July 10, 2020

Month: December 2019

ಮೂಡುಬಿದಿರೆ ಕಂಬಳ: ಯಡಿಯೂರಪ್ಪರಿಂದ ಅಬ್ಬಕ್ಕ ಪ್ರತಿಮೆ ಲೋಕಾರ್ಪಣೆ

ಮೂಡುಬಿದಿರೆ(ಡಿ 25/2019): ಕಂಬಳವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಕಂಬಳ ಬಹಳ ವೈಶಿಷ್ಟ್ಯವಾದಂತದ್ದು, ಅಂತಹ ಕಂಬಳ ಸಮಾರಂಭವನ್ನು ಉದ್ಘಾಟನೆ ಮಾಡುವ ಪುಣ್ಯ ಕೆಲಸ ನನಗೆ ದೊರಕಿದೆ. ಈ ಭಾಗದಲ್ಲಿ ಕಂಬಳಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಬಹಳ ದೊಡ್ಡ ಮಟ್ಟದಲ್ಲಿ ಕಂಬಳ ನಡೆಸಲಾಗುತ್ತದೆ. ಕಂಬಳಕ್ಕೆ ಇನ್ನೂ ಹೆಚ್ಚಿನ ಪ್ರೋತ್ಸಾಹ ಸಿಗಬೇಕು” ಎಂದು ತಿಳಿಸಿದ್ದಾರೆ.
ರಾಣಿ ಅಬ್ಬಕ್ಕ ಪುತ್ಥಳಿಯನ್ನು ಉದ್ಘಾಟಿಸಿದ ಅವರು, “ಕಂಬಳವನ್ನು ಉದ್ಘಾಟಿಸುವ ಹಾಗೂ ರಾಣಿ ಅಬ್ಬಕ್ಕ ಪುತ್ಥಳಿ ಅನಾವರಣ ಮಾಡಲು ಜನರು ನನಗೆ ಅವಕಾಶ ಮಾಡಿಕೊಟ್ಟಿದ್ದಾರೆ, ಇದು ನನ್ನ ಪುಣ್ಯ” ಎಂದರು.
ಮೂಡುಬಿದಿರೆಯ ಕಡಲಕೆರೆ ನಿಸರ್ಗಧಾಮದ ವೀರರಾಣಿಅಬ್ಬಕ್ಕ ಸಂಸ್ಕೃತಿ ಗ್ರಾಮದಲ್ಲಿ ನಿರ್ಮಾಣಗೊಂಡ 18ಅಡಿ ಎತ್ತರದ ಮೂಡುಬಿದಿರೆಯ ಮಣ್ಣಿನ ಮಗಳು ವೀರ ರಾಣಿ ಅಬ್ಬಕ್ಕ ಪ್ರತಿಮೆಯನ್ನು ಲೋಕಾರ್ಪಣ ಮಾಡಿ ಮಾತನಾಡಿದರು.
ತುಳುನಾಡಿನ ಮಂದಿ ಕಂಬಳ ಕ್ರೀಡೆಯನ್ನು ಉಳಿಸಿ ಬೆಳೆಸುತ್ತಿದ್ದೀರಿ ಎಂದು ಪ್ರಶಂಸಿಸಿದ ಮುಖ್ಯಮಂತ್ರಿಗಳು, ಸಂಸ್ಕøತಿ ಪ್ರೀತಿ ಹೀಗೆ ಉಳಿಯುವಂತಾಗಲಿ ಎಂದು ಆಶಿಸಿದರು.
