January 23, 2021

Month: September 2020

ಮರ್ ಹೂಂ ಬೇಕಲ ಉಸ್ತಾದರಿಗೆ ಮುಡಿಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ನುಡಿ ನಮನ

ಉಳ್ಳಾಲ(27ಸೆ/2020): ಮನುಷ್ಯನಿಗೆ ಹುಟ್ಟು ಸಾವು ನಿಶ್ಚಿತ, ಆದರೆ
ಜಾತ್ಯಾತೀತ ತತ್ವ ಸಿದ್ಧಾಂತಗಳ ಪ್ರತಿಪಾದಕರಾಗಿದ್ದ ಬೇಕಲ ಉಸ್ತಾದ್ ಅಗಲಿಕೆ ಸಮಾಜಕ್ಕೆ ನಷ್ಟವಾಗಿದ್ದು ಅಂತಹ ವ್ಯಕ್ತಿಗಳು ಇನ್ನಷ್ಟು ವರ್ಷ ನಮ್ಮೊಂದಿಗಿರಬೇಕಿತ್ತು ಎಂದು ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ ಕಾಜವ ಖೇದ ವ್ಯಕ್ತಪಡಿಸಿದರು. ‌
ಮುಡಿಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಮುಡಿಪುವಿನಲ್ಲಿ ಭಾನುವಾರ ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಬೇಕಲ‌ ಇಬ್ರಾಹಿಂ ಮುಸ್ಲಿಯಾರ್ ನುಡಿನಮನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬೇಕಲ ವ್ಯಕ್ತಿ ಎನ್ನುವುದು ಓರ್ವ ವ್ಯಕ್ತಿಯಾಗಿರದೆ ದೊಡ್ಡ ಶಕ್ತಿಯಾಗಿದ್ದರು. ಅವರು ಸಂಪತ್ತು ಗಳಿಸದಿದ್ದರೂ ದೊಡ್ಡ ಪ್ರಮಾಣದ ಜನರ ಪ್ರೀತಿ ಗಳಿಸಿದ್ದರು ಎನ್ನುವುದಕ್ಕೆ ಅವರ ಅಂತಿಮ ದರ್ಶನಕ್ಕೆ ಸೇರಿದ್ದ ಜನಸ್ತೋಮ ಸಾಕ್ಷಿ ಎಂದು ಹೇಳಿದರು.
ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ ಮಾತನಾಡಿ, ಬೇಕಲ ಉಸ್ತಾದ್ ಯಾವುದೇ ಒಂದು ಪಕ್ಷಕ್ಕೆ ಅಂಟಿಕೊಳ್ಳದೆ ಸಮಾಜದ ವಿಧ್ವಾಂಸರಾಗಿದ್ದರು. ಸಮಾಜದಲ್ಲಿ ಸರ್ವಧರ್ಮೀಯರು ಸಹೋದರರಂತೆ ಜೀವಿಸಬೇಕು ಎಂದು ಬಯಸಿದ್ದ ಅವರು, ಸರ್ವರ ಮಾರ್ಗದರ್ಶಕರಾಗಿ ಜಾತ್ಯಾತೀತ ಮನೋಭಾವ ಬಿತ್ತಿದ್ದರು ಎಂದು ಅವರೊಂದಿಗಿನ ಒಡನಾಟ ನೆನಪಿಸಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಅರುಣ್ ಡಿಸೋಜ, ಮಮತಾ ಗಟ್ಟಿ, ನಾಸಿರ್ ನಡುಪದವು, ಅಬ್ದುಲ್ ಜಲೀಲ್ ಮೋಂಟುಗೋಳಿ, ಉಮ್ಮರ್ ಪಜೀರ್, ದೇವದಾಸ್ ಭಂಡಾರಿ, ಚಂದ್ರಹಾಸ ಕರ್ಕೇರ, ಸಮೀರ್ ಪಜೀರ್, ಜನಾರ್ದನ ಗಟ್ಟಿ, ಸೀತಾರಾಮ ಶೆಟ್ಟಿ ಪಜೀರ್, ಪದ್ಮನಾಭ ನರಿಂಗಾನ, ಜೋಸೆಫ್ ಕುಟಿನ್ಹಾ, ಸಿ.ಎಂ.ಶರೀಫ್ ಪಟ್ಟೋರಿ, ದಿನೇಶ್ ಮೂಳೂರು, ಡಾ.ಸುರೇಖ ಇನ್ನಿತರರು ಉಪಸ್ಥಿತರಿದ್ದರು. ‌
ತಾ.ಪಂ. ಸದಸ್ಯ ಹೈದರ್ ಕೈರಂಗಳ ಪ್ರಾಸ್ತಾವಿಕವಾಗಿ ಮಾತನಾಡಿದರು. ರಝಾಕ್ ಕುಕ್ಕಾಜೆ ವಂದಿಸಿದರು. ಸತ್ತಾರ್ ಕೈರಂಗಳ ನಿರೂಪಿಸಿದರು. ‌

ಪಿಲಾರ್ ಮಹಾಲಕ್ಷ್ಮಿ ಮಂದಿರದಿಂದ ಕುಂಪಲ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ

