September 23, 2020

general

ಕರಾವಳಿಯ ಪ್ರಥಮ ಆಧ್ಯಾತ್ಮಿಕ ಮೊಬೈಲ್ ಆಫ್ “ಗುರೂಜಿ ಸಾಯಿಈಶ್ವರ್”

ಉಡುಪಿ(14ಸೆ/2020): ಶಂಕರಪುರದ ದ್ವಾರಕಾಮಾಯಿ ಶ್ರೀ ಸಾಯಿಬಾಬಾ ಮಂದಿರ ಧರ್ಮದರ್ಶಿ ಗುರೂಜೀ ಸಾಯಿ ಈಶ್ವರ್ ಇವರು ಆಧ್ಯಾತ್ಮಿಕ ಸಾಧಕರಿಗಾಗಿ ಕರಾವಳಿಯ ಪ್ರಥಮ ಆಧ್ಯಾತ್ಮಿಕ ಆನ್ರೈಡ್ ಮೊಬೈಲ್ ಆಫ್ಅನ್ನು ಮಹಾಯೋಗಿ ಶ್ರೀ ಶ್ರೀ ಚಾಪ್ಪಮ್ಮ ದೇವಿಯವರ ದಿವ್ಯ ಹಸ್ತದಿಂದ ಲೋಕಾರ್ಪಣೆಗೊಳ್ಳಲಿದೆ.
ತಾ|| 16 ಸೆಪ್ಟಂಬರಂದು ರಾಯಚೂರಿನ ಸಿಂಧನೂರಿನ ಕಲ್ಮಂಗಿಯಲ್ಲಿರುವ “ಅಮ್ಮನವರ ಕುಟೀರ” ಇಲ್ಲಿ ನಡೆಯುವ ಸರಳ ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಮಾಡಲಾಗುವು ಎಂದು ಶಂಕರಪುರದ ದ್ವಾರಕಾಮಾಯಿ ಶ್ರೀ ಸಾಯಿಬಾಬಾ ಮಂದಿರ ಪ್ರಕಟಣೆಯಲ್ಲಿ ತಿಳಿದಿರುತ್ತಾರೆ.
ಗುರೂಜಿ ಸಾಯಿಈಶ್ವರ್ ಸದಾ ಅಸಹಾಯಕರ ಪರವಾಗಿ ಶ್ರಮಿಸುವವರು ಶ್ರೀ ಸಾಯಿ ಬಾಬಾರ ಪರಮಭಕ್ತರು, ಆರಾಧಕರು. ನೊಂದವರಿಗೆ ಸಾಂತ್ವಾನ ನುಡಿಯುವವರು. ಹಸಿದವರಿಗೆ ತುತ್ತು ಅನ್ನ ನೀಡಿದವರು. ಜಿಜ್ಞಾಸುಗಳಿಗೆ ಆಧ್ಯಾತ್ಮದ ಬೆಳಕು ಚೆಲ್ಲಿದವರು. ಆಧ್ಯಾತ್ಮ ವಲಯದಲ್ಲಿ ಇವರು ಮಾದರಿ ಆಧ್ಯಾತ್ಮ ಪರಿಚಾರಕರು.
ಈಗಲೇ ಹಲವು ಲಾಕ್ ಡೌನ್ ಸಮಯದಲ್ಲಿ ಆನ್ಲೈನ್ ಮೂಲಕ ಮಕ್ಕಳಿಗೆ “ನನ್ನ ಮನೆಯೇ ನನ್ನ ಗುರುಕುಲ” ಎಂಬ ಕಾರ್ಯಕ್ರಮ ಮಾಡಿ ಯಶಸ್ವಿಯಾಗಿರುವಂತೆ ನಂತರ ಆನ್ಲೈನ್ ಮೂಲಕ “ಆತ್ಮ ಶುದ್ಧಿ ಕ್ರಿಯಾ ಧ್ಯಾನ” ಮಾಡಿದ್ದು ಇದರಲ್ಲಿ ಐದುನೂರಕ್ಕೂ ಹೆಚ್ಚು ಜನರು ಭಾಗವಹಿಸಿರುವರು, ನಂತರ “ಪಾಕೆಟ್ ಪೆಂಡುಲಂ” ತರಬೇತಿ ಶಿಬಿರವನ್ನು ಆನ್ಲೈನ್ ಮೂಲಕ ಎರಡು ಅವದಿಯಲ್ಲಿ ಮಾಡಿದ್ದು ಎಲ್ಲವೂ ಯಶಸ್ವಿಯಾಗಿರುತ್ತದೆ.
ಇದೀಗ ಲೋಕಾರ್ಪಣೆ ಮಾಡಲಾಗುವ ಆನ್ಡ್ರೈಡ್ ಆಫ್ ನಲ್ಲಿ ಆನ್ಲೈನ್ ತರಗತಿಗಳನ್ನು ನಡೆಸಲು ಬೇಕಾಗುವ ವ್ಯವಸ್ಥೆಯೂ ಇರುತ್ತದೆ. ಈ ಆಫ್ ಮೂಲಕ ಭೌತಿಕ, ಐಶ್ವರ್ಯ, ಆರೋಗ್ಯ, ಶಾಂತಿ, ಧ್ಯಾನ, ಯೋಗ, ಸಾಂತ್ವನ ಮತ್ತು ಆಧ್ಯಾತ್ಮಿಕ ಮಾಹಿತಿಗಳ ಕಣಜವೇ ಆಧ್ಯಾತ್ಮಿಕ ಸಾಧಕರಿಗೆ ಸಿಗಲಿದೆ.

ಮಾಗಣ್ತಡಿ ಕಿಶೋರ್ ಕುಮಾರ್ ಶೆಟ್ಟಿ ತೇವುನಾಡು ಗುತ್ತು ನಿಧನ

ಉಳ್ಳಾಲ(ಸೆ12/2020):ತೇವುನಾಡುಗುತ್ತು ದಿ. ಪಟೇಲ್ ಕಿಂಞಣ್ಣ ಶೆಟ್ಟಿ ಅವರ ಪುತ್ರ ಮಾಗಣ್ತಡಿ ಕಿಶೋರ್ ಕುಮಾರ್ ಶೆಟ್ಟಿ ತೇವುನಾಡು ಗುತ್ತು (63) ಸೆ. 12ರಂದು ಶನಿವಾರ ನಿಧನ ಹೊಂದಿದರು.
ಮೃತರು ಪತ್ನಿ ಮಂಗಳೂರು ವಿಶ್ವವಿದ್ಯಾನಿಲಯದ ಸ್ಪೆಷಲ್ ಆಫಿಸರ್ ಪ್ರೊ| ಅನೂಸೂಯ ಶೆಟ್ಟಿ ಮತ್ತು ಪುತ್ರನನ್ನು ಅಗಲಿದ್ದಾರೆ.
ಉದ್ಯಮಿಯಾಗಿದ್ದ ಅವರು ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಮೂಲಕ ಕೊಡುಗೈದಾನಿಯಾಗಿದ್ದರು. ಲಯನ್ಸ್ ಕ್ಲಬ್ ಮಂಗಳಗಂಗೋತ್ರಿ ಇದರ ಅಧ್ಯಕ್ಷರಾಗಿ, ಮಂಜನಾಡಿ ಶ್ರೀ ವಿಷ್ಣುಮೂರ್ತಿ ಜನಾರ್ಧನ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ, ಶ್ರೀ ಮಲರಾಯ ದೈವಸ್ಥಾನ ಮಂಜನಾಡಿ ಇದರ ಆಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದರು. ವಿದ್ಯಾರ್ಥಿ ದೆಸೆಯಿಂದಲೇ ನಾಯಕತ್ವ ಗುಣ ಬೆಳೆಸಿಕೊಂಡಿದ್ದ ಅವರು ಸರಕಾರಿ ಕಾಲೇಜು ಮಂಗಳೂರು (ಈಗಿನ ವಿಶ್ವವಿದ್ಯಾನಿಲಯ ಕಾಲೇಜು) ಇದರ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದರು. ಬಂಟರ ಸಂಘ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದರು.

