January 23, 2021

Month: March 2020

ಜಿಲ್ಲೆಯಲ್ಲಿ ಅಗತ್ಯ ವಸ್ತು ಕೊರತೆಯಾಗದಂತೆ ಎಲ್ಲಾ ಕ್ರಮ- ಜಿಲ್ಲಾಧಿಕಾರಿ ಜಿ.ಜಗದೀಶ್

ಉಡುಪಿ(ಮಾ30/2020): ಕೊರೋನಾ ಕಾರಣದಿಂದ ಜಿಲ್ಲೆಯಲ್ಲಿ ಅಗತ್ಯ ದಿನಸಿ ವಸ್ತುಗಳಾದ ಅಕ್ಕಿ, ತೆಂಗಿನ ಎಣ್ಣೆ ಪೂರೈಕೆ ಮಾಡುವ ರೈಸ್ ಮಿಲ್ ಮತ್ತು ಎಣ್ಣೆ ಮಿಲ್ಗಳ ಮಾಲೀಕರು ತಕ್ಷಣದಿಂದಲೇ ರೈಸ್ ಮಿಲ್ ಗಳನ್ನು ತೆಗೆದು ಎಂದಿನಂತೆ ಕಾರ್ಯಾಚರಣೆ ನಡೆಸುವಂತೆ ಸೂಚಿಸಲಾಗಿದ್ದು,ಜಿಲ್ಲೆಗೆ ಹೊರ ಜಿಲ್ಲೆಯಿಂದ ಪೂರೈಕೆಯಾಗುವ ಸಾಮಗ್ರಿಗಳ ವಾಹನಗಳಿಗೆ ಸಹ ಯಾವುದೇ ನಿರ್ಬಂಧಗಳನ್ನು ವಿಧಿಸಿಲ್ಲವಾಗಿದ್ದು, ದಿನಸಿ ವಸ್ತುಗಳ ಕೊರತೆ ಕುರಿತಂತೆ ಜಿಲ್ಲೆಯ ಜನತೆ ಯಾವುದೇ ಆತಂಕ ಪಡುವ ಅಗ್ಯವಿಲ್ಲ, ದಿನಸಿ ವಸ್ತುಗಳ ಕೊರತೆಯಾಗದಂತೆ ಎಲ್ಲಾ ಅಗ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಅವರು ಸೋಮವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ದಿನಸಿ ವಸ್ತು ಪೂರೈಕೆ ಮಾಡುವ ಸಗಟು ವಾಹನಗಳನ್ನು ಎಲ್ಲೂ ತಡೆಹಿಡಿದಿಲ್ಲ, ದಿನಸಿ ಸಾಗಾಟ ವಾಹನಗಳ ಸಂಚಾರವನ್ನು ರಾಜ್ಯದ ಯಾವುದೇ ಜಿಲ್ಲೆಯಲ್ಲಿ ತಡೆಯದಂತೆ ಆದೇಶವಿದೆ, ರಖಂ ಮಾರಾಟಗಾರರು ತಮ್ಮ ಅಂಗಡಿಗಳನ್ನು ತೆರೆದು ಚಿಲ್ಲರೆ ಮಾರಾಟಗಾರರಿಗೆ ವಿತರಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ದಿನಸಿ ವಸ್ತುಗಳ ಕೃತಕ ಅಭಾವ ಸೃಷ್ಠಿಸುವ ಮತ್ತು ಅನಗತ್ಯವಾಗಿ ದಾಸ್ತಾನು ಮಾಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು, ರೈತರಿಂದ ಅಕ್ಕಿ, ಎಣ್ಣೆ ತಯಾರಿಕಾ ಕಚ್ಛಾವಸ್ತುಗಳಾದ ಭತ್ತ ಮತ್ತು ತೆಂಗಿನಕಾಯಿ ಖರೀದಿಸಲು ಮಿಲ್ ಮಾಲೀಕರಿಗೆ ಅನುಮತಿ ನೀಡಲಾಗಿದೆ, ಜಿಲ್ಲೆಯಲ್ಲಿ ರೈತರು ಬೆಳೆದಿರುವ ಕಲ್ಲಂಗಡಿ ಹಣ್ಣು ಹಾಳಾಗದಂತೆ ಅದನ್ನು ಸೂಕ್ತ ರೀತಿಯಲ್ಲಿ ವಿಲೇವಾರಿಗೆ ವ್ಯವಸ್ಥೆ ಮಾಡುವಂತೆ ತೋಟಗಾರಿಕಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ದಿನಸಿ ವಸ್ತುಗಳ ಖರೀದಿಗಾಗಿ ಬೆಳಗ್ಗೆ 7 ರಿಂದ 11 ರ ವರೆಗೆ ಸಮಯ ನಿಗಧಿಪಡಿಸಿದ್ದು, ಸಾರ್ವಜನಿಕರು ಪ್ರತೀ ದಿನ ಮನೆಯಿಂದ ಅನಗತ್ಯ ಹೊರಬಂದು ವಸ್ತುಗಳನ್ನು ಖರೀದಿಸದೇ ಅಗತ್ಯವಿದ್ದಾಗ ಮಾತ್ರ , ಸಾಧ್ಯವಾದಲ್ಲಿ ವಾರದಲ್ಲಿ ಒಮ್ಮೆ ವಸ್ತುಗಳನ್ನು ಖರೀದಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಜಿಲ್ಲೆಯಲ್ಲಿ ಮಾಸ್ಕ್ ಗಳ ಕೊರತೆ ಬಗ್ಗೆ ಮಾತನಾಡಿ, ಮಾಸ್ಕ್ ಧರಿಸುವುದು ಪ್ರತಿಯೊಬ್ಬರಿಗೂ ಅಗತ್ಯವಿಲ್ಲ, ಯಾರಾದರೂ ಜ್ವರ, ಕೆಮ್ಮು, ಶೀತದಿಂದ ಬಳಲುತ್ತಿದ್ದಲ್ಲಿ ಮಾತ್ರ ಮಾಸ್ಕ್ ಧರಸಿ ಓಡಾಡುವಂತೆ ತಿಳಿಸಿದ ಅವರು, ಆರೋಗ್ಯದಿಂದಿರುವ ವ್ಯಕ್ತಿಗಳು ಮಾಸ್ಕ್ ಧರಿಸುವ ಅಗತ್ಯವಿಲ್ಲವೆಂದು ಸ್ಪಷ್ಟಪಡಿಸಿದರು, ಈ ಕುರಿತಂತೆ ಜಿಲ್ಲೆಯ ಎಲ್ಲಾ ಪೋಲೀಸ್ ಠಾಣೆಗಳಿಗೆ ಸೂಚನೆ ನೀಡಿದ್ದು, ಸಾರ್ವಜನಿಕರನ್ನು ಮಾಸ್ಕ್ ಧರಿಸುವಂತೆ ಒತ್ತಾಯ ಮಾಡದಂತೆ ಪೊಲೀಸರಿಗೆ ಸೂಚಿಸಲಾಗಿದೆ. ಜಿಲ್ಲೆಗೆ ಅಗತ್ಯವಿರುವ ಮಾಸ್ಕ್ ಮತ್ತು ಸ್ಯಾನಿಟೈಸರ್ ಪೂರೈಕೆಗೆ ಇನ್ಫೋಸಿಸ್ ಸೇರಿದಂತೆ ಹಲವು ಸ್ಥಳಿಯ ದಾನಿಗಳು ನೆರವು ನೀಡುತ್ತಿದ್ದು, ಇಂದು ಮತ್ತು ನಾಳೆ ಸಾಕಷ್ಟು ಸಂಖ್ಯೆಯಲ್ಲಿ ಜಿಲ್ಲೆಗೆ ಸರಬರಾಜು ಆಗಲಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.
ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಪತ್ತೆ ಹಚ್ಚುವ ಲ್ಯಾಬ್ ಸ್ಥಾಪನೆಯ ಅಗತ್ಯತೆ ಕುರಿತಂತೆ ಮುಖ್ಯಮಂತ್ರಿಗಳು ಮತ್ತು ಮುಖ್ಯ ಕಾರ್ಯದರ್ಶಿಯರೊಂದಿಗೆ ಮನವಿ ಮಾಡಿದ್ದು, ಇದಕ್ಕೆ ಒಪ್ಪಿಗೆ ದೊರೆತಿದೆ ಎಂದ ಜಿಲ್ಲಾಧಿಕಾರಿಗಳು , ಜಿಲ್ಲೆಯ ವಲಸೆ ಕಾರ್ಮಿಕರಿಗೆ ಸಹಾಯ ನೀಡಲು ಗಂಜಿ ಕೇಂದ್ರ ತೆರೆಯಲಾಗಿದ್ದು, ದಾನಿಗಳ ನೆರವಿನಿಂದ ಆಹಾರದ ಕಿಟ್ ಸಹ ನೀಡಲಾಗುತ್ತಿದ್ದು, ಅಗತ್ಯ ಬಿದ್ದಲ್ಲಿ ಜಿಲ್ಲೆಯ ದೇವಾಲಯಗಳಿಂದ ಅಗತ್ಯ ನೆರವು ನೀಡಲಾಗುವುದು. ಮಲ್ಪೆ ಬಂದಿರಿನಲ್ಲಿರುವ ಕಾರ್ಮಿಕರಿಗೆ ಅಗತ್ಯ ಊಟ ಮತ್ತು ವಸತಿ ಕಲ್ಪಿಸುವುದು ಹಾಗೂ ಅವರ ಊರಿಗೆ ತಲುಪಿಸುವ ಜವಾಬ್ದಾರಿ ಸಂಬಂದಪಟ್ಟ ಬೋಟುಗಳ ಮಾಲೀಕರದ್ದೇ ಆಗಿದ್ದು, ತಪ್ಪಿದಲ್ಲಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಹಾಗೂ ಜಿಲ್ಲೆಯಲ್ಲಿರುವ ವಲಸೆ ಕಾರ್ಮಿಕರು ವಾಸವಿರುವ ಬಾಡಿಗೆ ಮನೆಯ ಮಾಲೀಕರು , ಬಾಡಿಗೆ ನೀಡುವಂತೆ ಒತ್ತಾಯ ಮಾಡದಂತೆ ಹಾಗೂ ಮುಂದಿನ 2 ತಿಂಗಳು ಅವರಿಂದ ಬಾಡಿಗೆ ಪಡೆಯದಂತೆ ಮತ್ತು ಅವರನ್ನು ಮನೆಯಿಂದ ಖಾಲಿ ಮಾಡಿಸದಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದರು.
ಉಡುಪಿ ಶಾಸಕ ರಘುಪತಿ ಭಟ್, ಜಿಲ್ಲಾ ಪಂಚಾಯತ್ ಸಿಇಓ ಪ್ರೀತಿ ಗೆಹಲೋತ್, ಎಸ್ಪಿ ವಿಷ್ಣುವರ್ಧನ್ ಮತ್ತಿತರರು ಉಪಸ್ಥಿತರಿದ್ದರು.