ಮೂಡುಬಿದಿರೆ ನೂತನ ತಾಲೂಕಾಗಿ ಘೋಷಣೆಯಾದ ಬಳಿಕ ಮೊಟ್ಟಮೊದಲ ಬಾರಿಗೆ ತಾಲೂಕಿಗೆ ಆಗಮಿಸಿದ ಮುಖ್ಯಮಂತ್ರಿಗಳು ತಾಲೂಕಿನ ಸಮಗ್ರ ಅಭಿವೃದ್ಧಿಗೆ ಸರ್ವ ರೀತಿಯ ಸಹಕಾರವನ್ನು ನೀಡುವುದಾಗಿ ಘೋಷಿಸಿದರು. ಜೈನಕಾಶಿ, ವಿದ್ಯಾಕಾಶಿ ಮೂಡುಬಿದಿರೆಯನ್ನು ಮಾದರೀ ತಾಲೂಕಾಗಿ ಅಭಿವೃದ್ಧಿ ಪಡಿಸುವ ಕನಸಿದೆ ಎಂದರು.
ಕಂಬಳ ಕೋಣದ ಮಾಲೀಕರು ಕಂಬಳ ಕೋಣಗಳನ್ನು ಮಕ್ಕಳಂತೆ ಸಾಕುತ್ತಿದ್ದಾರೆ ಎಂದು ಪ್ರಶಂಸಿಸಿದ ನಾಡದೊರೆ ಬಿ.ಎಸ್.ಯಡಿಯೂರಪ್ಪ, ಸಾಂಪ್ರದಾಯಿಕ ಕಂಬಳವನ್ನು ಉಳಿಸಿ ಬೆಳೆಸುವುದು ನಿಶ್ಚಿತ ಎಂದು ಘೋಷಿಸಿದರು.
ತುಳುನಾಡಿನ ಮಂದಿಗಳು ಕ್ರಿಯಾಶೀಲರು, ಶ್ರಮ ಜೀವಿಗಳು ವಿಶ್ವದೆಲ್ಲೆಡೆ ತಮ್ಮ ಅಗಾಧ ಪ್ರತಿಭೆಗಳಿಂದ ಪ್ರಸಿದ್ಧಿ ಪಡೆದವರು ಎಂದು ಹೇಳಿದರು.
ಅಬ್ಬಕ್ಕನ ಜೀವನ ನಮಗೆ ಮಾದರಿ,ವಸಾಹತು ಶಾಹಿಗಳ ವಿರುದ್ಧ ಹೋರಾಟ ಮಾಡಿದ ಪ್ರಥಮ ಮಹಿಳೆ ವೀರವನಿತೆ ಅಬ್ಬಕ್ಕಳ ಜೀವನ ಮಾದರೀ ಎಂದು ಪ್ರಶಂಸಿಸಿದ ಮುಖ್ಯಮಂತ್ರಿಗಳು ಮುಂದಿನ ಪೀಳಿಗೆಗೆ ಇವರ ಜೀವನ ಲಭಿಸುವಂತಾಗಬೇಕಾಗಿದೆ. ಶಿಕ್ಷಣ ಸಂಸ್ಥೆಗಳಲ್ಲಿ, ಪಠ್ಯಗಳಲ್ಲಿ ಇದು ಬರುವಂತಾಗಲಿ ಎಂದರು. ಮಹಿಳೆ ಸಬಲೆ ಎಂದು ಸಾರಿದ ಹಿರಿಮೆ ಅಬ್ಬಕ್ಕ ರಾಣಿಗಿದೆ ಎಂದರು.