“ವಿಶ್ವ ಸಾಕ್ಷರತಾ ದಿನಾಚರಣೆ” ಪ್ರಯುಕ್ತ “ಸಂವಾದ-ಸಂಕಲ್ಪ”

ಉಳ್ಳಾಲ(8ಸೆ/2020): ಮಂಗಳೂರು ವಿಶ್ವವಿದ್ಯಾಲಯ ಈಗಾಗಲೇ ಐದು ಗ್ರಾಮಗಳನ್ನು ದತ್ತು ಸ್ವೀಕರಿಸಿದ್ದು, ವಿದ್ಯಾರ್ಥಿಗಳ ನಡೆ ಹಳ್ಳಿಗಳ ಕಡೆ ಎನ್ನುವ ಯೋಜನೆ ಹಮ್ಮಿಕೊಂಡಿದೆ, ಅಲ್ಲದೆ ಹತ್ತು ಸರ್ಕಾರಿ ಶಾಲೆಗಳನ್ನು ದತ್ತು ಸ್ವೀಕರಿಸುವ ಯೋಜನೆ ರೂಪಿಸಿ ವಿವಿಯಲ್ಲಿರುವ ಕಂಪ್ಯೂಟರ್ ಹಾಗೂ ಇತರ ಶೈಕ್ಷಣಿಕ ಪರಿಕರಗಳನ್ನು ನೀಡುವ ಯೋಚನೆ ಇದೆ ಎಂದು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅಭಿಪ್ರಾಯಪಟ್ಟರು. ‌
ಮಾದರಿ ಗ್ರಾಮ ಅಭಿಯಾನ ಪ್ರಯುಕ್ತ ಜನಶಿಕ್ಷಣ ಟ್ರಸ್ಟ್, ಬಾಳೆಪುಣಿ ಗ್ರಾಮ ಪಂಚಾಯಿತಿ, ಸೆಲ್ಕೋ ಫೌಂಡೇಶನ್, ಅಪ್ನಾದೇಶ್, ಪ್ರಜ್ಞಾ ವೃತ್ತಿಪರ ತರಬೇತಿ ಕೇಂದ್ರ, ಗ್ರಾಮ ವಿಕಾಸ ಕೇಂದ್ರ, ಚಿತ್ತಾರ ಬಳಗ, ಸುಗ್ರಾಮ ವೇದಿಕೆಯ ಸಹಯೋಗದಲ್ಲಿ ‘ವಿಶ್ವ ಸಾಕ್ಷರತಾ ದಿನಾಚರಣೆ’ ಪ್ರಯುಕ್ತ ಮುಡಿಪು ಜನಶಿಕ್ಷಣ ಕೇಂದ್ರದಲ್ಲಿ ನಡೆದ ‘ಸಂವಾದ-ಸಂಕಲ್ಪ’ಕ್ಕೆ ಚಾಲನೆ ನೀಡಿ ಮಾತನಾಡಿದರು.
ಸುಸ್ಥಿರ ಅಭಿವೃದ್ಧಿಗೆ ಶಿಕ್ಷಣ ಮಖ್ಯವಾದರೂ ಬದುಕುವ ಶಿಕ್ಷಣ ಅಗತ್ಯ. ಅಭಿವೃದ್ಧಿ ಎನ್ನುವುದು ಸರ್ಕಾರ, ಇಂತಹ ವ್ಯಕ್ತಿಗಳಿಂದಲೇ ಆಗಬೇಕು ಎಂದು ಬಯಸದೆ, ನಿರೀಕ್ಷಿಸದೆ ಸರ್ಕಾರೇತರ ಸಂಸ್ಥೆಗಳೂ ಗ್ರಾಮದ ಅಭಿವೃದ್ಧಿಗೆ ಕೈಜೋಡಿಸಬೇಕಿದೆ. ನಾನು ಎನ್ನುವ ಸ್ವಾರ್ಥವನ್ನು ಬಿಟ್ಟು ನಮ್ಮದು ಎನ್ನುವ ಭಾವನೆ ಹೊಂದಿದಾಗ ಅಭಿವೃದ್ಧಿ ಸಾಧ್ಯ. ಕರೊನಾ ಸಂಪೂರ್ಣ ನಿರ್ಮೂಲನೆ ಆದ ಬಳಿಕ ಶಿಕ್ಷಕರನ್ನೂ ಹಳ್ಳಿಗಳಿಗೆ ಕರೆದೊಯ್ದು ಜನರೊಂದಿಗೆ ಬೆರೆತು ಸಮಸ್ಯೆಗಳನ್ನು ತಿಳಿಯಲಾಗುವುದು ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಮಾತನಾಡಿ, ಓರ್ವ ವ್ಯಕ್ತಿ ಅಕ್ಷರ‌ ಕಲಿತ ಕೂಡಲೇ ವಿದ್ಯಾವಂತ ಆಗಲ್ಲ, ನಾವು ಕಲಿತ ಅಕ್ಷರವನ್ನು ಸಮಾಜಕ್ಕೆ ಹೇಗೆ ಹಂಚುತ್ತೇವೆ ಎನ್ನುವುದು ಮುಖ್ಯ ಆಗಿರುವುದರಿಂದ ಅಕ್ಷರದೊಂದಿಗೆ ಜ್ಞಾನಾರ್ಜನೆ‌ ಪಡೆಯುವುದು ಮುಖ್ಯ ಎಂದು ಹೇಳಿದರು.
ಉದ್ಯಮಿ ರಮೇಶ್ ಶೇಣವ, ಬಾಳೆಪುಣಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುನಿಲ್, ಮಾಜಿ ಸದಸ್ಯರಾದ ಜನಾರ್ದನ ಕುಲಾಲ್, ಯಶೋಧಾ, ಸೆಲ್ಕೋ ಪ್ರತಿನಿಧಿಗಳಾದ ಚೇತನ್, ರವೀಣಾ ಬಿ.ಕುಲಾಲ್‌ ಬೋಳಿಯಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಪ್ರತಿನಿಧಿ ಸೋನಿಯಾ, ಮಣಿಪಾಲ್ ಸಮುದಾಯ ರೇಡಿಯೋ ಮುಖ್ಯಸ್ಥ ಶ್ಯಾಮ್‌ ಭಟ್ ಇನ್ನಿತರರು ಉಪಸ್ಥಿತರಿದ್ದರು.
ಜಿಲ್ಲಾ ಸ್ವಚ್ಚತಾ ರಾಯಭಾರಿ ಶೀನ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ ಕಾರ್ಯಕ್ರಮ ನಿರೂಪಿಸಿದರು.

“ಮಾತೃ ದೇವೋಭವ ಆಚಾರ್ಯ ದೇವೊಭವ” ಲೇಖನ- ಸುಪ್ರೀತಾಜಾನುವಾರುಕಟ್ಟೆ

ಲೇಖನ- ಸುಪ್ರೀತಾಜಾನುವಾರುಕಟ್ಟೆ

ಮೊದಲ ತೊದಲು ನುಡಿ ಕಲಿಸಿ, ಬಾಯಲ್ಲಿ ಅಕ್ಷರ ದೀಪ ಬೆಳಗಿಸಿ ನಗಿಸಿ ನಡೆಸಿ ಶಿಕ್ಷಿಸಿ ಬದುಕು ಕಲಿಸುವ ತಾಯಿಯೇ ಸರ್ವರಿಗೂ ಮೊದಲ ಮಹಾನ್ ಶಿಕ್ಷಕಿ. ಅವಳ ನಂತರದ ಸ್ಥಾನ ಮನುಕೋಟಿಯಲ್ಲಿ ಗುರುವರ್ಯರಿಗೆ ಆಚಾರ್ಯರಿಗೆ..!

ಆದರ್ಶ ಗುರು ಯಾವಾಗಲೂ ಶಿಷ್ಯರಿಗೆ ಏಕಕಾಲದಲ್ಲಿ ತಂದೆ ತಾಯಿ ಅಣ್ಣ ಅಕ್ಕ ಎಲ್ಲಾ ಆಗಬಲ್ಲ ! ಮಾನವೀಯತೆ ಸದ್ಗುಣ ಸಚ್ಛಾರಿತ್ರ್ಯ ಕಲಿಸಿ, ಈ ಜಗದ ಶೀಲಚಾರಿತ್ರ್ಯವ ಉಳಿಸಿ, ಮಾನವತೆಯ ಸಂಬಂಧ ಬೆಸೆಯುವ ಕೊಂಡಿಯಾಗಬಲ್ಲ ಸಾಮರ್ಥ್ಯವಿರುವುದು ಶಿಕ್ಷಕರಿಗೆ ಮಾತ್ರ.
ಈ ಜಗತ್ತಿನ ವೇಗದೋಟದ ಮಧ್ಯೆ ಸರ್ವ ಸವಾಲುಗಳ ನಡುವೆ, ವಿಕಾಸತೆಯ ಶಿಖರದಲ್ಲಿರುವ ಮಾನವ ಜನಾಂಗಕ್ಕೆ ಅರಿವಿನ ಅಗತ್ಯವಿದೆ. ಬದುಕಿನ ಪ್ರೀತಿ ಗೊತ್ತಾಗಬೇಕಿದೆ. ಅಖಂಡ ಆತ್ಮವಿಶ್ವಾಸ ಹೊತ್ತಿ ಉರಿಯಬೇಕಿದೆ. ಇದೆಲ್ಲ ಕೊಟ್ಟು ಬದುಕು ರೂಪಿಸಬಲ್ಲ ಶಿಕ್ಷಕನ ಅಗತ್ಯ ಹಳ್ಳಿ, ಪಟ್ಟಣದ ಗಲ್ಲಿಗಲ್ಲಿಗೂ ಇದೆ.

ಜಾಗತೀಕರಣ ಆಧುನಿಕರಣದ ಸೋಗಿನಲ್ಲಿ ಓಡುತ್ತಿರುವ ಶಿಕ್ಷಣ ವ್ಯವಸ್ಥೆಯ ನಡುವೆ ವಿದ್ಯಾರ್ಥಿಗಳಲ್ಲಿ ಎಲ್ಲಾ ಕ್ಷೇತ್ರದ ಅಭಿರುಚಿ ಹುಟ್ಟಿಸಿ, ಸಂಸ್ಕಾರ ಕಲಿಸಿ, ಮನುಷ್ಯ ಪ್ರೇಮ-ಸಂಬಂಧಗಳ ಅಗತ್ಯತೆ, ಸಾಮರಸ್ಯದ ನೀತಿ ಭೋಧಿಸುವ ,ಅವರೊಳಗಿನ ಅಂತರ್ ಕೌಶಲ್ಯಗಳನ್ನು ಹೊರತರಬಲ್ಲ ಪಾದರಸದಂತ ಕ್ರಿಯಾಶೀಲ “ಶಿಕ್ಷಕ” ಈ ಕಾಲಘಟ್ಟದ ಮೊದಲ ಅಗತ್ಯತೆ ಮತ್ತು ಅನಿವಾರ್ಯತೆ ಕೂಡ !