ದುಬೈನಿಂದ ಬಂದ ಕಾಪುವಿನ ವ್ಯಕ್ತಿಗೆ ಸೋಂಕು ದೃಡ: ಬಸವರಾಜ ಬೊಮ್ಮಯಿ

ಉಡುಪಿ(29ಮಾ/2020): ಇಂದು ಇಬ್ಬರಿಗೆ ಕೊರೊನಾ ಸೋಂಕು ತಗಲಿರುವುದು ವೈದ್ಯಕೀಯ ವರದಿಯಲ್ಲಿ ದೃಢಪಟ್ಟಿದ್ದು, ಈ ಬಗ್ಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಉಡುಪಿಯಲ್ಲಿ ಸೋಂಕಿತರ ಸಂಖ್ಯೆ ಮೂರಕ್ಕೇರಿದೆ ಎಂದು ಡಿಎಚ್‍ಒ ಡಾ. ಸುಧೀರ್ ಚಂದ್ರ ಮಾಹಿತಿ ಕೊಟ್ಟಿದ್ದು, ಶಿವಮೊಗ್ಗ ಪ್ರಯೋಗಾಲಯದಿಂದ ಬಂದ ವೈದ್ಯಕೀಯ ವರದಿಯಲ್ಲಿ ಕೊರೊನಾ ದೃಢಪಟ್ಟಿತ್ತು.
ದುಬೈನಿಂದ ಬಂದಿದ್ದ ಕಾಪು ತಾಲೂಕಿನ 25 ವರ್ಷದ ಯುವಕ ಕೊರೊನಾ ಸೋಂಕಿಗೆ ತುತ್ತಾಗಿದ್ದಾನೆ. ಮಾರ್ಚ್ 17ಕ್ಕೆ ಆತ ತನ್ನ ಮನೆಗೆ ಬಂದಿದ್ದನು. ಮಾರ್ಚ್ 27ರಂದು ಆತನಲ್ಲಿ ಕೆಮ್ಮು, ಶೀತ, ನೆಗಡಿ ಲಕ್ಷಣ ಕಂಡುಬಂದಿತ್ತು. ರೋಗಿ ಜಿಲ್ಲಾಸ್ಪತ್ರೆಗೆ ಬಂದಿದ್ದಾಗ ಬೆಡ್ ಇಲ್ಲದ ಕಾರಣಕ್ಕೆ ಆತನನ್ನು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಆತ ಕುಟುಂಬಸ್ಥರು, ಗೆಳೆಯರು, ಸಂಬಂಧಿಕರ ಮಕ್ಕಳ ಜೊತೆ ಬೆರೆತಿದ್ದನು. ನಗರದಲ್ಲಿರುವ ಅಕ್ಕನ ಮನೆಗೆ ಓಡಾಡಿದ್ದನು ಎಂಬ ಮಾಹಿತಿಯಿದ್ದು, ಈ ವ್ಯಕ್ತಿಯ ಪ್ರಕರಣ ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. ವಿದೇಶದಿಂದ ಬಂದು 10 ದಿನದ ನಂತರ ಕೊರೊನಾ ಸೋಂಕು ಉಲ್ಬಣಿಸಿದೆ ಎನ್ನುವುದು ವರದಿಯಾಗಿದೆ.
ಕೇರಳಕ್ಕೆ ತೆರಳಿದ್ದ ಯುವಕನಿಗೆ ಕೊರೊನಾ
ವಿದೇಶ ಪ್ರಯಾಣ ಹಿನ್ನೆಲೆ ಇಲ್ಲದ, ವಿದೇಶ ಪ್ರಯಾಣ ಮಾಡಿದ ವ್ಯಕ್ತಿಗಳ ನೇರ ಸಂಪರ್ಕ ಇಲ್ಲದವನಿಗೆ ಕೊರೊನಾ ಸೋಂಕು ತಗುಲಿದೆ. ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಆಗಿರುವ ಉಡುಪಿಯ 29 ವಯಸ್ಸಿನ ಯುವಕ ಕೊರೊನಾ ಹಾವಳಿ ಶುರುವಾಗುವ ಮೊದಲೇ ಕೇರಳಕ್ಕೆ ಕೆಲಸಕ್ಕೆ ತೆರಳಿದ್ದನು. ತಿರುವನಂತಪುರಂನಲ್ಲಿ ಇಸ್ರೋ ಸಂಸ್ಥೆಗೆ ಸಂಬಂಧಿಸಿದ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದನು.
ಕೇರಳದಲ್ಲಿ ಕೊರೊನಾ ಅಟ್ಟಹಾಸ ಮೆರೆದಾಗ ತನ್ನ ಜೊತೆಗಿದ್ದ 30 ಯುವಕರ ಜೊತೆಗೆ ಬಸ್ಸಲ್ಲಿ ತಲಪಾಡಿ(ದಕ್ಷಿಣ ಕನ್ನಡ -ಕೇರಳ ಬಾರ್ಡರ್)ಗೆ ಬಂದಿದ್ದರು. ಅಲ್ಲಿಂದ ಇಡೀ ತಂಡವನ್ನು ಬಸ್ಸಲ್ಲಿ ಉಡುಪಿಗೆ ಸಾಗಿಸಿ ಆಯುಷ್ ಆಸ್ಪತ್ರೆಯ ಕೊಠಡಿಗಳಲ್ಲಿ ಇರಿಸಲಾಗಿದೆ. ಡಿಸಿ ಪೊಲೀಸ್ ಸಿಬ್ಬಂದಿಯನ್ನು ನೇಮಿಸಿ ಅವರ ಮೇಲೆ ನಿಗವಹಿಸಲು ಸೂಚಿಸಿದ್ದರು.
ಎಲೆಕ್ಟ್ರಿಕಲ್ ಕೆಲಸಕ್ಕೆ ಹೋಗಿದ್ದ ಯುವಕರ ತಂಡದಲ್ಲಿ 31 ಜನ ಇದ್ದರು. ಈ ಪೈಕಿ ಒಬ್ಬನಿಗೆ ಶೀತ, ತಲೆನೋವು ಶುರುವಾಗಿತ್ತು. ಮಾರ್ಚ್ 26ಕ್ಕೆ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೇರಳದಿಂದ ಬಂದ ನಂತರ ಎಲ್ಲಾ 31 ಜನರನ್ನು ಐಸೋಲೇಟೆಡ್ ಮಾಡಲಾಗಿದೆ