ಉಳ್ಳಾಲ(27ಸೆ/2020): ಪಿಲಾರ್ ಮಹಾಲಕ್ಷ್ಮಿ ಮಂದಿರದಿಂದ ಕುಂಪಲದವರೆಗಿನ ರಸ್ತೆಯ 25 ಲಕ್ಷ ರೂಪಾಯಿ ವೆಚ್ಚದ ಕಾಮಗಾರಿಗೆ ಇಂದು ಗುದ್ದಲಿ ಪೂಜೆ ನೆರವೇರಿಸಲಾಯಿತು.
ಬಿಜೆಪಿ ಮಂಗಳೂರು ಮಂಡಲಾಧ್ಯಕ್ಷ ಚಂದ್ರಹಾಸ ಪಂಡಿತ್‌ಹೌಸ್, ಬಿಜೆಪಿ ಜಿಲ್ಲಾ ಸಮಿತಿ ಉಪಾಧ್ಯಕ್ಷ ಸಂತೋಷ್ ರೈ ಬೋಳಿಯಾರ್, ಜಿಲ್ಲಾ ಸಮಿತಿ ಕಾರ್ಯದರ್ಶಿಗಳಾದ ಸತೀಶ್ ಕುಂಪಲ, ಜಯಶ್ರೀ ಕರ್ಕೇರ, ಜಿಲ್ಲಾ ಸಮಿತಿ ಮಹಿಳಾ ಮೋರ್ಚಾ ಅಧ್ಯಕ್ಷೆ ಧನಲಕ್ಷ್ಮಿ ಗಟ್ಟಿ ,ಹಿರಿಯ ಮುಖಂಡ ಚಂದ್ರಶೇಖರ್ ಉಚ್ಚಿಲ್, ಮಂಗಳೂರು ಮಂಡಲ ಉಪಾಧ್ಯಕ್ಷರಾದ ಯಶವಂತ ಅಮೀನ್, ರವಿಶಂಕರ್, ಮಂಗಳೂರು ಮಂಡಲ ಪ್ರಧಾನ ಕಾರ್ಯದರ್ಶಿ ಹೇಮಂತ್ ಶೆಟ್ಟಿ, ಕಾರ್ಯದರ್ಶಿ ನವೀನ್ ಶೆಟ್ಟಿ ಕುರ್ನಾಡು, ಕೋಟೆಕಾರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಕಾರ್ಯದರ್ಶಿ ಪುರುಷೋತ್ತಮ ಗಟ್ಟಿ, ಶೇಖರ್ ಕನೀರುತೋಟ, ಸಪ್ನ ಶೆಟ್ಟಿ, ಹಿರಿಯ ಮುಖಂಡ ಸಂಜೀವ ಶೆಟ್ಟಿ, ರಾಜೇಶ್ ಉಚ್ಚಿಲ್, ಸುಜಾತ, ಹಿರಿಯರಾದ ಸುಬ್ರಾಯ ಮಾಸ್ಟ್, ಶೇಖರ್, ಪುರುಷೋತ್ತಮ, ರಾಜೇಶ್ ಶೆಟ್ಟಿ, ಸಂಜೀವ ಶೆಟ್ಟಿ, ರವಿಶಂಕರ್, ದಿನೇಶ್ ಪಿಲಾರ್, ಅನಿಲ್ ಬಗಂಬಿಲ, ಮಹಮ್ಮದ್ ಅಸ್ಗರ್, ಅಜಂತ ಪಿಲಾರ್, ಮಂಡಲ ಮಾದ್ಯಮ ಪ್ರಮುಖ್ ಪುರುಷೋತ್ತಮ ಕಲ್ಲಾಪು, ಜಿಲ್ಲಾ ಸಾಮಾಜಿಕ ಜಾಲತಾಣ ಪ್ರಕೋಷ್ಟದ ಸದಸ್ಯ ರಾಜೇಶ್ ಮಡಿವಾಳ, ಜಿತೇಶ್ ಪಿಲಾರ್, ರಾಜೇಶ್ ಪ್ರಕಾಶ್ ನಗರ, ಸೋಮೇಶ್ವರ ಪುರಸಭಾ ಸದಸ್ಯರಾದ ಉದಯ್ ಗಟ್ಟಿ, ಪ್ರೇಮಾನಂದ, ಶೋಭ, ಪುರುಷೋತ್ತಮ್ ಶೆಟ್ಟಿ, ಹರೀಶ್ ಕುಂಪಲ, ಸುಜಾತ ನಾಯಕ್ ಹಾಗೂ ಇನ್ನಿತರ ನಾಯಕರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.

ಬಂಟ್ವಾಳ: ಬಾಳೆಪುಣೆಯಲ್ಲಿ ಒಂಟಿ ಮಹಿಳೆಯ ಕೊಲೆ ಶಂಕೆ ನಗ್ನ ದೇಹ ಪತ್ತೆ

ಬಂಟ್ವಾಳ(26ಸೆ/2020): ಬಾಳೆಪುಣಿ ಗ್ರಾಮದ ಹೂ ಹಾಕುವ ಕಲ್ಲು ಸಮೀಪದ ಬೆಳ್ಳೇರಿ ಎಂಬಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದ ಅವಿವಾಹಿತ ಮಹಿಳೆಯ ಶವ ನಗ್ನ ಸ್ಥಿತಿಯಲ್ಲಿ ಪತ್ತೆಯಾಗಿದ್ದು ದುಷ್ಕರ್ಮಿಗಳು ಅತ್ಯಾಚಾರವೆಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಬೆಳ್ಳೇರಿ ನಿವಾಸಿ ಕುಸುಮ(50) ಮೃತ ಮಹಿಳೆ. ಅಡಕೆ ತೋಟ ಹೊಂದಿರುವ ಮಹಿಳೆ ಆರ್ಥಿಕವಾಗಿ ಸುಸ್ಥಿತಿಯಲ್ಲಿದ್ದು ಅವಿವಾಹಿತೆಯಾಗಿದ್ದ ಅವರು ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ಹೆಚ್ಚಾಗಿ ಯಾರೊಂದಿಗೂ ಬೆರೆಯುತ್ತಿರಲಿಲ್ಲ ಎನ್ನಲಾಗಿದೆ.yan
ಶುಕ್ರವಾರ ಮಹಿಳೆಯ ಸಹೋದರ ಕರೆ ಮಾಡಿದಾಗ ಸ್ವೀಕರಿಸದ ಹಿನ್ನೆಲೆಯಲ್ಲಿ ಕೆಲಸದ ಮಹಿಳೆ ಮತ್ತು ಸ್ಥಳೀಯರಿಗೆ ಮಾಹಿತಿ ನೀಡಿದ್ದರೆನ್ನಲಾಗಿದೆ. ಆ ವೇಳೆ ಕೃತ್ಯ ಬೆಳಕಿಗೆ ಬಂದಿದೆ.
ಮಹಿಳೆಯ ಮೃತದೇಹ ಸಂಪೂರ್ಣ ನಗ್ನರಾಗಿದ್ದು ಶರೀರದಲ್ಲಿ ಸುಟ್ಟ ಮಾದರಿಯ ಗಾಯಗಳಿವೆ. ಮನೆಯ ಸಿಟ್ ಔಟ್ ನಲ್ಲಿ ಮೊಬೈಲ್ ಮತ್ತು ಕನ್ನಡಕ ಬಿದ್ದಿತ್ತು. ಕಿಟಕಿ ಬಾಗಿಲು ತೆರೆದಿದ್ದು ಅಡುಗೆ ಕೋಣೆಯ ಬಾಗಿಲು ಒಳಗಡೆಯಿಂದಲೇ ಮುಚ್ಚಲಾಗಿತ್ತು ಎನ್ನಲಾಗಿದೆ. ಗ್ಯಾಸ್ ಪೈಪ್ ಎಳೆದು ಹಾಕಿದಂತಿದ್ದು, ಅಡುಗೆ ಒಲೆಯ ಪಕ್ಕ ಪಾತ್ರೆ, ಕರ್ಟನ್, ನೆಲದಲ್ಲಿ ಯಾವುದೋ ವಸ್ತು ಬಟ್ಟೆ ಸುಟ್ಟದ್ದು ಕಂಡು ಬಂದಿದೆ. ಗ್ಯಾಸ್ ಸ್ಫೋಟಗೊಂಡಿಲ್ಲ. ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಮನೆ ಕೆಲಸದ‌ ಮಹಿಳೆಯ ಹೇಳಿಕೆಯನ್ನಾಧರಿಸಿ ತನಿಖೆ ಮುಂದುವರಿಸಲಾಗಿದೆ. ಒಂಟಿ ಮಹಿಳೆಯ ಬಗ್ಗೆ ಮಾಹಿತಿ ಇರುವವರೇ ಮನೆಯಲ್ಲಿ ಕಳ್ಳತನಕ್ಕೆಂದು ಬಂದು ದುಷ್ಕೃತ್ಯ ನಡೆಸಿರುವ ಸಾಧ್ಯತೆ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಸ್ಥಳೀಯರು, ಅಡಕೆ ಕೊಂಡೊಯ್ಯುವ ಆಟೋ ಚಾಲಕ ಸೇರಿದಂತೆ ಹಲವರನ್ನು ವಿಚಾರಣೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ .

ಮುಂದಿನ ಪೀಳಿಗೆಗೆ ವೃಕ್ಷಗಳನ್ನು ಬಳುವಳಿಯಾಗಿ ನೀಡಬೇಕು:ರೊ| ರಂಗನಾಥ್ ಭಟ್

ಉಳ್ಳಾಲ(26/ಸೆ2020): ಆರೋಗ್ಯ ಮತ್ತು ಪರಿಸರ ರಕ್ಷಣೆ ಸಂಬಂಧಿ ಯೋಜನೆಗಳನ್ನು ರೋಟರಿಕ್ಲಬ್ ಕಾರ್ಯಗತಗೊಳಿಸುತ್ತಿದ್ದು ಪರಿಸರ ಉಳಿಸುವ ನಿಟ್ಟಿನಲ್ಲಿ ನಾವು ಮುಂದಿನ ಪೀಳಿಗೆಗೆ ವೃಕ್ಷಗಳನ್ನು ಬೆಳೆಸಿ ಬಳುವಳಿಯನ್ನಾಗಿ ನೀಡಬೇಕೆಂದು ರೋಟರಿ ಕ್ಲಬ್ ಜಿಲ್ಲಾ ಗವರ್ನರ್ ರೊ| ರಂಗನಾಥ್ ಭಟ್ ಹೇಳಿದರು.
ರೋಟರಿ ಕ್ಲಬ್ ದೇರಳಕಟ್ಟೆಯ ಪ್ರಾಯೋಜಕತ್ವದಲ್ಲಿ ಉಳ್ಳಾಲ ಬೈಲಿನ ದೊಡ್ಡಮನೆ ಭಂಡಾರಿ ಸಮಾಜದ ನಾಗವನದಲ್ಲಿ ಶನಿವಾರದಂದು ರೋಟರಿ ಜಿಲ್ಲಾ “ನಮ್ಮ ನೆಲ,ನನ್ನ ಗಿಡ” ಯೋಜನೆಯಡಿ ನಡೆದ ವನಮಹೋತ್ಸವ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.
ದೇರಳಕಟ್ಟೆ ರೋಟರಿ ಮಾಜಿ ಅಧ್ಯಕ್ಷರಾದ ರೊ|ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು,ಮಾತನಾಡಿ ನಮ್ಮ ನೆಲ ನನ್ನ ಗಿಡ ಯೋಜನೆಯಡಿ ಕಳೆದ ಎರಡು ತಿಂಗಳಿನಿಂದ ನಿರಂತರ ಗಿಡ ನೆಡುವ ಕಾರ್ಯಕ್ರಮ ನಡೆಸುತ್ತಾ ಬಂದಿದ್ದೇವೆ.ಆರನೇ ಹಂತದ ಕಾರ್ಯಕ್ರಮ ಇದಾಗಿದ್ದು,ಪರಿಸರದ ನಾಗಬನವನ್ನ ಸದಾ ಹಸಿರನ್ನಾಗಿಸಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ.ಪರಿಸರ ಆರೋಗ್ಯಪೂರ್ಣವಾಗಿದ್ದರೆ ಸಮಾಜವೇ ಆರೋಗ್ಯಮಯವಾಗಿರುತ್ತದೆ.ಇವತ್ತು ಇಲ್ಲಿ ವಿವಿಧ ಬಗೆಯ 150 ಗಿಡಗಳನ್ನು ನೆಡುತ್ತಿದ್ದೇವೆ.ಮಗುವಿನ ಲಾಲನೆ ,ಪಾಲನೆ ನಡೆಸಿದಂತೆ ಇವತ್ತು ನೆಟ್ಟ ಗಿಡಗಳ ಪಾಲನೆ ನಡೆಸುವುದು ಸಮಾಜದ ಜನರ ಜವಬ್ದಾರಿ ಎಂದರು.
ಝೋನ್ 3ರ ಉಪ ಗವರ್ನರ್ ರೊ|ಗೋಪಾಲ್ ಶೆಟ್ಟಿ, ನಮ್ಮ ನೆಲ,ನಮ್ಮ ಗಿಡ ಯೋಜನೆಯ ಚೇರ್ಮನ್ ರೊ|ಡಾ.ರಂಜನ್ ರಾವ್,ವೈಸ್ ಚೇರ್ಮನ್ ರೊ|ಮನೀಷ್ ರಾವ್,ದೇರಳಕಟ್ಟೆ ರೋಟರಿ ಕ್ಲಬ್ ಅಧ್ಯಕ್ಷ ರೊ|ಪಿ.ಡಿ ಶೆಟ್ಟಿ,ಕಾರ್ಯದರ್ಶಿ ರೊ|ಜಯಪ್ರಕಾಶ್ ರೈ, ರೊ|ವಿಕ್ರಮ್ ದತ್ತಾ, ರೊ|ಪುರುಷೋತ್ತಮ್ ಅಂಚನ್ ,ಪರಿಸರ ಪ್ರೇಮಿ ಮಾಧವ ಉಳ್ಳಾಲ್,ಭಂಡಾರಿ ಕುಟುಂಬದ ಮುಖ್ಯಸ್ಥರಾದ ಶರತ್ ಕುಮಾರ್ ,ನವೀನ್ ಭಂಡಾರಿ,ಅರಣ್ಯ ರಕ್ಷಕಿ ಸೌಮ್ಯ ಮೊದಲಾದವರು ಉಪಸ್ಥಿತರಿದ್ದರು.