ಮನುಕುಲವನ್ನು ಕಾಡುತ್ತಿರುವ ಹೆಮ್ಮಾರಿ “ಕೊರೋನಾ” ಶಿಕ್ಷಕನ ಅಸ್ತಿತ್ವಕ್ಕೂ ಇಂದು ಕೊಡಲಿಯೇಟು ಕೊಟ್ಟಿದೆ. ಹಾಗೆ ಶಿಕ್ಷಕನ ಸೃಜನಶೀಲತೆ ಕಲಾತ್ಮಕತೆ ತನ್ನೆಲ್ಲಾ ಶೈಕ್ಷಣಿಕ ಅನುಭವವನ್ನು ಬಳಸಿ-ಬೆಳೆಸಿಕೊಳ್ಳಲೇ ಬೇಕಾದ ಸವಾಲಿನ ಜೊತೆ, ನಿಜವಾದ ಜ್ಞಾನವನ್ನು ಪ್ರಚುರ ಪಡಿಸುವ ಅಪೂರ್ವ ಅವಕಾಶವನ್ನು ಮುಂದಿಟ್ಟಿದೆ. ತರಗತಿ ಕೋಣೆಯೊಳಗೆ ಆಧ್ಯಾತ್ಮಿಕವಾಗಿ ಸಾಮಾಜಿಕವಾಗಿ ಭಾವನಾತ್ಮಕವಾಗಿ ಸಾಮರಸ್ಯದಿಂದ ಬೆಸೆದುಕೊಂಡಿರುವ ಶಿಕ್ಷಕ-ವಿದ್ಯಾರ್ಥಿಯ ಅವಿನಾಭಾವ ಸಂಬಂಧವನ್ನು ಬದ್ಧತೆಯಿಂದ ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಶಿಕ್ಷಕರೆಲ್ಲರ ಈ ಹೊತ್ತಿನ ತುರ್ತು ಅಗತ್ಯತೆ ಎನ್ನಬಹುದು.

ಹೌದು..! “ಕೊರೋನಾ” ದಿಂದ ಬದಲಾದ ಪ್ರತಿಕೂಲ ಪರಿಸ್ಥಿತಿಯಲ್ಲಿ ಶಿಕ್ಷಕ ಆನ್ಲೈನ್ ಬೋಧನಾಕ್ರಮಕ್ಕೆ ಒಗ್ಗಿಕೊಳ್ಳಲೇಬೇಕಿದೆ. ಆಧುನಿಕ ತಂತ್ರಜ್ಞಾನಗಳ ಬಳಕೆಗೆ ಮಕ್ಕಳನ್ನು ಪರಿಣಾಮಕಾರಿಯಾಗಿ ಅಣಿಗೊಳಿಸಲು ಶಿಕ್ಷಕನೂ ಪಳಗಬೇಕು. ಸನಾತನ ಪರಂಪರೆಯ ಶಿಕ್ಷಣ ವ್ಯವಸ್ಥೆಯ ಮೌಲ್ಯಗಳನ್ನು ಬಾಂಧವ್ಯವನ್ನು ಸಕಾರಾತ್ಮಕ ಚಿಂತನೆಗಳನ್ನು ಬೋಧನಕ್ರಮ ಮತ್ತು ಮಾಧ್ಯಮ ಯಾವುದೇ ಇರಲಿ ಮಕ್ಕಳಿಗೆ ತಲುಪಿಸಬೇಕಾದ ಹೊಣೆ ಎಂದಿಗೂ ಶಿಕ್ಷಕನದ್ದಾಗಿರುತ್ತದೆ.
ಎಲ್ಲರಿಗೂ ತಿಳಿದಿರುವಂತೆ ಆನ್ಲೈನ್ ಶಿಕ್ಷಣದಡಿ -ಶಿಕ್ಷಕರನ್ನೇ ನೋಡದೆ ಆನ್‌ಲೈನ್ ಶಿಕ್ಷಣ, ವರ್ಚುವಲ್ ಶಿಕ್ಷಣ ವ್ಯವಸ್ಥೆ ಇಂದಿನ ತಂದೆತಾಯಿಗಳ ಆಯ್ಕೆಯಾಗುತ್ತಿದೆ !!
ಶಿಕ್ಷಕ -ರಕ್ಷಕರು ಒಂದು ಅಂಶವನ್ನು ನೆನಪಿಡಲೇಬೇಕು.
‘ಸಂಸ್ಕಾರ ಕಲಿಸದ ಶಿಕ್ಷಣ ಶಿಕ್ಷಣವೇ ಅಲ್ಲ…!’ಇಂತಹ ಅನ್ಯೂಷವಲ್ ಶಿಕ್ಷಣ ಕ್ರಮದಲ್ಲಿ ಕಲಿತ ಹೆಚ್ಚಿನ ಮಕ್ಕಳ ಜ್ಞಾನ ಭಂಡಾರ ಹೊಸ ಹೊಸ ಸಂಶೋಧನೆಗಳ ಮೂಲಕ ಜಗತ್ತಿನ ಆಸ್ತಿಯಾಗದೆ, ರಚನಾತ್ಮಕ ಕೆಲಸಗಳಿಗೆ ಬಳಕೆಯಾಗದೆ ವಿಧ್ವಂಸಕ ಕೃತ್ಯಗಳಿಗೆ ಮುನ್ನುಡಿಯಾಗುತ್ತಿದೆ..!! ಇತ್ತೀಚೆಗಷ್ಟೇ ಕೆಲವು ನಿದರ್ಶನಗಳನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೀರಿ.
ಅದೆಷ್ಟೋ ಉಗ್ರರ, ನಕ್ಸಲೀಯರ ಭೃಷ್ಟ ರಾಜಕಾರಣಿಗಳೊಳಗೆ ಪ್ರಜ್ಞಾವಂತ ನಿಷ್ಠಾವಂತ ಮನಸ್ಸಿದೆ, ಯೋಗ್ಯ ಶಿಕ್ಷಣ ದೊರಕದೆ ಯೋಗ್ಯ ಗುರುವಿನ ಮಾರ್ಗದರ್ಶನವಿಲ್ಲದೆ ಹೀಗಾದ ಇವರುಗಳ ಸಂತತಿ ಸಾವಿರವಾಗುತ್ತಿದೆ..!

ಇನ್ನೂ ಹೇಳುವುದಾದರೆ ಇಂದಿನ ಶಿಕ್ಷಣ ವ್ಯವಸ್ಥೆ, ಆಡಳಿತ ಮಂಡಳಿ, ಸಮುದಾಯದ ಕಾರಣದಿಂದಲೇ “ಶಿಕ್ಷಕ ಮಕ್ಕಳಿಗೆ ಯೋಗ್ಯ ರೀತಿಯಲ್ಲಿ ತಲುಪುತ್ತಿಲ್ಲ..” ಶಿಕ್ಷಕನಿಂದು ಇಲಾಖೆ ಆಡಳಿತ ಮಂಡಳಿ , ಪೋಷಕರ ಚಕ್ರವ್ಯೂಹದೊಳಗೆ ಸಿಲುಕಿ ಒದ್ದಾಡುತ್ತಿದ್ದಾನೆ.
ಶಿಕ್ಷಕ ಬೋಧನೆಗಷ್ಟೇ ಸೀಮಿತವಾಗಿರಬೇಕು, ಅವನ ಪ್ರತಿ ಬಿಡುವಿನ ವೇಳೆಯೂ ವಿದ್ಯಾರ್ಥಿಗಳಿಗಷ್ಟೇ ಮೀಸಲಾಗಿರಬೇಕು, ಅನ್ಯ ಕಾರ್ಯಗಳು, ನೂರಾರು ಶಿಕ್ಷಕೇತರ ಜವಬ್ದಾರಿಗಳು..! ಬದುಕು ಸಾಗಿಸಲಾಗದ ವೇತನ ವ್ಯವಸ್ಥೆ..! ಮಕ್ಕಳ ಭವಿಷ್ಯ ಕಟ್ಟುವ ಗುರುತುರ ಹೊಣೆಗಾರಿಕೆಗೆ ಮೂಲ ತೊಡಕಾಗುತ್ತಿದೆ..! ಒತ್ತಡ ರಹಿತ ಶಿಕ್ಷಕ ೧೦೦% ಪ್ರತಿಶತ ಯಶಸ್ಸು ಕೊಡಬಲ್ಲನನ್ನೆವುದು ನನ್ನ ಅಭಿಮತ.
ಇಂದು ಶಿಕ್ಷಣ ತಜ್ಞರು ಆಡಳಿತ ಮಂಡಳಿ, ವ್ಯವಸ್ಥೆಯನ್ನಾಳುವವರು, ಪೋಷಕರು ಈ ಕುರಿತು ಯೋಚಿಸಿ ಶಿಕ್ಷಕನ ಹೊರೆಯನ್ನು ಕೆಳಗಿಳಿಸಿ, ಪರಿಮಿತಿಯೊಳಗಿನ ಅವರ ಗೌರವವನ್ನು ಹೆಚ್ಚಿಸಬೇಕು. ಐದಾರು ತಿಂಗಳಿಂದೀಚೆ ವೇತನವಿಲ್ಲದೆ, ಬದುಕಿನ ಮೂಲಭೂತ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ನಲುಗುತ್ತಿರುವ ಅದೆಷ್ಟೋ ಖಾಸಗಿ ಶಾಲಾ-ಕಾಲೇಜು ಶಿಕ್ಷಕರು, ಅರೆಕಾಲಿಕ ಉಪನ್ಯಾಸಕರುಗಳ ನೋವಿಗೆ ಸರ್ಕಾರದ ಪ್ರತಿನಿಧಿಗಳು ಸ್ಪಂದಿಸಬೇಕು. ಶಿಕ್ಷಕ ಬೇರೇ ದಾರಿ ಕಾಣದೆ ಆತ್ಮಹತ್ಯೆಗೆ ಶರಣಾಗುತ್ತನೆಂದರೆ ..? ಸಮಯೋಚಿತ ನಿರ್ಧಾರ ತೆಗೆದುಕೊಳ್ಳದ ನಮ್ಮನಾಳುವ ವ್ಯವಸ್ಥೆಯೇ ನೇರ ಹೊಣೆ.
ಇವೆಲ್ಲದರ ಜೊತೆಗೆ ಶಿಕ್ಷಣವನ್ನು ವ್ಯಾವಹಾರಿಕವಾಗಿ ನೋಡುವ ಮನಸ್ಥಿತಿಯನ್ನು ಪೋಷಕರು ಮೊದಲು ತೊಡೆದು ಹಾಕಿ, ಅದೊಂದು ಬದುಕಿಗೆ ಬೇಕಾದ ಮಹತ್ವದ ಸಂಸ್ಕಾರವೆಂದು ಗಮನದಲ್ಲಿಟ್ಟುಕೊಂಡು , ಕಲಿಸುವ ಗುರುಗಳಿಗೆ ಗೌರವಿಸುವ ಶಿಷ್ಟಾಚಾರ ಮನೆಯಿಂದಲೇ ಕಲಿಸಿಕೊಡಬೇಕು. ಆಗ ಮಾತ್ರ ಶಿಕ್ಷಕ ವೃತ್ತಿಯ ಪಾವಿತ್ರ್ಯತೆ ದ್ವಿಗುಣಗೊಂಡು ಸದೃಢ ಸಮಾಜದ ಸೃಷ್ಟಿಗೆ ನಾಂದಿಯಾಗುತ್ತದೆ.