ಮಂಗಳೂರು: ದೊಂಬಿ ಬಗ್ಗೆ ಪೋಲಿಸರಿಗೆ ಜೀವ ಬೆದರಿಕೆ ಕರೆ,ದೂರು ದಾಖಲು

ಮಂಗಳೂರು(24ಡಿ/2019): ಡಿ.19ರಂದು ನಡೆದ ಅಹಿತಕರ ಘಟನೆಗಳ ಬಳಿಕ ಈಗ ಕೆಲವು ಪೊಲೀಸ್‌ ಅಧಿಕಾರಿಗಳಿಗೆ ಮತ್ತು ಅವರ ಕುಟುಂಬದವರಿಗೆ ಅನಾಮಧೇಯ ವ್ಯಕ್ತಿಗಳಿಂದ ಬೆದರಿಕೆ ಕರೆಗಳು ಬರುತ್ತಿದ್ದು, ಈ ಬಗ್ಗೆ ನಗರದ ಸೈಬರ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಇದರೊಂದಿಗೆ ಡಿ.19ರಂದು ನಗರದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಪಟ್ಟ ಯಾವುದೇ ಫೂಟೋ, ವಿಡಿಯೋಗಳಿದ್ದಲ್ಲಿ ಸಾರ್ವಜನಿಕರು ವಾಟ್ಸ್‌ಆ್ಯಪ್‌ ನಂಬರ್‌ 9480802327ಗೆ ಕಳುಹಿಸಿ ಕೊಡಿ ಅಥವಾ [email protected] ಇ-ಮೇಲ್‌ ಮಾಡಬಹುದು ಎಂದು ಮಂಗಳೂರು ಪೊಲೀಸ್‌ ಕಮಿಷನರ್‌ ಡಾ| ಹರ್ಷ ಟ್ವೀಟ್‌ ಮಾಡಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ಪ್ರತಿಭಟನೆಗೆ ಅನುಮತಿ ನಿರಾಕರಣೆ ಹಿನ್ನೆಲೆಯಲ್ಲಿ 19ರಂದು ನಗರದ ಸ್ಟೇಟ್‌ ಬ್ಯಾಂಕ್‌ ಮತ್ತು ಬಂದರ್‌ ಪರಿಸರದ ನೆಲ್ಲಿಕಾಯಿ ರಸ್ತೆ, ಅಜೀಜುದ್ದೀನ್‌ ರಸ್ತೆ, ಮಿಷನ್‌ ರಸ್ತೆ ಮತ್ತಿತರ ಕಡೆ ಪ್ರತಿಭಟನಾಕಾರರು ಗುಂಪು ಸೇರಿದ್ದರಿಂದ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಈ ಸಂಘರ್ಷದಲ್ಲಿ ಗೋಲಿಬಾರ್‌ಗೆ ಇಬ್ಬರು ಸಾವನ್ನಪ್ಪಿದ್ದರು. ಘಟನೆ ಬಳಿಕ ಪೊಲೀಸ್‌ ಕಾರ್ಯಾಚರಣೆ ವಿರುದ್ಧ ಆಕ್ರೋಶಿತರಾದ ಕೆಲವರು ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಕೊಲೆ ಬೆದರಿಕೆ ಹಾಕಲು ಆರಂಭಿಸಿದ್ದಾರೆ. ಇದರಿಂದಾಗಿ ಕೆಲವು ಪೊಲೀಸ್‌ ಅಧಿಕಾರಿಗಳಿಗೂ ಗನ್‌ಮ್ಯಾನ್‌ ಭದ್ರತೆ ಒದಗಿಸಲಾಗಿದೆ.
ಕದ್ರಿ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ಶಾಂತಾರಾಮ ಮತ್ತು ಕುಟುಂಬದವರಿಗೆ ಹೆಚ್ಚಿನ ಬೆದರಿಕೆ ಕರೆಗಳು ಬರುತ್ತಿವೆ. ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶಾಂತಾರಾಮ ಮತ್ತವರ ಕುಟುಂಬದವರಿಗೆ ಜೀವ ಬೆದರಿಕೆಯನ್ನು ಹಾಕುತ್ತಿರುವ ಹಿನ್ನೆಲೆಯಲ್ಲಿ ಸೈಬರ್‌ ಕ್ರೈಮ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮಂಗಳೂರು ಗೋಲಿಬಾರ್ ಮೃತರಿಗೆ 10ಲಕ್ಷ.ರೂ

