July 10, 2020

Month: February 2020

ಜೀವ ರಕ್ಷಕರಾದ ತಲಪಾಡಿ ಸಿಟಿ ಬಸ್ ಚಾಲಕ ನಿರ್ವಾಹಕರು

ಮಂಗಳೂರು(25/2020): ತಲಪಾಡಿ ಕಿನ್ಯಾದಿಂದ ಮಂಗಳೂರಿಗೆ ಬರುತ್ತಿದ್ದ ಬಸ್ಸಿನಲ್ಲಿ ಮಹಿಳೆಯೊಬ್ಬರಿಗೆ ಎದೆ ನೋವು ಕಾಣಿಸಿಕೊಂಡ ತಕ್ಷಣ ಬಸ್ ಚಾಲಕರು ಜಾಗೃತರಾಗಿದ್ದಾರೆ. ಎದೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಬಸ್ ಚಾಲಕ ಹಾಗೂ ನಿರ್ವಾಹಕರು ಬಸ್ಸನ್ನು ಯಾವುದೇ ನಿಲ್ದಾಣಗಳಲ್ಲಿ ನಿಲ್ಲಿಸದೆ ನೇರವಾಗಿ ಖಾಸಗಿ ಆಸ್ಪತ್ರೆಗೆ ತಂದು ಮಹಿಳೆಗೆ ಜೀವದಾನ ನೀಡಿದ್ದಾರೆ..

ಕರಾವಳಿ ಶ್ರಮಿಕ ಸಂಘ ಖಾಸಗಿ ಬಸ್ ಚಾಲಕರ ಹಾಗೂ ನಿರ್ವಾಹಕರ ಸಂಘದ ಸದಸ್ಯರಾಗಿರುವ ಹಾಗೂ ಮಹೇಶ್ ಬಸ್ಸಿನ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಚಾಲಕ ಪ್ರಮೋದ್ ಹಾಗೂ ನಿರ್ವಾಹಕ ಅಶ್ವಿತ್ ಇವರ ಮಾನವೀಯತೆಗೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ. ಬಸ್ ಸಿಬ್ಬಂದಿಯನ್ನು ಕಂಡಾಗ ಮೂಗು ಮುರಿಯುವವರಿಗೆ ಅವರೊಳಗಿನ ಮಾನವೀಯ ಮೌಲ್ಯಗಳನ್ನು ಪರಿಚಯಿಸಿಕೊಟ್ಟ ಪ್ರಮೋದ್ ಹಾಗೂ ಅಶ್ವಿತ್ ಅವರಿಗೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.

ನೇತ್ರಾವತಿ ನದಿಗೆ ಹಾರಿದ ಅಪ್ಪ ಮಗ

ಮಂಗಳೂರು(ಫೆ16/2020): ಆರು ವರ್ಷದ ಮಗನೊಂದಿಗೆ ನೇತ್ರಾವತಿ ನದಿಗೆ ಹಾರಿ ತಂದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಮುಂಜಾನೆ ನಡೆದಿದೆ. ಕೊಣಾಚೆ ಗ್ರಾಮದಲ್ಲಿ ಸಂಬಂಧಿಕರೊಬ್ಬರ ಮನೆಯ ಕೋಲಕ್ಕೆ ಮುಂಬಯಿಂದ ಕುಟುಂಬ ಸಮೇತ ಆಗಮಿಸಿದ್ದ ಗೋಪಾಲಕೃಷ್ಣ ರೈ (45) ಹಾಗೂ ಇವರ ಪುತ್ರ ಅನೀಷ್ ರೈ (6) ಸಮೀಪದಲ್ಲೇ ಇರುವ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನದಿ ದಡದಲ್ಲಿ ಡೆತ್‍ನೋಟ್ ಕೂಡ ಪತ್ತೆಯಾಗಿದ್ದು, ಪತ್ನಿ ಅಶ್ವಿನಿ ಅವರಿಗೆ ಕ್ಷಮಿಸುವಂತೆ ಮತ್ತು ದೂರ ಹೋಗುತ್ತಿರುವುದಾಗಿ ಬರೆದಿಡಲಾಗಿದೆ. ಸುದ್ದಿ ತಿಳಿದ ತಕ್ಷಣ ಗ್ರಾಮಸ್ಥರು ನದಿದಡಕ್ಕೆ ಆಗಮಿಸಿ ಶವವನ್ನು ಮೇಲೆತ್ತಲು ಪ್ರಯತ್ನಿಸಿದ್ದಾರೆ.ಸಂಬಂಧಿಕರ ಶುಭ ಸಮಾರಂಭದ ಸಂದರ್ಭದಲ್ಲೇ ಈ ದುರಂತ ನಡೆದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಮಂಗಳೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.