ಶಿಕ್ಷಕ ವೃತ್ತಿಯ ಅತೀವ ಪ್ರೀತಿಸುವ ಮಹಾನ್ ಶಿಕ್ಷಕ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಹುಟ್ಟು ಹಬ್ಬವನ್ನು ಚಿರಸ್ಮರಿಸುತ್ತಾ, “ನನ್ನೆದೆಯೊಳಗೆ ಅಕ್ಷರ ದೀಪವ ಬೆಳಗಿಸಿ, ಸಂಸ್ಕಾರ ಕಲಿಸಿ ಬದುಕಿನ ಪ್ರೀತಿ ಮತ್ತು ಅನಿವಾರ್ಯತೆಯನ್ನು ಕಲಿಸಿಕೊಟ್ಟ, ನನ್ನೊಳಗೊಬ್ಬ ” ಶಿಕ್ಷಕಿ- ಬೋಧಕಿ”ಯನ್ನು ರೂಪಿಸಿದ ತಾಯಿಗೆ, ನ್ನನ್ನಜ್ಜಿಗೆ , ಗುರುವೃಂದದವರಿಗೆ, ವೃತ್ತಿ ನಿಭಾಯಿಸಲು ಸಹಕರಿಸಿದ ಸಹೋದ್ಯೋಗಿಗಳು, ಆಡಳಿತ ಮಂಡಳಿ ಮತ್ತು ಈ ಏಳು ವರ್ಷದ ವಿದ್ಯಾರ್ಥಿಸಮೂಹಕ್ಕೆ ನನ್ನ ಬದುಕಿನ ಪ್ರೀತಿಯನ್ನು ಅಂತರಾಳದ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ…

ಪಬ್-ಜಿ ಜೊತೆ 118 ವಿದೇಶಿ ಆಪ್ ನಿಷೇಧ

ದೆಹಲಿ(2ಸೆಪ್ಟಂಬರ್/2020): ಪಬ್ಜಿ, ಪಬ್ಜಿ ಮೊಬೈಲ್ ಲೈಟ್, ವಿಚಾಟ್ ವರ್ಕ್‌, ವಿಚಾಟ್ ರೀಡಿಂಗ್ ಸೇರಿದಂತೆ 118 ಆ್ಯಪ್‌ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಈ ಹಿಂದೆ ಎರಡು ಬಾರಿ ಒಟ್ಟು ಚೀನಾದ ನೂರಕ್ಕೂ ಹೆಚ್ಚು ಆ್ಯಪ್‌ಗಳ ಮೇಲೆ ನಿಷೇಧ ಹೇರಲಾಗಿತ್ತು.
ದೇಶದ ರಕ್ಷಣೆ, ಸಾರ್ವಭೌಮತ್ವ, ಸಮಗ್ರತೆ, ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆ ಗಮನದಲ್ಲಿಟ್ಟು ಕೊಂಡು 118 ಆ್ಯಪ್‌ಗಳನ್ನು ನಿಷೇಧಿಸಲಾಗಿದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.
ಟಿಕ್‌ಟಾಕ್, ಶೇರ್‌ಇಟ್, ಹೆಲೊ, ಲೀಕೀ, ಯುಸಿ ಬ್ರೌಸರ್‌‌ ಮತ್ತು ವಿ–ಚಾಟ್ ಸೇರಿದಂತೆ 59 ಮೊಬೈಲ್‌ ಆ್ಯಪ್‌ಗಳನ್ನು ಕೇಂದ್ರ ಸರ್ಕಾರ ಜೂನ್‌ನಲ್ಲಿ ನಿಷೇಧಿಸಿತ್ತು. ಬಳಿಕ ಎರಡನೇ ಹಂತದಲ್ಲಿ ಜುಲೈನಲ್ಲಿ ಟಿಕ್‌ಟಾಕ್ ಲೈಟ್, ಹೆಲೊ ಲೈಟ್, ಶೇರ್‌ಇಟ್ ಲೈಟ್, ಬಿಗೊ ಲೈವ್ ಲೈಟ್, ವಿಎಫ್‌ವೈ ಲೈಟ್ ಸೇರಿದಂತೆ ಚೀನಾದ 47 ಆ್ಯಪ್‌ಗಳನ್ನು ನಿಷೇಧಿಸಿತ್ತು. ಇದೀಗ ಮೂರನೇ ಬಾರಿಗೆ ಕ್ರಮ ಕೈಗೊಂಡಿದೆ.
ಭಾರತವೊಂದರಲ್ಲಿ ಈ ಗೇಮ್‌ನ ಅಪ್ಲಿಕೇಷನ್‌ ಅನ್ನು 1.75 ಕೋಟಿ ಮಂದಿ ಮೊಬೈಲ್‌ಗಳಲ್ಲಿ ಡೌನ್‌ಲೋಡ್ ಆಗಿದೆ.

ಕೊಣಾಜೆ: ಬೈಕ್ ಅಪಘಾತ ಆಗಿ ಬಾಲಕ ಮೃತ್ಯು

ಉಳ್ಳಾಲ(31ಆಗಷ್ಟ್/2020): ಬೈಕ್ ಅಪಘಾತ ಆಗಿ ಬಾಲಕ ಮೃತ್ಯು. ಕೊಣಾಜೆ ಠಾಣಾ ವ್ಯಾಪ್ತಿಯ ಪಜೀರು ಬಳಿ ಬೈಕ್ ಅಪಘಾತದಲ್ಲಿ ಬಾಲಕನೊರ್ವ ಮೃತಪಟ್ಟ ಘಟನೆ ಭಾನುವಾರ ಸಂಭವಿಸಿದೆ.
ಮೃತನನ್ನು ಪಜೀರು ಪೆರ್ನಂಪ್ಪಾಡಿಯ ಬಶೀರ್ ಅವರ ಪುತ್ರ ಶಾಲಿಕ್ (15) ಎಂದು ಗುರುತಿಸಲಾಗಿದೆ. ಶಾಲಿಕ್ ತನ್ನ ತಂದೆಯೊಂದಿಗೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಬೈಕ್ ಸ್ಕಿಡ್ ಆಗಿ ಮಗುಚಿ ಬಿದ್ದಿದೆ. ಈ ಸಂದರ್ಭದಲ್ಲಿ ತಲೆಗೆ ಗಂಭೀರ ಗಾಯವಾಗಿ ಬಾಲಕ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಈ ಬಗ್ಗೆ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡಿಗರ ಕೆಣಕಿದರೆ ಮರಾಠಿಗರ ಹೆಡೆಮುರಿ ಕಟ್ಟುತ್ತೇವೆ: ಡಾ. ರವಿ ಶೆಟ್ಟಿ ಬೈಂದೂರು

ಬೆಂಗಳೂರು(29ಆ/2020): ಬೆಳಗಾವಿ ಜಿಲ್ಲೆ ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಟಾಪನೆಗೆ ವಿರೋಧಿಸಿ ಮರಾಠೀ ಭಾಷಿಗರು ದಾಂಧಲೆ ನಡೆಸಿದ್ದು ಅಕ್ಷಮ್ಯ. ನಮ್ಮ ನೆಲದಲ್ಲಿ ಅಪ್ರತಿಮ ಹೋರಾಟಗಾರ ರಾಯಣ್ಣನ ಪ್ರತಿಮೆ ಸ್ಥಾಪನೆಗೆ ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಿಲ್ಲ.. ಎಂದು ಕರ್ನಾಟಕ ಕಾರ್ಮಿಕರ ವೇದಿಕೆಯ ರಾಜ್ಯಾಧ್ಯಕ್ಷರಾಗಿ ಹೊಸದಾಗಿ ನಿಯೋಜನೆಗೊಂಡ ಡಾ.ರವಿ ಶೆಟ್ಟಿ ಬೈಂದೂರು ಮಾತನಾಡಿದ್ದಾರೆ.