ಮಂಗಳೂರು(22ಡಿ/2019): ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಮಂಗಳೂರಿನಲ್ಲಿ ಗುರುವಾರ ನಡೆದ ಪ್ರತಿಭಟನೆಯ ಸಂದರ್ಭ ಗೋಲಿಬಾರ್‌ಗೆ ಬಲಿಯಾದ ಇಬ್ಬರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರವನ್ನು ಘೋಷಿಸಿದೆ.
ಸಂತ್ರಸ್ತ ಎರಡೂ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ನೀಡಲಾಗುವುದು. ಗೋಲಿಬಾರ್ ಕುರಿತಂತೆ ಗೃಹಸಚಿವರ ಜೊತೆ ಚರ್ಚಿಸಿ ತನಿಖೆಗೆ ಕ್ರಮ ಕೈಗೊಳ್ಳಲಾಗುವುದ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಇದೇವೇಳೆ ಸದ್ಯ ಮಂಗಳೂರು ಶಾಂತವಾಗಿದೆ. ಅಲ್ಲಿಗೆ ಸಿದ್ದರಾಮಯ್ಯ ಸೇರಿದಂತೆ ಯಾವುದೇ ನಾಯಕರ ಭೇಟಿಗೆ ಯಾವುದೇ ಅಭ್ಯಂತರವಿಲ್ಲ ಎಂದವರು ತಿಳಿಸಿದ್ದಾರೆ.ಮಂಗಳೂರಿನಲ್ಲಿ ಗುರುವಾರ ಸಂಜೆ ನಡೆದ ಗೋಲಿಬಾರ್‌ನಲ್ಲಿ ಅಬ್ದುಲ್ ಜಲೀಲ್ ಮತ್ತು ನೌಶೀನ್ ಎಂಬವರು ಮೃತಪಟ್ಟಿದ್ದರು.

ಗೋಲಿಬಾರಿನಲ್ಲಿ ಮೃತರ ಕುಟುಂಬವನ್ನು ಬೇಟಿಯಾದ ಯಡಿಯೂರಪ್ಪ

ಮಂಗಳೂರು(21ಡಿ/2019): ಮಂಗಳೂರಿಗೆ ಇಂದು ಆಗಮಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಗೋಲೀಬಾರ್ ನಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರನ್ನು ಶನಿವಾರ ಸರ್ಕ್ಯೂಟ್ ಹೌಸ್ ನಲ್ಲಿ ಭೇಟಿ ಮಾಡಿ ಸಾಂತ್ವನ ಹೇಳಿದರು.
ಬಳಿಕ ಅವರು ವಿವಿಧ ಸಮುದಾಯದ ಮುಖಂಡರನ್ನು ಭೇಟಿಯಾಗಿ, ಅಹವಾಲು ಆಲಿಸಿದರು. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ದ.ಕ. ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು, ಶಾಸಕರಾದ ಯು.ಟಿ. ಖಾದರ್, ವೇದವ್ಯಾಸ ಕಾಮತ್, ಬಿ.ಎಂ. ಫಾರೂಕ್, ಐವನ್ ಡಿಸೋಜಾ , ರಾಜೇಶ್ ನಾಯಕ್, ಮಾಜಿ ಶಾಸಕರಾದ ಮೊಹಿದೀನ್ ಬಾವಾ, ಜೆ.ಆರ್. ಲೋಬೋ, ಸೆಂಟ್ರಲ್ ಮುಸ್ಲಿಂ ಕಮಿಟಿ ಅಧ್ಯಕ್ಷ ಮುಹಮ್ಮದ್ ಮಸೂದ್ ಮತ್ತಿತರರು ಇದ್ದರು.

ದ.ಕ: ಶಾಲಾ ಕಾಲೇಜುಗಳಿಗೆ ನಾಳೆ ರಜೆ

ಮಂಗಳೂರು(20ಡಿ/2019): ಮಂಗಳೂರು ನಗರದ ವ್ಯಾಪ್ತಿಯಲ್ಲಿ ಕರ್ಫ್ಯೂ ಸ್ಥಿತಿ ಇರುವುದರಿಂದ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಡಿಸೆಂಬರ್ 21ರ ಶನಿವಾರವೂ ಸಹ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆಯನ್ನು ಘೋಷಿಸಿ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರು ಆದೇಶ ಹೊರಡಿಸಿದ್ದಾರೆ.
ಈಗಾಗಲೇ ದ.ಕ. ಜಿಲ್ಲೆಯಾದ್ಯಂತ ಇಂಟರ್ನೆಟ್ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿದೆ.
ಮಂಗಳೂರು ವ್ಯಾಪ್ತಿಯಲ್ಲಿ ಡಿಸೆಂಬರ್ 22ರ ಆದಿತ್ಯವಾರದವರೆಗೆ ಕರ್ಫ್ಯೂ ಸ್ಥಿತಿ ಇರುವುದರಿಂದ ಹಾಗೂ ಜಿಲ್ಲೆಯಾದ್ಯಂತ ಶನಿವಾರವೂ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಬಜಪೆ: ಐವರು ಕಾಂಗ್ರೆಸ್ ರಾಜ್ಯ ನಾಯಕರ ಬಂಧನ