ಶಂಕರಪುರ: 41 ಮನೆಗಳಿಗೆ ದಿನ ಬಳಕೆ ಸಾಮಾಗ್ರಿ ವಿತರಣೆ

ಉಡುಪಿ(29ಮಾ/2020): ಶಂಕರಪುರದ ಗುರೂಜಿ ಸಾಯಿಈಶ್ವರ್ ಇವರ ಶ್ರೀ ಸಾಯಿ ಸಾಂತ್ವನ ಮಂದಿರ ಚಾರಿಟೇಬಲ್ ಟ್ರಸ್ಟ್ ವತಿಯಿಂದ
ಶಂಕರಪುರ ಶಿವಾನಂದ ನಗರದಲ್ಲಿರುವ 41 ಮನೆಗಳಿಗೆ ಬೇಟಿ ನೀಡಿ ದಾನಿಗಳ ಸಹಾಯದಿಂದ ಬಂದ ದ್ವಾರಕಾಮಯಿ ಶ್ರೀ ಸಾಯಿ ಬಾಬಾರ ದಿವ್ಯ ಪ್ರಸಾದ ರೂಪದಲ್ಲಿ ದಿನಬಳಕೆ ಸಾಮಗ್ರಿ ವಿತರಣೆ ಮಾಡಲಾಯಿತು .
ಸಾಯಿ ಸಾಂತ್ವನ ಮಂದಿರದ ವ್ಯವಸ್ಥಾಪಕರಾದ ಶ್ರೀ ಸತೀಶ್ ದೇವಾಡಿಗ, ಟ್ರಸ್ಟಿ ಸದಸ್ಯರಾದ ಶ್ರೀ ಮನೋಹರ್ ಶಂಕರಪುರ,
ಶ್ರೀ ಅಮಿತ್ ಬಜಪೆ ಮತ್ತು ಸಮಾಜ ಸೇವಕಿ ಮೂಡಬೆಟ್ಟು ಗ್ರಾಮದ ಆಶಾ ಕಾರ್ಯಕರ್ತೆ ಶ್ರೀಮತಿ ಗುಲಾಬಿ ಕೃಷ್ಣ ಇವರ ನೇತೃತ್ವದಲ್ಲಿ ವಿತರಣೆ ಕಾರ್ಯ ನಡೆಯಿತು .

ಹೆಚ್ಚಿನ ದರಕ್ಕೆ ಮಾರಾಟ, ಕೃತಕ ಅಭಾವ ಸೃಷ್ಠಿಸಿದಲ್ಲಿ ಕಠಿಣ ಕ್ರಮ- ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ

ಉಡುಪಿ(ಮಾರ್ಚ್27/2020): ಜಿಲ್ಲೆಯಾದ್ಯಂತ ತರಕಾರಿ, ದಿನಸಿ, ಮೀನು, ಮಾಂಸ , ಹಣ್ಣು ಹಂಪಲು, ಮೆಡಿಕಲ್ ಶಾಪ್, ಹಾಲು ಮುಂತಾದವುಗಳನ್ನು ಮಾರಾಟ ಮಾಡುವ ಅಂಗಡಿಗಳ ಮಾಲೀಕರು ತಮ್ಮ ಅಂಗಡಿಗಳ ಎದುರಿನಲ್ಲಿ ಕನಿಷ್ಠ 6 ಅಡಿಗಳ ಅಂತರದಲ್ಲಿ ಕಡ್ಡಾಯವಾಗಿ ಪೇಂಟ್ ಅಥವಾ ಇನ್ನಿತರ ಬಣ್ಣದ ವಸ್ತುಗಳಿಂದ ಗುರುತನ್ನು ಹಾಕುವುದು ಹಾಗೂ ಸಾರ್ವಜನಿಕರು/ಗ್ರಾಹಕರು ಸದ್ರಿ ಗುರುತುಗಳ ಸರತಿ ಸಾಲಿನಲ್ಲಿ ನಿಂತು ವಸ್ತುಗಳನ್ನು ಕೊಳ್ಳುವುದನ್ನು ಕಡ್ಡಾಯಗೊಳಿಸಿದೆ.ಈ ನಿರ್ದೇಶನಗಳನ್ನು ಪಾಲಿಸದ ಅಂಗಡಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಸಿದ್ದಾರೆ.
ಅಲ್ಲದೇ ಯಾವುದೇ ಅಗತ್ಯ ವಸ್ತುಗಳನ್ನು ನಿಗಧಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡತಕ್ಕದ್ದಲ್ಲ, ಕೃತಕ ಅಭಾವ ಸೃಷ್ಠಿಸಿ, ಹೆಚ್ಚಿನ ದರಕ್ಕೆ ಮಾರಾಟ ಮಾಡಲು , ಅನಾವಶ್ಯಕವಾಗಿ ಸಂಗ್ರಹಾಲಯಗಳಲ್ಲಿ ಇಂತಹ ವಸ್ತುಗಳನ್ನು ದಾಸ್ತಾನು ಮಾಡತಕ್ಕದ್ದಲ್ಲ, ಅಂತಹ ಪ್ರಕರಣಗಳು ಕಂಡು ಬಂದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಈ ಮೇಲಿನ ನಿರ್ದೇಶನಗಳು ಪಾಲನೆಯಾಗುವಂತೆ ಸಂಬಂದಪಟ್ಟ ನಗರ ಸ್ಥಳೀಯ ಸಂಸ್ಥೆಗಳ ಆಯುಕ್ತರು/ಮುಖ್ಯಾಧಿಕಾರಿಗಳು, ಗ್ರಾಮ ಪಂಚಾಯತ್ ಪಿಡಿಓ ಗಳು ಕ್ರಮವಹಿಸಬೇಕು ತಪ್ಪದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದ್ದಾರೆ.