ಕರಾವಳಿಯ ಪ್ರಥಮ ಆಧ್ಯಾತ್ಮಿಕ ಮೊಬೈಲ್ ಆಫ್ “ಗುರೂಜಿ ಸಾಯಿಈಶ್ವರ್”

ಉಡುಪಿ(14ಸೆ/2020): ಶಂಕರಪುರದ ದ್ವಾರಕಾಮಾಯಿ ಶ್ರೀ ಸಾಯಿಬಾಬಾ ಮಂದಿರ ಧರ್ಮದರ್ಶಿ ಗುರೂಜೀ ಸಾಯಿ ಈಶ್ವರ್ ಇವರು ಆಧ್ಯಾತ್ಮಿಕ ಸಾಧಕರಿಗಾಗಿ ಕರಾವಳಿಯ ಪ್ರಥಮ ಆಧ್ಯಾತ್ಮಿಕ ಆನ್ರೈಡ್ ಮೊಬೈಲ್ ಆಫ್ಅನ್ನು ಮಹಾಯೋಗಿ ಶ್ರೀ ಶ್ರೀ ಚಾಪ್ಪಮ್ಮ ದೇವಿಯವರ ದಿವ್ಯ ಹಸ್ತದಿಂದ ಲೋಕಾರ್ಪಣೆಗೊಳ್ಳಲಿದೆ.
ತಾ|| 16 ಸೆಪ್ಟಂಬರಂದು ರಾಯಚೂರಿನ ಸಿಂಧನೂರಿನ ಕಲ್ಮಂಗಿಯಲ್ಲಿರುವ “ಅಮ್ಮನವರ ಕುಟೀರ” ಇಲ್ಲಿ ನಡೆಯುವ ಸರಳ ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಮಾಡಲಾಗುವು ಎಂದು ಶಂಕರಪುರದ ದ್ವಾರಕಾಮಾಯಿ ಶ್ರೀ ಸಾಯಿಬಾಬಾ ಮಂದಿರ ಪ್ರಕಟಣೆಯಲ್ಲಿ ತಿಳಿದಿರುತ್ತಾರೆ.
ಗುರೂಜಿ ಸಾಯಿಈಶ್ವರ್ ಸದಾ ಅಸಹಾಯಕರ ಪರವಾಗಿ ಶ್ರಮಿಸುವವರು ಶ್ರೀ ಸಾಯಿ ಬಾಬಾರ ಪರಮಭಕ್ತರು, ಆರಾಧಕರು. ನೊಂದವರಿಗೆ ಸಾಂತ್ವಾನ ನುಡಿಯುವವರು. ಹಸಿದವರಿಗೆ ತುತ್ತು ಅನ್ನ ನೀಡಿದವರು. ಜಿಜ್ಞಾಸುಗಳಿಗೆ ಆಧ್ಯಾತ್ಮದ ಬೆಳಕು ಚೆಲ್ಲಿದವರು. ಆಧ್ಯಾತ್ಮ ವಲಯದಲ್ಲಿ ಇವರು ಮಾದರಿ ಆಧ್ಯಾತ್ಮ ಪರಿಚಾರಕರು.
ಈಗಲೇ ಹಲವು ಲಾಕ್ ಡೌನ್ ಸಮಯದಲ್ಲಿ ಆನ್ಲೈನ್ ಮೂಲಕ ಮಕ್ಕಳಿಗೆ “ನನ್ನ ಮನೆಯೇ ನನ್ನ ಗುರುಕುಲ” ಎಂಬ ಕಾರ್ಯಕ್ರಮ ಮಾಡಿ ಯಶಸ್ವಿಯಾಗಿರುವಂತೆ ನಂತರ ಆನ್ಲೈನ್ ಮೂಲಕ “ಆತ್ಮ ಶುದ್ಧಿ ಕ್ರಿಯಾ ಧ್ಯಾನ” ಮಾಡಿದ್ದು ಇದರಲ್ಲಿ ಐದುನೂರಕ್ಕೂ ಹೆಚ್ಚು ಜನರು ಭಾಗವಹಿಸಿರುವರು, ನಂತರ “ಪಾಕೆಟ್ ಪೆಂಡುಲಂ” ತರಬೇತಿ ಶಿಬಿರವನ್ನು ಆನ್ಲೈನ್ ಮೂಲಕ ಎರಡು ಅವದಿಯಲ್ಲಿ ಮಾಡಿದ್ದು ಎಲ್ಲವೂ ಯಶಸ್ವಿಯಾಗಿರುತ್ತದೆ.
ಇದೀಗ ಲೋಕಾರ್ಪಣೆ ಮಾಡಲಾಗುವ ಆನ್ಡ್ರೈಡ್ ಆಫ್ ನಲ್ಲಿ ಆನ್ಲೈನ್ ತರಗತಿಗಳನ್ನು ನಡೆಸಲು ಬೇಕಾಗುವ ವ್ಯವಸ್ಥೆಯೂ ಇರುತ್ತದೆ. ಈ ಆಫ್ ಮೂಲಕ ಭೌತಿಕ, ಐಶ್ವರ್ಯ, ಆರೋಗ್ಯ, ಶಾಂತಿ, ಧ್ಯಾನ, ಯೋಗ, ಸಾಂತ್ವನ ಮತ್ತು ಆಧ್ಯಾತ್ಮಿಕ ಮಾಹಿತಿಗಳ ಕಣಜವೇ ಆಧ್ಯಾತ್ಮಿಕ ಸಾಧಕರಿಗೆ ಸಿಗಲಿದೆ.

ಮಾಗಣ್ತಡಿ ಕಿಶೋರ್ ಕುಮಾರ್ ಶೆಟ್ಟಿ ತೇವುನಾಡು ಗುತ್ತು ನಿಧನ

ಉಳ್ಳಾಲ(ಸೆ12/2020):ತೇವುನಾಡುಗುತ್ತು ದಿ. ಪಟೇಲ್ ಕಿಂಞಣ್ಣ ಶೆಟ್ಟಿ ಅವರ ಪುತ್ರ ಮಾಗಣ್ತಡಿ ಕಿಶೋರ್ ಕುಮಾರ್ ಶೆಟ್ಟಿ ತೇವುನಾಡು ಗುತ್ತು (63) ಸೆ. 12ರಂದು ಶನಿವಾರ ನಿಧನ ಹೊಂದಿದರು.
ಮೃತರು ಪತ್ನಿ ಮಂಗಳೂರು ವಿಶ್ವವಿದ್ಯಾನಿಲಯದ ಸ್ಪೆಷಲ್ ಆಫಿಸರ್ ಪ್ರೊ| ಅನೂಸೂಯ ಶೆಟ್ಟಿ ಮತ್ತು ಪುತ್ರನನ್ನು ಅಗಲಿದ್ದಾರೆ.
ಉದ್ಯಮಿಯಾಗಿದ್ದ ಅವರು ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಮೂಲಕ ಕೊಡುಗೈದಾನಿಯಾಗಿದ್ದರು. ಲಯನ್ಸ್ ಕ್ಲಬ್ ಮಂಗಳಗಂಗೋತ್ರಿ ಇದರ ಅಧ್ಯಕ್ಷರಾಗಿ, ಮಂಜನಾಡಿ ಶ್ರೀ ವಿಷ್ಣುಮೂರ್ತಿ ಜನಾರ್ಧನ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ, ಶ್ರೀ ಮಲರಾಯ ದೈವಸ್ಥಾನ ಮಂಜನಾಡಿ ಇದರ ಆಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದರು. ವಿದ್ಯಾರ್ಥಿ ದೆಸೆಯಿಂದಲೇ ನಾಯಕತ್ವ ಗುಣ ಬೆಳೆಸಿಕೊಂಡಿದ್ದ ಅವರು ಸರಕಾರಿ ಕಾಲೇಜು ಮಂಗಳೂರು (ಈಗಿನ ವಿಶ್ವವಿದ್ಯಾನಿಲಯ ಕಾಲೇಜು) ಇದರ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದರು. ಬಂಟರ ಸಂಘ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದರು.