ರಾಯಣ್ಣ ಪ್ರತಿಮೆ ವಿವಾದ ಕುರಿತು ಇಂದು ಬೆಂಗಳೂರಿನಲ್ಲಿ ಪತ್ರಕರ್ತರ ಜೊತೆ ಮಾಡಿರುವ ಅವರು, ಎಂಇಎಸ್, ಶಿವಸೇನೆ ಅಥವಾ ಮತ್ಯಾರೇ ಆಗಲಿ ನಮ್ಮ ನಾಡಿನ ಹೆಮ್ಮೆಯ ವೀರಪುತ್ರ ಸಂಗೊಳ್ಳಿ ರಾಯಣ್ಣನಿಗೆ ಅಪಮಾನ ಮಾಡಿದರೆ ಕನ್ನಡಿಗರ ಸಹನೆ ಪರೀಕ್ಷಿಸಿದಂತೆ. ಇಂತಹ ಉದ್ಧಟತನಗಳನ್ನು ಕನ್ನಡಿಗರು ಸಹಿಸುವುದಿಲ್ಲ.. ಪದೇಪದೇ ಕರ್ನಾಟಕದ ವಿಷಯದಲ್ಲಿ ತಗಾದೆ ತೆಗೆಯುತ್ತಿರುವ ಮರಾಠಿಗರು ಎಚ್ಚೆತ್ತುಕೊಳ್ಳಬೇಕು ಇಲ್ಲದಿದ್ದರೆ ಕನ್ನಡಿಗರು ಕರ್ನಾಟಕದ ಎಲ್ಲಾ ಸಂಘಟಕರು ಸೇರಿ ಸರಿಯಾದ ಬುದ್ಧಿ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ಧಾರೆ.

ಸಂಗೊಳ್ಳಿ ರಾಯಣ್ಣ ನಮ್ಮ ನಾಡಿನ ಹೆಮ್ಮೆ. ಅವರ ಪ್ರತಿಮೆ ಸ್ಥಾಪನೆಗೆ ವಿರೋಧಿಸುವುದು ಕನ್ನಡಿಗರ ಕೆಚ್ಚೆದೆಯ ಸ್ವಾಭಿಮಾನ ಕೆಣಕಿದಂತೆ. ನಾಡಿನ ವೀರಪುತ್ರ ಮತ್ತು ವನಿತೆಯರ ವಿರುದ್ಧ ನಮ್ಮ ನೆಲದಲ್ಲಿ ತಗಾದೆ ತೆಗೆದರೆ ತಕ್ಕಪಾಠ ಕಲಿಸಬೇಕಾಗುತ್ತದೆ. ಅಲ್ಲದೆ ಸಂಗೊಳ್ಳಿ ರಾಯಣ್ಣ ಸ್ವತಂತ್ರ ಹೋರಾಟಗಾರರು ಅವರು ಕರ್ನಾಟಕಕ್ಕೆ ಮಾತ್ರ ಸ್ವತಂತ್ರ ತಂದು ಕೊಟ್ಟಿಲ್ಲ ಇಡೀ ನಾಡಿಗೆ ಸ್ವಾತಂತ್ರ್ಯ ತಂದುಕೊಡಲು ಹೋರಾಡಿದ ವೀರ ಪುರುಷ. ಅಂತಹ ಮಹಾನ್ ವ್ಯಕ್ತಿಯ ಪ್ರತಿಮೆಗೆ ಅಡ್ಡಗಾಲು ಹಾಕುತ್ತಿರುವವರು ದೇಶ ವಿರೋಧಿಗಳು ಎಂದು ಗುಡುಗಿದರು.

ಸರ್ಕಾರಗಳು ತಕ್ಷಣ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ರಾಯಣ್ಣನ ಅವರಿಗೆ ಅವಮಾನ ಆಗದ ರೀತಿಯಲ್ಲಿ ನಡೆದುಕೊಳ್ಳಬೇಕು ಎಂಇಎಸ್ ಪುಂಡರ ಪುಟವನ್ನು ತಡೆಗಟ್ಟಿ ಅವರ ಮೇಲೆ ದೂರು ದಾಖಲಿಸಬೇಕು ಹಾಗೂ ಕನ್ನಡಪರ ಹೋರಾಟಗಾರರ ಮೇಲೆ ತೆಗೆದುಕೊಂಡ ಕ್ರಮದ ನಿರ್ಣಯದಿಂದ ಹಿಂದೆ ಸರಿಯಬೇಕು…
ಅಲ್ಲದೆ ಕರ್ನಾಟಕದಲ್ಲಿ ಬಹಳಷ್ಟು ನಮ್ಮ ಧರ್ಮ ಬಾಂಧವರು ಗೌರವದಿಂದ ಮಹಾರಾಷ್ಟ್ರ ಮೂಲದ ಛತ್ರಪತಿ ಶಿವಾಜಿ ಮಹಾರಾಜರ ಫೋಟೋವನ್ನು ಬಳಸುತ್ತಿದ್ದು.. ಅದರಂತೆ ಕರ್ನಾಟಕದ ಮೂಲದ ರಾಯಣ್ಣನ ಪ್ರತಿಮೆಗಳು ಮತ್ತು ಫೋಟೋಗಳಿಗೆ ಗೌರವವನ್ನು ಕೊಡುವುದು ಮಹಾರಾಷ್ಟ್ರ ಕಲಿಯಲಿ. ಇಲ್ಲದಿದ್ದರೆ ಕರ್ನಾಟಕದ ಸ್ವಾಭಿಮಾನಿ ಕನ್ನಡಿಗರು ಮರಾಠಿಗರಿಗೆ ಬುದ್ಧಿ ಕಲಿಸಲು ಮುಂದಾಗಬೇಕಾಗುತ್ತದೆ ಅದಕ್ಕೆ ಸರ್ಕಾರ ನೇರ ಹೊಣೆ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ನಮ್ಮ ನಾಡಿನ ನೆಲ-ಜಲ, ಭಾಷೆ ಮತ್ತು ಗಡಿ ವಿಷಯದಲ್ಲಿ ರಾಜಿಯ ಪ್ರಶ್ನೆಯೇ ಇಲ್ಲ. ಈ ನೆಲದ ಅಸ್ಮಿತೆಗೆ ಭಂಗ ತರುವವರನ್ನು ಹೆಡೆಮುರಿ ಕಟ್ಟುವುದು ಸ್ವಾಭಿಮಾನಿ ಕನ್ನಡಿಗರ ರಕ್ತದಲ್ಲೇ ಇದೆ . ರಾಯಣ್ಣರ ವಿಷಯಕ್ಕೆ ಬಂದರೆ ಎಂತಹ ತ್ಯಾಗಕ್ಕೂ ಸಿದ್ಧ.. ಎಂತಹ ಹೋರಾಟಕ್ಕೂ ಸಿದ್ಧ ಎಂದು ಗುಡುಗಿದರು.