ಸಿಸಿಬಿ ಕಾರ್ಯಾಚರಣೆ: ಮಾದಕ ವಸ್ತು MDMA ಹೊಂದಿದ ಆರೋಪಿಗಳ ಸೆರೆ

ಮಂಗಳೂರು(10ಪೆ/2020): ಮಂಗಳೂರು ನಗರದ ಸಾರ್ವಜನಿಕರಿಗೆ ಮಾದಕ ವಸ್ತುವಾದ (Methylene dioxy methamphetamine) MDMA ಮುಂಬೈಯಿಂದ ಖರೀದಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದವರನ್ನು ಮಂಗಳೂರು ಸಿಸಿಬಿ ಪೊಲೀಸರು ಹಾಗೂ ಇಕಾನಾಮಿಕ್ & ನಾರ್ಕೋಟಿಕ್ ಠಾಣೆಯ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದುಕೊಂಡಿರುತ್ತಾರೆ
ಮಂಗಳೂರು ನಗರದಲ್ಲಿ ನಿಷೇಧಿತ ಮಾದಕ ವಸ್ತುವಾದ (Methylene dioxy methamphetamine) MDMA ವನ್ನು ಮುಂಬೈಯಿಂದ ಅಕ್ರಮವಾಗಿ ಖರೀದಿಸಿ ಮಂಗಳೂರಿಗೆ ಐಷಾರಾಮಿ ಕಾರೊಂದರಲ್ಲಿ ತರುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಮಂಗಳೂರು- ಉಡುಪಿ ರಾಷ್ಟ್ರೀಯ ಹೆದ್ದಾರಿಯ ಮುಲ್ಕಿ ಬಳಿ ಕಾರನ್ನು ತಪಾಸಣೆ ಮಾಡಿದಾಗ (Methylene dioxy methamphetamine) MDMA ಎಂಬ ನಿಷೇದಿತ ಮಾದಕ ವಸ್ತುವನ್ನು ಹೊಂದಿದ.
ಮೊಹಮ್ಮದ್ ಶರೀಫ್ ಸಿದ್ದಿಕ್, ಪ್ರಾಯ(40), ತಂದೆ: ಪಿ ಮೊಹಮ್ಮದ್, ವಾಸ: ಸೈಟ್ ನಂಬ್ರ: 151/2, ಚೊಕ್ಕಬೆಟ್ಟು, ಸುರತ್ಕಲ್, ಮಂಗಳೂರು.
ಮೊಹಮ್ಮದ್ ಶಾಫಿ @ ಚಪ್ಪಿ, ಪ್ರಾಯ(33), ತಂದೆ: ದಿ: ಅಬ್ದುಲ್ ಖಾದರ್, ವಾಸ: ಡೋರ್ ನಂಬ್ರ: ಜಿಎಲ್-2/478, 2 ನೇ ಬ್ಲಾಕ್, ಕಾಟಿಪಳ್ಳ, ಸುರತ್ಕಲ್, ಮಂಗಳೂರು.
ಮೊಹಮ್ಮದ್ ಅನಾಸ್,, ಪ್ರಾಯ(27), ತಂದೆ: ಅಹಮ್ಮದ್, ವಾಸ: 3-48, 2 ನೇ ಬ್ಲಾಕ್, ಕಾಟಿಪಳ್ಳ, ಜುಮ್ಮಾ ಮಸೀದಿ ಬಳಿ, ಕೈಕಂಬ ಅಂಚೆ, ಮಂಗಳೂರು ಎಂಬವರನ್ನು ವಶಕ್ಕೆ ಪಡೆದುಕೊಂಡು ಅವರಿಂದ ರೂ. 87,560/- ಮೌಲ್ಯದ ಎಂಡಿಎಂಎ ಮಾದಕ ವಸ್ತುವನ್ನು, 3 ಮೊಬೈಲ್ ಫೋನ್ ಗಳು, ಹಾಗೂ ಸಾಗಾಟಕ್ಕೆ ಉಪಯೋಗಿಸಿದ ಐಷಾರಾಮಿ ಬಿಎಂಡಬ್ಲೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ನಿಷೇದಿತ ಮಾದಕ ವಸ್ತು ಎಂಡಿಎಂಎ, ಮೊಬೈಲ್ ಫೋನ್ ಗಳು ಹಾಗೂ ಸಾಗಾಟಕ್ಕೆ ಉಪಯೋಗಿಸಿದ ಬಿಎಂಡಬ್ಲೂ ಕಾರಿನ ಒಟ್ಟು ಮೌಲ್ಯ 51,12,560/- ಲಕ್ಷ ಆಗಬಹುದು. ಆರೋಪಿಗಳು ಮುಂಬೈಯಿಂದ ಅಕ್ರಮವಾಗಿ ಮಾದಕ ವಸ್ತುಗಳನ್ನು ಖರೀದಿಸಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡಿ ಹಣ ಗಳಿಸಲು ಮಂಗಳೂರು ಕಡೆಗೆ ಬರುತ್ತಿದ್ದರು.
ಆರೋಪಿಗಳ ಪೈಕಿ ಮೊಹಮ್ಮದ್ ಶರೀಫ್ ಸಿದ್ದಿಕ್ ಎಂಬಾತನ ವಿರುದ್ಧ ಈ ಹಿಂದೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತುವನ್ನು ಹೊಂದಿದ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಆರೋಪಿ ಮೊಹಮ್ಮದ್ ಶಾಫಿ ಚಪ್ಪಿ ಎಂಬಾತನ ವಿರುದ್ದ ಈ ಹಿಂದೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ, ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಹೊಂದಿದ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಆರೋಪಿ ಮೊಹಮ್ಮದ್ ಅನಾಸ್ ಎಂಬಾತನ ವಿರುದ್ಧ ಈ ಹಿಂದೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣವೊಂದು ದಾಖಲಾಗಿರುತ್ತದೆ.
ಮಾನ್ಯ ಪೊಲೀಸ್ ಆಯುಕ್ತರಾದ ಡಾ: ಹರ್ಷ ಐ.ಪಿ.ಎಸ್, ಮಾನ್ಯ ಪೊಲೀಸ್ ಉಪ ಆಯುಕ್ತರವರಾದ ಶ್ರೀ ಲಕ್ಷ್ಮಿ ಗಣೇಶ್, (ಅಪರಾಧ & ಸಂಚಾರ), ರವರ ಮಾರ್ಗದರ್ಶನದಲ್ಲಿ ಮಂಗಳೂರು ಸಿಸಿಬಿ ಘಟಕದ ಇನ್ಸ್ ಪೆಕ್ಟರ್ ಶಿವಪ್ರಕಾಶ್ ಆರ್ ನಾಯ್ಕ್, ಪಿಎಸ್ಐಯವರಾದ ಕಬ್ಬಾಳ್ ರಾಜ್ ಮತ್ತು ಸಿಬ್ಬಂದಿಗಳು ಹಾಗೂ ಎಕಾನಾಮಿಕ್ ಮತ್ತು ನಾರ್ಕೋಟಿಕ್ ಪೊಲೀಸ್ ಠಾಣೆಯ ಪಿಎಸ್ಐ ಲತಾ ಮತ್ತು ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಮುಂಬೈ ಹೊಟೇಲ್ ಉದ್ಯಮಿಯ ಕೊಲೆ