“ವಿಶ್ವ ಸಾಕ್ಷರತಾ ದಿನಾಚರಣೆ” ಪ್ರಯುಕ್ತ “ಸಂವಾದ-ಸಂಕಲ್ಪ”

ಉಳ್ಳಾಲ(8ಸೆ/2020): ಮಂಗಳೂರು ವಿಶ್ವವಿದ್ಯಾಲಯ ಈಗಾಗಲೇ ಐದು ಗ್ರಾಮಗಳನ್ನು ದತ್ತು ಸ್ವೀಕರಿಸಿದ್ದು, ವಿದ್ಯಾರ್ಥಿಗಳ ನಡೆ ಹಳ್ಳಿಗಳ ಕಡೆ ಎನ್ನುವ ಯೋಜನೆ ಹಮ್ಮಿಕೊಂಡಿದೆ, ಅಲ್ಲದೆ ಹತ್ತು ಸರ್ಕಾರಿ ಶಾಲೆಗಳನ್ನು ದತ್ತು ಸ್ವೀಕರಿಸುವ ಯೋಜನೆ ರೂಪಿಸಿ ವಿವಿಯಲ್ಲಿರುವ ಕಂಪ್ಯೂಟರ್ ಹಾಗೂ ಇತರ ಶೈಕ್ಷಣಿಕ ಪರಿಕರಗಳನ್ನು ನೀಡುವ ಯೋಚನೆ ಇದೆ ಎಂದು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅಭಿಪ್ರಾಯಪಟ್ಟರು. ‌
ಮಾದರಿ ಗ್ರಾಮ ಅಭಿಯಾನ ಪ್ರಯುಕ್ತ ಜನಶಿಕ್ಷಣ ಟ್ರಸ್ಟ್, ಬಾಳೆಪುಣಿ ಗ್ರಾಮ ಪಂಚಾಯಿತಿ, ಸೆಲ್ಕೋ ಫೌಂಡೇಶನ್, ಅಪ್ನಾದೇಶ್, ಪ್ರಜ್ಞಾ ವೃತ್ತಿಪರ ತರಬೇತಿ ಕೇಂದ್ರ, ಗ್ರಾಮ ವಿಕಾಸ ಕೇಂದ್ರ, ಚಿತ್ತಾರ ಬಳಗ, ಸುಗ್ರಾಮ ವೇದಿಕೆಯ ಸಹಯೋಗದಲ್ಲಿ ‘ವಿಶ್ವ ಸಾಕ್ಷರತಾ ದಿನಾಚರಣೆ’ ಪ್ರಯುಕ್ತ ಮುಡಿಪು ಜನಶಿಕ್ಷಣ ಕೇಂದ್ರದಲ್ಲಿ ನಡೆದ ‘ಸಂವಾದ-ಸಂಕಲ್ಪ’ಕ್ಕೆ ಚಾಲನೆ ನೀಡಿ ಮಾತನಾಡಿದರು.
ಸುಸ್ಥಿರ ಅಭಿವೃದ್ಧಿಗೆ ಶಿಕ್ಷಣ ಮಖ್ಯವಾದರೂ ಬದುಕುವ ಶಿಕ್ಷಣ ಅಗತ್ಯ. ಅಭಿವೃದ್ಧಿ ಎನ್ನುವುದು ಸರ್ಕಾರ, ಇಂತಹ ವ್ಯಕ್ತಿಗಳಿಂದಲೇ ಆಗಬೇಕು ಎಂದು ಬಯಸದೆ, ನಿರೀಕ್ಷಿಸದೆ ಸರ್ಕಾರೇತರ ಸಂಸ್ಥೆಗಳೂ ಗ್ರಾಮದ ಅಭಿವೃದ್ಧಿಗೆ ಕೈಜೋಡಿಸಬೇಕಿದೆ. ನಾನು ಎನ್ನುವ ಸ್ವಾರ್ಥವನ್ನು ಬಿಟ್ಟು ನಮ್ಮದು ಎನ್ನುವ ಭಾವನೆ ಹೊಂದಿದಾಗ ಅಭಿವೃದ್ಧಿ ಸಾಧ್ಯ. ಕರೊನಾ ಸಂಪೂರ್ಣ ನಿರ್ಮೂಲನೆ ಆದ ಬಳಿಕ ಶಿಕ್ಷಕರನ್ನೂ ಹಳ್ಳಿಗಳಿಗೆ ಕರೆದೊಯ್ದು ಜನರೊಂದಿಗೆ ಬೆರೆತು ಸಮಸ್ಯೆಗಳನ್ನು ತಿಳಿಯಲಾಗುವುದು ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಮಾತನಾಡಿ, ಓರ್ವ ವ್ಯಕ್ತಿ ಅಕ್ಷರ‌ ಕಲಿತ ಕೂಡಲೇ ವಿದ್ಯಾವಂತ ಆಗಲ್ಲ, ನಾವು ಕಲಿತ ಅಕ್ಷರವನ್ನು ಸಮಾಜಕ್ಕೆ ಹೇಗೆ ಹಂಚುತ್ತೇವೆ ಎನ್ನುವುದು ಮುಖ್ಯ ಆಗಿರುವುದರಿಂದ ಅಕ್ಷರದೊಂದಿಗೆ ಜ್ಞಾನಾರ್ಜನೆ‌ ಪಡೆಯುವುದು ಮುಖ್ಯ ಎಂದು ಹೇಳಿದರು.
ಉದ್ಯಮಿ ರಮೇಶ್ ಶೇಣವ, ಬಾಳೆಪುಣಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುನಿಲ್, ಮಾಜಿ ಸದಸ್ಯರಾದ ಜನಾರ್ದನ ಕುಲಾಲ್, ಯಶೋಧಾ, ಸೆಲ್ಕೋ ಪ್ರತಿನಿಧಿಗಳಾದ ಚೇತನ್, ರವೀಣಾ ಬಿ.ಕುಲಾಲ್‌ ಬೋಳಿಯಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಪ್ರತಿನಿಧಿ ಸೋನಿಯಾ, ಮಣಿಪಾಲ್ ಸಮುದಾಯ ರೇಡಿಯೋ ಮುಖ್ಯಸ್ಥ ಶ್ಯಾಮ್‌ ಭಟ್ ಇನ್ನಿತರರು ಉಪಸ್ಥಿತರಿದ್ದರು.
ಜಿಲ್ಲಾ ಸ್ವಚ್ಚತಾ ರಾಯಭಾರಿ ಶೀನ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ ಕಾರ್ಯಕ್ರಮ ನಿರೂಪಿಸಿದರು.

