಿರುವ ಅಲ್ಪಸಂಖ್ಯಾತರ ನಿರ್ದೇಶನಾಲಯ, ‘ಈ ವರ್ಷದ ಬಜೆಟ್‌ನಲ್ಲಿ ಅನುದಾನ ನಿಗದಿಪಡಿಸದಿರುವುದರಿಂದ ಶಾದಿಭಾಗ್ಯ (ಬಿದಾಯಿ) ಕ್ಕಾಗಿ ಹೊಸ ಅರ್ಜಿ ಸ್ವೀಕರಿಸುವುದನ್ನು ತಕ್ಷಣವೇ ನಿಲ್ಲಿಸಿ. ಮಂಜೂರಾತಿಗೆ ಬಾಕಿ ಇರುವ ವಿವರಗಳನ್ನು ಮಾ.9ರೊಳಗೆ ಸಲ್ಲಿಸಿ’ ಎಂದು ಅಲ್ಪಸಂಖ್ಯಾತ ಇಲಾಖೆಯ ಜಿಲ್ಲಾ ಅಧಿಕಾರಿಗಳಿಗೆ ಸೂಚಿಸಿದೆ.

ಮುಸ್ಲಿಂ, ಕ್ರೈಸ್ತ, ಜೈನ್‌, ಸಿಖ್‌ಸೇರಿದಂತೆ ಅಲ್ಪಸಂಖ್ಯಾತ ಸಮುದಾಯಗಳ ಆರ್ಥಿಕವಾಗಿ ಹಿಂದುಳಿದ ಕುಟುಂಬಕ್ಕೆ ಸೇರಿದ ಯುವತಿಯರ ಮದುವೆಗೆ ₹50 ಸಾವಿರ ನೀಡುವ ಯೋಜನೆ ಇದು. 

ಶೀಘ್ರವೇ ಕಾಯ್ದೆಯಾಗಲಿದೆ ಪೌರತ್ವ ತಿದ್ದುಪಡಿ ಮಸೂದೆ

ನವದೆಹಲಿ(ಡಿ12/2019): ವಿವಾದಿತ ಪೌರತ್ವ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲೂ ಅಂಗೀಕಾರವಾಯಿತು. 209 ಸದಸ್ಯರ ಬಲವಿದ್ದ ರಾಜ್ಯಸಭೆಯಲ್ಲಿ ಮಸೂದೆ ಪರವಾಗಿ 117 ಸಂಸದರು, ವಿರೋಧವಾಗಿ 92 ಸಂಸದರು ಮತ ಚಲಾಯಿಸಿದರು.

ರಾಜ್ಯಸಭೆಯಲ್ಲಿ ಸತತ ಏಳುಗಂಟೆ ಚರ್ಚೆ ನಡೆದ ಬಳಿಕ ಬಿಲ್​ ಪಾಸ್​ ಆಗಿದೆ. ಮುಂದಿನ ಹಂತದಲ್ಲಿ ರಾಷ್ಟ್ರಪತಿಯಿಂದ ಮಸೂದೆಗೆ ಅಂಕಿತ ದೊರೆತ ಕೂಡಲೇ ಕಾಯ್ದೆಯಾಗಿ ಪರಿವರ್ತನೆಯಾಗಲಿದೆ.

ಪೌರತ್ವ ತಿದ್ದುಪಡಿ ಮಸೂದೆಯ ಪರಿಶೀಲನೆಗೆ ಆಯ್ಕೆ ಸಮಿತಿಗೆ ಕಳಿಸಲು ವಿರೋಧಿಸಿ 124 ಎಂಪಿಗಳು ಹಾಗೂ ಕಳಿಸಬೇಕು ಎಂದು ಪರವಾಗಿ 99 ಎಂಪಿಗಳು ಮತ ಚಲಾಯಿಸಿದರು. ಹಾಗಾಗಿ ಮಸೂದೆ ಆಯ್ಕೆ ಸಮಿತಿಗೆ ಕಳಿಸುವುದನ್ನು ರಾಜ್ಯಸಭೆಯಲ್ಲಿ ತಿರಸ್ಕರಿಸಲಾಯಿತು.

ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಗೆ ಚುನಾವಣಾಧಿಕಾರಿಗಳು ಸಿದ್ಧ

ಬೆಂಗಳೂರು (ಡಿ8/2019): ಸೋಮವಾರ ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದೆ.  ಎಣಿಕೆ ಕೇಂದ್ರಗಳ ಉಸ್ತುವಾರಿಗಾಗಿ 108 ಮೇಲ್ವಿಚಾರಕರನ್ನು ನಿಯೋಜನೆ ಮಾಡಲಾಗಿದೆ. 128 ಎಣಿಕೆ ಸಹಾಯಕರು, 107 ಸೂಕ್ಷ್ಮ ವೀಕ್ಷಕರನ್ನು ನೇಮಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಬಿ.ಎಚ್‌.ಅನಿಲ್‌ ಕುಮಾರ್‌ ತಿಳಿಸಿದರು.
1,300 ಭದ್ರತಾ ಸಿಬ್ಬಂದಿ ನಿಯೋಜನೆ: ಮತ ಎಣಿಕೆ ಭದ್ರತೆಗಾಗಿ 1,300 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ತಿಳಿಸಿದ್ದಾರೆ.
‘ಪೊಲೀಸರ ಜೊತೆಗೆ ಕೆಎಸ್ಆರ್‌ಪಿ ತುಕಡಿ ಹಾಗೂ ಅರೆ ಸೇನಾ ಪಡೆಗಳನ್ನೂ ಭದ್ರತೆಗೆ ಬಳಸಿಕೊಳ್ಳಲಾಗುತ್ತಿದೆ. ಎಣಿಕೆ ಕೇಂದ್ರದ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಡಿ.8ರ ಮಧ್ಯರಾತ್ರಿಯಿಂದ ಡಿ.9ರ ಮಧ್ಯರಾತ್ರಿಯವರೆಗೆ ನಗರದಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ’ ಎಂದು ಅವರು ತಿಳಿಸಿದರು.

169 ಮತಗಳಿಂದ ವಿಶ್ವಾಸ ಮತ ಗೆದ್ದ ಠಾಕ್ರೆ

ಮುಂಬೈ(30ನ/2019): ಮಹಾರಾಷ್ಟ್ರದಲ್ಲಿ ಅಸ್ತಿತ್ವಕ್ಕೆ ಬಂದಿರುವ ಶಿವಸೇನಾ, ಎನ್‌ಸಿಪಿ, ಕಾಂಗ್ರೆಸ್‌ ಪಕ್ಷದ ಮೈತ್ರಿ ಸರ್ಕಾರ ಶನಿವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಗೆದ್ದಿದೆ.
ಮುಖ್ಯಮಂತ್ರಿ ಉದ್ದವ್‌ ಠಾಕ್ರೆ ವಿಶ್ವಾಸಮತ ಯಾಚನೆ ಮಾಡುವ ನಿರ್ಣಯವನ್ನು ಮಂಡಿಸಿದರು. ತಲೆ ಎಣಿಕೆ ಕಾರ್ಯ ನಡೆಯುತ್ತಿದ್ದಂತೆ ಬಿಜೆಪಿ ಸದಸ್ಯರು ಸದನದಿಂದ ಹೊರ ನಡೆದರು.
ವಿಶ್ವಾಸಮತ ಯಾಚನೆಗೂ ಮುನ್ನ ಹಂಗಾಮಿ ಸ್ಪೀಕರ್‌ ಆಗಿ ದೀಲಿಪ್‌ ಪಾಟೀಲ್‌ ಅವರನ್ನು ನೇಮಕ ಮಾಡಲಾಯಿತು. 
ಶಿವಸೇನಾ, ಎನ್‌ಸಿಪಿ, ಕಾಂಗ್ರೆಸ್‌ ಮೈತ್ರಿ ಸರ್ಕಾರದ ಪರವಾಗಿ 169 ಮತಗಳು ಬಿದ್ದವು.
288 ಸ್ಥಾನಗಳ ಪೈಕಿ ಬಿಜೆಪಿ 105, ಶಿವಸೇನಾ 56, ಕಾಂಗ್ರೆಸ್‌ 44, ಎನ್‌ಸಿಪಿ 54, ಇತರರು 29 ಸ್ಥಾನಗಳನ್ನು ಪಡೆದಿದ್ದಾರೆ. ಬಹುಮತ ಸಾಬೀತುಪಡಿಸಲು 145 ಮತಗಳು ಬೇಕಿದ್ದವು.