ಮಂಗಳೂರು(20ಡಿ/2019): ಜಿಲ್ಲೆಯಲ್ಲಿ ನಡೆದ ಗೋಲಿಬಾರಿನಲ್ಲಿ ಮೃತಪಟ್ಟವರ ಮನೆಗೆ ಕಾಂಗ್ರೆಸ್ ನಿಯೋಗ ಭೇಟಿ ಕೊಡಲು ಬಂದಿದ್ದರು. ಆದರೆ ಈ ವೇಳೆ ಪೊಲೀಸರು ಬಜ್ಪೆ ವಿಮಾನ ನಿಲ್ದಾಣದಲ್ಲಿಯೇ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮಾಜಿ ಸ್ಪೀಕರ್ ರಮೇಶ್ ಕುಮಾರ್, ಬಸವರಾಜ ರಾಯರೆಡ್ಡಿ, ಉಗ್ರಪ್ಪ, ಎಂ.ಬಿ,ಪಾಟೀಲ್, ಮಾಜಿ ಸಚಿವ ಸೀತಾರಾಮ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆ ವಿಮಾನ ನಿಲ್ದಾಣದಲ್ಲಿ ಕೆಲ ಕಾಲ ಹೈಡ್ರಾಮಾವೇ ನಡೆದಿದೆ.
ಕಾಂಗ್ರೆಸ್ ನಿಯೋಗ ಇಂದು ಪೊಲೀಸ್ ಗೋಲಿಬಾರಿನಲ್ಲಿ ಮೃತಪಟ್ಟ ಇಬ್ಬರ ಮನೆಗೆ ಭೇಟಿ ಕೊಡಲು ಹಾಗೂ ಆಸ್ಪತ್ರೆಯಲ್ಲಿ ಇರುವವರಿಗೆ ಸಾಂತ್ವನ ಹೇಳಲು ಮಂಗಳೂರಿಗೆ ಆಗಮಿಸಿತ್ತು. ಅವರನ್ನು ಪೊಲೀಸರು ವಿಮಾನ ನಿಲ್ದಾಣದಿಂದಲೇ ಬೆಂಗಳೂರಿಗೆ ವಾಪಸ್ ಕಳುಹಿಸಲು ಪ್ರಯತ್ನ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಮುಖಂಡರು ವಾಪಸ್ ಹೋಗಲು ನಿರಾಕರಿಸಿದ್ದಾರೆ. ಆಗ ಪೊಲೀಸರು ನಿಮ್ಮನ್ನು ವಶಕ್ಕೆ ಪಡೆಯುತ್ತೇವೆ ಎಂದಾಗ ಹೈಡ್ರಾಮಾ ಸೃಷ್ಟಿಯಾಗಿತ್ತು.
ಈ ವೇಳೆ ರಮೇಶ್ ಕುಮಾರ್ ಪೊಲೀಸರ ಮೇಲೆ ಕಿರುಚಾಡಿದ್ದಾರೆ. ನಾವು ಕಾನೂನುಬಾಹಿರ ಕೆಲಸವನ್ನು ಮಾಡಲು ಬಂದಿಲ್ಲ. ಮೃತರ ಕುಟುಂಬಕ್ಕೆ ಸಾಂತ್ವನ ಹೇಳಲು ಬಂದಿದ್ದೇವೆ. ನೀವು ನಮ್ಮನ್ನು ಬಂಧಿಸಬಾರದು ಎಂದು ಗಲಾಟೆ ಮಾಡಿದ್ದಾರೆ. ಈ ವೇಳೆ ಪೊಲೀಸ್ ಮತ್ತು ಕಾಂಗ್ರೆಸ್ ನಾಯಕರ ನಡುವೆ ಎಳೆದಾಟವಾಗಿದೆ. ಕೊನೆಗೆ ಪೊಲೀಸರು ಅವರನ್ನು ಬಿಡದೆ ತಮ್ಮ ಜೀಪ್‍ನಲ್ಲಿ ಬಜಪೆ ಪೊಲೀಸ್ ಠಾಣೆಗೆ ಕರೆದಕೊಂಡು ಹೋಗಿದ್ದಾರೆ.
ಇಂದು ಸಂಜೆ ವೇಳೆ ಅವರನ್ನು ಪೊಲೀಸ್ ಠಾಣೆಯಿಂದ ನೇರವಾಗಿ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಕರೆದುಕೊಂಡು ಬಂದು ಬಿಡಲಾಗುತ್ತದೆ. ಅಲ್ಲಿಂದಲೇ ಬೆಂಗಳೂರಿಗೆ ವಾಪಸ್ ಕಳುಹಿಸುವ ಸಾಧ್ಯತೆ ಇದೆ.