“ಮಾತೃ ದೇವೋಭವ ಆಚಾರ್ಯ ದೇವೊಭವ” ಲೇಖನ- ಸುಪ್ರೀತಾಜಾನುವಾರುಕಟ್ಟೆ

ಲೇಖನ- ಸುಪ್ರೀತಾಜಾನುವಾರುಕಟ್ಟೆ

ಮೊದಲ ತೊದಲು ನುಡಿ ಕಲಿಸಿ, ಬಾಯಲ್ಲಿ ಅಕ್ಷರ ದೀಪ ಬೆಳಗಿಸಿ ನಗಿಸಿ ನಡೆಸಿ ಶಿಕ್ಷಿಸಿ ಬದುಕು ಕಲಿಸುವ ತಾಯಿಯೇ ಸರ್ವರಿಗೂ ಮೊದಲ ಮಹಾನ್ ಶಿಕ್ಷಕಿ. ಅವಳ ನಂತರದ ಸ್ಥಾನ ಮನುಕೋಟಿಯಲ್ಲಿ ಗುರುವರ್ಯರಿಗೆ ಆಚಾರ್ಯರಿಗೆ..!

ಆದರ್ಶ ಗುರು ಯಾವಾಗಲೂ ಶಿಷ್ಯರಿಗೆ ಏಕಕಾಲದಲ್ಲಿ ತಂದೆ ತಾಯಿ ಅಣ್ಣ ಅಕ್ಕ ಎಲ್ಲಾ ಆಗಬಲ್ಲ ! ಮಾನವೀಯತೆ ಸದ್ಗುಣ ಸಚ್ಛಾರಿತ್ರ್ಯ ಕಲಿಸಿ, ಈ ಜಗದ ಶೀಲಚಾರಿತ್ರ್ಯವ ಉಳಿಸಿ, ಮಾನವತೆಯ ಸಂಬಂಧ ಬೆಸೆಯುವ ಕೊಂಡಿಯಾಗಬಲ್ಲ ಸಾಮರ್ಥ್ಯವಿರುವುದು ಶಿಕ್ಷಕರಿಗೆ ಮಾತ್ರ.
ಈ ಜಗತ್ತಿನ ವೇಗದೋಟದ ಮಧ್ಯೆ ಸರ್ವ ಸವಾಲುಗಳ ನಡುವೆ, ವಿಕಾಸತೆಯ ಶಿಖರದಲ್ಲಿರುವ ಮಾನವ ಜನಾಂಗಕ್ಕೆ ಅರಿವಿನ ಅಗತ್ಯವಿದೆ. ಬದುಕಿನ ಪ್ರೀತಿ ಗೊತ್ತಾಗಬೇಕಿದೆ. ಅಖಂಡ ಆತ್ಮವಿಶ್ವಾಸ ಹೊತ್ತಿ ಉರಿಯಬೇಕಿದೆ. ಇದೆಲ್ಲ ಕೊಟ್ಟು ಬದುಕು ರೂಪಿಸಬಲ್ಲ ಶಿಕ್ಷಕನ ಅಗತ್ಯ ಹಳ್ಳಿ, ಪಟ್ಟಣದ ಗಲ್ಲಿಗಲ್ಲಿಗೂ ಇದೆ.

ಜಾಗತೀಕರಣ ಆಧುನಿಕರಣದ ಸೋಗಿನಲ್ಲಿ ಓಡುತ್ತಿರುವ ಶಿಕ್ಷಣ ವ್ಯವಸ್ಥೆಯ ನಡುವೆ ವಿದ್ಯಾರ್ಥಿಗಳಲ್ಲಿ ಎಲ್ಲಾ ಕ್ಷೇತ್ರದ ಅಭಿರುಚಿ ಹುಟ್ಟಿಸಿ, ಸಂಸ್ಕಾರ ಕಲಿಸಿ, ಮನುಷ್ಯ ಪ್ರೇಮ-ಸಂಬಂಧಗಳ ಅಗತ್ಯತೆ, ಸಾಮರಸ್ಯದ ನೀತಿ ಭೋಧಿಸುವ ,ಅವರೊಳಗಿನ ಅಂತರ್ ಕೌಶಲ್ಯಗಳನ್ನು ಹೊರತರಬಲ್ಲ ಪಾದರಸದಂತ ಕ್ರಿಯಾಶೀಲ “ಶಿಕ್ಷಕ” ಈ ಕಾಲಘಟ್ಟದ ಮೊದಲ ಅಗತ್ಯತೆ ಮತ್ತು ಅನಿವಾರ್ಯತೆ ಕೂಡ !

ಮನುಕುಲವನ್ನು ಕಾಡುತ್ತಿರುವ ಹೆಮ್ಮಾರಿ “ಕೊರೋನಾ” ಶಿಕ್ಷಕನ ಅಸ್ತಿತ್ವಕ್ಕೂ ಇಂದು ಕೊಡಲಿಯೇಟು ಕೊಟ್ಟಿದೆ. ಹಾಗೆ ಶಿಕ್ಷಕನ ಸೃಜನಶೀಲತೆ ಕಲಾತ್ಮಕತೆ ತನ್ನೆಲ್ಲಾ ಶೈಕ್ಷಣಿಕ ಅನುಭವವನ್ನು ಬಳಸಿ-ಬೆಳೆಸಿಕೊಳ್ಳಲೇ ಬೇಕಾದ ಸವಾಲಿನ ಜೊತೆ, ನಿಜವಾದ ಜ್ಞಾನವನ್ನು ಪ್ರಚುರ ಪಡಿಸುವ ಅಪೂರ್ವ ಅವಕಾಶವನ್ನು ಮುಂದಿಟ್ಟಿದೆ. ತರಗತಿ ಕೋಣೆಯೊಳಗೆ ಆಧ್ಯಾತ್ಮಿಕವಾಗಿ ಸಾಮಾಜಿಕವಾಗಿ ಭಾವನಾತ್ಮಕವಾಗಿ ಸಾಮರಸ್ಯದಿಂದ ಬೆಸೆದುಕೊಂಡಿರುವ ಶಿಕ್ಷಕ-ವಿದ್ಯಾರ್ಥಿಯ ಅವಿನಾಭಾವ ಸಂಬಂಧವನ್ನು ಬದ್ಧತೆಯಿಂದ ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಶಿಕ್ಷಕರೆಲ್ಲರ ಈ ಹೊತ್ತಿನ ತುರ್ತು ಅಗತ್ಯತೆ ಎನ್ನಬಹುದು.