ಕರೋನಾ ಪೀಡಿತ “ಮಂಗಳೂರು ಎಕ್ಸ್‌ಪ್ರೆಸ್” ರೈಲಿನಲ್ಲಿ ಪ್ರಯಾಣ

ಬೆಂಗಳೂರು(26ಮಾರ್ಚ್/2020): ಕೊರೊನಾ ಪೀಡಿತ ವ್ಯಕ್ತಿಯೊಬ್ಬರು ರೈಲಿನಲ್ಲಿ ಸಂಚರಿಸಿದ್ದು, ಈಗ ಸರ್ಕಾರ ಈ ರೈಲಿನ ಬೋಗಿಯಲ್ಲಿದ್ದ ಪ್ರಯಾಣಿಕರು ಕೂಡಲೇ ಪರೀಕ್ಷೆಗೆ ಹಾಜರಾಗಬೇಕೆಂದು ಸೂಚಿಸಿದೆ.ಉತ್ತರ ಕನ್ನಡ ಜಿಲ್ಲೆಯ 65 ವರ್ಷದ ವ್ಯಕ್ತಿಯೊಬ್ಬರು ದುಬೈಗೆ ಪ್ರಯಾಣ ಬೆಳೆಸಿ ಮಾರ್ಚ್ 17ಕ್ಕೆ ಮುಂಬೈ ಮೂಲಕ ಭಾರತಕ್ಕೆ ಬಂದಿದ್ದಾರೆ. ಅಂದು ಅವರು ಮಂಗಳೂರು ಎಕ್ಸ್‌ಪ್ರೆಸ್ ರೈಲಿನ ಎಸ್3 ಕೋಚ್ ಲೋಯರ್ ಬರ್ತ್ ನಲ್ಲಿ ಮುಂಬೈನಿಂದ ಭಟ್ಕಳಕ್ಕೆ ಮಾರ್ಚ್ 18 ರಂದು ಮರಳಿದ್ದಾರೆ.
ಕೊರೊನಾ ಈಗ ಮೂರನೇ ವ್ಯಕ್ತಿಗಳಿಗೂ ಹರಡುತ್ತಿರುವ ಹಿನ್ನೆಲೆಯಲ್ಲಿ ಈ ಬೋಗಿಯಲ್ಲಿನ ಪ್ರಯಾಣಿಸಿದ ಎಲ್ಲ ಪ್ರಯಾಣಿಕರು ದಯವಿಟ್ಟು ಈ ಕೂಡಲೇ ಶುಲ್ಕ ರಹಿತ 104, 080-4684600 ಅಥವಾ 080 66692000 ನಂಬರಿಗೆ ಕರೆ ಮಾಡಬೇಕು ಎಂದು ಸರ್ಕಾರ ಕೇಳಿಕೊಂಡಿದೆ.

SSLC ಪರೀಕ್ಷೆ ರದ್ದು,ಅಪ್ಪಟ ಸುಳ್ಳು ಸುದ್ಧಿ

ಬೆಂಗಳೂರು(26ಮಾರ್ಚ್/2020): ಈ ಸಲದ ಎಸ್ಸೆಸ್ಸೆಲ್ಸಿ ಪಬ್ಲಿಕ್‌ ಪರೀಕ್ಷೆ ರದ್ದಾಗಲಿದೆ ಎಂದು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿರುವ ಸಂದೇಶಗಳ ಕುರಿತು ಸ್ಪಷ್ಟನೆ ನೀಡಿರುವ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌,  ‘ಇದೆಲ್ಲವೂ ಅಪ್ಪಟ ಸುಳ್ಳು ಸುದ್ದಿ’ ಎಂದು ಹೇಳಿದ್ದಾರೆ. 
ಪರೀಕ್ಷೆಗಳ ಕುರಿತು ಚರ್ಚಿಸಲು ಯಾವುದೇ ಸಭೆಯೂ ಆಗಿಲ್ಲ.
ಈ ಕುರಿತು ಟ್ವೀಟ್‌ ಮಾಡಿರುವ ಸುರೇಶ್‌ ಕುಮಾರ್‌, ‘ ಕೆಲ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ದಾಗಿದೆ ಎಂಬ  ಒಂದು ಅಪ್ಪಟ ಸುಳ್ಳು ಸುದ್ದಿ ಹರಿದಾಡುತ್ತಿದೆ. ಪರೀಕ್ಷೆ ರದ್ದು ಮಾಡುವ ಯಾವುದೇ ನಿರ್ಧಾರ ಕೈಗೊಂಡಿಲ್ಲ,’ ಎಂದು ಅವರು ಹೇಳಿದ್ದಾರೆ. 
ಪರೀಕ್ಷೆಗಳ ಕುರಿತು ಚರ್ಚಿಸಲು ಯಾವುದೇ ಸಭೆಯೂ ಆಗಿಲ್ಲ ಎಂದೂ ಅವರು ತಿಳಿಸಿದ್ದಾರೆ. ಇದರೊಂದಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ದು ಎಂಬ ಊಹಾಪೋಹಗಳಿಗೆ ಅವರು ಅವರು ತೆರೆ ಎಳೆದಿದ್ದಾರೆ. 
ಇದೇ 27ರಿಂದ ಆರಂಭವಾಗಬೇಕಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ಕೊರೊನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ  ಮುಂದೂಡಲು ರಾಜ್ಯ ಸರ್ಕಾರ ಮಾರ್ಚ್‌ 22ರಂದು  ನಿರ್ಧರಿಸಿತ್ತು. 
ಈ ವೇಳೆ ಮಾತನಾಡಿದ್ದ ಸುರೇಶ್‌ ಕುಮಾರ್‌, ‘ಎಸ್ಸೆಸ್ಸೆಲ್ಸಿ ಪರೀಕ್ಷೆ ಬೇಗ ಮುಗಿಯಬೇಕೆಂಬ ಆಸೆ ಮಕ್ಕಳಲ್ಲಿದೆ. ಇದೇ ಕಾರಣಕ್ಕೆ ಎಲ್ಲ ಸುರಕ್ಷಿತ ವ್ಯವಸ್ಥೆಗಳನ್ನು ಚರ್ಚಿಸಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿತ್ತು. ಆದರೆ, ಆರೋಗ್ಯ ಇಲಾಖೆಯೂ ಸೇರಿದಂತೆ ಹಲವರ  ಅಭಿಪ್ರಾಯದಂತೆ ಪರೀಕ್ಷೆ ಮುಂದೂಡಲಾಗಿದೆ,’ ಎಂದಿದ್ದರು. 