ಎಲ್ಲಾ ಕ್ರೀಡೆಯನ್ನು ಗೌರವಿಸಿ ಅಪ್ಪಿಕೊಂಡು ಕೊಂಡಾಡೋಣ: ಸುಜಾತ ಗಜೇಂದ್ರ ಜೈನ್ ಸಾಗರ

ಲೇಖನ:ಸುಜಾತ ಗಜೇಂದ್ರ ಜೈನ್ ಸಾಗರ
ಸಾಧನೆ ಮಾಡಿದಿನಿ ಅನ್ನೋದು ಅಷ್ಟು ಸುಲಭದ ಮಾತಲ್ಲ….! ಅದರ ಹಿಂದಿನ ನೋವು ಪ್ರೀತಿಪಾತ್ರರಿಗಷ್ಟೇ ಗೊತ್ತಾಗುತ್ತೆ ಅಥವಾ ಆ ಕ್ರೀಡೆಯನ್ನು ಮೆಚ್ಚಿಕೊಂಡು ಹುಚ್ಚನಂತೆ ಗೆದ್ದಾಗ ಬೀಗೂತ್ತ….., ಸೋತಾಗ ಅಳುತ್ತಾ ಕುಳಿತುಕೊಳ್ಳುವ ನಮ್ಮಂತಹ ಮನಸ್ಸಿಗೆ ಮಾತ್ರ ಕಾಣುತ್ತೆ ಅನಿಸುತ್ತೆ

ಹೌದು ನನಗೆ ಈ ಕ್ರೀಡಾ ಲೋಕದ ಸವಿಯುಣಿಸಿದ ಮೊದಲಿಗರು ಮಾದೇವಣ್ಣ ಅವರ ಕಸುಬು ಕಂಡಕ್ಟರ್ ಆಗಿದ್ದರು ಕ್ರೀಕೆಟ್ ಹುಚ್ಚು ಹಿಡಿಸಿ ಟಿವಿ ಮುಂದೆ ಕುಳಿತ ನಾವು *ಸಿಕ್ಸ್* ಹೊಡೆದಂತೆ ಕೂಗೂವುದು,ಎದ್ದು ಅಣ್ಣಮ್ಮನ ಸ್ವೇಪ್ ಹಾಕೋದು, ಸೋತಾಗ ನಿಧಾನವಾಗಿ ಜಾರಿಕೊಳ್ಳೋದು ಕಾರಣ ಮಾದೇವಣ್ಣನ ಏಟು ಯಾರು ತಿಂತಾರೇ ಹೇಳಿ……! ಪಕ್ಕದಲ್ಲಿ ಕುಳಿತು ಟಿವಿ ನೋಡುತ್ತಿರುವವರ ನಮ್ಮ ತೊಡೆ ಕೆಂಪಾಗಿ ಹೋಗಿರುತ್ತಿತ್ತು ಅಂತಹ ಏಟು…..! ನಾನು ಮತ್ತೆ ಅವರ ಮಗ ರಾಕೇಶ್ ಬಹಳ ಚುರುಕು ಅವರಿಂದ ಯಾವಾಗಲೂ ಒಂದೆರಡು ಅಡಿ ದೂರದಲ್ಲಿ ಕುಳಿತಿದ್ದರೆ, ಅವರ ಮಗಳು(ನನ್ನ ತಂಗಿ)ಶುಶ್ಮಿತ ಮತ್ತು ನನ್ನ ತಮ್ಮ ಸುಕು ಕಿಲಾಡಿಗಳು,ಪೆದ್ದರು ಈ ಏಟು ಉಚಿತವಾಗಿ ಸಿಗುತ್ತಿತ್ತು ಆ ದಿನಗಳಲ್ಲಿ ಬಾಲ್ಯದ ಸವಿತುಂಬಿಕೊಟ್ಟ ಅವರಿಗೆ ನಾನಿಂದಿಗೂ ಋಣಿ….!
ನಮ್ಮನೆಯಲ್ಲಿ ಬಾಡಿಗೆಗೆ ಬಂದಿದ್ದ ಇವರು ಎಂದು ಹೊರಗಿನವರಂತೆ ಅನಿಸಿರಲಿಲ್ಲ ಈಗ ಕೂಡ ಜಾತಿಯ ಪಾವಿತ್ರ್ಯತೆ ಮೀರಿ ಬೆಳೆದ ಬಂಧ ಮತ್ತು ಬಂಧುಗಳು ಇಂದಿಗೂ ಎಂದೆಂದಿಗೂ…….! ಇದು ಕ್ರೀಡೆ ನಮ್ಮೊಳಗೆ ಹೇಗೆ ಹೋಕ್ಕಿದ್ದು ಎಂಬುದಕ್ಕೆ ಉದಾಹರಣೆ ಅಷ್ಟೇ.

ನಂತರ ಹೈಸ್ಕೂಲ್ ಗಟ್ಟಿ ಮೇಸ್ಟ್ರು ನಟರಾಜ್ ಸರ್ ನಾವು ಮೂರು ವರ್ಷ ಕೊಚ್ಚೆಯಲ್ಲಿ ಬಿದ್ದು ಎದ್ದು ಆಡಿದ್ದೆ ಜಾಸ್ತಿ ಇಂದಿಗೂ ನಾವು ಅವರೆದುರು ನಿಂತು ಮಾತನಾಡುವ ಧೈರ್ಯ ಮಾಡಲು ಸಾಧ್ಯವಿಲ್ಲ ಅಂತಹ ಗುರುಗಳು ನಮಗೆ…. ಅಲ್ಲಿ ಆಡುವುದರೊದಿಗೆ ಆಟಗಾರರ ಪರಿಚಯ ಮತ್ತು ಎಲ್ಲಾ ಆಟಗಳು ಹೀಗೆ ಆಗಬೇಕು ಎಂದು ತಿದ್ದಿ ಹೇಳಿ ಕಳಿಸಿದ ದೇವರು ಅವರು….. ಆ ಸವಿ ಬೆಳೆದದ್ದು ಶಾಲಾ ದಿನಗಳಿಂದಲೂ ಪೇಪರ್ ಕಟಿಂಗ್ ಇಂದ….!

ಕದ್ದು ಕಟ್ ಮಾಡಿ ಇಟ್ಟುಕೊಳ್ಳುವುದರಲ್ಲಿನ ಸವಿ ಯಾವುದರಲ್ಲೂ ಇರಲು ಸಾಧ್ಯವಿಲ್ಲ ಅನಿಸುತ್ತೆ…..
ಹಾಗೇಯೆ ನಾನು ನೆಚ್ಚಿಕೊಂಡ ಆಟಗಾರರು ಬಹಳ ಇದ್ದಾರೆ ಅದರಲ್ಲಿ ಅಕ್ಷತಕ್ಕ ಕೂಡ ಒಬ್ಬರು ಎನ್ನುವುದಕ್ಕೆ ಬಹಳ ಖುಷಿ ಆಗುತ್ತೆ…..

ನಾನು ಆಗಷ್ಟೇ ಡಿಗ್ರಿ….! ದಿನದ ಬೆಳಗು ನಮ್ಮದು ಪೇಪರ್ ಓದೋದರಿಂದ ಶುರು, ಆಗ ನನಗೆ ಕಂಡ ಚಿತ್ರ ಇವರದು ಕರ್ನಾಟಕ ಪ್ರತಿನಿಧಿಸಿದವರು ಎಂದು …! ಎಷ್ಟು ಖುಷಿ ಆಯ್ತು ಎಂದರೆ, ಅಂದಿನ ಖುಷಿ ಇವತ್ತಿಗೂ ನೆನಪಿದೆ…! ಇವರನ್ನು ನಾವೆಲ್ಲಾ ಹೇಗೆ ನೋಡೋದು ಅಂತ ಫ್ರೇಂಡ್ಸ ಜೊತೆ ಕೇಳಿದ್ದೆ, ಇಲ್ಲಿ ಕುಳಿತು ಕನಸು ಕಾಣು ಎಂದಿದ್ದರು…!
ಎದುರು ನೋಡಲು ಅಸಾಧ್ಯ ಎಂಬ ಮನಸ್ಥಿತಿ ನನಗಾಗ…. !

ಅಚ್ಚರಿ ಎಂದರೆ ಯಾರೇ ಕೇಳಿದರು ಅಕ್ಷತ ಪೂಜಾರಿ ಇಷ್ಟ, ಕ್ರಿಕೇಟ್ ಅಂದ್ರೆ ಧೋನಿ,ಸಚಿನ್,ಶಿಖರ್ ಧವನ್ ಇಷ್ಟ ಅಂತ ಹೇಳುವಾಗಲೆಲ್ಲಾ ಇವರನ್ನು ಭೇಟಿಯಾಗೋಕೆ ಅಸಾಧ್ಯ ಎಂಬ ಮಾತು ಹೇಳಿನೇ ಮಾತು ಮುಗಿಸುತ್ತಿದ್ದೆ ಆದರೆ ಅಕ್ಷತಕ್ಕ ಅಚಾನಕ್ಕಾಗಿ ಮಕ್ಕಿಮನೆ ಕಲಾವೃಂದ ಮಂಗಳೂರು ೨೦೧೯ ಸಂಭ್ರಮದಲ್ಲಿ ಸಿಕ್ಕಿದ್ದರು ನನಗೆ ಮಾತಾಡಿಸೋದು ಹೇಗೆ….? ಇಷ್ಟು ಜನರ ಮಧ್ಯೆ ನಿನ್ಯಾರು ಎಂದು ಕೇಳಿದರೆ ಭಯ…! ಏನೆಲ್ಲಾ ಯೋಚನೆಯಲ್ಲಿ ಆ ದಿನ ಮುಗಿಯಿತು…… ಆ ನೋಡಿದ ಕ್ಷಣ ಎಂದಿಗೂ ಜೀವಂತ… ಆದರೆ ನನಗೆ ಹೇಗಾದರು ಮಾತಾಡಿಸಬೇಕು ಅಂತ ತುಡಿತ…! ಸುದೇಶ್ ಸರ್ ಜೊತೆ ಹೇಗೋ ಧೈರ್ಯ ಮಾಡಿ ಕೇಳಿದೆ ನನ್ನ ಅದೃಷ್ಟ ಅವರಹುಟ್ಟಿದ ಹಬ್ಬ ಒಂದೆರಡು ದಿನ ಬಾಕಿ ಇದೆ ವಿಶ್ ಮಾಡಿ ಅಂದ್ರು ಹೇಗೋ ಅವರ ನಂಬರ್ ತಗೊಂಡು ವಿಶ್ ಮಾಡಿದೆ ಅದು ಮೆಸೆಜ್ ಅಲ್ಲಿ……!