ಹೌದು..! “ಕೊರೋನಾ” ದಿಂದ ಬದಲಾದ ಪ್ರತಿಕೂಲ ಪರಿಸ್ಥಿತಿಯಲ್ಲಿ ಶಿಕ್ಷಕ ಆನ್ಲೈನ್ ಬೋಧನಾಕ್ರಮಕ್ಕೆ ಒಗ್ಗಿಕೊಳ್ಳಲೇಬೇಕಿದೆ. ಆಧುನಿಕ ತಂತ್ರಜ್ಞಾನಗಳ ಬಳಕೆಗೆ ಮಕ್ಕಳನ್ನು ಪರಿಣಾಮಕಾರಿಯಾಗಿ ಅಣಿಗೊಳಿಸಲು ಶಿಕ್ಷಕನೂ ಪಳಗಬೇಕು. ಸನಾತನ ಪರಂಪರೆಯ ಶಿಕ್ಷಣ ವ್ಯವಸ್ಥೆಯ ಮೌಲ್ಯಗಳನ್ನು ಬಾಂಧವ್ಯವನ್ನು ಸಕಾರಾತ್ಮಕ ಚಿಂತನೆಗಳನ್ನು ಬೋಧನಕ್ರಮ ಮತ್ತು ಮಾಧ್ಯಮ ಯಾವುದೇ ಇರಲಿ ಮಕ್ಕಳಿಗೆ ತಲುಪಿಸಬೇಕಾದ ಹೊಣೆ ಎಂದಿಗೂ ಶಿಕ್ಷಕನದ್ದಾಗಿರುತ್ತದೆ.
ಎಲ್ಲರಿಗೂ ತಿಳಿದಿರುವಂತೆ ಆನ್ಲೈನ್ ಶಿಕ್ಷಣದಡಿ -ಶಿಕ್ಷಕರನ್ನೇ ನೋಡದೆ ಆನ್‌ಲೈನ್ ಶಿಕ್ಷಣ, ವರ್ಚುವಲ್ ಶಿಕ್ಷಣ ವ್ಯವಸ್ಥೆ ಇಂದಿನ ತಂದೆತಾಯಿಗಳ ಆಯ್ಕೆಯಾಗುತ್ತಿದೆ !!
ಶಿಕ್ಷಕ -ರಕ್ಷಕರು ಒಂದು ಅಂಶವನ್ನು ನೆನಪಿಡಲೇಬೇಕು.
‘ಸಂಸ್ಕಾರ ಕಲಿಸದ ಶಿಕ್ಷಣ ಶಿಕ್ಷಣವೇ ಅಲ್ಲ…!’ಇಂತಹ ಅನ್ಯೂಷವಲ್ ಶಿಕ್ಷಣ ಕ್ರಮದಲ್ಲಿ ಕಲಿತ ಹೆಚ್ಚಿನ ಮಕ್ಕಳ ಜ್ಞಾನ ಭಂಡಾರ ಹೊಸ ಹೊಸ ಸಂಶೋಧನೆಗಳ ಮೂಲಕ ಜಗತ್ತಿನ ಆಸ್ತಿಯಾಗದೆ, ರಚನಾತ್ಮಕ ಕೆಲಸಗಳಿಗೆ ಬಳಕೆಯಾಗದೆ ವಿಧ್ವಂಸಕ ಕೃತ್ಯಗಳಿಗೆ ಮುನ್ನುಡಿಯಾಗುತ್ತಿದೆ..!! ಇತ್ತೀಚೆಗಷ್ಟೇ ಕೆಲವು ನಿದರ್ಶನಗಳನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೀರಿ.
ಅದೆಷ್ಟೋ ಉಗ್ರರ, ನಕ್ಸಲೀಯರ ಭೃಷ್ಟ ರಾಜಕಾರಣಿಗಳೊಳಗೆ ಪ್ರಜ್ಞಾವಂತ ನಿಷ್ಠಾವಂತ ಮನಸ್ಸಿದೆ, ಯೋಗ್ಯ ಶಿಕ್ಷಣ ದೊರಕದೆ ಯೋಗ್ಯ ಗುರುವಿನ ಮಾರ್ಗದರ್ಶನವಿಲ್ಲದೆ ಹೀಗಾದ ಇವರುಗಳ ಸಂತತಿ ಸಾವಿರವಾಗುತ್ತಿದೆ..!

ಇನ್ನೂ ಹೇಳುವುದಾದರೆ ಇಂದಿನ ಶಿಕ್ಷಣ ವ್ಯವಸ್ಥೆ, ಆಡಳಿತ ಮಂಡಳಿ, ಸಮುದಾಯದ ಕಾರಣದಿಂದಲೇ “ಶಿಕ್ಷಕ ಮಕ್ಕಳಿಗೆ ಯೋಗ್ಯ ರೀತಿಯಲ್ಲಿ ತಲುಪುತ್ತಿಲ್ಲ..” ಶಿಕ್ಷಕನಿಂದು ಇಲಾಖೆ ಆಡಳಿತ ಮಂಡಳಿ , ಪೋಷಕರ ಚಕ್ರವ್ಯೂಹದೊಳಗೆ ಸಿಲುಕಿ ಒದ್ದಾಡುತ್ತಿದ್ದಾನೆ.
ಶಿಕ್ಷಕ ಬೋಧನೆಗಷ್ಟೇ ಸೀಮಿತವಾಗಿರಬೇಕು, ಅವನ ಪ್ರತಿ ಬಿಡುವಿನ ವೇಳೆಯೂ ವಿದ್ಯಾರ್ಥಿಗಳಿಗಷ್ಟೇ ಮೀಸಲಾಗಿರಬೇಕು, ಅನ್ಯ ಕಾರ್ಯಗಳು, ನೂರಾರು ಶಿಕ್ಷಕೇತರ ಜವಬ್ದಾರಿಗಳು..! ಬದುಕು ಸಾಗಿಸಲಾಗದ ವೇತನ ವ್ಯವಸ್ಥೆ..! ಮಕ್ಕಳ ಭವಿಷ್ಯ ಕಟ್ಟುವ ಗುರುತುರ ಹೊಣೆಗಾರಿಕೆಗೆ ಮೂಲ ತೊಡಕಾಗುತ್ತಿದೆ..! ಒತ್ತಡ ರಹಿತ ಶಿಕ್ಷಕ ೧೦೦% ಪ್ರತಿಶತ ಯಶಸ್ಸು ಕೊಡಬಲ್ಲನನ್ನೆವುದು ನನ್ನ ಅಭಿಮತ.
ಇಂದು ಶಿಕ್ಷಣ ತಜ್ಞರು ಆಡಳಿತ ಮಂಡಳಿ, ವ್ಯವಸ್ಥೆಯನ್ನಾಳುವವರು, ಪೋಷಕರು ಈ ಕುರಿತು ಯೋಚಿಸಿ ಶಿಕ್ಷಕನ ಹೊರೆಯನ್ನು ಕೆಳಗಿಳಿಸಿ, ಪರಿಮಿತಿಯೊಳಗಿನ ಅವರ ಗೌರವವನ್ನು ಹೆಚ್ಚಿಸಬೇಕು. ಐದಾರು ತಿಂಗಳಿಂದೀಚೆ ವೇತನವಿಲ್ಲದೆ, ಬದುಕಿನ ಮೂಲಭೂತ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ನಲುಗುತ್ತಿರುವ ಅದೆಷ್ಟೋ ಖಾಸಗಿ ಶಾಲಾ-ಕಾಲೇಜು ಶಿಕ್ಷಕರು, ಅರೆಕಾಲಿಕ ಉಪನ್ಯಾಸಕರುಗಳ ನೋವಿಗೆ ಸರ್ಕಾರದ ಪ್ರತಿನಿಧಿಗಳು ಸ್ಪಂದಿಸಬೇಕು. ಶಿಕ್ಷಕ ಬೇರೇ ದಾರಿ ಕಾಣದೆ ಆತ್ಮಹತ್ಯೆಗೆ ಶರಣಾಗುತ್ತನೆಂದರೆ ..? ಸಮಯೋಚಿತ ನಿರ್ಧಾರ ತೆಗೆದುಕೊಳ್ಳದ ನಮ್ಮನಾಳುವ ವ್ಯವಸ್ಥೆಯೇ ನೇರ ಹೊಣೆ.
ಇವೆಲ್ಲದರ ಜೊತೆಗೆ ಶಿಕ್ಷಣವನ್ನು ವ್ಯಾವಹಾರಿಕವಾಗಿ ನೋಡುವ ಮನಸ್ಥಿತಿಯನ್ನು ಪೋಷಕರು ಮೊದಲು ತೊಡೆದು ಹಾಕಿ, ಅದೊಂದು ಬದುಕಿಗೆ ಬೇಕಾದ ಮಹತ್ವದ ಸಂಸ್ಕಾರವೆಂದು ಗಮನದಲ್ಲಿಟ್ಟುಕೊಂಡು , ಕಲಿಸುವ ಗುರುಗಳಿಗೆ ಗೌರವಿಸುವ ಶಿಷ್ಟಾಚಾರ ಮನೆಯಿಂದಲೇ ಕಲಿಸಿಕೊಡಬೇಕು. ಆಗ ಮಾತ್ರ ಶಿಕ್ಷಕ ವೃತ್ತಿಯ ಪಾವಿತ್ರ್ಯತೆ ದ್ವಿಗುಣಗೊಂಡು ಸದೃಢ ಸಮಾಜದ ಸೃಷ್ಟಿಗೆ ನಾಂದಿಯಾಗುತ್ತದೆ.