ಉಜ್ವಲಾ ಫಲಾನುಭವಿಗಳಿಗೆ 3 ತಿಂಗಳು ಉಚಿತ ಗ್ಯಾಸ್: ನಿರ್ಮಲಾ ಸೀತಾರಾಮನ್‌

ನವದೆಹಲಿ(ಮಾರ್ಚ್26/2020): ದೇಶದ ಆರ್ಥಿಕತೆಯ ಮೇಲೆ ಕೋವಿಡ್‌–19ನಿಂದಾಗಿ ಆಗುತ್ತಿರುವ ಪರಿಣಾಮಗಳನ್ನು ಎದುರಿಸಿ, ಚೇತರಿಕೆ ನೀಡುವ ನಿಟ್ಟಿನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸಮಗ್ರವಾದ ಪ್ಯಾಕೇಜ್‌ ಘೋಷಿಸಿದ್ದಾರೆ. 
ವಲಸೆ ಬಂದಿರುವ ಕಾರ್ಮಿಕರು, ಗ್ರಾಮೀಣ ಹಾಗೂ ನಗರ ಪ್ರದೇಶದ ಬಡ ಜನರಿಗಾಗಿ ₹1.7 ಲಕ್ಷ ಕೋಟಿ ಪ್ಯಾಕೇಜ್‌ ಸಿದ್ಧವಿರುವುದಾಗಿ ನಿರ್ಮಲಾ ಸೀತಾರಾಮನ್‌ ಘೋಷಿಸಿದರು. ಯಾರೂ ಸಹ ಹಸಿವಿನಿಂದ ಇರಲು ಬಿಡುವುದಿಲ್ಲ ಎಂದು ಹೇಳಿದರು. 
ಮುಂದಿನ 3 ತಿಂಗಳ ವರೆಗೂ ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಅನ್ನ ಯೋಜನೆ ನಡೆಯಲಿದೆ. ಇದರ ಅಡಿಯಲ್ಲಿ 80 ಕೋಟಿ ಬಡ ಜನರಿಗೆ ಅಗತ್ಯ ಆಹಾರ ಪದಾರ್ಥ ಸಿಗಲಿದೆ. ಈಗಾಗಲೇ ಪ್ರತಿ ವ್ಯಕ್ತಿಗೆ ನಿಗದಿಯಾಗಿರುವ 5ಕೆ.ಜಿ ಅಕ್ಕಿ ಅಥವಾ ಗೋದಿಯ ಜತೆಗೆ 5ಕೆ.ಜಿ. ಆಹಾರ ಪದಾರ್ಥ ಉಚಿತವಾಗಿ ಸಿಗಲಿದೆ. ಇದರೊಂದಿಗೆ ಹೆಚ್ಚುವರಿಯಾಗಿ 1 ಕೆ.ಜಿ. ಬೇಳೆ (ಪ್ರಾಂತ್ಯಗಳಿಗೆ ಅನುಗುಣವಾಗಿ) ಸಿಗಲಿದೆ. 
ನಗದು ವರ್ಗಾವಣೆ ಯೋಜನೆ ಅಡಿಯಲ್ಲಿ ಅಂಗವಿಕಲರು, ರೈತರು ಹಾಗೂ ಬಡ ಪಿಂಚಣಿದಾರರನ್ನು ತಲುಪುವ ವ್ಯವಸ್ಥೆ ಮಾಡಲಾಗುತ್ತದೆ. 8.6 ಕೋಟಿ ರೈತರು ಏಪ್ರಿಲ್‌ ಮೊದಲ ವಾರದಲ್ಲಿ ₹2,000 ನೇರ ವರ್ಗಾವಣೆ ಅಡಿಯಲ್ಲಿ ಪಡೆಯಲಿದ್ದಾರೆ. 
 ಕೊರೊನಾ ವೈರಸ್‌ ಸೊಂಕಿತರಿಗೆ ಚಿಕಿತ್ಸೆ ನೀಡುತ್ತಿರುವವರು, ಸೋಂಕಿನ ಅಪಾಯ ಇರುವವರಿಗೆ ಆರೋಗ್ಯ ವಿಮೆ ಒದಗಿಸಲಾಗುತ್ತದೆ. ಆರೋಗ್ಯ ಕಾರ್ಯಕರ್ತರಿಗೆ 50 ಲಕ್ಷ ವಿಮೆ. 
ಹಿರಿಯ ನಾಗರಿಕರು, ವಿಧವೆ, ಅಂಗವಿಕರಿಗೆ ಒಂದು ಬಾರಿಯ ಪರಿಹಾರ ಮೊತ್ತ ₹1,000 ಸಿಗಲಿದೆ. ಎರಡು ಕಂತುಗಳಲ್ಲಿ ಹಣ ಬಿಡುಗಡೆಯಾಗಲಿದ್ದು, ಸುಮಾರು 3 ಕೋಟಿ ಜನರಿಗೆ ಇದರಿಂದ ಅನುಕೂಲವಾಗಲಿದೆ. 
ಮಹಿಳಾ ಜನ ಧನ್‌ ಖಾತೆ ಹೊಂದಿರುವವರು ಪ್ರತಿ ತಿಂಗಳಿಗೆ ₹500 ಪಡೆಯಲಿದ್ದಾರೆ. ಇದು ಮುಂದಿನ 3 ತಿಂಗಳ ವರೆಗೂ ಮುಂದುವರಿಯಲಿದೆ. 
ಉಜ್ವಲ ಯೋಜನೆ ಅಡಿಯಲ್ಲಿ ಅಡುಗೆ ಅನಿಲ ಸಿಲಿಂಡರ್‌ ಸಂಪರ್ಕ ಪಡೆದಿರುವ ಮಹಿಳೆಯರಿಗೆ 3 ತಿಂಗಳ ವರೆಗೂ ಮೂರು ಅನಿಲ ಸಿಲಿಂಡರ್‌ಗಳು ಉಚಿತವಾಗಿ ಪೂರೈಕೆಯಾಗಲಿದೆ. ಇದರಿಂದಾಗಿ 8 ಕೋಟಿ ಮಹಿಳೆಯರು ಲಾಭ ಪಡೆಯಲಿದ್ದಾರೆ. 
ಮುಂದಿನ ತಿಂಗಳ ಇಪಿಎಫ್‌ ಮೊತ್ತವನ್ನು (ಸಂಸ್ಥೆಗಳು ಮತ್ತು ಉದ್ಯೋಗಿಗಳ) ಸರ್ಕಾರವೇ ತುಂಬಲಿದೆ.
100 ಉದ್ಯೋಗಿಗಳು ಇರುವ ಸಂಸ್ಥೆ ಹಾಗೂ ತಿಂಗಳಿಗೆ ₹15,000ದ ವರೆಗೂ ವೇತನ ಪಡೆಯುತ್ತಿರುವ ಉದ್ಯೋಗಿಗಳಿರುವ ಸಂಸ್ಥೆಗಳಿಗೆ ಪಿಎಫ್‌ ಕೊಡುಗೆ.
ಇಪಿಎಫ್‌ ಯೋಜನೆಗೆ ತಿದ್ದುಪಡಿ ತರಲಾಗುತ್ತದೆ. ಈ ಮೂಲಕ ಮರು ಪಾವತಿ ಮಾಡದಿರದ ವ್ಯವಸ್ಥೆಯಡಿ ಶೇ 75ರಷ್ಟು ಇಪಿಎಫ್‌ ಮುಂಗಡ ಮೊತ್ತ ಪಡೆಯಲು ಅವಕಾಶ ನೀಡಲಾಗುತ್ತದೆ. ಕಾರ್ಮಿಕರು 3 ತಿಂಗಳ ಸಂಬಳ ಅಥವಾ ಶೇ 75ರಷ್ಟು ಮುಂಗಡ ಮೊತ್ತ; ಇದರಲ್ಲಿ ಯಾವುದು ಕಡಿಮೆಯೋ ಅದನ್ನು ಪಡೆಯಬಹುದಾಗಿದೆ. ಇದರಿಂದ ಇಪಿಎಫ್‌ ನೋಂದಾಯಿಸಿರುವ ಸುಮಾರು 4.8 ಕೋಟಿ ಉದ್ಯೋಗಿಗಳಿಗೆ ಅನುಕೂಲವಾಗಲಿದೆ. 
ಕಟ್ಟಡ ನಿರ್ಮಾಣ ಕಾರ್ಮಿಕರ ( ನೋಂದಾಯಿತ 3.5 ಕೋಟಿ ಕಾರ್ಮಿಕರು) ಪರಿಹಾರಕ್ಕಾಗಿ ರಾಜ್ಯ ಸರ್ಕಾರಗಳು ₹31,000 ಕೋಟಿ ನಿಧಿಯನ್ನು ಬಳಸಿಕೊಳ್ಳುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