ಉಡುಪಿ(10ಪೆ/2020): ವ್ಯಕಿಯೊಬ್ಬನನ್ನು ಕಡಿದು ಕೊಲೆ ಮಾಡಿರುವ ರೀತಿಯಲ್ಲಿ ಶವ ಇಂದು ಪತ್ತೆಯಾಗಿದೆ. ಉಡುಪಿ ಜಿಲ್ಲೆಯ ಬೆಳ್ಳಂಪಳ್ಳಿ ಗ್ರಾಮದ ಸಮೀಪ‌ ಕುಕ್ಕೆಹಳ್ಳಿ ಶವ ಪತ್ತೆಯಾಗಿದೆ.ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ಕೊಲೆಯಾದ ವ್ಯಕ್ತಿ ಮಹಾರಾಷ್ಟ್ರದ ಮುಂಬಯಿಯ ಮಾಯಾ ಹೊಟೇಲ್ ನ ಮಾಲೀಕ ವಶಿಷ್ಠ ಯಾದವ್ ಎಂದು ತಿಳಿದು ಬಂದಿದೆ.
ಹೊಟೇಲ್ ಮಾಲೀಕನನ್ನು ಮುಂಬಯಿಂದ ಉಡುಪಿಗೆ ಕರೆತಂದು ಕೊಲೆ ಮಾಡಿದ್ದಾರೆ ಎಂದು ಮೇಲ್ನೋಟಕ್ಕೆ ತಿಳಿದುಬರುತ್ತದೆ.