ಪೋಲಿಸ್ ಠಾಣೆಗೆ ದಾಳಿಯೇ ಗುಂಡು ಹಾರಿಸಲು ಕಾರಣ

ಮಂಗಳೂರು(20ಡಿ/2019): ಪೌರತ್ವದ ಕಿಚ್ಚಿಗೆ ಮಂಗಳೂರಿನಲ್ಲಿ ಇಬ್ಬರು ಬಲಿಯಾಗಿದ್ದಾರೆ. ಘಟನೆ ಬಗ್ಗೆ ಮಂಗಳೂರು ಕಮಿಷನರ್ ಹರ್ಷ ಅವರು ಸಮರ್ಥನೆ ನೀಡಿದ್ದಾರೆ. ಸುಮಾರು 7 ಸಾವಿರ ಉದ್ರಿಕ್ತರು ಮಾರಕಾಸ್ತ್ರಗಳೊಂದಿಗೆ ಪೊಲೀಸರ ಮೇಲೆ ದಾಳಿ ಮಾಡಿದ್ದಾರೆ. ಬಂದರು ಠಾಣೆಗೆ ಮುತ್ತಿಗೆ ಹಾಕಿದ ಉದ್ರಿಕ್ತರು ಠಾಣೆಗೆ ಬೆಂಕಿ ಹಚ್ಚಲು ಪ್ರಯತ್ನಿಸಿದರು. ಠಾಣೆ ಮೇಲೆ ಕಲ್ಲು, ಬಾಟಲ್ ತೂರಿದ್ರು. ಪೊಲೀಸರ ಹತ್ಯೆಗೆ ಯತ್ನಿಸಿದ್ರು. ರಕ್ಷಣೆಗಾಗಿ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಘಟನೆಯಲ್ಲಿ 20 ಪೊಲೀಸರಿಗೆ ಗಾಯಗಳಾಗಿವೆ. 8 ಪೊಲೀಸರಿಗೆ ಗಂಭೀರ ಗಾಯವಾಗಿದೆ. ಇಬ್ಬರು ಡಿಸಿಪಿಗಳ ಕೈ, ಕಾಲಿನ ಎಲುಬು ಕಟ್ ಆಗಿದೆ. ಉದ್ರಿಕ್ತರ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಅಂತ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.
ಗಲಭೆಯಲ್ಲಿ ಮೃತಪಟ್ಟವರನ್ನು ಕಂದಕ್ ನಿವಾಸಿ ಜಲೀಲ್(49), ಕುದ್ರೋಳಿ ನಿವಾಸಿ ನೌಶಿಮ್(23) ಅಂತ ಗುರುತಿಸಲಾಗಿದೆ. ಮೃತಪಟ್ಟವರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ, ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ತನಿಖೆ ನಡೆಸಲಾಗುತ್ತಿದೆ. ಮಂಗಳೂರು ನಗರ ವ್ಯಾಪ್ತಿಯಲ್ಲಿ ಕರ್ಫ್ಯೂ ವಿಧಿಸಲಾಗಿದ್ದು, ಸಾರ್ವಜನಿಕರು ಯಾರೂ ರಸ್ತೆಗೆ ಇಳಿಯಬಾರದು ಅಂತ ಪೊಲೀಸರು ಮಾಹಿತಿ ನೀಡಿದ್ದಾರೆ.
100ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಗಿದೆ. ಗಲಭೆ ನಡೆದ ಬಂದರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಮಧ್ಯರಾತ್ರಿವರೆಗೂ ಕಫ್ರ್ಯೂ ಜಾರಿ ಮಾಡಲಾಗಿದೆ. ಮಂಗಳೂರು ಕೇಂದ್ರ, ಉತ್ತರ, ಮಂಗಳೂರು ದಕ್ಷಿಣ, ಬರ್ಕೆ, ಉರ್ವ, ಕದ್ರಿ ಠಾಣಾ ವ್ಯಾಪ್ತಿಯಲ್ಲಿ ಕರ್ಫ್ಯೂ ವಿಧಿಸಲಾಗಿದೆ.