*ಡಿಸ್ಟ್ರಿಕ್ಟ್‌ ಮಿನೆರಲ್‌ ಫಂಡ್‌: ವೈದ್ಯಕೀಯ ಪರೀಕ್ಷೆ, ಆರೋಗ್ಯ ಸೇವೆಗಳಿಗಾಗಿ ರಾಜ್ಯ ಸರ್ಕಾರಗಳು ಈ ಫಂಡ್‌ನ ಬಳಕೆ ಮಾಡಿಕೊಳ್ಳುವಂತೆ ಕೇಂದ್ರ ಸೂಚಿಸಿದೆ

ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಅವರು ಹಣಕಾಸು ಸಚಿವರ ನೇತೃತ್ವದಲ್ಲಿ ಕಾರ್ಯಪಡೆ ರಚಿಸಿ, ಕೋವಿಡ್‌–19ನಿಂದ ಆರ್ಥಿಕತೆ ಮೇಲೆ ಆಗಿರುವ ಪ್ರಭಾವವನ್ನು ತಗ್ಗಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಹಾಗೂ ಆರ್ಥಿಕ ಚೇತರಿಕೆ ಪ್ಯಾಕೇಜ್‌ ಸಿದ್ಧಪಡಿಸುವಂತೆ ಸೂಚಿಸಿದ್ದರು

ಕರೋನಾ ನಿಯಂತ್ರಣ: ಶಾಸಕ ಉಮಾನಾಥ ಕೋಟ್ಯಾನ್ ವಿಶೇಷ ಸಭೆ

ಮೂಡಬಿದರೆ(26ಮಾರ್ಚ್/2019): ಮೂಲ್ಕಿ ಮೂಡಬಿದ್ರಿ ಶಾಸಕರಾದ ಉಮಾನಾಥ್ ಕೋಟ್ಯಾನ್ ರವರು ಇಂದು ಮೂಡಬಿದ್ರಿ ಪ್ರವಾಸಿ ಮಂದಿರದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಕೊರೊನಾ ನಿಯಂತ್ರಣದ ವಿಷಯದಲ್ಲಿ ಕೈಗೊಂಡಿರುವ ನಿರ್ಧಾರದ ಬಗ್ಗೆ ಮಾಹಿತಿ ಪಡೆದರು. ದೇಶದಲ್ಲಿ ಲಾಕ್ ಡೌನ್ ನಡೆಯುತ್ತಿರುವ ಈ ಸಂಧರ್ಭದಲ್ಲಿ ಕ್ಷೇತ್ರದ ಹಲವಾರು ದಿನಸಿ ಅಂಗಡಿಗಳಲ್ಲಿ ದಿನ ಬಳಕೆ ವಸ್ತುಗಳು ಕಾಲಿಯಾಗಿ ಜನರು ತೊಂದರೆ ಅನುಭವಿಸುತ್ತಿರುವದನ್ನು ಮನಗಂಡು , ಈಗಿಂದೀಗಲೇ ಬೇಕಾದ ಅಗತ್ಯ ಕ್ರಮಗಳನ್ನ ಕೈಗೊಂಡು ಜನತೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈವರಗೆ ಎಲ್ಲಾ ಇಲಾಖೆಯ ಅಧಿಕಾರಿಗಳೂ ಕೊರೊನಾ ವಿರುದ್ದದ ಹೋರಾಟದಲ್ಲಿ ಜನತೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ಉತ್ತಮವಾಗಿಯೇ ಕಾರ್ಯನಿರ್ವಹಿಸಿರುವಿರಿ , ಮುಂದೆಯೂ ಒಟ್ಟಾಗಿಯೇ ಎದುರಿಸೋಣ ಎಂದು ಹುರಿದುಂಬಿಸಿದರು
ತುರ್ತು ಸಂಧರ್ಭವಿದ್ದರೆ ಮಾತ್ರ ಮನೆಯಿಂದ ಹೊರ ಬನ್ನಿ , ಕೊರೊನಾ ವೈರಸ್ ವಿರುದ್ದದ ಹೋರಾಟದಲ್ಲಿ ತಾಲೂಕು ಆಡಳಿತದ ಜೊತೆ ದಯವಿಟ್ಟು ಸಹಕರಿಸಿ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