ಫಡಣವೀಸ್ ಮತ್ತೆ ಮುಖ್ಯಮಂತ್ರಿ ,ಎನ್‌ಸಿಪಿ ಉಪಮುಖ್ಯಮಂತ್ರಿ

ಮುಂಬೈ(23ನ/2019): ಮಹಾರಾಷ್ಟ್ರದಲ್ಲಿ ಇಂದು ಮುಂಜಾನೆ ನಡೆದ ರಾಜಕೀಯ ಕ್ಷಿಪ್ರ ಬೆಳವಣಿಗೆಯಲ್ಲಿ ಮುಖ್ಯಮಂತ್ರಿಯಾಗಿ ಎರಡನೇ ಬಾರಿಗೆ ರಾಜ್ಯದ ಚುಕ್ಕಾಣಿ ಹಿಡಿದಿರುವ ದೇವೇಂದ್ರ ಫಡಣವೀಸ್ ಮತ್ತು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಎನ್‌ಸಿಪಿಯ ಅಜಿತ್ ಪವಾರ್ ಅವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. 
ಶಿವಸೇನಾ-ಎನ್‌ಸಿಪಿ-ಕಾಂಗ್ರೆಸ್ ಪಕ್ಷಗಳು ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲಿವೆ ಮತ್ತು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎನ್ನುವ ಮಾತುಗಳು ಈ ಮೂಲಕ ಸುಳ್ಳಾಗಿವೆ. ಬೆಳ್ಳಂಬೆಳಗ್ಗೆಯೇ ರಾಜಭವನಕ್ಕೆ ದೌಡಾಯಿಸಿದ್ದ ಎನ್‌ಸಿಪಿ ಮತ್ತು ಬಿಜೆಪಿ ಸೇರಿ ನೂತನ ಸರ್ಕಾರವನ್ನು ರಚಿಸುವ ಮೂಲಕ ಶಾಕ್ ನೀಡಿವೆ. ದೇವೇಂದ್ರ ಫಡಣವೀಸ್ ಎರಡನೇ ಅವಧಿಗೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಬಿಜೆಪಿ ದ್ವಜದೊಂದಿಗೆ ಸರ್ವಧರ್ಮದ ದ್ವಜ ಹಾರಿಸಿ ವಿಜಯೋತ್ಸವ

ಮಂಗಳೂರು(15ನ/2019): ಮಹಾನಗರ ಪಾಲಿಕೆಯ ವಾರ್ಡ್ ನಂಬರ್ 20 ರ ತಿರುವೈಲ್ ನಲ್ಲಿ ಬಿಜೆಪಿ ವಿಜಯೋತ್ಸವವು ಕೋಮು ಸೌಹಾರ್ದಕ್ಕೆ ಸಾಕ್ಷಿಯಾಯಿತು.
ವಾರ್ಡ್ ನಂಬರ್ 20 ರ ತಿರುವೈಲ್ ನಲ್ಲಿ ಬಿಜೆಪಿಯ ಹೇಮಲತಾ ರಘು ಸಾಲಿಯಾನ್ ಯವರು 3028 ಗಳಿಸುವ ಮೂಲಕ ಕಾಂಗ್ರೆಸ್‌ನ ಪ್ರತಿಭಾ ರಾಜ್ ಕುಮಾರ್ ಶೆಟ್ಟಿ ರವರನ್ನು 1125 ರ ಮತಗಳ ಅಂತರದಿಂದ ಸೋಲಿಸುವ ಮೂಲಕ ಜಯಸಾಧಿಸಿದ್ದಾರೆ.

ವಾರ್ಡಿನ ಬಿಜೆಪಿ ಅಭ್ಯರ್ಥಿ ಗೆಲ್ಲುತ್ತಿದ್ದಂತೆ ಬಿಜೆಪಿ ಕಮಲ ಪಕ್ಷದ ದ್ವಜದೊಂದಿಗೆ ಕೇಸರಿ ಭಾಗವಾದ್ವಜ ಜೊತೆಗೆ ಮುಸ್ಲಿಮರ ಹಸಿರು , ಕ್ರೈಸ್ತರ ಬಿಳಿ ಧ್ವಜವೂ ಹಾರಾಡುವ ಮೂಲಕ ವಿಜಯೋತ್ಸವವು ಕೋಮು ಸೌಹಾರ್ದ ಸಂಭ್ರಮಾಚರಣೆಗೆ ಸಾಕ್ಷಿಯಾಯಿತು. ಈ ಮೂಲಕ ಯಾವುದೇ ಧರ್ಮ ಭೇದವಿಲ್ಲದೆ ಹಿಂದೂ, ಮುಸ್ಲಿಂ, ಕ್ರೈಸ್ತರು ಜೊತೆಯಾಗಿ ಬಿಜೆಪಿ ಅಭ್ಯರ್ಥಿಯ ಗೆಲುವನ್ನು ಸಂಭ್ರಮಿಸಿದ್ದಾರೆ.