ಇಬ್ಬರ ಸಾವು ದೃಢಪಡಿಸಿದ ಮುಸ್ಲಿಂ ಮುಖಂಡರು

ಮಂಗಳೂರು(ಡಿ19/2019): ಮಂಗಳೂರಿನಲ್ಲಿ ನಡೆದ ಹಿಂಸಾಚಾರದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಮುಸ್ಲಿಂ ಧಾರ್ಮಿಕ ಮುಖಂಡರು ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಬೆಂಗ್ರೆ ನಿವಾಸಿ ನೌಶೀನ್(23) ಹಾಗೂ ಕಂದಕ್ ನಿವಾಸಿ ಜಲೀಲ್(49) ಮೃತ ದುರ್ದೈವಿಗಳಾಗಿದ್ದಾರೆ ಎಂದು ತಿಳಿದುಬಂದಿದೆ. ಬಂದರು ಠಾಣಾ ವ್ಯಾಪ್ತಿಯಲ್ಲಿ ತೀವ್ರ ಸ್ವರೂಪದಲ್ಲಿ ಹಿಂಸಾಚಾರ ನಡೆದಿದ್ದು, ಈ ಸಂದರ್ಭದಲ್ಲಿ ಗಂಭೀರ ಗಾಯಗೊಂಡಿದ್ದ ಇಬ್ಬರು ಮೃತಪಟ್ಟಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಮುಸ್ಲಿಂ ಮುಖಂಡರು, ಮೃತಪಟ್ಟವರ ಕುಟುಂಬಕ್ಕೆ ಸರಕಾರ ಸೂಕ್ತ ಪರಿಹಾರವನ್ನು ಒದಗಿಸಬೇಕೆಂದು ಆಗ್ರಹಿಸಿದ್ದಾರೆ. ಅಲ್ಲದೆ, ಎಲ್ಲಾ ಮುಸ್ಲಿಂ ಸಂಘಟನೆಯವರು ನಗರದಲ್ಲಿ ಶಾಂತಿ ಕಾಪಾಡಬೇಕು. ಯಾವುದೇ ಕಾರಣಕ್ಕೂ ಯಾವುದೇ ಸಂಘಟನೆಯಾಗಲಿ, ಜನತೆಯಾಗಲಿ ಕಾನೂನಿನ ವಿರುದ್ಧ ನಡೆದುಕೊಳ್ಳಬಾರದು. ಶಾಂತಿಯುತವಾಗಿ ಇದ್ದುಕೊಂಡು ಮಂಗಳೂರು ನಗರದ ಪೊಲೀಸರೊಂದಿಗೆ ಸಹಕರಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ಮಂಗಳೂರು: ಗಾಳಿಯಲ್ಲಿ ಗುಂಡು,ಲಾಠಿಚಾರ್ಜ್