ಗೋಧಿ ಎರಡು ರೂಪಾಯಿ, ಅಕ್ಕಿ ಮೂರು ರೂಪಾಯಿಗೆ: ಕೇಂದ್ರ ಸರ್ಕಾರದ ನಿರ್ಧಾರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಭಾರತ ಬಂದ್ ಮಾಡಿರುವ ಬಗ್ಗೆ ಮಹತ್ವದ ಚರ್ಚೆ ನಡೆದಿದೆ. ದೇಶದ 80 ಕೋಟಿ ಜನರಿಗೆ ಪಡಿತರ ನೀಡುವ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಮಾಡಲಿದೆ ಎಂದು ಜಾವೇಡ್ಕರ್ ಹೇಳಿದರು.
ಪ್ರತಿ ವ್ಯಕ್ತಿಗೆ ಏಳು ಕೆ.ಜಿ ಪಂಡಿತರ ನೀಡಲು ನಿರ್ಧರಿಸಿದ್ದು, ಗೋಧಿ ಎರಡು ರೂಪಾಯಿ, ಅಕ್ಕಿ ಮೂರು ರೂಪಾಯಿಗೆ ಕೆ.ಜಿಯಂತೆ ವಿತರಣೆ ಮಾಡಲಾಗುವುದು. ಈ ಮೂಲಕ ದೇಶದ ಜನರ ನೆರವಿಗೆ ಕೇಂದ್ರ ಸರ್ಕಾರ ಬರಲಿದೆ. ಹೀಗಾಗಿ ಯಾರು ಆತಂಕಗೊಳ್ಳುವ ಅವಶ್ಯಕತೆ ಇಲ್ಲ ಎಂದು ಭರವಸೆ ನೀಡಿದರು.
ಜನರು ಮನೆಯಲ್ಲಿದ್ದು ಸಹಕಾರ ನೀಡಬೇಕು. ಪ್ರತಿ ಬಾರಿ ಯಾವುದಾದರೂ ಕೆಲಸ ಮಾಡಿದ ಬಳಿಕ ಸಾಬೂನಿನಿಂದ ಕೈ ತೊಳೆಯಬೇಕು. ಗಾಳಿ ಮಾತಿಗೆ ಕಿವಿಗೊಟ್ಟು ಮನೆಯಿಂದ ಆಚೆ ಬಾರಬಾರದು. ಕೆಮ್ಮು ಕಫ, ಜ್ವರ ಕಂಡು ಬಂದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸುವಂತೆ ಅವರು ಸಾರ್ವಜನಿಕಲ್ಲಿ ಮನವಿ ಮಾಡಿಕೊಂಡರು.
ಇಂದು ನಡೆದ ಸಭೆಯಲ್ಲಿ ಎಲ್ಲ ಕೇಂದ್ರ ಸಚಿವರು ದೂರದಲ್ಲಿ ಕೂತು ಸಭೆ ನಡೆಸಿದ್ದಾರೆ. ಈ ಮೂಲಕ ದೇಶಕ್ಕೆ ಹೊಸ ಸಂದೇಶ ರವಾನಿಸುವ ಪ್ರಯತ್ನವನ್ನು ಪ್ರಧಾನಿ ಮೋದಿ ಮಾಡಿದರು

ಕೇರಳ ಕರ್ನಾಟಕ ಗಡಿ ರಸ್ತೆಯಲ್ಲಿ ಅಂಬುಲೆನ್ಸ್ ಪ್ರವೇಶ ಇಲ್ಲ- ನಳಿನ್ ಕುಮಾರ್ ಕಟೀಲ್

ಮಂಗಳೂರು : ನಾಳೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಅಗತ್ಯ ವಸ್ತುಗಳು ಸೇರಿದಂತೆ ಎಲ್ಲಾ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಸ್ತಬ್ದಗೊಳ್ಳಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದರು ಜನರಿಗೆ ಬೇಕಾದ ಎಲ್ಲಾ ಸವಲತ್ತುಗಳನ್ನು ನಾವೇ ಮನೆಗೆ ತಲುಪಿಸುತ್ತೇವೆ. ಸರ್ಕಾರದ ಕಡೆಯಿಂದ ಹೇಗೆ ತಲುಪಿಸೋದು, ಅಪಾರ್ಟ್ ಮೆಂಟ್ ಗಳಿಗೆ ಹೇಗೆ ತಲುಪಿಸೋದು ಅಂತ ಮಾತುಕತೆ ನಡೆಯುತ್ತಿದೆ ಎಂದು ದ.ಕ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಕೇರಳ ಭಾಗದಿಂದ ಮಂಗಳೂರಿಗೆ ಅಂಬ್ಯುಲೆನ್ಸ್ ಬರುವ ವಿಚಾರವಾಗಿ ಮಾತನಾಡಿದ ಅವರು ಮಂಗಳವಾರ ಅತೀ ಹೆಚ್ಚು ರೋಗಿಗಳು ಕೇರಳದಿಂದ ಮಂಗಳೂರಿಗೆ ಬಂದಿದ್ದಾರೆ. ಆದರೆ ಜಿಲ್ಲಾಡಳಿತ ಒಂದು ನಿರ್ಧಾರ ತೆಗೆದುಕೊಂಡಿದೆ. ಸದ್ಯದ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಗಳು ನಮಗೆ ಸಾಕಾಗಲ್ಲ, ಹೀಗಾಗಿ ಹೊರಗಿನ ಯಾವುದೇ ವಾಹನ, ಅಂಬ್ಯುಲೆನ್ಸ್ ಸೇರಿ ಯಾವುದನ್ನೂ ಬಿಡಬಾರದು ಅಂತ ನಿರ್ಧರಿಸಲಾಗಿದೆ. ಎಲ್ಲಾ ಅಂಬ್ಯುಲೆನ್ಸ್ ಗಳನ್ನ ತಲಪಾಡಿ ಗಡಿಯಲ್ಲಿ ನಿರ್ಬಂಧಿಸಲಾಗುತ್ತಿದೆ. ಎಲ್ಲಾ ವಾಹನಗಳನ್ನು ಗಡಿಯಲ್ಲಿ ಬಂದ್ ಮಾಡಲಾಗಿದೆ ಎಂದು ಹೇಳಿದರು.

Related Post