ಥ್ಯಾಂಕ್ಯೂ…..

ಎಂದು ಕಳಿಸಿದ್ದೆ ನನಗೊಂದು ಸಂಭ್ರಮ. ಆ ಸಂಭ್ರಮ ಈ ವರ್ಷ ಹುಟ್ಟಿದ ದಿನ ಮತ್ತದೆ ಸಂದೇಶ ಕಳಿಸಿದೆ ಆಗ ಭೇಟಿಯಾಗೊಣ ಯಾವಾಗಲಾದರೂ ತುಂಬಾ ಖುಷಿ ಆಯ್ತು ಅಂತ ಉತ್ತರ ಬಂತು… ! ಅಂದ್ರೆ ಯಾರಿಗಾದರೂ ಅಷ್ಟೇ ಅಪ್ಪಿಕೊಂಡವರು ಒಂದು ಮಾತನಾಡಿದರೆ ಆಗುವ ಖುಷಿಗೆ ಪಾರವೇ ಇರಲಿಲ್ಲ ಆಟದಲ್ಲಿ ಭಿನ್ನತೆ ಇರಬಹುದು ಅದರೆ ವ್ಯಕ್ತಿ ಇಷ್ಟ ಆದರೆ ಅವರ ಎಲ್ಲಾ ಕಾರ್ಯಗಳು ಬಹಳ ಬೇಗ ಹೃದಯದ ಮೂಲೆಯಲ್ಲಿ ಅವಿತು ಬಿಡುತ್ತವೆ…ಜೊತೆಗೆ ಅವರ ಸರಳತೆ ನನಗೆ ಅವರ ಮೇಲಿರುವ ಪ್ರೀತಿಯನ್ನು ದುಪ್ಪಟ್ಟು ಮಾಡಿದ್ದು ನಿಜ.

ಹೀಗೆ ಯಾಕೆ ಬಂತು ಈ ಮಾತು ಎಂದರೆ ನಾವು ಒಂದಷ್ಟು ಸೀಮಿತ ಗಡಿಯನ್ನು ಹಾಕಿಕೊಂಡು ಬಿಟ್ಟಿದ್ದೇವೆ ಕ್ರಿಕ್ರೇಟ್ ಅಂದ್ರೆ ಮಾತ್ರ ಒಂದು ಶ್ರೇಷ್ಠ ಆಟಗಳಲ್ಲಿ ಒಂದು ಎಂದು ಎಲ್ಲಾ ಕ್ರೀಡೆಗಳು ಕೂಡ ಶ್ರೇಷ್ಟವೆ ಆಗಬೇಕು…..!

ಸಾಧಕನ ಹಿಂದಿನ ಪರಿಶ್ರಮ,ಏಕಾಗ್ರತೆ, ಆಟದ ಮೇಲಿನ ಪ್ರೀತಿಯನ್ನು ಯಾವ ಮಾರ್ಕೇಟ್ನಲ್ಲೂ ಖರೀದಿಸಲು ಸಾಧ್ಯವಿಲ್ಲ…. ನಿನ್ನೆ ಈ ಮುದ್ದಾದ ಕೈಯಲ್ಲಿ ಆದ ಗಾಯವನ್ನು ನೋಡಿ ತುಂಬಾ ಬೇಸರವಾಗುತ್ತದೆ ಅಕ್ಕ ಎಂದಿದ್ದೇ, ಆದರೀಗ ಇಂದಿನ ನಮ್ಮಗಳ ಸಂಭ್ರಮಕ್ಕೆ ಇಂತಹ ಅದೇಷ್ಟೋ ಆಟಗಾರರು ತಮ್ಮ ಜೀವವನ್ನೇ ಮುಡುಪಾಗಿಟ್ಟಿದ್ದಾರೆ..ಸಂಬಳವಿಲ್ಲದ ಚಾಕರಿಯ ರೀತಿ ಅದೇಷ್ಟೋ ಮಂದಿಯ ಬದುಕು ಕೂಡ ಏನು ಇಲ್ಲದೆ ಪದಕಗಳನ್ನು ಮಾರಿ ಜೀವಿಸುವ ಪರಿಸ್ಥಿತಿ ಇಂದು ಎದುರಾಗಿದೆ…..

ಸರ್ಕಾರ ಇನ್ನಾದರೂ ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ಮನಸು ಮಾಡಲಿ ಎಂಬುದು ನನ್ನ ಆಶಯ…! ಕನಸು ಕಾಣುವುದರಲ್ಲಿ ಯಾವ ತಪ್ಪು ಇಲ್ಲ ಎಂದು ಅಂದುಕೊಳ್ಳುತ್ತೇನೆ ಪ್ರತಿಭೆ ಹುಟ್ಟುವುದು ಗುಡಿಸಲಲ್ಲಿ ಬೆಳೆದು ಸಿಂಗರಿಸಕೊಳ್ಳುವುದು ಅರಮನೆಯಲ್ಲಿ ಎಂಬ ಮಾತಿದೆ, ಆದರೆ ಕ್ರೀಡಾ ಲೋಕದ ಕೆಲವು ಆಟಗಾರರು ಇದಕ್ಕೆ ಪಾತ್ರರಾಗುತ್ತಾರೆ‌ ಅಷ್ಟೇ…!
ಪ್ರೋತ್ಸಾಹ ಸಿಕ್ಕರೆ ಎಲ್ಲಾ ರೀತಿಯ ಆಟಗಾರರು ಕೂಡ ನಮ್ಮ ನಾಡಿನ ಹಿರಿಮೆ ಎತ್ತರಿಸುತ್ತಾರಲ್ಲವೇ ಅದಕ್ಕೊಳ್ಳೆ ವೇದಿಕೆ ನಾವೇ ಸೃಷ್ಟಿಸಿ ಕೊಳ್ಳಬೇಕಾಗಿದೆ…… ನಮ್ಮ ನಾಡು ನಮ್ಮ ಹೆಮ್ಮೆ ಎಲ್ಲಾ ಕ್ರೀಡೆಯನ್ನು ಗೌರವಿಸಿ ಅಪ್ಪಿಕೊಂಡು ಕೊಂಡಾಡೋಣ ಏನಂತೀರಾ……?

ಅದೇನೇ ಇರಲಿ ಆಟದ ಜಗತ್ತಿನ ಎಲ್ಲಾ ಸಾಧಕರಿಗೂ ಹಾಗೂ ಸಾಧಿಸುವ ಮನಗಳಿಗೂ ಕ್ರೀಡಾಸಕ್ತರಗೂ ಈ ದಿನದ ಶುಭಾಶಯಗಳು.