ಮಂಗಳೂರು(ಡಿ19/2019): ಪೌರತ್ವ ವಿರುದ್ಧ ಪ್ರತಿಭಟನೆಯನ್ನು ಹಿಂಪಡೆಯಲು ನಾಲ್ವರು ಮುಖಂಡರೊಂದಿಗೆ ಮಾಜಿ ಮೇಯರ್ ಅಶ್ರಫ್ ಹಳೇ ಬಂದರಿಗೆ ತೆರಳಿ ಪ್ರತಿಭಟನಾಕಾರರನ್ನು ಮನವೊಲಿಸಲು ಪ್ರಯತ್ನಿಸಿದರು. ಈ ವೇಳೆ ಕುಪಿತಗೊಂಡ ಪ್ರತಿಭಟನಕಾರು ಮಾಜಿ ಮೇಯರ್ ಅಶ್ರಫ್ ಅವರ ಮೇಲೆ ದಾಳಿ ನಡೆಸಿದ್ದಾರೆ. ಅಶ್ರಫ್ ಅವರ ಮೇಲೆ ಮುಗಿಬಿದ್ದ ಪ್ರತಿಭಟನಕಾರರು ದಾಳಿ ನಡೆಸಿ ಕಲ್ಲೆಸೆಯಲು ಪ್ರಾರಂಭಿಸಿದ್ದಾರೆ. ಕಲ್ಲೆಸೆತದಿಂದ ತಲೆಯಿಂದ ತೀವ್ರ ರಕ್ತಸ್ರಾವವಾಗಿದ್ದು, ಗಂಭೀರ ಗಾಯಗೊಂಡ ಅಶ್ರಫ್ ಅವರನ್ನು ತಕ್ಷಣ ಪ್ರತಿಭಟನೆಕಾರರಿಂದ ಬಿಡಿಸಿ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪೌರತ್ವ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆಯುತ್ತಿರುವ ಪ್ರತಿಭಟನೆ ತೀವ್ರಗೊಂಡಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಕಾಣುತ್ತಿಲ್ಲ. ಸ್ಟೇಟ್ ಬ್ಯಾಂಕ್ ಸಮೀಪ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಹತೋಟಿಗೆ ಬಂದರೂ ಸೆಂಟ್ರಲ್ ಮಾರ್ಕೆಟ್ ಮತ್ತು ಬಂದರ್ ಸಮೀಪ ಪ್ರತಿಭಟನೆ ತಾರಕ್ಕೇರಿದೆ.
ಪರಿಸ್ಥಿತಿ ಕೈ ಮೀರಿದ್ದು ಪ್ರತಿಭಟನಾಕಾರರು ಅಲ್ಲಲ್ಲಿ ಗುಂಪು ಕಟ್ಟಿ ಪೊಲೀಸರ ಮೇಲೆ ಕಲ್ಲು, ಗ್ಲಾಸ್ ಮುಂತಾದ ವಸ್ತು ತೂರುತ್ತಿದ್ದಾರೆ. ಪ್ರತಿಭಟನಕಾರರ ಕಲ್ಲೆಸೆತದಿಂದ ಹಲವು ಜನ ಪತ್ರಕರ್ತರಿಗೂ ಗಾಯಗಳಾಗಿವೆ. ಟಯರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸುತ್ತಿರುವ ಪೊಲೀಸರು, ಸಾರ್ವಜನಿಕ ಆಸ್ತಿಪಾಸಿಗಳನ್ನು ಹಾಳುಗೆಡವುತ್ತಿದ್ದಾರೆ.
ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ಪೊಲೀಸರು ಪರಿಸ್ಥಿತಿ ಹತೋಟಿಗೆ ತರಲು ಪ್ರಯತ್ನಿಸುತ್ತಿದ್ದಾರೆ.