ಶಿಕ್ಷಕ ವೃತ್ತಿಯ ಅತೀವ ಪ್ರೀತಿಸುವ ಮಹಾನ್ ಶಿಕ್ಷಕ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಹುಟ್ಟು ಹಬ್ಬವನ್ನು ಚಿರಸ್ಮರಿಸುತ್ತಾ, “ನನ್ನೆದೆಯೊಳಗೆ ಅಕ್ಷರ ದೀಪವ ಬೆಳಗಿಸಿ, ಸಂಸ್ಕಾರ ಕಲಿಸಿ ಬದುಕಿನ ಪ್ರೀತಿ ಮತ್ತು ಅನಿವಾರ್ಯತೆಯನ್ನು ಕಲಿಸಿಕೊಟ್ಟ, ನನ್ನೊಳಗೊಬ್ಬ ” ಶಿಕ್ಷಕಿ- ಬೋಧಕಿ”ಯನ್ನು ರೂಪಿಸಿದ ತಾಯಿಗೆ, ನ್ನನ್ನಜ್ಜಿಗೆ , ಗುರುವೃಂದದವರಿಗೆ, ವೃತ್ತಿ ನಿಭಾಯಿಸಲು ಸಹಕರಿಸಿದ ಸಹೋದ್ಯೋಗಿಗಳು, ಆಡಳಿತ ಮಂಡಳಿ ಮತ್ತು ಈ ಏಳು ವರ್ಷದ ವಿದ್ಯಾರ್ಥಿಸಮೂಹಕ್ಕೆ ನನ್ನ ಬದುಕಿನ ಪ್ರೀತಿಯನ್ನು ಅಂತರಾಳದ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ…

ಪಬ್-ಜಿ ಜೊತೆ 118 ವಿದೇಶಿ ಆಪ್ ನಿಷೇಧ

ದೆಹಲಿ(2ಸೆಪ್ಟಂಬರ್/2020): ಪಬ್ಜಿ, ಪಬ್ಜಿ ಮೊಬೈಲ್ ಲೈಟ್, ವಿಚಾಟ್ ವರ್ಕ್‌, ವಿಚಾಟ್ ರೀಡಿಂಗ್ ಸೇರಿದಂತೆ 118 ಆ್ಯಪ್‌ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಈ ಹಿಂದೆ ಎರಡು ಬಾರಿ ಒಟ್ಟು ಚೀನಾದ ನೂರಕ್ಕೂ ಹೆಚ್ಚು ಆ್ಯಪ್‌ಗಳ ಮೇಲೆ ನಿಷೇಧ ಹೇರಲಾಗಿತ್ತು.
ದೇಶದ ರಕ್ಷಣೆ, ಸಾರ್ವಭೌಮತ್ವ, ಸಮಗ್ರತೆ, ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆ ಗಮನದಲ್ಲಿಟ್ಟು ಕೊಂಡು 118 ಆ್ಯಪ್‌ಗಳನ್ನು ನಿಷೇಧಿಸಲಾಗಿದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.
ಟಿಕ್‌ಟಾಕ್, ಶೇರ್‌ಇಟ್, ಹೆಲೊ, ಲೀಕೀ, ಯುಸಿ ಬ್ರೌಸರ್‌‌ ಮತ್ತು ವಿ–ಚಾಟ್ ಸೇರಿದಂತೆ 59 ಮೊಬೈಲ್‌ ಆ್ಯಪ್‌ಗಳನ್ನು ಕೇಂದ್ರ ಸರ್ಕಾರ ಜೂನ್‌ನಲ್ಲಿ ನಿಷೇಧಿಸಿತ್ತು. ಬಳಿಕ ಎರಡನೇ ಹಂತದಲ್ಲಿ ಜುಲೈನಲ್ಲಿ ಟಿಕ್‌ಟಾಕ್ ಲೈಟ್, ಹೆಲೊ ಲೈಟ್, ಶೇರ್‌ಇಟ್ ಲೈಟ್, ಬಿಗೊ ಲೈವ್ ಲೈಟ್, ವಿಎಫ್‌ವೈ ಲೈಟ್ ಸೇರಿದಂತೆ ಚೀನಾದ 47 ಆ್ಯಪ್‌ಗಳನ್ನು ನಿಷೇಧಿಸಿತ್ತು. ಇದೀಗ ಮೂರನೇ ಬಾರಿಗೆ ಕ್ರಮ ಕೈಗೊಂಡಿದೆ.
ಭಾರತವೊಂದರಲ್ಲಿ ಈ ಗೇಮ್‌ನ ಅಪ್ಲಿಕೇಷನ್‌ ಅನ್ನು 1.75 ಕೋಟಿ ಮಂದಿ ಮೊಬೈಲ್‌ಗಳಲ್ಲಿ ಡೌನ್‌ಲೋಡ್ ಆಗಿದೆ.

Related Post