ಮೇಘಾಲಯ ವಿದ್ಯಾರ್ಥಿಯ ಪ್ರಾಣಿ ಪ್ರೇಮ:ಗುರೂಜಿ ಸಾಯಿಈಶ್ವರ್ ಶ್ಲಾಘನೆ

ಕಾಪು(24ಆ/2020): ಗಣೇಶ ಚತುರ್ಥಿಯ ದಿನ ಶಂಕರಪುರದ ದ್ವಾರಕಾಮಾಹಿ ಶ್ರೀ ಸಾಯಿಬಾಬಾ ಮಂದಿರಕ್ಕೆ ಐದಾರು ಕರೆಗಳು ಇನ್ನಂಜೆಯ ಸ್ಥಳೀಯ ಸಾರ್ವಜನಿಕರಿಂದ ಬಂದಿದ್ದು “ರಸ್ತೆಯಲ್ಲಿ ನಾಯಿ ಅಪಘಾತಕ್ಕೀಡಾಗಿದ್ದು ಬೇಗ ತೆಗೆಯಿರಿ ಗಣೇಶೋತ್ಸವ ಮೆರವಣಿಗೆ ಇದೇ ದಾರಿಯಲ್ಲಿ ಹೋಗಲಿದೆ” ಎಂದು ಹೇಳುತ್ತಿದ್ದರಲ್ಲದೆ ಯಾರೂ ನಾಯಿಯನ್ನು ದಾರಿಯಿಂದ ತೆಗೆಯುವ ವ್ಯವಸ್ಥೆ ಮಾಡಿರಲ್ಲಿಲ್ಲ.
ಶಂಕರಪುರದ ಶ್ರೀ ಸಾಯಿ ಸಾಂತ್ವನ ಮಂದಿರ ಟ್ರಸ್ಟ್ ನ ವತಿಯಿಂದ ನಡೆಯುವ ಪ್ರಾಣಿ-ಪಕ್ಷಿ ಮೋಕ್ಷ ವಾಹನಕ್ಕೆ ಕರೆಗಳು ಬಂದಿದ್ದು ಮಂದಿರದ ಚಾಲಕ ಅಪಘಾತವಾದ ಸ್ಥಳಕ್ಕೆ ಹೋದಾಗ ನಾಯಿ ಅಪಘಾತಕ್ಕೀಡಾಗಿದ್ದರು ಪ್ರಾಣ ಹೋಗಿಲ್ಲ,ಈ ವಾಹನ ಸತ್ತಂತ ಪ್ರಾಣಿ-ಪಕ್ಷಿಗಳನ್ನು ಸೇವೆಯ ರೂಪದಲ್ಲಿ ಮಾತ್ರ ಮಣ್ಣು ಮಾಡುತ್ತದೆ.ಅಪಘಾತದಲ್ಲಿ ಗಾಯಗೊಂಡ ಯಾವುದೇ ಪ್ರಾಣಿ-ಪಕ್ಷಿಗಳನ್ನು ಆರೈಕೆ ಮಾಡಲು ಮಂದಿರದಲ್ಲಿ ವ್ಯವಸ್ಥೆ ಇಲ್ಲದ ಕಾರಣ, ಏನು ಮಾಡುವುದು ಎಂದು ಚಾಲಕ ಯೋಚನೆ ಮಾಡುತ್ತಿದ್ದ. ಸ್ಥಳೀಯರು ಎಲ್ಲರೂ ದೂರದಿಂದಲೇ ನಿಂತು ನೋಡುತ್ತಿದ್ದರು ಮತ್ತು ಅದೇ ದಾರಿಯಲ್ಲಿ ಗಣೇಶೋತ್ಸವ ಮೆರವಣಿಗೆ ಬರುತ್ತಿರುವ ಬಗ್ಗೆ ಮಾತಾಡುತ್ತಿದ್ದರು.
ಆಗ ಅಲ್ಲಿಯೇ ಇದ್ದ ಮೇಘಾಲಯ ಮೂಲದ ಸ್ಥಳೀಯ ಹಾಸ್ಟೆಲ್ ವಿಧ್ಯಾರ್ಥಿ ತೋಮಸ್ ಎಂಬಾತ ಚಾಲಕನ ಸಮಸ್ಯೆಗಳನ್ನು ಕೇಳಿ ತಾನು ವಾಸವಿರುವ ಹಾಸ್ಟೆಲ್ನ ಬಳಿ ತಂದು ಇಡಿ ಎಂದನು.ತಾ23 ಬೆಳಿಗ್ಗೆ ನಾಯಿ ತನ್ನ ಪ್ರಾಣ ಬಿಟ್ಟಿದೆ ಎಂದು ಮಂದಿರಕ್ಕೆ ತೋಮಸ್ ಕರೆ ಮಾಡಿದರು ತಕ್ಷಣ ಸೇವಾಕರ್ತರು ಮೋಕ್ಷ ವಾಹನದಲ್ಲಿ ತೆರಳಿ ನಾಯಿಯನ್ನು ಮಣ್ಣು ಮಾಡಿದರು.
ಗುರೂಜಿಯವರ ಹೇಳಿಕೆಯಂತೆ “ನಾವು ವರ್ಷಕ್ಕೆ ಮೂರು ನಾಲ್ಕು ಸಾವಿರ ಪ್ರಾಣಿ ಪಕ್ಷಿಗಳನ್ನು ಮಣ್ಣು ಮಾಡುತ್ತೇವೆ ಇದು ನಮಗೆ ತೃಪ್ತಿ ಸಂತೋಷವನ್ನು ಕೊಟ್ಟಂತ ವಿಚಾರ, ನಾವು ಸರ್ಕಾರ,ಸಂಘ ಸಂಸ್ಥೆಗಳ ಪ್ರೋತ್ಸಾಹ ಇಲ್ಲದೆ ನಾಲ್ಕು ವರ್ಷದಿಂದ ಈ ಸೇವೆಯನ್ನು ಮಾಡುತ್ತಿದ್ದೇವೆ,ಮಾಡುವ ಈ ಸೇವೆ ಪರಮಾತ್ಮನ ಸೇವೆ ಎಂದು ತಿಳಿದು ಮಾಡುತ್ತಿದ್ದೇವೆ.ನಿನ್ನೆಯ ದಿನ ನಮ್ಮ ಸೇವೆಯಲ್ಲಿ ಆದ ಸಮಸ್ಯೆಯನ್ನು ಗುರುತಿಸಿದ್ದು ದೂರದ ಮೇಘಾಲಯದ ವಿಧ್ಯಾರ್ಥಿ ತೋಮಸ್ ಎಂಬಾತ,ಅವರಿಗೆ ನಮ್ಮ ಸಮಸ್ಯೆ ತಿಳಿದು ಅಲ್ಲಯೇ ಪರಿಹಾರ ಮಾಡುವ ಪ್ರಯತ್ನ ಮಾಡಿರುವರು”ಎಂದಿರುವರು.

ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ: ಚಾಲಕ್ ಸಾಥ್’ ಯೋಜನೆಯಿಂದ ಆರ್ಥಿಕ ನೆರವು

ತೊಕ್ಕೊಟ್ಟು(22ಆ/2020): ಚಾಲಕ್ ಸಾಥ್ ಯೋಜನೆಯಡಿ ಆರ್ಥಿಕ ನೆರವು ವಿತರಣೆಗೆ ಚಾಲನೆ
ಸಮಾಜದಲ್ಲಿ ಚಾಲಕ ವರ್ಗ ಶ್ರಮ ಜೀವಿಗಳಾಗಿದ್ದು, ಸಾರ್ವಜನಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ, ಲಾಕ್ ಡೌನ್ ಸಂದರ್ಭದಲ್ಲಿ ಸರ್ಕಾರ ಕೇವಲ 28 ಸಾವಿರ ಚಾಲಕರಿಗೆ ಹೆಸರಿಗಾಗಿ ಹಣ ಜಮಾಯಿಸಿ ಇಬ್ಬಗೆ ನೀತಿ ತೋರಿದೆ ಎಂದು ಫೆಡರೇಶನ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿವಾಕರ್ ಅಭಿಪ್ರಾಯಪಟ್ಟರು.
ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ಮಂಗಳೂರು ಕ್ಷೇತ್ರ ಸಮಿತಿಯಿಂದ ‘ಚಾಲಕ್ ಸಾಥ್’ ಯೋಜನೆಯಡಿ ಅಟೋರಿಕ್ಷಾ ಚಾಲಕರಿಗೆ ಆರ್ಥಿಕ ನೆರವು ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಲಾಕ್ ಡೌನ್ ಸಂದರ್ಭದಲ್ಲಿ ಸರ್ಕಾರ ಮಾತ್ರವಲ್ಲದೆ ಯಾವುದೇ ಬ್ಯಾಂಕುಗಳಲ್ಲೂ ಚಾಲಕ ವರ್ಗಕ್ಕೆ ಸಾಲ ನೀಡಿಲ್ಲ, ಇಂತಹ ಸಂದರ್ಭದಲ್ಲಿ ವೆಲ್ಫೇರ್ ಪಕ್ಷ ಹಾಗೂ ಕೆಲವು ಸಂಘಟನೆಗಳು ನೆರವು ನೀಡಿರುವುದು ಶ್ಲಾಘನೀಯ ಎಂದರು.
ವೆಲ್ಫೇರ್ ಪಾರ್ಟಿ ಆಫ್ ಜಿಲ್ಲಾ ಕಾರ್ಯದರ್ಶಿ ಮುತ್ತಲಿಬ್ ಮಾತನಾಡಿ, ಚಾಲಕ್ ಸಾಥ್ ಯೋಜನೆಯಡಿ ಮಂಗಳೂರು ಕ್ಷೇತ್ರದಿಂದ 200 ಅರ್ಜಿಗಳ ನಿರೀಕ್ಷೆಯಿತ್ತಾದರೂ 600 ಅರ್ಜಿಗಳು ಬಂದಿವೆ. ರಾಜಕೀಯ ನಾಯಕರು ಗುತ್ತಿಗೆದಾರರಿಂದಲೋ ಅಥವಾ ಇನ್ನಿತರ ಮೂಲಗಳಿಂದ ಹಣ ಪಡೆದು ಸಹಾಯ ಮಾಡುತ್ತಿದೆಯೇ ಹೊರತು ವೈಯಕ್ತಿಕವಾಗಿ ಸಹಾಯ ಮಾಡುವುದಿಲ್ಲ‌‌‌. ಆದರೆ ವೆಲ್ಫೇರ್ ಪಕ್ಷದ ಮುಖಂಡರು ವೈಯಕ್ತಿಕ ಹಾಗೂ ಅಭಿಮಾನಿಗಳ ಸಹಕಾರದಿಂದ ಜನರಿಗೆ ಸಹಾಯ ಮಾಡುತ್ತಿದೆ ಎಂದು ತಿಳಿಸಿದರು. ‌
ವೆಲ್ಫೇರ್ ಪಕ್ಷದ ಮಂಗಳೂರು ಕ್ಷೇತ್ರಾಧ್ಯಕ್ಷ ಹನೀಫ್ ತಲಪಾಡಿ ಮಾತನಾಡಿ, ಇಂದು ರಾಜಕೀಯದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ, ಲಾಕ್ ಡೌನ್ ಸಂದರ್ಭ ಜನಪ್ರತಿನಿಧಿಗಳು ತಮಗೆ ಕಾಮಗಾರಿಗಳಲ್ಲಿ ಬಂದ ಕಮೀಷನ್ ಹಣ ಹಂಚುತ್ತಿದ್ದರೂ ಅಟೋ ಚಾಲಕರು ಹಾಗೂ ಜನಸಾಮಾನ್ಯರು ಸಂಕಷ್ಟ ಅನುಭವಿಸುತ್ತಿರಲಿಲ್ಲ ಎಂದರು.
ಫಾರೂಕ್ ಅಲೇಕಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಲೀಲ್ ಮುಕಚ್ಚೇರಿ ಕಾರ್ಯಕ್ರಮ ನಿರೂಪಿಸಿದರು. ‌

Related Post